
ಭಾರತ ಮತ್ತು ಪಾಕಿಸ್ತಾನದ ಗಡಿ
ಪಾಕಿಸ್ತಾನದ ಧಾರ್ಮಿಕ ತಾರತಮ್ಯ: 14 ಭಾರತೀಯ ಯಾತ್ರಿಗಳನ್ನು ವಾಪಸ್ ಕಳುಹಿಸಿದ ಪಾಕ್
ಕೇಂದ್ರ ಗೃಹ ಸಚಿವಾಲಯವು 2,100 ಯಾತ್ರಿಗಳ ತಂಡಕ್ಕೆ ನಂಕಾನಾ ಸಾಹಿಬ್‌ಗೆ ಭೇಟಿ ನೀಡಲು ಅನುಮತಿ ನೀಡಿತ್ತು. ಅದರಂತೆ, ಪಾಕಿಸ್ತಾನ ಕೂಡ ಅಷ್ಟೇ ಸಂಖ್ಯೆಯ ವೀಸಾಗಳನ್ನು ನೀಡಿತ್ತು.
ಗುರುನಾನಕ್ ಅವರ 556ನೇ ಜಯಂತಿಯ ಪ್ರಯುಕ್ತ, ಅವರ ಜನ್ಮಸ್ಥಳವಾದ ಪಾಕಿಸ್ತಾನದ ನಂಕಾನಾ ಸಾಹಿಬ್‌ಗೆ ತೆರಳುತ್ತಿದ್ದ 14 ಭಾರತೀಯ ಹಿಂದೂ ಯಾತ್ರಿಗಳಿಗೆ ಪಾಕಿಸ್ತಾನ ಪ್ರವೇಶ ನಿರಾಕರಿಸಿ, ವಾಪಸ್ ಕಳುಹಿಸಿದ ಘಟನೆ ನಡೆದಿದೆ. "ನೀವು ಹಿಂದೂಗಳು, ಸಿಖ್ ಯಾತ್ರಾರ್ಥಿಗಳೊಂದಿಗೆ ಹೋಗಲು ಸಾಧ್ಯವಿಲ್ಲ," ಎಂದು ಪಾಕಿಸ್ತಾನಿ ಅಧಿಕಾರಿಗಳು ಹೇಳಿರುವುದು, ಧಾರ್ಮಿಕ ತಾರತಮ್ಯದ ಬಗ್ಗೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಕೇಂದ್ರ ಗೃಹ ಸಚಿವಾಲಯವು 2,100 ಯಾತ್ರಿಗಳ ತಂಡಕ್ಕೆ ನಂಕಾನಾ ಸಾಹಿಬ್‌ಗೆ ಭೇಟಿ ನೀಡಲು ಅನುಮತಿ ನೀಡಿತ್ತು. ಅದರಂತೆ, ಪಾಕಿಸ್ತಾನ ಕೂಡ ಅಷ್ಟೇ ಸಂಖ್ಯೆಯ ವೀಸಾಗಳನ್ನು ನೀಡಿತ್ತು. ಮಂಗಳವಾರ, ಸುಮಾರು 1,900 ಯಾತ್ರಿಗಳು ವಾಘಾ ಗಡಿ ಮೂಲಕ ಪಾಕಿಸ್ತಾನವನ್ನು ಪ್ರವೇಶಿಸಿದರು.
ವಲಸೆ ಪ್ರಕ್ರಿಯೆಯ ಸಮಯದಲ್ಲಿ, 14 ಯಾತ್ರಿಗಳನ್ನು ಹಿಂದೂಗಳೆಂದು ಗುರುತಿಸಿದ ಪಾಕಿಸ್ತಾನಿ ಅಧಿಕಾರಿಗಳು ಅವರನ್ನು ಪ್ರತ್ಯೇಕಿಸಿದರು. ವರದಿಗಳ ಪ್ರಕಾರ, ಈ 14 ಯಾತ್ರಿಗಳು ಪಾಕಿಸ್ತಾನದಲ್ಲಿ ಜನಿಸಿದ ಸಿಂಧಿ ಸಮುದಾಯದವರಾಗಿದ್ದು, ನಂತರ ಭಾರತೀಯ ಪೌರತ್ವವನ್ನು ಪಡೆದಿದ್ದರು.
"ಸಿಖ್ಖರಿಗೆ ಮಾತ್ರ ಪ್ರವೇಶ"
"ನೀವು ಹಿಂದೂಗಳು, ಸಿಖ್ ಭಕ್ತರೊಂದಿಗೆ ಹೋಗಲು ಸಾಧ್ಯವಿಲ್ಲ. ಗುರುದ್ವಾರಗಳು ಸಿಖ್ಖರಿಗೆ ಮಾತ್ರ," ಎಂದು ಹೇಳಿದ ಪಾಕಿಸ್ತಾನಿ ಅಧಿಕಾರಿಗಳು, ದೆಹಲಿ ಮತ್ತು ಲಕ್ನೋದಿಂದ ಬಂದಿದ್ದ ಈ ಯಾತ್ರಿಗಳನ್ನು ವಾಪಸ್ ಕಳುಹಿಸಿದ್ದಾರೆ. ಪಾಕಿಸ್ತಾನದ ದಾಖಲೆಗಳಲ್ಲಿ 'ಸಿಖ್' ಎಂದು ನಮೂದಾದವರಿಗೆ ಮಾತ್ರ ಪ್ರವೇಶ ನೀಡಲಾಗುವುದು ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.
"ಎಲ್ಲಾ ದಾಖಲೆಗಳು ಸರಿಯಾಗಿದ್ದವು, ವೀಸಾ ಕೂಡ ಸಿಕ್ಕಿತ್ತು. ಆದರೆ ಕೇವಲ ನಾವು ಹಿಂದೂಗಳೆಂಬ ಕಾರಣಕ್ಕೆ ನಮ್ಮನ್ನು ವಾಪಸ್ ಕಳುಹಿಸಲಾಯಿತು," ಎಂದು ಯಾತ್ರಿಕರೊಬ್ಬರು ಅಳಲು ತೋಡಿಕೊಂಡಿದ್ದಾರೆ.
ಭಾರತದ 300 ಯಾತ್ರಿಗಳಿಗೂ ಪ್ರವೇಶ ನಿರಾಕರಣೆ
ಇದೇ ವೇಳೆ, ಗೃಹ ಸಚಿವಾಲಯದ ಅನುಮತಿ ಇಲ್ಲದೆ, ಸ್ವತಂತ್ರವಾಗಿ ವೀಸಾಗೆ ಅರ್ಜಿ ಸಲ್ಲಿಸಿದ್ದ 300 ಜನರನ್ನು ಭಾರತೀಯ ಅಧಿಕಾರಿಗಳೇ ಗಡಿಯಲ್ಲಿ ತಡೆದು, ವಾಪಸ್ ಕಳುಹಿಸಿದ್ದಾರೆ.
ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಉಗ್ರರ ದಾಳಿಗೆ ಪ್ರತಿಯಾಗಿ ಭಾರತವು "ಆಪರೇಷನ್ ಸಿಂಧೂರ್" ನಡೆಸಿದ ನಂತರ, ಉಭಯ ದೇಶಗಳ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಇಂತಹ ಪರಿಸ್ಥಿತಿಯಲ್ಲಿ ನಡೆದ ಈ ಮೊದಲ ಯಾತ್ರೆಯಲ್ಲಿ, ಪಾಕಿಸ್ತಾನವು ಧಾರ್ಮಿಕ ತಾರತಮ್ಯ ಪ್ರದರ್ಶಿಸಿರುವುದು ತೀವ್ರ ಟೀಕೆಗೆ ಗುರಿಯಾಗಿದೆ. ಅಕಾಲ್ ತಖ್ತ್ ನಾಯಕ ಗಿಯಾನಿ ಕುಲದೀಪ್ ಸಿಂಗ್ ಗರಗಜ್ ನೇತೃತ್ವದ ಭಾರತೀಯ ಸಿಖ್ ನಿಯೋಗವು ಪಾಕಿಸ್ತಾನಕ್ಕೆ ತೆರಳಿದ್ದು, 10 ದಿನಗಳ ಕಾಲ ವಿವಿಧ ಗುರುದ್ವಾರಗಳಿಗೆ ಭೇಟಿ ನೀಡಲಿದೆ.

