Pakistan Politics | ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ದಂಪತಿಗೆ ಜೈಲು
x
ಇಮ್ರಾನ್‌ ಖಾನ್‌ ದಂಪತಿ

Pakistan Politics | ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ ದಂಪತಿಗೆ ಜೈಲು

ಅಲ್‌ ಖಾದಿರ್‌ ವಿವಿ ಪ್ರಾಜೆಕ್ಟ್‌ ಟ್ರಸ್ಟ್‌ ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕ್‌ ಮಾಜಿ ಪ್ರಧಾನಿ ಇಮ್ರಾನ್‌ ಖಾನ್‌ಗೆ 14ವರ್ಷ, ಅವರ ಪತ್ನಿ ಬುಶ್ರಾ ಬೀಬಿಗೆ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ.


ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಹಾಗೂ ಅವರ ಪತ್ನಿ ಬುಶ್ರಾ ಬೀಬಿ ಅವರಿಗೆ ಪಾಕಿಸ್ತಾನದ ಭ್ರಷ್ಟಾಚಾರ ನಿಗ್ರಹ ನ್ಯಾಯಾಲಯ ಶುಕ್ರವಾರ ಜೈಲು ಶಿಕ್ಷೆ ವಿಧಿಸಿ ಆದೇಶಿಸಿದೆ.

ಅಲ್-ಖಾದಿರ್ ವಿಶ್ವವಿದ್ಯಾಲಯದ ಪ್ರಾಜೆಕ್ಟ್‌ ಟ್ರಸ್ಟ್‌ಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯ ಇಮ್ರಾನ್‌ ಖಾನ್‌ಗೆ 14ವರ್ಷ ಹಾಗೂ ಅವರ ಪತ್ನಿ ಬುಶ್ರಾ ಬೀಬಿಗೆ 7ವರ್ಷ ಜೈಲು ಶಿಕ್ಷೆ ವಿಧಿಸಿದೆ. ಇಸ್ಲಾಮಾಬಾದ್‌ನ ಆದಿಲಾ ಜೈಲಿನಲ್ಲಿ ಸ್ಥಾಪಿಸಿದ್ದ ತಾತ್ಕಾಲಿಕ ನ್ಯಾಯಾಲಯದಲ್ಲಿ ನ್ಯಾಯಾಧೀಶ ನಾಸಿರ್ ಜಾವೇದ್ ರಾಣಾ ಅವರು ತೀರ್ಪು ಪ್ರಕಟಿಸಿದ್ದಾರೆ. ಪ್ರಕರಣದ ವಿಚಾರಣೆ ಮುಗಿಸಿದ್ದ ನ್ಯಾಯಾಲಯ ವಿವಿಧ ಕಾರಣಗಳಿಂದ ಈ ಹಿಂದೆ ಮೂರು ಬಾರಿ ತೀರ್ಪು ಮುಂದೂಡಿತ್ತು.

ಅಲ್‌ ಖಾದಿರ್‌ ವಿವಿಯ ಟ್ರಸ್ಟ್‌ನಲ್ಲಿ ನಡೆದ ಭ್ರಷ್ಟಾಚಾರದಿಂದ ದೇಶದ ಖಜಾನೆಗೆ 190 ಮಿಲಿಯನ್ ಪೌಂಡ್‌ ನಷ್ಟ ಉಂಟು ಮಾಡಿದ್ದಾರೆ ಎಂದು ಆರೋಪಿಸಿ ನ್ಯಾಷನಲ್ ಅಕೌಂಟೆಬಿಲಿಟಿ ಬ್ಯೂರೋ (NAB) 2023ರ ಡಿಸೆಂಬರ್‌ನಲ್ಲಿ ಇಮ್ರಾನ್‌ ಖಾನ್‌, ಅವರ ಪತ್ನಿ ಬುಶ್ರಾ ಬೀಬಿ ಸೇರಿ ಏಳು ಜನರ ವಿರುದ್ಧ ಪ್ರಕರಣ ದಾಖಲಿಸಿತ್ತು. ಇವರಲ್ಲಿ ಉದ್ಯಮಿಗಳು ಹಾಗೂ ಇತರರು ದೇಶದಿಂದ ಪರಾರಿಯಾಗಿದ್ದಾರೆ. ಇಮ್ರಾನ್ ಖಾನ್ ಅವರಿಗೆ 1 ಮಿಲಿಯನ್, ಅವರ ಪತ್ನಿ ಬುಶ್ರಾ ಬೀಬಿಗೆ 5ಲಕ್ಷ ಪಾಕಿಸ್ತಾನಿ ರೂಪಾಯಿ ದಂಡ ಸಹ ವಿಧಿಸಲಾಗಿದೆ.

ಇಮ್ರಾನ್‌ ಮೇಲಿನ ಆರೋಪವೇನು?

ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿ ಅವರು ಬಹ್ರಿಯಾ ಟೌನ್ ಲಿಮಿಟೆಡ್‌ನಿಂದ ಕೋಟ್ಯಂತರ ರೂ. ಹಾಗೂ ನೂರಾರು ಕನಾಲ್‌ನಷ್ಟು( 605 ಸ್ವೇರ್‌ ಯಾರ್ಡ್‌ಗೆ ಒಂದು ಕನಾಲ್‌) ಭೂಮಿ ವರ್ಗಾಯಿಸಲು ಅನುಕೂಲ ಮಾಡಿಕೊಟ್ಟಿದ್ದರು. iಇಮ್ರಾನ್‌ ಖಾನ್ ಅಧಿಕಾರಾವಧಿಯಲ್ಲಿ ಬ್ರಿಟನ್‌ ದೇಶ ಪಾಕಿಸ್ತಾನಕ್ಕೆ ಹಿಂದಿರುಗಿಸಿದ 50 ಬಿಲಿಯನ್ ರೂ. ಹಣವನ್ನು ಕಾನೂನು ಬದ್ಧಗೊಳಿಸಿದ್ದರು. ಜೊತೆಗೆ ಅಲ್-ಖಾದಿರ್ ವಿಶ್ವವಿದ್ಯಾಲಯದ ಸ್ಥಾಪನೆ ಸೇರಿದಂತೆ ರಾಷ್ಟ್ರೀಯ ಖಜಾನೆಗೆ ಮೀಸಲಾದ ಹಣವನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿದ್ದರು ಎಂಬ ಆರೋಪ ಇತ್ತು.

Read More
Next Story