
ಬಲೂಚಿಸ್ತಾನ್ ಮಾರುಕಟ್ಟೆಯಲ್ಲಿ ಭೀಕರ ಬಾಂಬ್ ಸ್ಫೋಟ: ನಾಲ್ವರು ಬಲಿ, 20 ಮಂದಿಗೆ ಗಾಯ
ಸ್ಫೋಟದ ತೀವ್ರತೆಗೆ ಮಾರುಕಟ್ಟೆಯ ಸಮೀಪದ ಕಟ್ಟಡಗಳಿಗೆ ಹಾನಿಯಾಗಿದೆ. ಹಲವಾರು ಅಂಗಡಿಗಳು ಕುಸಿದು ಬಿದ್ದಿದ್ದು, ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದ ಕಿಲ್ಲಾ ಅಬ್ದುಲ್ಲಾ ಜಿಲ್ಲೆಯ ಜಬ್ಬಾರ್ ಮಾರುಕಟ್ಟೆ ಬಳಿ ಭಾನುವಾರ ಸಂಭವಿಸಿದ ಬಾಂಬ್ ಸ್ಫೋಟದಲ್ಲಿ ನಾಲ್ವರು ಮೃತಪಟ್ಟಿದ್ದು, 20ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಸ್ಫೋಟದ ತೀವ್ರತೆಗೆ ಮಾರುಕಟ್ಟೆಯ ಸಮೀಪದ ಕಟ್ಟಡಗಳಿಗೆ ಹಾನಿಯಾಗಿದೆ. ಹಲವಾರು ಅಂಗಡಿಗಳು ಕುಸಿದು ಬಿದ್ದಿದ್ದು, ಬೆಂಕಿ ಕಾಣಿಸಿಕೊಂಡಿದೆ ಎಂದು ವರದಿಯಾಗಿದೆ. ಕಿಲ್ಲಾ ಅಬ್ದುಲ್ಲಾ ಉಪ ಆಯುಕ್ತ ರಿಯಾಜ್ ಖಾನ್ ಅವರು ನಾಲ್ವರು ಮೃತಪಟ್ಟಿರುವ ಮತ್ತು 20 ಮಂದಿ ಗಾಯಗೊಂಡಿರುವ ವಿಷಯವನ್ನು ಖಚಿತಪಡಿಸಿದ್ದಾರೆ. ಮಾರುಕಟ್ಟೆಯು ಫ್ರಾಂಟಿಯರ್ ಕಾರ್ಪ್ಸ್ (ಎಫ್‌ಸಿ) ಕೋಟೆಯ ಹಿಂಭಾಗದಲ್ಲಿದ್ದು, ಸ್ಫೋಟದ ನಂತರ ದುಷ್ಕರ್ಮಿಗಳು ಮತ್ತು ಎಫ್‌ಸಿ ಸಿಬ್ಬಂದಿ ನಡುವೆ ಗುಂಡಿನ ಚಕಮಕಿ ನಡೆದಿದೆ ಎನ್ನಲಾಗಿದೆ.
ಅಧಿಕಾರಿಗಳು ಸ್ಥಳವನ್ನು ಸುತ್ತುವರಿದು ಪರಿಶೀಲನೆ ನಡೆಸುತ್ತಿದ್ದಾರೆ. ಗಾಯಗೊಂಡವರಲ್ಲಿ ಬುಡಕಟ್ಟು ಮುಖಂಡ ಹಾಜಿ ಫೈಜುಲ್ಲಾ ಖಾನ್ ಘಬಿಜೈ ಅವರ ಭದ್ರತಾ ಸಿಬ್ಬಂದಿ ಮತ್ತು ಸಾರ್ವಜನಿಕರು ಸೇರಿದ್ದಾರೆ.
ಇತ್ತೀಚೆಗೆ ಖುಜ್ದಾರ್ ಜಿಲ್ಲೆಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ನಾಲ್ವರು ಸಿಬ್ಬಂದಿ ಮೃತಪಟ್ಟ ಬೆನ್ನಲ್ಲೇ ಈ ಸ್ಫೋಟ ಸಂಭವಿಸಿದೆ. ಕಳೆದ ಎರಡು ದಶಕಗಳಿಂದ ಬಲೂಚಿಸ್ತಾನ್ ಪ್ರಾಂತ್ಯವು ಅಸ್ಥಿರವಾಗಿದ್ದು, ಸ್ಥಳೀಯ ಬಲೂಚ್ ಗುಂಪುಗಳು ಖನಿಜ ಸಂಪತ್ತಿನ ಶೋಷಣೆಯ ಬಗ್ಗೆ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿವೆ. ಈ ಘಟನೆಯು ಪ್ರದೇಶದಲ್ಲಿನ ಉದ್ವಿಗ್ನ ಪರಿಸ್ಥಿತಿ ಮತ್ತಷ್ಟು ಹೆಚ್ಚಿಸಿದೆ.