
ಪಾಕಿಸ್ತಾನದಲ್ಲಿ ಭೀಕರ ಆತ್ಮಾಹುತಿ ದಾಳಿ: 13 ಭದ್ರತಾ ಸಿಬ್ಬಂದಿ ಸಾವು, 24 ಮಂದಿಗೆ ಗಾಯ
ಇದು ಇತ್ತೀಚಿನ ತಿಂಗಳಲ್ಲಿ ಉತ್ತರ ವಜಿರಿಸ್ತಾನದಲ್ಲಿ ಸಂಭವಿಸಿದ ಅತ್ಯಂತ ಮಾರಕ ದಾಳಿ ಎಂದು ಪರಿಗಣಿಸಲಾಗಿದ್ದು, ಈ ಪ್ರದೇಶದ ಭದ್ರತಾ ಪರಿಸ್ಥಿತಿ ಗಂಭೀರ ಆತಂಕಕ್ಕೆ ಸಿಲುಕಿದೆ.
ಪಾಕಿಸ್ತಾನದ ವಾಯುವ್ಯ ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಶನಿವಾರ ನಡೆದ ಭೀಕರ ಆತ್ಮಾಹುತಿ ದಾಳಿಯಲ್ಲಿ ಕನಿಷ್ಠ 13 ಭದ್ರತಾ ಸಿಬ್ಬಂದಿಗಳು ಸ್ಥಳದಲ್ಲೇ ಮೃತಪಟ್ಟಿದ್ದು, 24 ಮಂದಿ ಗಾಯಗೊಂಡಿದ್ದಾರೆ ಎಂದು ಭದ್ರತಾ ಮೂಲಗಳು ತಿಳಿಸಿವೆ. ಗಾಯಗೊಂಡವರಲ್ಲಿ 14 ಮಂದಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ನಾಗರಿಕರಾಗಿದ್ದು, ಹಲವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಶನಿವಾರ ಬೆಳಿಗ್ಗೆ ಉತ್ತರ ವಜಿರಿಸ್ತಾನ ಜಿಲ್ಲೆಯ ಖದ್ದಿ ಪ್ರದೇಶದಲ್ಲಿ ಈ ದಾಳಿ ನಡೆದಿದೆ. ಬಾಂಬ್ ನಿಷ್ಕ್ರಿಯ ದಳಕ್ಕೆ ಸೇರಿದ ಮೈನ್-ರೆಸಿಸ್ಟೆಂಟ್ ಆಂಬುಷ್ ಪ್ರೊಟೆಕ್ಟೆಡ್ (MRAP) ವಾಹನಕ್ಕೆ ಆತ್ಮಾಹುತಿ ಬಾಂಬರ್ ಸ್ಫೋಟಕಗಳನ್ನು ತುಂಬಿದ ವಾಹನವನ್ನು ಚಲಾಯಿಸಿ ಡಿಕ್ಕಿ ಹೊಡೆದಿದ್ದಾನೆ ಎಂದು ಮೂಲಗಳು ಮಾಹಿತಿ ನೀಡಿವೆ.
ಘಟನೆ ನಡೆದ ಸಮಯದಲ್ಲಿ ಸೇನಾ ಚಲನೆಯಿಂದಾಗಿ ಪ್ರದೇಶದಲ್ಲಿ ಕರ್ಫ್ಯೂ ಜಾರಿಗೊಳಿಸಲಾಗಿತ್ತು. ಸ್ಫೋಟದ ನಂತರ ಭದ್ರತಾ ಸಂಸ್ಥೆಗಳು ತಕ್ಷಣ ರಕ್ಷಣಾ ಕಾರ್ಯಾಚರಣೆಯನ್ನು ಆರಂಭಿಸಿವೆ. ಹಫೀಜ್ ಗುಲ್ ಬಹದ್ದರ್ ಗುಂಪಿನ ಉಪ-ಗುಂಪಾದ ಉಸುದ್ ಅಲ್-ಹಾರ್ಬ್ ಈ ದಾಳಿಯ ಜವಾಬ್ದಾರಿಯನ್ನು ಹೊತ್ತುಕೊಂಡಿದೆ ಎಂದು ಮೂಲಗಳು ತಿಳಿಸಿವೆ.
ಇದು ಇತ್ತೀಚಿನ ತಿಂಗಳಲ್ಲಿ ಉತ್ತರ ವಜಿರಿಸ್ತಾನದಲ್ಲಿ ಸಂಭವಿಸಿದ ಅತ್ಯಂತ ಮಾರಕ ದಾಳಿ ಎಂದು ಪರಿಗಣಿಸಲಾಗಿದ್ದು, ಈ ಪ್ರದೇಶದ ಭದ್ರತಾ ಪರಿಸ್ಥಿತಿ ಗಂಭೀರ ಆತಂಕಕ್ಕೆ ಸಿಲುಕಿದೆ.