Pak PM Shehbaz Sharif Warns India: ‘You Cannot Snatch Even One Drop of Water’
x

ಪಾಕಿಸ್ತಾನ ಪ್ರಧಾನಿ ಶೆಹಬಾಜ್ ಷರೀಫ್

'ಒಂದು ಹನಿ ನೀರನ್ನೂ ಕಸಿಯಲು ಬಿಡೆವು': ಭಾರತದ ಮುಂದೆ ಕ್ಯಾತೆ ತೆಗೆದ ಪಾಕ್ ಪ್ರಧಾನಿ ಶೆಹಬಾಜ್ ಷರೀಫ್

ಇತ್ತೀಚೆಗೆ ಪಾಕ್ ಸೇನಾ ಮುಖ್ಯಸ್ಥ ಮತ್ತು ಮಾಜಿ ವಿದೇಶಾಂಗ ಸಚಿವರು ನೀಡಿದ್ದ ಬೆದರಿಕೆಗಳ ಬೆನ್ನಲ್ಲೇ, ಪ್ರಧಾನಿ ಷರೀಫ್ ಕೂಡ ಇದೇ ರೀತಿಯ ಕಠಿಣ ನಿಲುವನ್ನು ವ್ಯಕ್ತಪಡಿಸಿರುವುದು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.


ಭಾರತ ಮತ್ತು ಪಾಕಿಸ್ತಾನದ ನಡುವಿನ ಜಲ ವಿವಾದ ತೀವ್ರ ಸ್ವರೂಪ ಪಡೆದುಕೊಂಡಿದ್ದು, ಪಾಕಿಸ್ತಾನದ ಪ್ರಧಾನಿ ಶೆಹಬಾಜ್ ಷರೀಫ್ ಅವರು ಮಂಗಳವಾರ ಭಾರತಕ್ಕೆ ನೇರ ಎಚ್ಚರಿಕೆ ನೀಡಿದ್ದಾರೆ. "ಶತ್ರುಗಳು ನಮ್ಮ ಪಾಲಿನ ಒಂದು ಹನಿ ನೀರನ್ನೂ ಕಸಿದುಕೊಳ್ಳಲು ಸಾಧ್ಯವಿಲ್ಲ," ಎಂದು ಅವರು ಹೇಳಿದ್ದಾರೆ.

ಇತ್ತೀಚೆಗೆ ಪಾಕ್ ಸೇನಾ ಮುಖ್ಯಸ್ಥ ಮತ್ತು ಮಾಜಿ ವಿದೇಶಾಂಗ ಸಚಿವರು ನೀಡಿದ್ದ ಬೆದರಿಕೆಗಳ ಬೆನ್ನಲ್ಲೇ, ಪ್ರಧಾನಿ ಷರೀಫ್ ಕೂಡ ಇದೇ ರೀತಿಯ ಕಠಿಣ ನಿಲುವನ್ನು ವ್ಯಕ್ತಪಡಿಸಿರುವುದು ಉಭಯ ದೇಶಗಳ ನಡುವಿನ ಉದ್ವಿಗ್ನತೆಯನ್ನು ಮತ್ತಷ್ಟು ಹೆಚ್ಚಿಸಿದೆ.

ಇಸ್ಲಾಮಾಬಾದ್‌ನಲ್ಲಿ ನಡೆದ ಸಮಾರಂಭವೊಂದರಲ್ಲಿ ಮಾತನಾಡಿದ ಷರೀಫ್, "ನೀವು ನಮ್ಮ ನೀರನ್ನು ತಡೆಯುವುದಾಗಿ ಬೆದರಿಕೆ ಹಾಕಿದರೆ, ನಿಮಗೆ ತಕ್ಕ ಪಾಠ ಕಲಿಸಲಾಗುವುದು. ಅಂತಹ ಪ್ರಯತ್ನಕ್ಕೆ ಕೈ ಹಾಕಿದರೆ, ನೀವು ಕೈ ಹಿಸುಕಿಕೊಳ್ಳುವಂತೆ ಮಾಡುವ ಪಾಠವನ್ನು ಮತ್ತೊಮ್ಮೆ ಕಲಿಸಬೇಕಾಗುತ್ತದೆ," ಎಂದು ಗುಡುಗಿದ್ದಾರೆ.

ಈ ವಿವಾದಕ್ಕೆ ಕಾರಣ 1960ರ ಸಿಂಧೂ ನದಿ ನೀರು ಹಂಚಿಕೆ ಒಪ್ಪಂದ. ಈ ವರ್ಷದ ಏಪ್ರಿಲ್‌ನಲ್ಲಿ ನಡೆದ ಪಹಲ್ಗಾಮ್ ಭಯೋತ್ಪಾದಕ ದಾಳಿಯ ನಂತರ, ಭಾರತವು ಈ ಒಪ್ಪಂದವನ್ನು ಅಮಾನತಿನಲ್ಲಿಟ್ಟಿತ್ತು. ಇದನ್ನು "ಯುದ್ಧದ ಕೃತ್ಯ" ಎಂದು ಪರಿಗಣಿಸುವುದಾಗಿ ಪಾಕಿಸ್ತಾನ ಹಲವು ಬಾರಿ ಎಚ್ಚರಿಸಿದೆ.

ಪಾಕ್ ನಾಯಕರ ಸರಣಿ ಬೆದರಿಕೆಗಳು

ಷರೀಫ್ ಅವರಿಗಿಂತ ಮುಂಚೆ, ಪಾಕಿಸ್ತಾನದ ಇತರೆ ಉನ್ನತ ನಾಯಕರೂ ಇದೇ ರೀತಿಯ ಬೆದರಿಕೆಗಳನ್ನು ಒಡ್ಡಿದ್ದರು: ಅಮೆರಿಕ ಪ್ರವಾಸದಲ್ಲಿದ್ದ ಪಾಕ್ ಸೇನಾ ಮುಖ್ಯಸ್ಥ ಫೀಲ್ಡ್ ಮಾರ್ಷಲ್ ಅಸಿಮ್ ಮುನೀರ್, ಸಿಂಧೂ ನದಿಯ ಮೇಲೆ ಭಾರತ ಯಾವುದೇ ಅಣೆಕಟ್ಟು ಕಟ್ಟಿದರೆ ಅದನ್ನು ಕ್ಷಿಪಣಿಗಳಿಂದ ಧ್ವಂಸ ಮಾಡುವುದಾಗಿ ಬೆದರಿಕೆ ಹಾಕಿದ್ದರು. ಅಲ್ಲದೆ, "ನಾವು ಅಣ್ವಸ್ತ್ರ ರಾಷ್ಟ್ರ. ಒಂದು ವೇಳೆ ನಮಗೆ ಅಳಿವು-ಉಳಿವಿನ ಪ್ರಶ್ನೆ ಎದುರಾದರೆ, ಅರ್ಧ ಜಗತ್ತನ್ನು ನಮ್ಮೊಂದಿಗೆ ಕೆಳಗೆಳೆದುಕೊಳ್ಳುತ್ತೇವೆ," ಎಂದು ಅಣ್ವಸ್ತ್ರ ಯುದ್ಧದ ಎಚ್ಚರಿಕೆ ನೀಡಿದ್ದರು.

ಪಾಕಿಸ್ತಾನದ ಮಾಜಿ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ, ಸಿಂಧೂ ಒಪ್ಪಂದದ ಅಮಾನತು "ನಮ್ಮ ಇತಿಹಾಸ ಮತ್ತು ಸಂಸ್ಕೃತಿಯ ಮೇಲಿನ ದಾಳಿ" ಎಂದು ಕರೆದು, ಭಾರತ ಯುದ್ಧಕ್ಕೆ ಪ್ರಚೋದಿಸಿದರೆ ಪಾಕಿಸ್ತಾನ ಹಿಂದೆ ಸರಿಯುವುದಿಲ್ಲ ಎಂದು ಹೇಳಿದ್ದರು.

ಈ ಬೆದರಿಕೆಗಳಿಗೆ ಭಾರತ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ. "ಅಣ್ವಸ್ತ್ರ ಬ್ಲಾಕ್‌ಮೇಲ್‌ಗೆ ಭಾರತ ಬಗ್ಗುವುದಿಲ್ಲ ಮತ್ತು ದೇಶದ ರಾಷ್ಟ್ರೀಯ ಭದ್ರತೆಯನ್ನು ಕಾಪಾಡಲು ಬೇಕಾದ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಿದೆ," ಎಂದು ಸ್ಪಷ್ಟಪಡಿಸಿದೆ. ಇಂತಹ "ಬೇಜವಾಬ್ದಾರಿಯುತ" ಹೇಳಿಕೆಗಳು ಪಾಕಿಸ್ತಾನದ ಪರಮಾಣು ಶಸ್ತ್ರಾಸ್ತ್ರಗಳ ನಿಯಂತ್ರಣದ ಬಗ್ಗೆ ಇರುವ ಅನುಮಾನಗಳನ್ನು ಇನ್ನಷ್ಟು ಹೆಚ್ಚಿಸುತ್ತವೆ ಎಂದು ಭಾರತ ಹೇಳಿದೆ.

Read More
Next Story