9/11ಗೂ ಮುನ್ನವೇ ಒಸಾಮಾ ಬಿನ್ ಲಾಡೆನ್ ಟಾರ್ಗೆಟ್ ಲಿಸ್ಟ್‌ನಲ್ಲಿದ್ದ ಭಾರತ
x

9/11ಗೂ ಮುನ್ನವೇ ಒಸಾಮಾ ಬಿನ್ ಲಾಡೆನ್ ಟಾರ್ಗೆಟ್ ಲಿಸ್ಟ್‌ನಲ್ಲಿದ್ದ ಭಾರತ

ಅಲ್‌ಖೈದಾ ಜಾಲದ ವ್ಯಾಪ್ತಿ 60ಕ್ಕೂ ಹೆಚ್ಚು ದೇಶಗಳಿಗೆ ವಿಸ್ತರಿಸಿತ್ತು; ಭಾರತದಲ್ಲಿ ನಿರ್ದಿಷ್ಟ ದಾಳಿ ಅಥವಾ ಟಾರ್ಗೆಟ್‌ನ ಉಲ್ಲೇಖವನ್ನು ಸಿಐಎ ತನ್ನ ವರದಿಯಲ್ಲಿ ಹೇಳಿತ್ತು.


ಅಮೆರಿಕದ ಮೇಲೆ 9/11 ಭಯೋತ್ಪಾದಕ ದಾಳಿ ನಡೆಯುವುದಕ್ಕೂ ಮೂರು ವರ್ಷಗಳ ಮೊದಲೇ ಅಲ್‌ಖೈದಾ ಮುಖ್ಯಸ್ಥ ಭಯೋತ್ಪಾದಕ ಒಸಾಮಾ ಬಿನ್ ಲಾಡೆನ್, ಭಾರತ ಸೇರಿದಂತೆ ಹಲವು ದೇಶಗಳಲ್ಲಿ ದಾಳಿ ನಡೆಸುವ ಉದ್ದೇಶ ಹೊಂದಿದ್ದ ಎಂಬ ಮಹತ್ವದ ಮಾಹಿತಿ ಇದೀಗ ಬಹಿರಂಗವಾಗಿದೆ. 1998ರ ಆಗಸ್ಟ್ 28ರಂದು ಅಮೆರಿಕದ ಗುಪ್ತಚರ ಸಂಸ್ಥೆ ಸಿಐಎ ಸಿದ್ಧಪಡಿಸಿದ್ದ ಡಿಕ್ಲಾಸಿಫೈಡ್ ಪ್ರೆಸಿಡೆನ್ಶಿಯಲ್ ಡೇಲಿ ಬ್ರಿಫ್‌ನಲ್ಲಿ ಈ ವಿಚಾರ ದಾಖಲಾಗಿದೆ.

'ಬಿಲ್​ ಲಾಡೆನ್​ ಟೆರರಿಸ್ಟ್​​ ನೆಟ್​ವರ್ಕ್​ ಸ್ಟಿಲ್​ ಎ ಥ್ರೆಟ್'​ ಎಂಬ ಶೀರ್ಷಿಕೆಯ 1998ರ ಗುಪ್ತಚರ ವರದಿಯಲ್ಲಿ ಈಜಿಪ್ಟ್, ಅರೇಬಿಯನ್ ಪೆನಿನ್ಸುಲಾ, ವಿಶೇಷವಾಗಿ ಕುವೈತ್, ಸೌದಿ ಅರೇಬಿಯಾ ಮತ್ತು ಯೆಮೆನ್ ಜತೆಗೆ ಭಾರತ, ಪಾಕಿಸ್ತಾನ, ಉಗಾಂಡಾ ಹಾಗೂ ಬಹುಶಃ ನೈಜೀರಿಯಾದಲ್ಲಿಯೂ ದಾಳಿ ನಡೆಸುವ ಉದ್ದೇಶವನ್ನು ಬಿನ್ ಲಾಡೆನ್ ಹೊಂದಿದ್ದ ಎಂದು ಸಿಐಎ ದಾಖಲಿಸಿತ್ತು.

ಆದರೆ ಈ ದಾಖಲೆ ಭಾರತದಲ್ಲಿ ಯಾವ ಸ್ಥಳವನ್ನು ಗುರಿಯಾಗಿಸಲಾಗಿತ್ತು ಎಂಬುದನ್ನು ಬಹಿರಂಗಪಡಿಸುವುದಿಲ್ಲ. ದಾಳಿಗೆ ಸಂಬಂಧಿಸಿದ ನಿರ್ದಿಷ್ಟ ದಿನಾಂಕ, ಕಾರ್ಯಾಚರಣೆಯ ರೂಪುರೇಷೆ ಅಥವಾ ಸಂಚಿನ ವಿವರಗಳೂ ದಾಖಲೆಗಳಲ್ಲಿ ಇಲ್ಲ. ಗುಪ್ತಚರ ಮಾಹಿತಿಯ ಮೂಲವನ್ನೂ ರಹಸ್ಯವಾಗಿರಿಸಲಾಗಿದೆ.

60ಕ್ಕೂ ಹೆಚ್ಚು ದೇಶಗಳಲ್ಲಿ ಅಲ್‌ಖೈದಾ ಜಾಲ

ಡಿಕ್ಲಾಸಿಫೈಡ್ ದಾಖಲೆಗಳ ಪ್ರಕಾರ, ಬಿನ್ ಲಾಡೆನ್ ಕನಿಷ್ಠ 60 ದೇಶಗಳಲ್ಲಿದ್ದ ವ್ಯಕ್ತಿಗಳು ಮತ್ತು ಮಿತ್ರ ಸಂಘಟನೆಗಳ ಜಾಲವನ್ನು ಬಳಸಿಕೊಂಡು ದಾಳಿಗಳನ್ನು ನಡೆಸುವ ಸಾಮರ್ಥ್ಯ ಹೊಂದಿದ್ದ. ಅಮೆರಿಕ ಮತ್ತು ಬ್ರಿಟನ್ ವಿರುದ್ಧ ಮತ್ತಷ್ಟು ದಾಳಿಗಳಿಗೆ ಆತ ಅವಕಾಶಗಳನ್ನು ಹುಡುಕುತ್ತಿದ್ದರೂ, ನಿಖರವಾದ ಟಾರ್ಗೆಟ್ ಅಥವಾ ಸಮಯವನ್ನು ನಿರ್ಧರಿಸಿರಲಿಲ್ಲ ಎಂದು ಸಿಐಎ ಅಂದಾಜಿಸಿತ್ತು.

1998ರಲ್ಲೇ ಅಲ್‌ಖೈದಾ ಸಂಘಟನೆಯ ಜಾಲ ಉತ್ತರ ಅಮೆರಿಕ, ಯುರೋಪ್ ಮತ್ತು ಪೂರ್ವ ಏಷ್ಯಾದಲ್ಲೂ ನೆಲೆ ಹೊಂದಿತ್ತು ಎಂದು ವರದಿ ಹೇಳಿದೆ. ಇದರಿಂದ ಆ ಪ್ರದೇಶಗಳಲ್ಲಿ ಅಮೆರಿಕದ ಹಿತಾಸಕ್ತಿಗಳ ಮೇಲೆ ದಾಳಿ ನಡೆಯುವ ಸಾಧ್ಯತೆಯ ಬಗ್ಗೆ ಗುಪ್ತಚರ ಸಂಸ್ಥೆ ಎಚ್ಚರಿಕೆ ನೀಡಿತ್ತು.

9/11ಗೂ ಮುನ್ನವೇ ಹೆಚ್ಚುತ್ತಿದ್ದ ಆತಂಕ

1998ರ ಆಗಸ್ಟ್‌ನಲ್ಲಿ ಅಮೆರಿಕವು ಅಫ್ಘಾನಿಸ್ತಾನ ಮತ್ತು ಸುಡಾನ್‌ನಲ್ಲಿನ ಶಂಕಿತ ಅಲ್‌ಖೈದಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ ಕೆಲವೇ ದಿನಗಳ ಬಳಿಕ ಈ ಗುಪ್ತಚರ ವರದಿ ಸಿದ್ಧವಾಗಿತ್ತು. ಅದಕ್ಕೂ ಮೊದಲು ಕೀನ್ಯಾ ಮತ್ತು ಟಾಂಜಾನಿಯಾದಲ್ಲಿರುವ ಅಮೆರಿಕದ ರಾಯಭಾರ ಕಚೇರಿಗಳ ಮೇಲೆ ಬಾಂಬ್ ದಾಳಿ ನಡೆದಿತ್ತು.

ವರದಿಯಲ್ಲಿ ಅಮೆರಿಕದ ದಾಳಿಗಳ ಬಳಿಕವೂ ಬಿನ್ ಲಾಡೆನ್ ಮತ್ತು ಇತರ ಉಗ್ರ ನಾಯಕರು ಅಫ್ಘಾನಿಸ್ತಾನದಲ್ಲಿ ಉಳಿದುಕೊಂಡಿದ್ದರು ಎಂದು ಹೇಳಲಾಗಿತ್ತು. ಅವರ ಸಂವಹನ ವ್ಯವಸ್ಥೆ ಮುಂದುವರಿದಿದ್ದು, ಕೆಲವು ತರಬೇತಿ ಶಿಬಿರಗಳಲ್ಲಿ ಚಟುವಟಿಕೆಗಳು ಪುನರಾರಂಭಗೊಂಡಿದ್ದವು. ಕೆಲವು ಶಿಬಿರಗಳನ್ನು ಬೇರೆಡೆಗೆ ಸ್ಥಳಾಂತರಿಸಲಾಗುತ್ತಿತ್ತು.

ಮೂರು ವರ್ಷಗಳ ಬಳಿಕ ಸಂಭವಿಸಿದ 9/11 ದಾಳಿ

ಈ ಎಚ್ಚರಿಕೆಗಳ ಮೂರು ವರ್ಷಗಳ ಬಳಿಕ, 2001ರ ಸೆಪ್ಟೆಂಬರ್ 11ರಂದು ಅಲ್‌ಖೈದಾದ 19 ಉಗ್ರರು ನಾಲ್ಕು ಪ್ರಯಾಣಿಕ ವಿಮಾನಗಳನ್ನು ಅಪಹರಿಸಿ ಅಮೆರಿಕದ ಮೇಲೆ ಭೀಕರ ದಾಳಿ ನಡೆಸಿದರು. ಎರಡು ವಿಮಾನಗಳು ನ್ಯೂಯಾರ್ಕ್‌ನ ವರ್ಲ್ಡ್ ಟ್ರೇಡ್ ಸೆಂಟರ್‌ನ ಅವಳಿ ಗೋಪುರಗಳಿಗೆ ಅಪ್ಪಳಿಸಿದರೆ, ಮತ್ತೊಂದು ವಿಮಾನ ಪೆಂಟಗನ್‌ಗೆ ಅಪ್ಪಳಿಸಿತು. ನಾಲ್ಕನೇ ವಿಮಾನ ಪೆನ್ಸಿಲ್ವೇನಿಯಾದಲ್ಲಿ ಪತನಗೊಂಡಿತು. ದಾಳಿಯಲ್ಲಿ ಸುಮಾರು 3,000 ಮಂದಿ ಮೃತಪಟ್ಟರು.

2011ರ ಮೇ 2ರಂದು ಪಾಕಿಸ್ತಾನದ ಅಬ್ಬೊಟ್ಟಾಬಾದ್‌ನಲ್ಲಿ ಅಮೆರಿಕ ನಡೆಸಿದ ಕಾರ್ಯಾಚರಣೆಯಲ್ಲಿ ಒಸಾಮಾ ಬಿನ್ ಲಾಡೆನ್ ಹತನಾದ. ಹೀಗಾಗಿ, ಇದೀಗ ಬಿಡುಗಡೆಯಾಗಿರುವ ಸಿಐಎ ದಾಖಲೆಗಳು 9/11ಕ್ಕೂ ಹಲವು ವರ್ಷಗಳ ಮುನ್ನವೇ ಅಲ್‌ಖೈದಾದ ಜಾಗತಿಕ ಭಯೋತ್ಪಾದಕ ಜಾಲ ಎಷ್ಟು ವಿಸ್ತಾರವಾಗಿತ್ತು ಎಂಬುದಕ್ಕೆ ಪ್ರಮುಖ ದಾಖಲೆ ಎನಿಸಿವೆ. ಆದರೆ ಈ ದಾಖಲೆ ಭಾರತದಲ್ಲಿ ನಿರ್ದಿಷ್ಟ ದಾಳಿಯ ಸಂಚು ನಡೆದಿತ್ತು ಎಂಬುದನ್ನು ಸಾಬೀತುಪಡಿಸುವುದಿಲ್ಲ ಎಂಬುದನ್ನು ಗಮನಿಸುವುದು ಮುಖ್ಯ.

Read More
Next Story