US attack in Gulf of Oman: Three Indian sailors killed, India summons second ambassador!
x

ಒಮಾನ್‌ ಕೊಲ್ಲಿಯಲ್ಲಿ ದಾಳಿಗೆ ಒಳಗಾದ ಭಾರತೀಯ ಹಡಗು

ಒಮಾನ್ ಕೊಲ್ಲಿಯಲ್ಲಿ ಅಮೆರಿಕ ದಾಳಿ: ಮೂವರು ಭಾರತೀಯ ನಾವಿಕರ ಸಾವು, ಯುಎಸ್ ರಾಯಭಾರಿಗೆ ಭಾರತದ ಸಮನ್ಸ್!

ಓಮನ್ ಕೊಲ್ಲಿಯಲ್ಲಿ ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ನೌಕಾ ಪಡೆಗಳು ನಡೆಸುತ್ತಿರುವ ನಿರಂತರ ದಾಳಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ.


Click the Play button to hear this message in audio format

ಒಮಾನ್ ಕೊಲ್ಲಿಯಲ್ಲಿ ವಾಣಿಜ್ಯ ಹಾಗೂ ವ್ಯಾಪಾರಿ ಹಡಗುಗಳ ಮೇಲೆ ಅಮೆರಿಕ ನೌಕಾಪಡೆ ನಡೆಸುತ್ತಿರುವ ಸರಣಿ ದಾಳಿಗಳು ಮತ್ತು ಮೂವರು ಭಾರತೀಯ ನಾವಿಕರ ಸಾವು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ. ಈ ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಕೇಂದ್ರ ಸರ್ಕಾರ, ಕೇವಲ ಒಂದೇ ವಾರದಲ್ಲಿ ಎರಡನೇ ಬಾರಿಗೆ ಅಮೆರಿಕದ ಚಾರ್ಜ್ ಡಿ'ಅಫೇರ್ಸ್ (ರಾಯಭಾರಿ) ಜೇಸನ್ ಮೀಕ್ಸ್ ಅವರಿಗೆ ಸಮನ್ಸ್ ಜಾರಿ ಮಾಡಿ ಕಚೇರಿಗೆ ಕರೆಸಿಕೊಳ್ಳುವ ಮೂಲಕ ತನ್ನ ಅತ್ಯುಗ್ರ ಪ್ರತಿಭಟನೆಯನ್ನು ದಾಖಲಿಸಿದೆ.

ವಾಣಿಜ್ಯ ಹಡಗುಗಳ ಮೇಲಿನ ದಾಳಿಯ ಹಿಂದೆ ನೇರವಾಗಿ ಅಮೆರಿಕ ನೌಕಾಪಡೆಯ ಕೈವಾಡವಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಗುಡುಗಿದ ಮರುದಿನವೇ ಈ ಮಹತ್ವದ ಬೆಳವಣಿಗೆ ನಡೆದಿದೆ.

ವಾರದಲ್ಲಿ ಎರಡನೇ ಪ್ರತಿಭಟನೆ

ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ವಿದೇಶಾಂಗ ಸಚಿವಾಲಯದ ಕಚೇರಿಗೆ ಹಾಜರಾಗುವಂತೆ ಜೇಸನ್ ಮೀಕ್ಸ್ ಅವರಿಗೆ ಸಮನ್ಸ್ ನೀಡಲಾಗಿತ್ತು. ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ (ಅಮೆರಿಕ ವಿಭಾಗ) ನಾಗರಾಜ್ ನಾಯ್ಡು ಅವರು ಮೀಕ್ಸ್ ಅವರ ಎದುರೇ ಭಾರತದ ತೀವ್ರ ಅಸಮಾಧಾನ ಮತ್ತು ಕಳವಳವನ್ನು ಹೊರಹಾಕಿದರು. ಸುಮಾರು 40 ನಿಮಿಷಗಳ ಕಾಲ ಈ ಜಂಟಿ ಸಭೆ ನಡೆಯಿತು ಎನ್ನಲಾಗಿದೆ.

"ಓಮನ್ ಕೊಲ್ಲಿಯಲ್ಲಿ ಭಾರತೀಯ ನಾವಿಕರನ್ನು ಹೊತ್ತೊಯ್ಯುತ್ತಿದ್ದ ವಾಣಿಜ್ಯ ಹಡಗುಗಳ ಮೇಲೆ ಅಮೆರಿಕ ನೌಕಾ ಪಡೆಗಳು ನಡೆಸುತ್ತಿರುವ ನಿರಂತರ ದಾಳಿಗಳ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಅಮೆರಿಕದ ಈ ಬೇಜವಾಬ್ದಾರಿ ಕ್ರಮದಿಂದಾಗಿ ಈಗಾಗಲೇ ಮೂವರು ಭಾರತೀಯ ನಾವಿಕರು ದುರಂತವಾಗಿ ಜೀವ ಕಳೆದುಕೊಂಡಿದ್ದಾರೆ. ಈ ಸಾವುಗಳನ್ನು ತಡೆಯಬಹುದಿತ್ತು," ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತನ್ನ ಅಧಿಕೃತ ಹೇಳಿಕೆಯಲ್ಲಿ ಬೇಸರ ವ್ಯಕ್ತಪಡಿಸಿದೆ.

ಇದೇ ವೇಳೆ, ನಾಗರಿಕ ಸಾಗಣೆಯ ವಿರುದ್ಧ ಈ ರೀತಿಯ ಮಾರಕ ಬಲಪ್ರಯೋಗ ಮಾಡುವುದು ಯಾವುದೇ ಕಾರಣಕ್ಕೂ "ಸ್ವೀಕಾರಾರ್ಹವಲ್ಲ" ಎಂದು ಭಾರತ ತೀವ್ರವಾಗಿ ಹೇಳಿದೆ. ಇಂತಹ ಕಠಿಣ ಸಮಯದಲ್ಲಿ ಸೂಕ್ಷ್ಮ ಪ್ರದೇಶದಲ್ಲಿ ನಡೆಯುವ ದಾಳಿಗಳು ಅಂತರರಾಷ್ಟ್ರೀಯ ಕಡಲ ವಾಣಿಜ್ಯದ ಸುರಕ್ಷತೆ, ಭದ್ರತೆ ಮತ್ತು ಸ್ಥಿರತೆಯನ್ನು ಸಂಪೂರ್ಣವಾಗಿ ಹಾಳುಮಾಡುತ್ತವೆ ಎಂದು ಎಚ್ಚರಿಸಿದೆ.

ದಾಳಿಗೆ ತುತ್ತಾದ ಹಡಗುಗಳು ಯಾವುವು?

ಅಮೆರಿಕದ ಕೇಂದ್ರೀಯ ಕಮಾಂಡ್ (CENTCOM) ತನ್ನ ದಾಳಿಯನ್ನು ಸಮರ್ಥಿಸಿಕೊಂಡಿದ್ದು, ಇರಾನಿನ ಬಂದರುಗಳ ಮೇಲಿನ ಅಮೆರಿಕದ ದಿಗ್ಬಂಧನವನ್ನು ಉಲ್ಲಂಘಿಸಲು ಪ್ರಯತ್ನಿಸುತ್ತಿದ್ದ ಹಡಗುಗಳನ್ನೇ ಗುರಿ ಮಾಡಲಾಗಿದೆ ಎಂದು ಹೇಳಿದೆ. ಈ ವಾರ ಒಂದರ ಮೇಲೊಂದರಂತೆ ಒಟ್ಟು ಮೂರು ಹಡಗುಗಳ ಮೇಲೆ ಅಮೆರಿಕ ದಾಳಿ ನಡೆಸಿದೆ. ಜೂ. 8 ರಂದು ಎಂಟಿ ಮಾರಿಸಿವೆಕ್ಸ್, ಜೂ. 9 ರಂದು ಎಂಟಿ ಸೆಟ್ಟೆಬೆಲ್ಲೊ ಮೇಲಿನ ದಾಳಿಯಲ್ಲೇ ಮೂವರು ಭಾರತೀಯರು ಮೃತಪಟ್ಟಿದ್ದರು. ಜೂ. 11ರಂದು ಎಂಟಿ ಜಲವೀರ್ ಮೇಲೆ ದಾಳಿ ಮಾಡಲಾಗಿದೆ.

ಒಮಾನ್‌ನ ಶಿನಾಸ್ ಬಂದರಿನ ಬಳಿ 20 ಭಾರತೀಯ ಸಿಬ್ಬಂದಿಯನ್ನು ಹೊತ್ತೊಯ್ಯುತ್ತಿದ್ದ ಟ್ಯಾಂಕರ್ 'ಎಂಟಿ ಜಲವೀರ್' ಹಡಗಿನ ಮೇಲೆ ಗುರುವಾರ ಅಮೆರಿಕದ ಮಿಲಿಟರಿ ವಿಮಾನವು ಎರಡು ಭೀಕರ 'ಹೆಲ್‌ಫೈರ್ ಕ್ಷಿಪಣಿ'ಗಳನ್ನು (Hellfire Missiles) ಹಾರಿಸಿತ್ತು. ಕ್ಷಿಪಣಿಗಳು ಹಡಗಿನ ಎಂಜಿನ್ ವಿಭಾಗಕ್ಕೆ ಅಪ್ಪಳಿಸಿದ ಕಾರಣ ಹಡಗು ಸಂಪೂರ್ಣವಾಗಿ ನಿಷ್ಕ್ರಿಯಗೊಂಡಿತ್ತು. ಈ ದಾಳಿ ನಡೆದ ಬೆನ್ನಲ್ಲೇ ಭಾರತ ತಡಮಾಡದೆ ಅಮೆರಿಕದ ರಾಜತಾಂತ್ರಿಕ ಅಧಿಕಾರಿಗೆ ಸಮನ್ಸ್ ಜಾರಿ ಮಾಡಿದೆ.

ತನ್ನ ಪಡೆಗಳು ಇನ್ನು ಮುಂದಾದರೂ ನಾಗರಿಕರ ಜೀವಹಾನಿಯಾಗದಂತೆ ಅಗತ್ಯವಿರುವ ಎಲ್ಲಾ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುವುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಭಾರತವು ಅಮೆರಿಕಕ್ಕೆ ಕಟ್ಟುನಿಟ್ಟಿನ ಸಂದೇಶ ರವಾನಿಸಿದೆ.

Read More
Next Story