ಚೀನಾ ಗೂಢಚಾರಿಣಿ ಜೊತೆ ಸಂಬಂಧದ ಆರೋಪ: NVIDIA ಸಿಇಒ ಜೆನ್ಸನ್ ಹುವಾಂಗ್‌ ಹುದ್ದೆಗೆ ಕಂಟಕ
x

ಚೀನಾ ಗೂಢಚಾರಿಣಿ ಜೊತೆ ಸಂಬಂಧದ ಆರೋಪ: NVIDIA ಸಿಇಒ ಜೆನ್ಸನ್ ಹುವಾಂಗ್‌ ಹುದ್ದೆಗೆ ಕಂಟಕ

ಎನ್‌ವಿಡಿಯಾ ಸಿಇಒ ಜೆನ್ಸನ್ ಹುವಾಂಗ್ ವಿರುದ್ಧ ವಿವಾಹೇತರ ಸಂಬಂಧದ ಆರೋಪ ಕೇಳಿಬಂದಿದೆ. ಚೀನಾ ಗೂಢಚಾರಿಣಿ ಜೊತೆಗಿನ ಸಂಬಂಧದ ವಿವಾದದ ಬೆನ್ನಲ್ಲೇ ಅವರನ್ನು ಪದಚ್ಯುತಗೊಳಿಸುವ ಸಾಧ್ಯತೆ ಕುರಿತು ವರದಿ.


Click the Play button to hear this message in audio format

ವಿಶ್ವದ ಪ್ರಮುಖ ಚಿಪ್ ತಯಾರಿಕಾ ಕಂಪನಿ ಎನ್‌ವಿಡಿಯಾ (NVIDIA) ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಜೆನ್ಸನ್ ಹುವಾಂಗ್ ಅವರ ಸ್ಥಾನಕ್ಕೆ ಕುತ್ತು ಎದುರಾಗಿದೆಯೇ? ಚೀನಾ ಗೂಢಚಾರಿಣಿ ಎನ್ನಲಾದ ಮಹಿಳೆ ಸೇರಿದಂತೆ ಇಬ್ಬರ ಜೊತೆ ವಿವಾಹೇತರ ಸಂಬಂಧ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ಕಂಪನಿಯ ಆಡಳಿತ ಮಂಡಳಿ ಅವರನ್ನು ಸಿಇಒ ಸ್ಥಾನದಿಂದ ಕೆಳಗಿಳಿಸಲು ಸಿದ್ಧತೆ ನಡೆಸಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಬುಧವಾರವೇ ಆಡಳಿತ ಮಂಡಳಿ ಸಭೆ ಸೇರಿ ಹುವಾಂಗ್ ಅವರ ಭವಿಷ್ಯದ ಬಗ್ಗೆ ನಿರ್ಧಾರ ಕೈಗೊಳ್ಳುವ ಸಾಧ್ಯತೆಯಿದೆ ಎಂದು ವರದಿ ತಿಳಿಸಿದೆ. ಆದರೆ, ಈ ಕುರಿತು ಎನ್‌ವಿಡಿಯಾ ಅಧಿಕೃತವಾಗಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಈ ವಿವಾದದ ಬೆನ್ನಲ್ಲೇ ಎನ್‌ವಿಡಿಯಾ ಷೇರುಗಳು ವಹಿವಾಟಿನ ನಂತರದ ಅವಧಿಯಲ್ಲಿ ಸುಮಾರು ಶೇ.8ರಷ್ಟು ಕುಸಿದಿವೆ. ಕಂಪನಿಯ ಮಂಡಳಿ ತನಿಖೆ ಆರಂಭಿಸಿದ ಬಳಿಕ ಈ ವಾರದಲ್ಲಿ ಕಂಪನಿಯ ಮಾರುಕಟ್ಟೆ ಮೌಲ್ಯ ಸುಮಾರು 600 ಶತಕೋಟಿ ಡಾಲರ್‌ನಷ್ಟು ಇಳಿಕೆಯಾಗಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಇದಕ್ಕೂ ಮುನ್ನ ನ್ಯೂಯಾರ್ಕ್ ಟೈಮ್ಸ್ ವರದಿಯೊಂದು, ಹುವಾಂಗ್ ಅವರು ತಮಗೆ ವರದಿ ಸಲ್ಲಿಸುತ್ತಿದ್ದ ಕಂಪನಿಯ ಹಿರಿಯ ಅಧಿಕಾರಿಯೊಂದಿಗೆ ವಿವಾಹೇತರ ಸಂಬಂಧ ಹೊಂದಿದ್ದರು ಎಂದು ತಿಳಿಸಿತ್ತು. ಎನ್‌ವಿಡಿಯಾದ ಆರೋಗ್ಯ ವಿಭಾಗದ ಉಪಾಧ್ಯಕ್ಷೆ ಕಿಂಬರ್ಲಿ ಪೊವೆಲ್ ಅವರೊಂದಿಗೆ ಈ ಸಂಬಂಧ ಇತ್ತು ಎಂದು ಕಂಪನಿಯಲ್ಲಿ ಕೆಲಸ ಮಾಡಿದ್ದ ಐವರನ್ನು ಉಲ್ಲೇಖಿಸಿ ವರದಿ ಮಾಡಲಾಗಿತ್ತು. ಈ ಆರೋಪಗಳ ಬಗ್ಗೆ ಪ್ರತಿಕ್ರಿಯೆ ಕೇಳಿದಾಗ ಹುವಾಂಗ್ ನೇರವಾಗಿ ತಮ್ಮನ್ನು ಸಂಪರ್ಕಿಸಬಾರದು ಎಂದು ಹೇಳಿ ಕರೆ ಕಡಿತಗೊಳಿಸಿದ್ದರು ಎಂದು ವರದಿ ತಿಳಿಸಿದೆ.

ಈ ವಿವಾದದ ಮೂಲ ಚೀನಾ ಮೂಲದ ಆಲಿಸ್ ಹುವಾಂಗ್ ಎಂಬ ಮಹಿಳೆಯೊಂದಿಗಿನ ಜೆನ್ಸನ್ ಸಂಬಂಧ. ಅಮೆರಿಕದ ಗುಪ್ತಚರ ಇಲಾಖೆ ಪ್ರಕಾರ, ಎನ್‌ವಿಡಿಯಾ ಚಿಪ್‌ಗಳನ್ನು ಚೀನಾದ ಕಂಪನಿಗಳಿಗೆ ಸಾಗಿಸಲು ನೆರವಾದ ಆರೋಪ ಆಕೆಯ ಮೇಲಿದೆ. ಭಾನುವಾರ ಉದ್ಯೋಗಿಗಳಿಗೆ ಬರೆದ ಸಂದೇಶದಲ್ಲಿ ಜೆನ್ಸನ್ ತಮ್ಮ ಪತ್ನಿಗೆ ನಿಷ್ಠರಾಗಿರದಿರುವುದನ್ನು ಒಪ್ಪಿಕೊಂಡು, ಸಂಪೂರ್ಣ ಜವಾಬ್ದಾರಿ ಹೊತ್ತುಕೊಳ್ಳುವುದಾಗಿ ಹೇಳಿದ್ದರು. ಆದರೆ, ಸಂಬಂಧದ ಕುರಿತು ಹೆಚ್ಚಿನ ವಿವರ ನೀಡಿರಲಿಲ್ಲ.

ಅದೇ ದಿನ ಎನ್‌ವಿಡಿಯಾ ಆಡಳಿತ ಮಂಡಳಿ, ವಿದೇಶಿ ಗುಪ್ತಚರ ಸಂಸ್ಥೆಯ ಕಾರ್ಯಾಚರಣೆಗೆ ಜೆನ್ಸನ್ ಗುರಿಯಾಗಿದ್ದರೇ ಎಂಬ ಬಗ್ಗೆ ಸ್ವತಂತ್ರ ನಿರ್ದೇಶಕರು ಮತ್ತು ಹೊರಗಿನ ಕಾನೂನು ಸಲಹೆಗಾರರ ನೇತೃತ್ವದಲ್ಲಿ ತನಿಖೆ ಆರಂಭಿಸಿತ್ತು. ಆರಂಭದಲ್ಲಿ ಮಂಡಳಿ ಜೆನ್ಸನ್ ಅವರ ಮೇಲೆ ವಿಶ್ವಾಸ ವ್ಯಕ್ತಪಡಿಸಿತ್ತು.

ಇನ್ನೊಂದೆಡೆ, ಆರೋಪಗಳ ಕುರಿತು ಮುಚ್ಚಿದ ಬಾಗಿಲಿನ ಸಭೆಯಲ್ಲಿ ಮಾಹಿತಿ ನೀಡುವಂತೆ ಅಮೆರಿಕದ ಕಾಂಗ್ರೆಸ್ ಹುವಾಂಗ್ ಅವರನ್ನು ಕೋರಿದೆ. ಪ್ರತಿಕ್ರಿಯೆ ನೀಡದಿದ್ದರೆ ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡುವ ಸಾಧ್ಯತೆಯೂ ಇದೆ.

1993ರಲ್ಲಿ ಜೆನ್ಸನ್ ಹುವಾಂಗ್ ಅವರು ಕರ್ಟಿಸ್ ಪ್ರೀಮ್ ಮತ್ತು ಕ್ರಿಸ್ ಮಲಚೋವ್ಸ್ಕಿ ಅವರೊಂದಿಗೆ ಎನ್‌ವಿಡಿಯಾವನ್ನು ಸ್ಥಾಪಿಸಿದ್ದರು. ಕಂಪ್ಯೂಟರ್ ಆಟಗಳಿಗೆ ಗ್ರಾಫಿಕ್ಸ್ ಚಿಪ್‌ಗಳನ್ನು ತಯಾರಿಸುವ ಮೂಲಕ ಆರಂಭವಾದ ಕಂಪನಿ, ಇಂದು ಕೃತಕ ಬುದ್ಧಿಮತ್ತೆ ಕ್ಷೇತ್ರಕ್ಕೆ ಅಗತ್ಯವಿರುವ ಚಿಪ್‌ಗಳ ಪ್ರಮುಖ ಪೂರೈಕೆದಾರನಾಗಿ ಬೆಳೆದಿದೆ. ಮೂರು ದಶಕಗಳಿಗೂ ಹೆಚ್ಚು ಕಾಲ ಕಂಪನಿಯನ್ನು ಮುನ್ನಡೆಸಿರುವ ಹುವಾಂಗ್ ಅವರ ಭವಿಷ್ಯದ ಬಗ್ಗೆ ಈಗ ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಕುತೂಹಲ ಮೂಡಿದೆ.

Read More
Next Story