ಕಮಲಾ ಹ್ಯಾರಿಸ್‌ ಸ್ವಲ್ಪ ಮೇಲುಗೈ: ಅಲನ್‌ ಲಿಚ್ಮನ್‌
x

ಕಮಲಾ ಹ್ಯಾರಿಸ್‌ ಸ್ವಲ್ಪ ಮೇಲುಗೈ: ಅಲನ್‌ ಲಿಚ್ಮನ್‌

ಅಮೆರಿಕದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್‌ ಸ್ವಲ್ಪ ಮಟ್ಟಿಗೆ ಮೇಲುಗೈ ಸಾಧಿಸಿದ್ದಾರೆ ಎಂದು ಅಲನ್ ಲಿಚ್ಮನ್ ಸಂದರ್ಶನವೊಂದರಲ್ಲಿ ಹೇಳಿದ್ದಾರೆ. ಅವರು ಅಮೆರಿಕದ ಒಂಬತ್ತು ಚುನಾವಣೆಗಳ ಫಲಿತಾಂಶವನ್ನು ನಿಖರವಾಗಿ ಭವಿಷ್ಯ ನುಡಿದಿರುವ ಇತಿಹಾಸಕಾರ.


ಅಮೆರಿಕದ ಒಂಬತ್ತು ಚುನಾವಣೆಗಳ ಫಲಿತಾಂಶವನ್ನು ನಿಖರವಾಗಿ ಭವಿಷ್ಯ ನುಡಿದಿರುವ ಇತಿಹಾಸಕಾರ, ಅಧ್ಯಕ್ಷೀಯ ಹೋರಾಟದಲ್ಲಿ ರಿಪಬ್ಲಿಕನ್ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್‌ ಅವರಿಗಿಂತ ಡೆಮೋಕ್ರಾಟ್ ಕಮಲಾ ಹ್ಯಾರಿಸ್‌ ಅವರಿಗೆ ಒಲವು ತೋರಿದ್ದಾರೆ.

ʻಅಮೆರಿಕದ ಅಧ್ಯಕ್ಷೀಯ ಚುನಾವಣೆಯ ನಾಸ್ಟ್ರಡಾಮಸ್ʼ ಎಂದು ಕರೆಸಿಕೊಳ್ಳುವ ಅಲನ್ ಲಿಚ್ಮನ್(77), ʻಹ್ಯಾರಿಸ್ ಸೋಲಬೇಕೆಂದರೆ ಬಹಳಷ್ಟು ತಪ್ಪುಗಳನ್ನು ಮಾಡಬೇಕಾಗುತ್ತದೆ,ʼ ಎಂದು ನ್ಯೂಸ್ ನೇಷನ್‌ಗೆ ಹೇಳಿದ್ದಾರೆ. ಅವರು ʻಶ್ವೇತಭವನಕ್ಕೆ 13 ಕೀʼ ಆಧರಿಸಿ, ಭವಿಷ್ಯ ನುಡಿಯುತ್ತಾರೆ.

ಲಿಚ್ಮನ್‌ ಅವರ ವಿಧಾನ: ಈ ವಿಧಾನವು 13 ಸರಿ ಅಥವಾ ತಪ್ಪು ಎಂದು ಉತ್ತರಿಸಬೇಕಾದ ಪ್ರಶ್ನೆಗಳನ್ನು ಒಳಗೊಂಡಿದೆ. ಅಧಿಕಾರ ದಲ್ಲಿರುವ ಪಕ್ಷದ ವಿರುದ್ಧ ಆರು ಅಥವಾ ಹೆಚ್ಚು ಉತ್ತರ ಹೋದರೆ, ಸೋಲುತ್ತಾರೆ. ಆರಕ್ಕಿಂತ ಕಡಿಮೆ ಇದ್ದರೆ, ಆಡಳಿತ ಪಕ್ಷ ಗೆಲ್ಲುತ್ತದೆ. ಆರ್ಥಿಕ ಕಾರ್ಯಕ್ಷಮತೆ, ಸಾಮಾಜಿಕ ಸ್ಥಿರತೆ ಮತ್ತು ಪ್ರಸ್ತುತ ವರ್ಚಸ್ಸು ಸೇರಿದಂತೆ ವಿವಿಧ ಅಂಶಗಳನ್ನು ಆಧರಿಸಿರುತ್ತದೆ.

ಹಿಂದಿನ ಭವಿಷ್ಯವಾಣಿ: ಮಾಜಿ ಅಧ್ಯಕ್ಷ ಅಬ್ರಹಾಂ ಲಿಂಕನ್‌ ಅವರ ಕಾಲದಿಂದಲೂ ದತ್ತಾಂಶವನ್ನು ಬಳಸಿಕೊಂಡು, ಎಚ್ಚರಿಕೆಯ ವಿಶ್ಲೇಷಣೆ ಮೂಲಕ ಸಾಂಪ್ರದಾಯಿಕ ವಿಧಾನಗಳನ್ನು ಮೀರಿಸುವಂತಹ ಭವಿಷ್ಯಸೂಚಕ ಮಾದರಿಯನ್ನು ಲಿಚ್ಮನ್‌ ರಚಿಸಿದ್ದಾರೆ. ಆರ್ಥಿಕ ಹಿಂಜರಿತದ ನಡುವೆಯೇ ರೊನಾಲ್ಡ್ ರೇಗನ್ ಅವರ ಮರು ಚುನಾವಣೆ ವಿಜಯದಿಂದ ಹಿಡಿದು ಜಾರ್ಜ್ ಎಚ್‌.ಡಬ್ಲ್ಯು. ಬುಷ್ ವಿರುದ್ಧ ಬಿಲ್ ಕ್ಲಿಂಟನ್ ವಿಜಯದವರೆಗೆ ಅಧ್ಯಕ್ಷರನ್ನು ಸರಿಯಾಗಿ ಊಹಿಸಿದ್ದಾರೆ.

ಶ್ವೇತಭವನದ 13 ಕೀಲಿಗಳು: ಆ ಕೀಲಿಗಳೆಂದರೆ,

ಪಕ್ಷದ ಆದೇಶ: ಮಧ್ಯಂತರ ಚುನಾವಣೆ ನಂತರ, ಅಧಿಕಾರದಲ್ಲಿರುವ ಪಕ್ಷವು ಹಿಂದಿನ ಮಧ್ಯಂತರ ಅವಧಿಗಳಿಗಿಂತ ಹೆಚ್ಚು ಜನಪ್ರತಿನಿಧಿ ಸ್ಥಾನಗಳನ್ನು ಪಡೆದುಕೊಂಡಿದೆ.

ನಾಮನಿರ್ದೇಶನ ಸ್ಪರ್ಧೆ: ಪಕ್ಷದ ನಾಮನಿರ್ದೇಶನಕ್ಕೆ ಮಹತ್ವದ ಸವಾಲು ಇಲ್ಲ.

ಅಧಿಕಾರಾವಧಿ: ಹಾಲಿ ಅಧ್ಯಕ್ಷರು ಪಕ್ಷವನ್ನು ಪ್ರತಿನಿಧಿಸುತ್ತಾರೆ.

ಮೂರನೇ-ಪಕ್ಷದ ಅಂಶ: ಯಾವುದೇ ಗಮನಾರ್ಹ ಮೂರನೇ ಪಕ್ಷ ಅಥವಾ ಸ್ವತಂತ್ರ ಅಭ್ಯರ್ಥಿಯಿಲ್ಲ.

ಅಲ್ಪಾವಧಿ ಆರ್ಥಿಕ ಸ್ಥಿರತೆ: ಚುನಾವಣೆ ಅವಧಿಯಲ್ಲಿ ಆರ್ಥಿಕ ಹಿಂಜರಿತ ಇರುವುದಿಲ್ಲ.

ದೀರ್ಘಾವಧಿ ಆರ್ಥಿಕ ಬೆಳವಣಿಗೆ: ನೈಜ ತಲಾ ಆರ್ಥಿಕ ಬೆಳವಣಿಗೆಯು ಹಿಂದಿನ ಎರಡು ಅವಧಿಗಳ ಸರಾಸರಿ ಬೆಳವಣಿಗೆಯನ್ನು ಸಮನಾಗಿರುತ್ತದೆ ಅಥವಾ ಮೀರಿಸುತ್ತದೆ.

ನೀತಿ ಬದಲಾವಣೆ: ಪ್ರಸ್ತುತ ಆಡಳಿತವು ರಾಷ್ಟ್ರೀಯ ನೀತಿಯಲ್ಲಿ ಪ್ರಮುಖ ಬದಲಾವಣೆಗಳನ್ನು ಜಾರಿಗೊಳಿಸುತ್ತದೆ.

ಸಾಮಾಜಿಕ ಸ್ಥಿರತೆ: ದೀರ್ಘಾವಧಿಯ ಸಾಮಾಜಿಕ ಅಶಾಂತಿ ಇಲ್ಲ.

ಹಗರಣ ಮುಕ್ತ: ಪ್ರಸ್ತುತ ಆಡಳಿತ ಪ್ರಮುಖ ಹಗರಣಗಳಿಂದ ಮುಕ್ತವಾಗಿದೆ.

ವಿದೇಶಿ/ಮಿಲಿಟರಿ ದುರ್ಘಟನೆಗಳು: ಪ್ರಸ್ತುತ ಆಡಳಿತದ ಅಡಿಯಲ್ಲಿ ವಿದೇಶಿ ಅಥವಾ ಮಿಲಿಟರಿ ವ್ಯವಹಾರಗಳಲ್ಲಿ ಗಮನಾರ್ಹ ವೈಫಲ್ಯ ಸಂಭವಿಸಿಲ್ಲ.

ವಿದೇಶಿ/ಮಿಲಿಟರಿ ವಿಜಯ: ಪ್ರಸ್ತುತ ಆಡಳಿತ ವಿದೇಶಿ ಅಥವಾ ಮಿಲಿಟರಿ ವಿಷಯಗಳಲ್ಲಿ ಗಮನಾರ್ಹ ಯಶಸ್ಸನ್ನು ಸಾಧಿಸುತ್ತದೆ.

ವರ್ಚಸ್ಸು: ಪಕ್ಷದ ಅಭ್ಯರ್ಥಿ ವರ್ಚಸ್ವಿಯಾಗಿದ್ದಾರೆ ಅಥವಾ ರಾಷ್ಟ್ರೀಯ ನಾಯಕನ ಸ್ಥಾನಮಾನ ಹೊಂದಿದ್ದಾರೆ.

ಪ್ರತಿವಾದಿ ಸ್ಥಾನಮಾನ: ಎದುರಾಳಿಗೆ ವರ್ಚಸ್ಸು ಅಥವಾ ರಾಷ್ಟ್ರೀಯ ನಾಯಕನ ಸ್ಥಾನಮಾನ ಇಲ್ಲ.

ಕಮಲಾ ಹಿಂದೆ ಡೆಮೋಕ್ರಾಟರು: ಜೋ ಬಿಡೆನ್ ಸ್ಪರ್ಧೆಯಿಂದ ಹಿಂದೆಸರಿದ ನಂತರ ಹ್ಯಾರಿಸ್ ನಾಮನಿರ್ದೇಶಿತರಾಗಬಹುದು. ಪ್ರಸ್ತುತ ಅವರು 13 ಕೀಗಳಲ್ಲಿ ಆರನ್ನು ಹೊಂದಿದ್ದಾರೆ. ಡೆಮೋಕ್ರಾಟರು ಮೂರು ಕೀ ಕಳೆದುಕೊಂಡಿದ್ದಾರೆ ಎಂದು ಲಿಚ್ಮನ್‌ ನ್ಯೂಸ್ ನೇಷನ್‌ಗೆ ತಿಳಿಸಿದರು. ʻ2022 ರ ಮಧ್ಯಂತರ ಚುನಾವಣೆಗಳಲ್ಲಿ ಅಪಜಯದಿಂದಾಗಿ ಡೆಮೋಕ್ರಾಟರು ʻಪಕ್ಷದ ಜನಾದೇಶ" ಕೀಲಿಯನ್ನು ಕಳೆದುಕೊಂಡಿದ್ದಾರೆ. ಹ್ಯಾರಿಸ್ ಅಪಜಯಕ್ಕೆ ಇನ್ನೂ ಮೂರು ಕೀಲಿ ಕಳೆದುಕೊಳ್ಳಬೇಕಾಗುತ್ತದೆ. ಅದು ಆಗುವ ಸಾಧ್ಯತೆ ಇಲ್ಲ ಎನ್ನುತ್ತಾರೆ ಲಿಚ್ಮನ್‌.

ಆಗಸ್ಟ್‌ನಲ್ಲಿ ನಡೆಯಲಿರುವ ಸಮಾವೇಶದ ನಂತರ ಕಮಲಾ ಹ್ಯಾರಿಸ್‌, ಸ್ಪರ್ಧೆಗೆ ಇಳಿಯಲಿದ್ದಾರೆ. ಹ್ಯಾರಿಸ್ ತಮ್ಮ ಉಮೇದುವಾರಿಕೆಯಿಂದ ಡೆಮೋಕ್ರಾಟರಲ್ಲಿ ಶಕ್ತಿ ತುಂಬಿದಂತಿದೆ ಎಂದು ಅಮೆರಿಕದ ಮಾಧ್ಯಮ ವರದಿಗಳು ಹೇಳುತ್ತವೆ. ಬಿಡೆನ್ ಸ್ಪರ್ಧೆಯಿಂದ ಹಿಂದೆ ಸರಿದ ನಂತರ ನಡೆದ ಅಸೋಸಿಯೇಟೆಡ್ ಪ್ರೆಸ್-ಎನ್‌ಆರ್‌ಸಿ ಸೆಂಟರ್ ಫಾರ್ ಪಬ್ಲಿಕ್ ಅಫೇರ್ಸ್ ರಿಸರ್ಚ್‌ನ ಸಮೀಕ್ಷೆ ಪ್ರಕಾರ, ಹ್ಯಾರಿಸ್ ಅಧ್ಯಕ್ಷ ಸ್ಥಾನದ ನಾಮಿನಿ ಆದರೆ, ತಾವು ಸ್ವಲ್ಪ ಅಥವಾ ತುಂಬಾ ತೃಪ್ತರಾಗುತ್ತೇವೆ ಎಂದು 10 ಡೆಮೋಕ್ರಾಟರಲ್ಲಿ 8 ಮಂದಿ ಹೇಳಿದ್ದಾರೆ.

ಕರಿಯರು, ಹಿಸ್ಪಾನಿಕ್ ವಯಸ್ಕರು: ಸುಮಾರು 10 ಕಪ್ಪು ವಯಸ್ಕರಲ್ಲಿ 7 ಮತ್ತು ಅರ್ಧದಷ್ಟು ಹಿಸ್ಪಾನಿಕ್ ವಯಸ್ಕರು ಹ್ಯಾರಿಸ್‌ ಉಮೇದುವಾರಿಕೆಗೆ ತೃಪ್ತರಾಗುತ್ತಾರೆ. 10 ರಲ್ಲಿ ಎಂಟು ಡೆಮೋಕ್ರಾಟ್‌ಗಳು ಹ್ಯಾರಿಸ್‌ ಬಗ್ಗೆ ಸಕಾರಾತ್ಮಕ ದೃಷ್ಟಿಕೋನ ಹೊಂದಿದ್ದಾರೆ. ಇದು ಜೂನ್ ಆರಂಭದಲ್ಲಿ 7 ಇದ್ದಿತ್ತು.

ಅಧ್ಯಕ್ಷ ಸ್ಥಾನವನ್ನು ಗೆದ್ದ ಮೊದಲ ಮಹಿಳೆ, ಮೊದಲ ಕಪ್ಪು ಮಹಿಳೆ, ದಕ್ಷಿಣ ಏಷ್ಯನ್‌ ಅಮೆರಿಕನ್ ಮತ್ತು ಮೊದಲ ಏಷ್ಯನ್ ಅಮೆರಿಕನ್ ಆಗುವುದರಿಂದ, ಇತಿಹಾಸದಲ್ಲಿ ದಾಖಲಾಗುತ್ತಾರೆ. ಹೆಚ್ಚಿನ ಡೆಮಾಕ್ರಾಟ್‌ ಗಳು ಮಹಿಳೆ ಅಥವಾ ಬಣ್ಣದ ವ್ಯಕ್ತಿಯನ್ನು ಆಯ್ಕೆ ಮಾಡುವುದು ದೇಶಕ್ಕೆ ಒಳ್ಳೆಯದು ಎಂದು ಹೇಳುತ್ತಾರೆ.

ಉಳಿದ ಸವಾಲು: ಹ್ಯಾರಿಸ್ ತಂಡ ಆಶಾವಾದಿಯಾಗಿದ್ದರೂ, ಹೆಚ್ಚು ಪರಿಚಿತ ಮತ್ತು ಬೆಂಬಲವಿರುವ ಎದುರಾಳಿಯನ್ನು ಎದುರಿಸುತ್ತಿದ್ದಾರೆ. ಹೆಚ್ಚಿನ ಅಮೆರಿಕನ್ನರು ಟ್ರಂಪ್ ಗೆಲುವಿನ ಸಾಧ್ಯತೆ ಹೆಚ್ಚು ಎಂದು ಭಾವಿಸುತ್ತಾರೆ. ಟ್ರಂಪ್ ಮತ್ತು ಹ್ಯಾರಿಸ್ ಅಭ್ಯರ್ಥಿಗಳಾದರೆ, ಟ್ರಂಪ್ ಗೆಲ್ಲುವ ಸಾಧ್ಯತೆ ಹೆಚ್ಚು ಎಂದು ಯುಎಸ್ ವಯಸ್ಕರಲ್ಲಿ ಹೆಚ್ಚಿನವರು ಹೇಳುತ್ತಾರೆ. 10 ರಲ್ಲಿ 9 ರಿಪಬ್ಲಿಕನ್ನರು ಟ್ರಂಪ್ ಅಧ್ಯಕ್ಷರಾಗುವ ಸಾಧ್ಯತೆಯಿದೆ ಎಂದು ಹಾಗೂ 10 ಡೆಮೋಕ್ರಾಟ್‌ಗಳಲ್ಲಿ 7 ಮಂದಿ ಮಾತ್ರ ಹ್ಯಾರಿಸ್ ಗೆಲುವಿನ ಬಗ್ಗೆ ಹೇಳುತ್ತಾರೆ.

Read More
Next Story