
euthanasia: ಅತ್ಯಾಚಾರಕ್ಕೆ ಒಳಗಾದ 25 ವರ್ಷದ ಯುವತಿಗೆ ದಯಾಮರಣ; ತೀವ್ರ ಚರ್ಚೆ
ಸುದೀರ್ಘ ಕಾನೂನು ಸಮರದ ಬಳಿಕ, ತಂದೆಯ ಕೊನೆಯ ಕ್ಷಣದ ಅರ್ಜಿಯನ್ನೂ ಬಾರ್ಸಿಲೋನಾ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ.
ಸ್ಪೇನ್‌ನ ಬಾರ್ಸಿಲೋನಾದಲ್ಲಿ 25 ವರ್ಷದ ಯುವತಿಯೊಬ್ಬಳು ದಯಾಮರಣಕ್ಕೆ ಒಳಗಾಗುತ್ತಿರುವ ಪ್ರಕರಣ ಇದೀಗ ಜಾಗತಿಕ ಮಟ್ಟದಲ್ಲಿ ತೀವ್ರ ಭಾವನಾತ್ಮಕ ಚರ್ಚೆಗೆ ಗ್ರಾಸವಾಗಿದೆ. ನೊಯೆಲಿಯಾ ಕ್ಯಾಸ್ಟಿಲ್ಲೊ ರಾಮೋಸ್ ಎಂಬ ಯುವತಿಗೆ ದಯಾಮರಣ ನೀಡಲು ಸಿದ್ಧತೆ ನಡೆಸಲಾಗಿದೆ.
ಈ ಪ್ರಕ್ರಿಯೆಯನ್ನು ತಡೆಯಲು ಜಾಲತಾಣ 'ಎಕ್ಸ್' (X) ನಲ್ಲಿ ವ್ಯಾಪಕ ಅಭಿಯಾನ ಆರಂಭವಾಗಿದೆ. ಆಸ್ಪತ್ರೆಯ ಹೊರಗೆ ಜಮಾಯಿಸಿ ಆಕೆಗೆ ಬದುಕುವಂತೆ ಪ್ರೇರೇಪಿಸಿ ಎಂಬ ಪೋಸ್ಟ್ ಒಂದಕ್ಕೆ ಅಪಾರ ಬೆಂಬಲ ವ್ಯಕ್ತವಾಗಿದ್ದು, ಈ ಹೃದಯವಿದ್ರಾವಕ ಘಟನೆಯು ಕರುಣೆ ಹಾಗೂ ವಾಸ್ತವಿಕತೆಯ ನಡುವಿನ ಸಂಘರ್ಷ ತೆರೆದಿಟ್ಟಿದೆ.
ಜಾಲತಾಣಗಳಲ್ಲಿ ಭಾವನಾತ್ಮಕ ಪೋಸ್ಟ್
'ಎಕ್ಸ್' ಬಳಕೆದಾರರೊಬ್ಬರು ಹಂಚಿಕೊಂಡಿರುವ ಪೋಸ್ಟ್‌ನಲ್ಲಿ, "ಕೆಲವೇ ಗಂಟೆಗಳಲ್ಲಿ ಕೇವಲ ಖಿನ್ನತೆಯ ಕಾರಣಕ್ಕಾಗಿ ಯುವತಿಗೆ ವೈದ್ಯರು ಉಸಿರಾಟ ನಿಲ್ಲಿಸುವ ಚುಚ್ಚುಮದ್ದು ನೀಡಲಿದ್ದಾರೆ" ಎಂದು ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. ತಾವು ಒಂದು ಬೃಹತ್ ಗ್ರೀಟಿಂಗ್ ಕಾರ್ಡ್ ಸಿದ್ಧಪಡಿಸಿದ್ದು, ಅದರಲ್ಲಿ ಆಕೆಯನ್ನು ಪ್ರೀತಿಸುವ ಹಾಗೂ ಪ್ರೋತ್ಸಾಹಿಸುವ ಸಾವಿರಾರು ಜನರ ಹೆಸರುಗಳನ್ನು ಸೇರಿಸುತ್ತಿರುವುದಾಗಿ ತಿಳಿಸಿದ್ದಾರೆ. ಭವಿಷ್ಯದಲ್ಲಿ ಕೃತಕ ಬುದ್ಧಿಮತ್ತೆ ತಂತ್ರಜ್ಞಾನವು ವೈದ್ಯಕೀಯ ಕ್ಷೇತ್ರದಲ್ಲಿ ಕ್ರಾಂತಿ ಮಾಡಲಿದ್ದು, ಅವಳ ನೋವು ಗುಣಮುಖವಾಗುವ ಹಾಗೂ ಮತ್ತೆ ನಡೆಯುವ ಸಾಧ್ಯತೆಗಳಿವೆ. ಹೀಗಾಗಿ ಬಾರ್ಸಿಲೋನಾದ ಸೆಂಟ್ ಕ್ಯಾಮಿಲ್ (St. Camil) ಆಸ್ಪತ್ರೆಯ ಹೊರಗೆ ಜನರು ಜಮಾಯಿಸಿ ಗಟ್ಟಿಯಾಗಿ ಹಾಡುವ ಮೂಲಕ, ಆಕೆಗೆ ಸಮಾಜದ ಬೆಂಬಲವಿದೆ ಎಂಬುದನ್ನು ತೋರಿಸಿ ಬದುಕುವ ಆಸೆ ಮೂಡಿಸಬೇಕು ಎಂದು ಅವರು ವಿನಂತಿಸಿದ್ದಾರೆ.
ತೀವ್ರ ದೈಹಿಕ ಯಾತನೆ, ಅಪ್ಪನಿಂದಲೇ ಕಾನೂನು ಹೋರಾಟ
ವಾಸ್ತವದಲ್ಲಿ ನೊಯೆಲಿಯಾ ಅವರ ಕಥೆ ಖಿನ್ನತೆಗೆ ಸೀಮಿತವಾಗಿಲ್ಲ. ಮಾಧ್ಯಮ ವರದಿಗಳ ಪ್ರಕಾರ, 2022ರಲ್ಲಿ ನಡೆದ ಲೈಂಗಿಕ ದೌರ್ಜನ್ಯದ ಬಳಿಕ ಆಕೆ ಕಟ್ಟಡದ ಐದನೇ ಮಹಡಿಯಿಂದ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ದರು. ಅಂದಿನಿಂದ ಆಕೆ ಸಂಪೂರ್ಣವಾಗಿ ಪಾರ್ಶ್ವವಾಯುವಿಗೆ ತುತ್ತಾಗಿದ್ದು, ನಿರಂತರ ಹಾಗೂ ತೀವ್ರ ಸ್ವರೂಪದ ದೈಹಿಕ ನೋವಿನಿಂದ ಬಳಲುತ್ತಿದ್ದಾರೆ. 2024ರಲ್ಲೇ ಆಕೆಗೆ ದಯಾಮರಣ ಪಡೆಯಲು ಅಲ್ಲಿನ ಸರ್ಕಾರಿ ಸಮಿತಿ ಅನುಮತಿ ನೀಡಿತ್ತು. ಆದರೆ ಅಲ್ಟ್ರಾ-ಕ್ಯಾಥೋಲಿಕ್ ಗುಂಪಿನ ಬೆಂಬಲ ಪಡೆದ ಆಕೆಯ ತಂದೆ, ಮಗಳ ನಿರ್ಧಾರದ ವಿರುದ್ಧ ಸುದೀರ್ಘ ಕಾನೂನು ಹೋರಾಟ ಆರಂಭಿಸಿದ್ದರು. ಇದರಿಂದಾಗಿ ಆಕೆಯ ದಯಾಮರಣ ಪ್ರಕ್ರಿಯೆ ಬರೋಬ್ಬರಿ 601 ದಿನಗಳ ಕಾಲ ವಿಳಂಬವಾಗಿತ್ತು.
ನಿರ್ಧಾರಕ್ಕೆ ಅಂಟಿಕೊಂಡ ಯುವತಿ
ಸುದೀರ್ಘ ಕಾನೂನು ಸಮರದ ಬಳಿಕ, ತಂದೆಯ ಕೊನೆಯ ಕ್ಷಣದ ಅರ್ಜಿಯನ್ನೂ ಬಾರ್ಸಿಲೋನಾ ನ್ಯಾಯಾಲಯ ಗುರುವಾರ ವಜಾಗೊಳಿಸಿದೆ. ಈ ಬಗ್ಗೆ ಇತ್ತೀಚೆಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದ ನೊಯೆಲಿಯಾ, ತನ್ನ ನಿರ್ಧಾರವನ್ನು ಬಲವಾಗಿ ಸಮರ್ಥಿಸಿಕೊಂಡಿದ್ದರು. "ನನ್ನ ಕುಟುಂಬದವರಾರಿಗೂ ಇದು ಇಷ್ಟವಿಲ್ಲ, ಆದರೆ ನಾನು ಕೇವಲ ಶಾಂತಿಯಿಂದ ಈ ಜಗತ್ತು ಬಿಡಲು ಬಯಸುತ್ತೇನೆ. ನನ್ನ ನೋವು ಕೊನೆಯಾಗಬೇಕಿದೆ, ಮಗಳ ಸಂತೋಷಕ್ಕಿಂತ ತಂದೆ-ತಾಯಿಯ ಸಂತೋಷ ಮೇಲಲ್ಲ" ಎಂದು ಅವರು ಸ್ಪಷ್ಟಪಡಿಸಿದ್ದರು. ದಯಾಮರಣದ ಸಮಯದಲ್ಲಿ ತಾನು ಚೆನ್ನಾಗಿ ಡ್ರೆಸ್ ಮಾಡಿಕೊಂಡು, ಕೊಂಚ ಮೇಕಪ್‌ನೊಂದಿಗೆ ಒಂಟಿಯಾಗಿರಲು ಬಯಸುವುದಾಗಿ ಆಕೆ ತಿಳಿಸಿದ್ದಾರೆ. ಇದೀಗ ಜಾಲತಾಣದ ತೀವ್ರ ಅಭಿಯಾನದ ನಡುವೆಯೂ, ಕಾನೂನಿನ ಅನುಮತಿಯೊಂದಿಗೆ ಆಕೆ ತನ್ನ ನಿಗದಿತ ಸಮಯದಂತೆ ನಿರ್ಗಮಿಸಲು ಸಿದ್ಧರಾಗಿದ್ದಾರೆ.

