New Yorks First Muslim Mayor, Jorhaan Mamdani, Wins Historic Victory with Dhoom Machale Celebration
x

ಭಾರತೀಯ ಮೂಲದ ನೂತನ ಮೇಯರ್ ಜೊಹ್ರಾನ್ ಮಮ್ದಾನಿ

ನೆಹರೂ ಹೇಳಿಕೆ ಉಲ್ಲೇಖ, 'ಧೂಮ್ ಮಚಾಲೆ' ಹಾಡಿನೊಂದಿಗೆ ನ್ಯೂಯಾರ್ಕ್‌ ನೂತನ ಮೇಯರ್ ಜೊಹ್ರಾನ್ ಮಮ್ದಾನಿ ಸಂಭ್ರಮ!

ಪ್ರಬಲ ಎದುರಾಳಿಗಳಾಗಿದ್ದ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ (ಪಕ್ಷೇತರ) ಮತ್ತು ರಿಪಬ್ಲಿಕನ್ ಪಕ್ಷದ ಕರ್ಟಿಸ್ ಸ್ಲಿವಾ ಅವರನ್ನು ಮಣಿಸಿ, ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮತ್ತು ದಕ್ಷಿಣ ಏಷ್ಯಾ ಮೂಲದ ಮೇಯರ್ ಆಗಿ ಇತಿಹಾಸ ನಿರ್ಮಿಸಿದ್ದಾರೆ.


Click the Play button to hear this message in audio format

"ಇತಿಹಾಸದಲ್ಲಿ ಅಪರೂಪಕ್ಕೊಮ್ಮೆ ಹಳೆಯದರಿಂದ ಹೊಸದಕ್ಕೆ ಹೆಜ್ಜೆ ಹಾಕುವ ಕಾಲ ಬರುತ್ತದೆ... ಇಂದು ನಾವು ಆ ಹೆಜ್ಜೆಯನ್ನು ಇಡುತ್ತಿದ್ದೇವೆ," - ಇವು ಭಾರತದ ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರ ಐತಿಹಾಸಿಕ ಮಾತುಗಳು. ಈ ಮಾತುಗಳು ಇದೀಗ ನ್ಯೂಯಾರ್ಕ್ ನಗರದ ರಾಜಕೀಯದಲ್ಲಿ ಹೊಸ ಅಧ್ಯಾಯ ಬರೆದ, ಭಾರತೀಯ ಮೂಲದ ನೂತನ ಮೇಯರ್ ಜೊಹ್ರಾನ್ ಮಮ್ದಾನಿ ಅವರ ವಿಜಯೋತ್ಸವದ ಭಾಷಣದಲ್ಲಿ ಮೊಳಗಿವೆ.

ಡೆಮಾಕ್ರೆಟಿಕ್ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಜೊಹ್ರಾನ್ ಮಮ್ದಾನಿ, ಪ್ರಬಲ ಎದುರಾಳಿಗಳಾಗಿದ್ದ ಮಾಜಿ ಗವರ್ನರ್ ಆಂಡ್ರ್ಯೂ ಕ್ಯುಮೊ (ಪಕ್ಷೇತರ) ಮತ್ತು ರಿಪಬ್ಲಿಕನ್ ಪಕ್ಷದ ಕರ್ಟಿಸ್ ಸ್ಲಿವಾ ಅವರನ್ನು ಮಣಿಸಿ, ನ್ಯೂಯಾರ್ಕ್‌ನ ಮೊದಲ ಮುಸ್ಲಿಂ ಮತ್ತು ದಕ್ಷಿಣ ಏಷ್ಯಾ ಮೂಲದ ಮೇಯರ್ ಆಗಿ ಇತಿಹಾಸ ನಿರ್ಮಿಸಿದ್ದಾರೆ.

ಮಂಗಳವಾರ ರಾತ್ರಿ ನಡೆದ ವಿಜಯೋತ್ಸವ ಸಮಾರಂಭದಲ್ಲಿ ಮಾತನಾಡಿದ ಮಮ್ದಾನಿ, "ಸ್ನೇಹಿತರೇ, ಈ ಗೆಲುವಿನ ಮೂಲಕ ನಾವು ವಂಶಪಾರಂಪರ್ಯ ರಾಜಕಾರಣವನ್ನು ಕೊನೆಗೊಳಿಸಿದ್ದೇವೆ. ಇಂದು ನಾನು ಆಂಡ್ರ್ಯೂ ಕ್ಯುಮೊ ಅವರ ಹೆಸರನ್ನು ಕೊನೆಯ ಬಾರಿಗೆ ಉಚ್ಚರಿಸುತ್ತಿದ್ದೇನೆ. ಏಕೆಂದರೆ, ಬಹುಸಂಖ್ಯಾತರನ್ನು ಕಡೆಗಣಿಸಿ ಕೆಲವರಿಗಾಗಿಯೇ ಸೇವೆ ಸಲ್ಲಿಸುವ ಅವರ ರಾಜಕೀಯಕ್ಕೆ ನಾವು ಅಂತ್ಯ ಹಾಡುತ್ತಿದ್ದೇವೆ," ಎಂದು ಪರೋಕ್ಷವಾಗಿ ಕುಟುಕಿದರು.

ನೆಹರೂರ 'ವಿಧಿಯೊಂದಿಗೆ ಒಪ್ಪಂದ'

ಭಾರತಕ್ಕೆ ಸ್ವಾತಂತ್ರ್ಯ ಸಿಕ್ಕ 1947ರ ಆಗಸ್ಟ್ 14ರ ಮಧ್ಯರಾತ್ರಿ, ನೆಹರೂ ಅವರು ತಮ್ಮ "Tryst with Destiny" (ವಿಧಿಯೊಂದಿಗೆ ಒಪ್ಪಂದ) ಭಾಷಣದಲ್ಲಿ ಹೇಳಿದ್ದ "ಸುದೀರ್ಘ ಕಾಲ ದಮನಕ್ಕೊಳಗಾದ ದೇಶದ ಆತ್ಮವು ಧ್ವನಿಯನ್ನು ಕಂಡುಕೊಳ್ಳುತ್ತದೆ" ಎಂಬ ಪ್ರಸಿದ್ಧ ಸಾಲುಗಳನ್ನು ಮಮ್ದಾನಿ ಉಲ್ಲೇಖಿಸಿದರು. "ಇಂದು ನಾವೆಲ್ಲರೂ ಸೇರಿ ಹಳೆಯದರಿಂದ ಹೊಸದಕ್ಕೆ ಕಾಲಿಡುತ್ತಿದ್ದೇವೆ. ದಮನಿತರ ಧ್ವನಿಯಾಗಿ ಬದಲಾವಣೆಯನ್ನು ತರುತ್ತಿದ್ದೇವೆ," ಎಂದು ತಮ್ಮ ಗೆಲುವನ್ನು ಬಣ್ಣಿಸಿದರು.

'ಧೂಮ್ ಮಚಾಲೆ'ಯೊಂದಿಗೆ ಸಂಭ್ರಮ

ಜೊಹ್ರಾನ್ ಮಮ್ದಾನಿ ಅವರು ತಮ್ಮ ಭಾಷಣವನ್ನು ಮುಗಿಸುತ್ತಿದ್ದಂತೆ, ಬಾಲಿವುಡ್‌ನ ಜನಪ್ರಿಯ 'ಧೂಮ್ ಮಚಾಲೆ' ಹಾಡು ಸಭಾಂಗಣದ ತುಂಬಾ ಮೊಳಗಿದ್ದು, ಅವರ ಭಾರತೀಯ ಮೂಲದ ಸಂಭ್ರಮವನ್ನು ಇಮ್ಮಡಿಗೊಳಿಸಿತು. ಪ್ರಸಿದ್ಧ ಭಾರತೀಯ ಚಲನಚಿತ್ರ ನಿರ್ದೇಶಕಿ ಮೀರಾ ನಾಯರ್ ಮತ್ತು ಉಗಾಂಡಾ ಮೂಲದ ಶಿಕ್ಷಣತಜ್ಞ ಮಹಮೂದ್ ಮಮ್ದಾನಿ ಅವರ ಪುತ್ರರಾಗಿರುವ ಜೊಹ್ರಾನ್, ರಾಜಕೀಯಕ್ಕೆ ಬರುವ ಮುನ್ನ 'ಯಂಗ್ ಕಾರ್ಡಮಮ್' ಎಂಬ ಹೆಸರಿನಿಂದ ರ್ಯಾಪರ್ ಆಗಿಯೂ ಗುರುತಿಸಿಕೊಂಡಿದ್ದರು. ಅವರ ಪ್ರಗತಿಪರ ಮತ್ತು ಸಮಾಜವಾದಿ ನಿಲುವುಗಳು, ಅವರನ್ನು ಯುವಜನರ ನೆಚ್ಚಿನ ನಾಯಕರನ್ನಾಗಿ ಮಾಡಿವೆ.

Read More
Next Story