
New US Rule: ಟ್ರಂಪ್ ಆದೇಶದ ಪರಿಣಾಮ; ಅಮೆರಿಕದಲ್ಲಿ ಗ್ರೀನ್ ಕಾರ್ಡ್ ಹೊಂದಿರುವ ಭಾರತೀಯರಿಗೂ ಹೊಸ ಸಮಸ್ಯೆ
ಹೊಸ ನಿಯಮ ಕಾನೂನುಬದ್ಧವಾಗಿ ಅಮೆರಿಕದಲ್ಲಿ ಇರುವವರಿಗೂ ಅನ್ವಯವಾಗಲಿದ್ದು, ತಮ್ಮದು ಅಧಿಕೃತ ವಾಸ ಎಂಬ ಕಾರಣಕ್ಕೆ ಮನೆಯಿಂದ ಹೊರಕ್ಕೆ ಹೋಗುವಾಗ ಐಡಿ ಕಾರ್ಡ್ ಮರೆತು ಹೋಗುವಂತಿಲ್ಲ. ಅಧಿಕಾರಿಗಳು ಏನಾದರೂ ಪರಿಶೀಲನೆ ಮಾಡಿದರೆ ದಂಡನೆ ಖಚಿತ.
ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಅಮೆರಿಕದಲ್ಲಿ ನೆಲೆಯಾಗಿರುವ ಭಾರತೀಯರಿಗೆ ನೂರೆಂಟು ತಲೆ ಬಿಸಿ ಶುರುವಾಗಿದ್ದು ಸುಳ್ಳಲ್ಲ. ವೀಸಾ ವಿಚಾರದಲ್ಲಿ ಅಮೆರಿಕದ ಅಧ್ಯಕ್ಷರು ಕೈಗೊಂಡಿರುವ ಕೆಲವು ತೀರ್ಮಾನಗಳು ಅವರೆಲ್ಲರ ಸಮಸ್ಯೆಗೆ ಕಾರಣ. ಅಂತೆಯೇ ಇದೀಗ ಹೊಸದೊಂದು ನಿಯಮ ಜಾರಿಗೆ ಬಂದಿದ್ದು ಎಲ್ಲರಿಗೂ ಹೊಸ ಕಿರಿಕಿರಿ ಎದುರಾಗಿದೆ. ಅದೇನೆಂಧರೆ, ಭಾರತೀಯ ಎಚ್ -1ಬಿ ವೀಸಾ ಹೊಂದಿರುವವರು, ಗ್ರೀನ್ ಕಾರ್ಡ್ ಹೊಂದಿರುವವರು ಅಥವಾ ವಿದ್ಯಾರ್ಥಿ ವೀಸಾ ಹೊಂದಿರುವವರೇ ಆಗಲಿ ಅವರು ಎಲ್ಲಿಗೆ ಹೋಗಬೇಕಿದ್ದರೂ ಅಧಿಕೃತ ಗುರುತಿನ ಚೀಟಿಯನ್ನು ಜತೆಗೆ ಇಟ್ಟುಕೊಳ್ಳಬೇಕಾಗುತ್ತದೆ. ಏಪ್ರಿಲ್ 11ರಿಂದ ಜಾರಿಗೆ ಬಂದಿರುವ ಹೊಸ ನಿಯಮದ ಪ್ರಕಾರ, ಅಕ್ರಮ ವಲಸಿಗರನ್ನು ಪತ್ತೆ ಹೆಚ್ಚುವ ಸಲುವಾಗಿ ಉಳಿದವರು ನೋಂದಣಿ ಮಾಡುವ ಜತೆಗೆ ಆ ದಾಖಲೆಯನ್ನು ಜತೆಗೆ ಇಟ್ಟುಕೊಳ್ಳುವುದು ಕಡ್ಡಾಯ.
ಹೊಸ ನಿಯಮ ಕಾನೂನುಬದ್ಧವಾಗಿ ಅಮೆರಿಕದಲ್ಲಿ ಇರುವವರಿಗೂ ಅನ್ವಯವಾಗಲಿದ್ದು, ತಮ್ಮದು ಅಧಿಕೃತ ವಾಸ ಎಂಬ ಕಾರಣಕ್ಕೆ ಮನೆಯಿಂದ ಹೊರಕ್ಕೆ ಹೋಗುವಾಗ ಐಡಿ ಕಾರ್ಡ್ ಮರೆತು ಹೋಗುವಂತಿಲ್ಲ. ಅಧಿಕಾರಿಗಳು ಏನಾದರೂ ಪರಿಶೀಲನೆ ಮಾಡಿದರೆ ದಂಡನೆ ಖಚಿತ.
ಈ ನಿಯಮವು, ಟ್ರಂಪ್ ಜಾರಿ ಮಾಡಿರುವ 'ಬೇರೆಯವರ ಆತಿಕ್ರಮಣದಿಂದ ಅಮೆರಿಕನ್ ಜನರನ್ನು ರಕ್ಷಿಸುವುದು' (Protecting the American People Against Invasion) ಎಂಬ ಕಾರ್ಯಕಾರಿ ಆದೇಶದ ಭಾಗವಾಗಿದೆ. ಇದರ ಪ್ರಕಾರ, 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲ ವಿದೇಶಿ ನಾಗರಿಕರು ತಮ್ಮ ನೋಂದಣಿ ದಾಖಲೆಯನ್ನು ಸದಾ ಜತೆಗಿಟ್ಟುಕೊಳ್ಳಬೇಕು. ಈ ನಿಯಮವನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಗೃಹ ಭದ್ರತಾ ಇಲಾಖೆ (DHS)ಗೆ ಸೂಚನೆ ನೀಡಿದ್ದು. ''ದಾಖಲೆ ಇಲ್ಲದವರಿಗೆ ಯಾವುದೇ ಆಶ್ರಯವಿಲ್ಲ,” ಎಂದು ಭದ್ರತಾ ಇಲಾಖೆ ಕಾರ್ಯದರ್ಶಿ ಕ್ರಿಸ್ಟಿ ನೋಮ್ ಹೇಳಿಕೆ ನೀಡಿದ್ದಾರೆ.
ಈ ನಿಯಮ ಹೊಸದೇನು ಇಲ್ಲ. 1940ರ ಅಲಿಯನ್ ರಿಜಿಸ್ಟ್ರೇಷನ್ ಆಕ್ಟ್‌ನಿಂದ ಆರಂಭಗೊಂಡಿತ್ತು. ಆಗಲೂ ವಲಸಿಗರಿಗೆ ನೋಂದಣಿ ಮತ್ತು ಐಡಿ ಕಾರ್ಡ್ಜತೆಗಿಟ್ಟುಕೊಳ್ಳುವುದು ಕಡ್ಡಾಯವಾಗಿದ್ದರೂ ಹೆಚ್ಚಿನವರು ಪಾಲಿಸುತ್ತಿರಲಿಲ್ಲ ಹಾಗೂ ಅದರ ಬಗ್ಗೆ ನಿಗಾ ಇರಲಿಲ್ಲ. ಇದೀಗ ಟ್ರಂಪ್ ಆಡಳಿತಕ್ಕೆ ಬಂದ ಮೇಲೆ ಹಾಗೂ ವಲಸಿಗರ ಮೇಲೆ ಕಟ್ಟುನಿಟ್ಟಿನ ಕ್ರಮ ಕೈಗೊಂಡಿರುವ ಹಿನ್ನೆಲೆಯಲ್ಲಿ ಐಡಿ ಕಾರ್ಡ್ ಕಡ್ಡಾಯ ಎನಿಸಿದೆ.
ಗ್ರೀನ್ ಕಾರ್ಡ್ ಹೊಂದಿರುವವರಿಗೆ ಏನು ಕಿರಿಕಿರಿ
ಎಚ್-೧ಬಿ ವೀಸಾ, ವಿದ್ಯಾರ್ಥಿ ವೀಸಾ ಅಥವಾ ಗ್ರೀನ್ ಕಾರ್ಡ್ ಹೊಂದಿರುವವರು ಈಗಾಗಲೇ ಸರ್ಕಾರದೊಂದಿಗೆ ನೋಂದಣಿ ಮಾಡಿಕೊಂಡಿರುವ ಕಾರಣ ಅವರಿಗೆ ಮತ್ತೊಮ್ಮೆ ನೋಂದಣಿ ಫಾರ್ಮ್ ಭರ್ತಿಮಾಡುವ ಅಗತ್ಯವಿಲ್ಲ. ಆದರೆ, ಅವರೂ ತಮ್ಮ ದಾಖಲೆಯನ್ನು (ವೀಸಾ, ಗ್ರೀನ್ ಕಾರ್ಡ್, ಅಥವಾ ಇತರ ಗುರುತಿನ ದಾಖಲೆ) ಯಾವಾಗಲೂ ಕೊಂಡೊಯ್ಯಬೇಕಾಗುತ್ತದೆ. ಅಧಿಕಾರಿಗಳು ಕೇಳಿದಾಗ ತೋರಿಸಬೇಕಾಗುತ್ತದೆ. ಇದು ಭಾರತೀಯ ಮೂಲದ ವೃತ್ತಿಪರರಿಗೆ, ವಿಶೇಷವಾಗಿ ಟೆಕ್ ಉದ್ಯಮದಲ್ಲಿ ಕೆಲಸ ಮಾಡುವ ಎಚ್- ೧ ಬಿ ವೀಸಾದಾರರಿಗೆ ಹೆಚ್ಚಿನ ಕಿರಿಕಿರಿ ಉಂಟು ಮಾಡಬಹುದು.
ಅಮೆರಿಕದಲ್ಲಿ ಸುಮಾರು 54 ಲಕ್ಷ ಭಾರತೀಯರು ವಾಸಿಸುತ್ತಿದ್ದಾರೆ ಮತ್ತು 2022ರ ಅಂಕಿ ಅಂಶದ ಪ್ರಕಾರ, ಸುಮಾರು 2.2 ಲಕ್ಷ ಭಾರತೀಯರು ಅಕ್ರಮವಾಗಿ ವಾಸಿಸುತ್ತಿದ್ದಾರೆ. ಇದು ಒಟ್ಟು ಅಕ್ರಮ ವಲಸಿಗರ ಶೇ.2ರಷ್ಟನ್ನು ಒಳಗೊಂಡಿದೆ. ಈ ನಿಯಮವು ಅಕ್ರಮ ವಲಸಿಗರ ಮೇಲೆ ಕೇಂದ್ರೀಕರಿಸಿದ್ದರೂ, ಕಾನೂನುಬದ್ಧ ವಲಸಿಗರಿಗೂ ದಾಖಲೆಯನ್ನು ಕೊಂಡೊಯ್ಯುವ ಅನಿವಾರ್ಯತೆ ಎದುರಾಗಿದೆ.
ನಿಯಮದ ಉದ್ದೇಶ
ಟ್ರಂಪ್ ಆಡಳಿತವು ಅಕ್ರಮ ವಲಸೆ ತಡೆಗಟ್ಟಲು ಮತ್ತು ದೇಶದ ಗಡಿಗಳನ್ನು ಸುರಕ್ಷಿತಗೊಳಿಸಲು ಈ ಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದೆ. ಈ ನಿಯಮವು ದೇಶದೊಳಗಿನ ವಲಸಿಗರ ಚಲನೆಯನ್ನು ಮೇಲ್ವಿಚಾರಣೆ ಮಾಡಲು ಮತ್ತು ಕಾನೂನು ಉಲ್ಲಂಘನೆ ತಡೆಗಟ್ಟಲು ಉದ್ದೇಶಿಸಿದೆ. ಆದರೆ, ಈ ಕ್ರಮವು ಕಾನೂನುಬದ್ಧವಾಗಿ ವಾಸಿಸುವ ವಲಸಿಗರಿಗೆ, ವಿಶೇಷವಾಗಿ ಭಾರತೀಯರಿಗೆ, ದೈನಂದಿನ ಜೀವನದಲ್ಲಿ ಕಿರಿಕಿರಿ ಉಂಟುಮಾಡಬಹುದು.
ಭಾರತೀಯರಿಗೆ ಪರಿಣಾಮ
ಭಾರತೀಯರು ಎಚ್ -೧ಬಿ ವೀಸಾ ಯೋಜನೆಯ ಪ್ರಮುಖ ಫಲಾನುಭವಿಗಳು. 2023ರಲ್ಲಿ ಒಟ್ಟು ಎಚ್-1ಬಿ ವೀಸಾಗಳಲ್ಲಿ ಶೇ.72 ರಷ್ಟನ್ನು ಭಾರತೀಯರು ಪಡೆದಿದ್ದಾರೆ. ಈ ವೀಸಾದಾರರು ಮುಖ್ಯವಾಗಿ ಟೆಕ್, ಎಂಜಿನಿಯರಿಂಗ್ ಮತ್ತು ಇತರ ವಿಶೇಷ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಈ ಹೊಸ ನಿಯಮವು ಅವರಿಗೆ ತಮ್ಮ ದಾಖಲೆಗಳನ್ನು ಯಾವಾಗಲೂ ಕೊಂಡೊಯ್ಯುವ ಹೊಸ ಜವಾಬ್ದಾರಿ ಎನಿಸಲಿದೆ.
ಅಕ್ರಮ ವಲಸಿಗರಿಗೆ ಈ ನಿಯಮವು ಗಡೀಪಾರು ಭೀತಿಯನ್ನು ತಂದಿದೆ. ಟ್ರಂಪ್ ಆಡಳಿತವು ದೊಡ್ಡ ಪ್ರಮಾಣದ ಗಡೀಪಾರು ಕಾರ್ಯಕ್ರಮ ಘೋಷಿಸಿದ್ದು, ಇದರಲ್ಲಿ ಸುಮಾರು 18,000 ಅಕ್ರಮ ಭಾರತೀಯ ವಲಸಿಗರನ್ನು ಗುರುತಿಸಲಾಗಿದೆ ಎಂದು ವರದಿಯಾಗಿದೆ.
ಸ್ವಾತಂತ್ರ್ಯಕ್ಕೆ ಧಕ್ಕೆ
ಈ ನಿಯಮವು ಕಾನೂನುಬದ್ಧ ವಲಸಿಗರಿಗೆ ಕಿರಿಕಿರಿ ಎನಿಸುವ ಜೊತೆಗೆ, ಕೆಲವು ವಿವಾದಳಿಗೂ ಕಾರಣವಾಗಲಿವೆ. ಕಾನೂನುಬದ್ಧವಾಗಿ ವಾಸಿಸುವವರಿಗೆ ದಾಖಲೆ ಕೊಂಡೊಯ್ಯುವ ಜತೆಗೆ ಅವರ ಸ್ವಾತಂತ್ರ್ಯದ ಮೇಲೆ ಕಡಿವಾಣ ಬೀಳಬಹುದು ಎಂದು ಕೆಲವರು ಟೀಕಿಸಿದ್ದಾರೆ. ಅಲ್ಲದೆ, ಈ ಕ್ರಮವು ಭಾರತೀಯ ವಿದ್ಯಾರ್ಥಿಗಳಿಗೂ (F-1 ವೀಸಾದಾರರಿಗೆ) ಅನ್ವಯವಾಗುವುದರಿಂದ, ವಿದ್ಯಾರ್ಥಿಗಳ ಮೇಲೆಯೂ ಹೆಚ್ಚಿನ ಒತ್ತಡ ಬೀಳಲಿದೆ. .