
ಆರಂಭದಲ್ಲಿ ವಿದೇಶಿ ಶೋಧ ಮತ್ತು ರಕ್ಷಣಾ ತಂಡಗಳ ಅಗತ್ಯವಿಲ್ಲ ಎಂದು ಹೇಳಿದ್ದ ನೇಪಾಳ ಸರ್ಕಾರ, ಇದೀಗ ಭಾರತ, ಚೀನಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದಿಂದ ವಿಶೇಷ ತಾಂತ್ರಿಕ ನೆರವು ಪಡೆಯಲು ಒಪ್ಪಿಕೊಂಡಿದೆ.
ಭೀಕರ ಪ್ರವಾಹಕ್ಕೆ ನಲುಗಿದ ನೇಪಾಳ- ವಿದೇಶಿ ನೆರವು ಬೇಡ ಎಂದಿದ್ದ ನೆರೆರಾಷ್ಟ್ರ ಈಗ ಯೂಟರ್ನ್
ನಾಪತ್ತೆಯಾದ ವಿದೇಶಿಯರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿದ್ದು, 288 ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿಯ ದಾಖಲೆಗಳು ತಿಳಿಸಿವೆ.
ಭೀಕರ ಪ್ರವಾಹದಿಂದ ತತ್ತರಿಸಿರುವ ನೇಪಾಳ ಇದೀಗ ವಿದೇಶಿ ರಕ್ಷಣಾ ನೆರವಿನ ವಿಚಾರದಲ್ಲಿ ಮಹತ್ವದ ನಿರ್ಧಾರಕ್ಕೆ ಬಂದಿದೆ. ಆರಂಭದಲ್ಲಿ ವಿದೇಶಿ ಶೋಧ ಮತ್ತು ರಕ್ಷಣಾ ತಂಡಗಳ ಅಗತ್ಯವಿಲ್ಲ ಎಂದು ಹೇಳಿದ್ದ ನೇಪಾಳ ಸರ್ಕಾರ, ಇದೀಗ ಭಾರತ, ಚೀನಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದಿಂದ ವಿಶೇಷ ತಾಂತ್ರಿಕ ನೆರವು ಪಡೆಯಲು ಒಪ್ಪಿಕೊಂಡಿದೆ.
ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಉಂಟಾದ ಭೀಕರ ಹಠಾತ್ ಪ್ರವಾಹದಿಂದ ನೇಪಾಳದ ಹಲವು ಪ್ರದೇಶಗಳು ತೀವ್ರವಾಗಿ ಹಾನಿಗೊಳಗಾಗಿವೆ. ಶುಕ್ರವಾರದ ವೇಳೆಗೆ 550ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 1,924 ಮಂದಿ ನಾಪತ್ತೆಯಾಗಿದ್ದಾರೆ ಎಂದು ನೇಪಾಳದ ವಿಪತ್ತು ನಿರ್ವಹಣಾ ಪ್ರಾಧಿಕಾರದ ವರದಿ ತಿಳಿಸಿದೆ. ನಾಪತ್ತೆಯಾದ ವಿದೇಶಿಯರಲ್ಲಿ ಭಾರತೀಯರ ಸಂಖ್ಯೆಯೇ ಹೆಚ್ಚಿದ್ದು, 288 ಭಾರತೀಯರು ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ನೇಪಾಳ ಪ್ರವಾಸೋದ್ಯಮ ಮಂಡಳಿಯ ದಾಖಲೆಗಳು ತಿಳಿಸಿವೆ.
ಸುರಂಗ ರಕ್ಷಣೆಗೆ ಭಾರತದ ವಿಶೇಷ ತಂಡ
ಪ್ರವಾಹದಿಂದ ಹಾನಿಗೊಳಗಾದ ಜಲವಿದ್ಯುತ್ ಯೋಜನೆಗಳ ಸುರಂಗಗಳಲ್ಲಿ ಕಾರ್ಮಿಕರು ಸಿಲುಕಿರುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ವಿಶೇಷ ರಕ್ಷಣಾ ತಂಡಗಳ ನೆರವು ಪಡೆಯಲು ನೇಪಾಳ ನಿರ್ಧರಿಸಿದೆ. ಭಾರತವು ಈಗಾಗಲೇ ಸುರಂಗ ರಕ್ಷಣಾ ತಂಡ, ವೈದ್ಯಕೀಯ ತಂಡ ಹಾಗೂ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಸಿಬ್ಬಂದಿಯನ್ನು ಕಳುಹಿಸುವುದಾಗಿ ತಿಳಿಸಿದೆ. ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ನೇಪಾಳದ ವಿದೇಶಾಂಗ ಸಚಿವ ಶಿಶಿರ್ ಖನಾಲ್ ಅವರೊಂದಿಗೆ ಮಾತುಕತೆ ನಡೆಸಿ ಅಗತ್ಯ ನೆರವಿನ ಭರವಸೆ ನೀಡಿದ್ದಾರೆ.
ಅಪ್ಪರ್ ತ್ರಿಶೂಲಿ-1ರಲ್ಲಿ 576 ಕಾರ್ಮಿಕರು ನಾಪತ್ತೆ
216 ಮೆಗಾವ್ಯಾಟ್ ಸಾಮರ್ಥ್ಯದ ಅಪ್ಪರ್ ತ್ರಿಶೂಲಿ-1 ಜಲವಿದ್ಯುತ್ ಯೋಜನೆಯಲ್ಲಿ 576 ಮಂದಿ ಇನ್ನೂ ಸಂಪರ್ಕಕ್ಕೆ ಸಿಕ್ಕಿಲ್ಲ. ದುರಂತ ಸಂಭವಿಸಿದ ವೇಳೆ ಯೋಜನಾ ಸ್ಥಳದಲ್ಲಿ ಸುಮಾರು 1,350 ಮಂದಿ ಕೆಲಸ ಮಾಡುತ್ತಿದ್ದರು. ಪ್ರವಾಹ ಮತ್ತು ಭೂಕುಸಿತದಿಂದ ರಸ್ತೆ ಸಂಪರ್ಕ ಕಡಿತಗೊಂಡಿರುವುದು ಹಾಗೂ ಮೊಬೈಲ್ ಮತ್ತು ದೂರವಾಣಿ ಸೇವೆಗಳು ಸ್ಥಗಿತಗೊಂಡಿರುವುದು ರಕ್ಷಣಾ ಕಾರ್ಯಾಚರಣೆಗೆ ದೊಡ್ಡ ಸವಾಲಾಗಿದೆ.
DNA ಪರೀಕ್ಷೆ, ವಿಧಿವಿಜ್ಞಾನ ನೆರವಿಗೂ ಅನುಮತಿ
ಭಾರತ, ಚೀನಾ, ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದ ತಜ್ಞರು ಸುರಂಗ ರಕ್ಷಣೆಯ ಜತೆಗೆ DNA ಪರೀಕ್ಷೆ ಹಾಗೂ ವಿಧಿವಿಜ್ಞಾನ ಪರಿಶೀಲನೆಗಳಲ್ಲೂ ನೇಪಾಳಕ್ಕೆ ನೆರವಾಗಲಿದ್ದಾರೆ. ಹೆಚ್ಚಿನ ಸಂಖ್ಯೆಯ ಮೃತದೇಹಗಳನ್ನು ಗುರುತಿಸಲು ನೇಪಾಳದ ಪ್ರಯೋಗಾಲಯಗಳ ಸಾಮರ್ಥ್ಯ ಸೀಮಿತವಾಗಿರುವುದರಿಂದ ವಿದೇಶಿ ತಜ್ಞರ ನೆರವು ಪಡೆಯಲಾಗುತ್ತಿದೆ.
ಭಾರತದಿಂದ ಮಾನವೀಯ ನೆರವು
ಭಾರತವು ರಕ್ಷಣಾ ನೆರವಿನ ಜತೆಗೆ ಮಾನವೀಯ ನೆರವನ್ನೂ ಹೆಚ್ಚಿಸಿದೆ. ಮೂರನೇ ಹಂತದಲ್ಲಿ 10 ಟನ್ ಪರಿಹಾರ ಸಾಮಗ್ರಿಗಳನ್ನು ಕಠ್ಮಂಡುವಿಗೆ ಕಳುಹಿಸಲಾಗಿದ್ದು, ಪೋರ್ಟಬಲ್ ಜನರೇಟರ್‌ಗಳು, ಆಹಾರ ಪ್ಯಾಕೆಟ್‌ಗಳು, ನೀರು ಶುದ್ಧೀಕರಣ ಮಾತ್ರೆಗಳು ಮತ್ತು ಇತರ ಅಗತ್ಯ ವಸ್ತುಗಳು ಇದರಲ್ಲಿ ಸೇರಿವೆ. ವೈದ್ಯರು, ಪ್ಯಾರಾಮೆಡಿಕ್ಸ್ ಮತ್ತು ಸುರಂಗ ರಕ್ಷಣಾ ತಜ್ಞರನ್ನು ಒಳಗೊಂಡ 11 ಸದಸ್ಯರ ತಂಡವನ್ನೂ ಭಾರತ ಕಳುಹಿಸಿದೆ.
ಸುರಕ್ಷಿತರಾಗಿ ಮರಳಿದ ಮಹಾರಾಷ್ಟ್ರದ ನಾಗರಿಕರು
ನೇಪಾಳದ ಪ್ರವಾಹಪೀಡಿತ ಪ್ರದೇಶಗಳಲ್ಲಿ ಸಿಲುಕಿದ್ದ ಮಹಾರಾಷ್ಟ್ರದ ನಾಗರಿಕರು ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದು, ಇದೀಗ ತಮ್ಮ ತವರು ರಾಜ್ಯದತ್ತ ಪ್ರಯಾಣಿಸುತ್ತಿದ್ದಾರೆ. ರಕ್ಷಣೆಯ ಬಳಿಕ ನಾಗರಿಕರು ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರೊಂದಿಗೆ ವಿಡಿಯೋ ಕಾಲ್ ಮೂಲಕ ಮಾತನಾಡಿ, ಸಂಕಷ್ಟದ ಸಂದರ್ಭದಲ್ಲಿ ತ್ವರಿತವಾಗಿ ಸ್ಪಂದಿಸಿದ ಮಹಾರಾಷ್ಟ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಕಚೇರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ನಾಗರಿಕರೊಂದಿಗೆ ಮಾತನಾಡಿದ ಸಿಎಂ ದೇವೇಂದ್ರ ಫಡ್ನವೀಸ್, ಅವರ ಸುರಕ್ಷಿತ ವಾಪಸಿಗೆ ಕೇಂದ್ರ ಸರ್ಕಾರದ ಸಕ್ರಿಯ ಮಧ್ಯಸ್ಥಿಕೆ ಪ್ರಮುಖ ಕಾರಣವಾಗಿದೆ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಾಂಗ ಸಚಿವ ಡಾ. ಎಸ್. ಜೈಶಂಕರ್ ಅವರ ನೇರ ಪ್ರಯತ್ನದಿಂದ ತ್ವರಿತ ರಾಜತಾಂತ್ರಿಕ ಸಮನ್ವಯ ಹಾಗೂ ನೆಲಮಟ್ಟದಲ್ಲಿ ಅಗತ್ಯ ನೆರವು ದೊರೆತಿದೆ ಎಂದು ಅವರು ತಿಳಿಸಿದರು.

