
ನೇಪಾಳ, ಟಿಬೆಟ್‌ನಲ್ಲಿ ಭೀಕರ ಪ್ರವಾಹಕ್ಕೆ ಕಾರಣವಾದ ಹಿಮನದಿ ಕುಸಿತದ ಡ್ರೋನ್ ದೃಶ್ಯ ಸೆರೆ
ಬಂಡೆಗಳು, ಹಿಮ, ಕೆಸರು ಮತ್ತು ಇತರ ಅವಶೇಷಗಳ ಭಾರೀ ಪ್ರವಾಹವು ಸುಮಾರು 1,200 ಮೀಟರ್ ಕೆಳಗಿನ ಕಣಿವೆಗೆ ಅಪ್ಪಳಿಸಿದೆ. ಇದರಿಂದ ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಹಠಾತ್ ಪ್ರವಾಹ ಉಂಟಾಗಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ.
ನೇಪಾಳ ಮತ್ತು ಟಿಬೆಟ್‌ನಲ್ಲಿ ಕಳೆದ ವಾರ ಭಾರಿ ವಿನಾಶಕ್ಕೆ ಕಾರಣವಾದ ಪ್ರವಾಹದ ಹಿಂದಿನ ಭೀಕರ ಹಿಮನದಿ ಕುಸಿತದ ದೃಶ್ಯಗಳು ಇದೀಗ ಡ್ರೋನ್ ಕ್ಯಾಮೆರಾದಲ್ಲಿ ಸೆರೆಯಾಗಿವೆ. ಚೀನಾದ ಛಾಯಾಗ್ರಾಹಕರೊಬ್ಬರು ಸೆರೆಹಿಡಿದಿರುವ ದೃಶ್ಯಗಳಲ್ಲಿ, ಸಮುದ್ರ ಮಟ್ಟದಿಂದ 7,200 ಮೀಟರ್‌ಗೂ ಅಧಿಕ ಎತ್ತರದಲ್ಲಿರುವ ಲಾಂಗ್ಟಾಂಗ್ ಲಿರುಂಗ್ ಶಿಖರದ ಸಮೀಪ ಬೆಟ್ಟದ ಇಳಿಜಾರಿನಿಂದ ಬೃಹತ್ ಪ್ರಮಾಣದ ಬಂಡೆಗಳು ಮತ್ತು ಹಿಮನದಿ ಮಂಜುಗಡ್ಡೆ ಕುಸಿದು ಬೀಳುತ್ತಿರುವುದು ಕಂಡುಬಂದಿದೆ.
ಹಿಮ ಮತ್ತು ಬಂಡೆಗಳ ಬೃಹತ್ ರಾಶಿ ಕುಸಿಯುತ್ತಿದ್ದಂತೆ ಪರ್ವತ ಪ್ರದೇಶದಲ್ಲಿ ದಟ್ಟವಾದ ಮೋಡಗಳು ಮೇಲಕ್ಕೆ ಏರಿರುವುದೂ ದೃಶ್ಯಗಳಲ್ಲಿ ದಾಖಲಾಗಿದೆ. ಬಂಡೆಗಳು, ಹಿಮ, ಕೆಸರು ಮತ್ತು ಇತರ ಅವಶೇಷಗಳ ಭಾರೀ ಪ್ರವಾಹವು ಸುಮಾರು 1,200 ಮೀಟರ್ ಕೆಳಗಿನ ಕಣಿವೆಗೆ ಅಪ್ಪಳಿಸಿದೆ. ಇದರಿಂದ ಭೋಟೆಕೋಶಿ ಮತ್ತು ತ್ರಿಶೂಲಿ ನದಿಗಳಲ್ಲಿ ಹಠಾತ್ ಪ್ರವಾಹ ಉಂಟಾಗಿ ಭಾರಿ ಪ್ರಮಾಣದ ಹಾನಿ ಸಂಭವಿಸಿದೆ.
A Chinese photographer accidentally captured the catastrophic avalanche on Mount Lamtang in Nepal during a drone shoot.
— Massimo (@Rainmaker1973) August 28, 2026
[📹 HeyMu. Travel] pic.twitter.com/rgWylkezSC
ಆಗಸ್ಟ್ 26ರಂದು ಸಂಭವಿಸಿದ ಈ ದುರಂತದಲ್ಲಿ ನೇಪಾಳದಲ್ಲಿ 903 ಮಂದಿ ಹಾಗೂ ಟಿಬೆಟ್‌ನಲ್ಲಿ 16 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ನೇಪಾಳದಲ್ಲೇ ಹೆಚ್ಚಿನ ಸಂಖ್ಯೆಯ ಜನರು ನಾಪತ್ತೆಯಾಗಿದ್ದು, 4,500ಕ್ಕೂ ಹೆಚ್ಚು ಮಂದಿ ಇನ್ನೂ ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.
‘ಕಲ್ಪನೆಗೂ ನಿಲುಕದ ದುರಂತ’
ನೇಪಾಳದ ಪ್ರಧಾನಿ ಬಾಲೇಂದ್ರ ಶಾ, ದೇಶವು “ಕಲ್ಪನೆಗೂ ನಿಲುಕದ ಹಾಗೂ ಹೃದಯವಿದ್ರಾವಕ ನೈಸರ್ಗಿಕ ದುರಂತ”ವನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ. ಭೋಟೆಕೋಶಿ ನದಿಯಲ್ಲಿ ಉಂಟಾದ ಭೀಕರ ಪ್ರವಾಹದಿಂದ ರಾಸುವಾ ಪ್ರದೇಶದಲ್ಲಿ ಜೀವಹಾನಿ, ಆಸ್ತಿ ಮತ್ತು ಮೂಲಸೌಕರ್ಯಕ್ಕೆ ಉಂಟಾದ ನಷ್ಟದ ಸಂಪೂರ್ಣ ವಿವರ ಸಂಗ್ರಹಿಸುವುದು ಅತ್ಯಂತ ಕಷ್ಟಕರವಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಕೂಲ ಹವಾಮಾನ, ಕಠಿಣ ಭೌಗೋಳಿಕ ಪರಿಸ್ಥಿತಿ ಹಾಗೂ ಮುಂದುವರಿದ ಅಪಾಯಗಳ ನಡುವೆಯೂ ಜನರ ಜೀವ ರಕ್ಷಿಸಲು ಸರ್ಕಾರ ಅಗತ್ಯ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ಶಾ ಹೇಳಿದ್ದಾರೆ. “ಏಕತೆ ಮತ್ತು ಸಾಮೂಹಿಕ ಪ್ರಯತ್ನಗಳ ಮೂಲಕ ಈ ಬಿಕ್ಕಟ್ಟನ್ನು ಎದುರಿಸುವಲ್ಲಿ ನಾವು ಯಶಸ್ವಿಯಾಗುತ್ತೇವೆ,” ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹಿಮನದಿ ಕುಸಿತದಿಂದ ಹೆಚ್ಚುತ್ತಿರುವ ದುರಂತಗಳು
ಹಿಮನದಿ, ಬಂಡೆ ಮತ್ತು ಹಿಮ ಕುಸಿತದಿಂದ ಉಂಟಾಗುವ ಇಂತಹ ದುರಂತಗಳು ಹಿಮಾಲಯ ಮತ್ತು ಇತರ ಪರ್ವತ ಪ್ರದೇಶಗಳಲ್ಲಿ ಆಗಾಗ್ಗೆ ಸಂಭವಿಸುತ್ತಿವೆ. 2021ರಲ್ಲಿ, ಉತ್ತರಾಖಂಡದಲ್ಲಿ ರೊಂಟಿ ಶಿಖರದಿಂದ ಸುಮಾರು 95 ಕೋಟಿ ಘನ ಅಡಿ ಬಂಡೆ ಮತ್ತು ಹಿಮ ಕುಸಿದು ಭಾರಿ ಪ್ರಮಾಣದ ಪ್ರವಾಹ ಉಂಟಾಗಿತ್ತು. ಇದರಲ್ಲಿ ಸುಮಾರು ಶೇ.80ರಷ್ಟು ಬಂಡೆ ಮತ್ತು ಶೇ.20ರಷ್ಟು ಹಿಮ ಇತ್ತು ಎಂದು ವರದಿಯಾಗಿತ್ತು. ಈ ದುರಂತದಲ್ಲಿ ಜಲವಿದ್ಯುತ್ ಸ್ಥಾವರವೊಂದು ನಾಶವಾಗಿದ್ದು, ಸುಮಾರು 200 ಮಂದಿ ಮೃತಪಟ್ಟಿದ್ದರು ಅಥವಾ ನಾಪತ್ತೆಯಾಗಿದ್ದರು.
2023ರಲ್ಲಿ, ಸಿಕ್ಕಿಂನ ದಕ್ಷಿಣ ಲೋನಾಕ್ ಸರೋವರ ಪ್ರದೇಶದಲ್ಲಿ ಪರ್ಮಾಫ್ರಾಸ್ಟ್ ಕರಗುವಿಕೆಯಿಂದ ಬಂಡೆ ಕುಸಿತ ಸಂಭವಿಸಿತ್ತು. ಇದರಿಂದ ಹಿಮನದಿ ಸರೋವರವನ್ನು ತಡೆಹಿಡಿದಿದ್ದ ಮೊರೈನ್ ಒಡೆದು ಭಾರೀ ಪ್ರವಾಹ ಉಂಟಾಗಿತ್ತು. ಕೋಟ್ಯಂತರ ಗ್ಯಾಲನ್ ನೀರು ಪರ್ವತದಿಂದ ಕೆಳಕ್ಕೆ ಹರಿದು ಹಲವಾರು ಅಣೆಕಟ್ಟುಗಳು, 25 ಸಾವಿರಕ್ಕೂ ಹೆಚ್ಚು ಕಟ್ಟಡಗಳು ಮತ್ತು 30ಕ್ಕೂ ಅಧಿಕ ಸೇತುವೆಗಳಿಗೆ ಹಾನಿಯಾಯಿತು.
2025ರಲ್ಲಿ, ಸ್ವಿಸ್ ಆಲ್ಪ್ಸ್ ಪ್ರದೇಶದ ಬಿರ್ಚ್ ಹಿಮನದಿಯಿಂದ ಸುಮಾರು 33.5 ಕೋಟಿ ಘನ ಅಡಿ ಬಂಡೆ ಮತ್ತು ಹಿಮ ಕುಸಿದು, ಬ್ಲಾಟನ್ ಗ್ರಾಮದ ಬಹುತೇಕ ಭಾಗ ಮಣ್ಣಿನಡಿ ಸಿಲುಕಿತ್ತು. ಹಿಮನದಿಗಳ ಕರಗುವಿಕೆ, ಪರ್ಮಾಫ್ರಾಸ್ಟ್ ಕರಗುವಿಕೆ ಮತ್ತು ಪರ್ವತ ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಅಸ್ಥಿರತೆ ಇಂತಹ ದುರಂತಗಳ ಅಪಾಯವನ್ನು ಮತ್ತಷ್ಟು ಹೆಚ್ಚಿಸುತ್ತಿವೆ ಎಂಬ ಆತಂಕವೂ ವ್ಯಕ್ತವಾಗಿದೆ.

