
ಹಿಂಸಾಚಾರದ ಹೊಣೆ ಹೊತ್ತು ಈ ಹಿಂದೆಯೇ ಓಲಿ ಅವರ ಸರ್ಕಾರ ಅಧಿಕಾರದಿಂದ ಕೆಳಗಿಳಿದಿತ್ತು. ತನಿಖಾ ಆಯೋಗವು ಇಬ್ಬರೂ ನಾಯಕರಿಗೆ ಕಠ್ಮಂಡು ನಗರವನ್ನು ತೊರೆಯದಂತೆ ನಿರ್ಬಂಧ ವಿಧಿಸಿತ್ತು.
ಜೆನ್ ಝೀ ಪ್ರತಿಭಟನೆ ಹಿಂಸಾಚಾರ: ನೇಪಾಳದ ಮಾಜಿ ಪ್ರಧಾನಿ ಕೆ.ಪಿ.ಶರ್ಮಾ ಓಲಿ ಬಂಧನ
ಕೇವಲ ಒಂದು ದಿನದ ಹಿಂದೆಯಷ್ಟೇ ರಾಷ್ಟ್ರೀಯ ಸ್ವತಂತ್ರ ಪಕ್ಷದ (ಆರ್‌ಎಸ್‌ಪಿ) ನಾಯಕ ಬಾಲೇಂದ್ರ ಶಾ ಅವರು ನೇಪಾಳದ 47ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು.
ಕಳೆದ ಸೆಪ್ಟೆಂಬರ್ ತಿಂಗಳಲ್ಲಿ ನೇಪಾಳದಲ್ಲಿ ಭ್ರಷ್ಟಾಚಾರದ ವಿರುದ್ಧ ನಡೆದಿದ್ದ 'ಜೆನ್ ಝೀ' ಯುವ ಸಮುದಾಯದ ಬೃಹತ್ ಪ್ರತಿಭಟನೆ ವೇಳೆ ಸಂಭವಿಸಿದ ಹಿಂಸಾಚಾರ ಹಾಗೂ ಪ್ರಾಣಹಾನಿಗೆ ಸಂಬಂಧಿಸಿದಂತೆ ನೇಪಾಳದ ಮಾಜಿ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಅವರನ್ನು ಶನಿವಾರದಂದು ಪೊಲೀಸರು ಬಂಧಿಸಿದ್ದಾರೆ.
ಕೇವಲ ಒಂದು ದಿನದ ಹಿಂದೆಯಷ್ಟೇ ರಾಷ್ಟ್ರೀಯ ಸ್ವತಂತ್ರ ಪಕ್ಷದ (ಆರ್‌ಎಸ್‌ಪಿ) ನಾಯಕ ಬಾಲೇಂದ್ರ ಶಾ ಅವರು ನೇಪಾಳದ 47ನೇ ಪ್ರಧಾನ ಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದರು. ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಪ್ರತಿಭಟನೆ ವೇಳೆ ನಡೆದಿದ್ದ ಹಿಂಸಾಚಾರಕ್ಕೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಅವರು ಆದೇಶ ನೀಡಿದ್ದರು. ಓಲಿ ಅವರೊಂದಿಗೆ ಅಂದಿನ ಗೃಹ ಸಚಿವರಾಗಿದ್ದ ರಮೇಶ್ ಲೇಖಕ್ ಅವರನ್ನು ಸಹ ಭಕ್ತಪುರದಲ್ಲಿರುವ ಅವರ ನಿವಾಸದಿಂದ ಬಂಧಿಸಿ ವಿಚಾರಣೆಗೆ ಒಳಪಡಿಸಲಾಗಿದೆ.
ನಿರ್ಲಕ್ಷ್ಯವೇ ಕಾರಣ ಎಂಬ ಆರೋಪ
2025ರ ಸೆಪ್ಟೆಂಬರ್ 8 ರಂದು ಆರಂಭವಾದ ಈ ಪ್ರತಿಭಟನೆಯು ಸಾಮಾಜಿಕ ಜಾಲತಾಣಗಳ ಮೇಲಿನ ನಿಷೇಧ, ನಿರುದ್ಯೋಗ, ಆರ್ಥಿಕ ಕುಸಿತ ಹಾಗೂ ಭ್ರಷ್ಟಾಚಾರವನ್ನು ಖಂಡಿಸಿ ಯುವಜನರು ನಡೆಸಿದ ತೀವ್ರ ಹೋರಾಟವಾಗಿತ್ತು. ಪ್ರತಿಭಟನೆಯನ್ನು ಹತ್ತಿಕ್ಕುವ ಭರದಲ್ಲಿ ನಡೆದ ಪೊಲೀಸ್ ಗುಂಡಿನ ದಾಳಿ ಹಾಗೂ ಹಿಂಸಾಚಾರದಲ್ಲಿ ಒಟ್ಟು 76 ಮಂದಿ ಪ್ರಾಣ ಕಳೆದುಕೊಂಡಿದ್ದರು ಮತ್ತು ಸೆಪ್ಟೆಂಬರ್ 8ರಂದು ಒಂದೇ ದಿನ 19 ಮಂದಿ ಮೃತಪಟ್ಟಿದ್ದರು. ಈ ಸಾವುಗಳನ್ನು ತಡೆಯುವಲ್ಲಿ ಹಾಗೂ ಗುಂಡಿನ ದಾಳಿಯನ್ನು ನಿಲ್ಲಿಸುವಲ್ಲಿ ಅಂದಿನ ಪ್ರಧಾನಿ ಓಲಿ ಹಾಗೂ ಗೃಹ ಸಚಿವ ರಮೇಶ್ ಲೇಖಕ್ ತೀವ್ರ ನಿರ್ಲಕ್ಷ್ಯ ವಹಿಸಿದ್ದರು ಎಂದು ತನಿಖೆಗಾಗಿ ರಚಿಸಲಾಗಿದ್ದ ಆಯೋಗವು ತನ್ನ ವರದಿಯಲ್ಲಿ ನೇರ ಹೊಣೆಗಾರರನ್ನಾಗಿ ಮಾಡಿತ್ತು. ತನಿಖಾ ಆಯೋಗದ ಶಿಫಾರಸಿನ ಅನ್ವಯ ಕ್ರಿಮಿನಲ್ ನಿರ್ಲಕ್ಷ್ಯದ ಆರೋಪದಡಿ ಗೃಹ ಸಚಿವಾಲಯ ನೀಡಿದ ದೂರಿನ ಆಧಾರದ ಮೇಲೆ ಈ ಬಂಧನ ಪ್ರಕ್ರಿಯೆ ನಡೆದಿದೆ.
ನ್ಯಾಯಾಲಯಕ್ಕೆ ಹಾಜರುಪಡಿಸಲಿರುವ ಪೊಲೀಸರು
ಹಿಂಸಾಚಾರದ ಹೊಣೆ ಹೊತ್ತು ಈ ಹಿಂದೆಯೇ ಓಲಿ ಅವರ ಸರ್ಕಾರ ಅಧಿಕಾರದಿಂದ ಕೆಳಗಿಳಿದಿತ್ತು. ತನಿಖಾ ಆಯೋಗವು ಇಬ್ಬರೂ ನಾಯಕರಿಗೆ ಕಠ್ಮಂಡು ನಗರವನ್ನು ತೊರೆಯದಂತೆ ನಿರ್ಬಂಧ ವಿಧಿಸಿತ್ತು. ಇದೀಗ ಬಂಧನಕ್ಕೊಳಗಾಗಿರುವ 74 ವರ್ಷದ ಕೆ.ಪಿ. ಶರ್ಮಾ ಓಲಿ ಮತ್ತು ರಮೇಶ್ ಲೇಖಕ್ ಅವರನ್ನು ಕಾನೂನು ಪ್ರಕ್ರಿಯೆಗಳ ಅನ್ವಯ ಶೀಘ್ರದಲ್ಲೇ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು ಎಂದು ಕಠ್ಮಂಡು ಪೊಲೀಸ್ ವಕ್ತಾರರು ಸ್ಪಷ್ಟಪಡಿಸಿದ್ದಾರೆ. ನೇಪಾಳದ ರಾಷ್ಟ್ರೀಯ ದಂಡ ಸಂಹಿತೆಯ ಸೆಕ್ಷನ್ 181 ಮತ್ತು 182 ಅಡಿಯಲ್ಲಿ ಇವರ ವಿರುದ್ಧ ವಿಚಾರಣೆ ನಡೆಯಲಿದ್ದು, ಆರೋಪ ಸಾಬೀತಾದಲ್ಲಿ ಗರಿಷ್ಠ 10 ವರ್ಷಗಳವರೆಗೆ ಜೈಲು ಶಿಕ್ಷೆ ಅನುಭವಿಸುವ ಸಾಧ್ಯತೆಯಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

