
ಸುನಿತಾ ವಿಲಿಯಮ್ಸ್ 9 ತಿಂಗಳು ಬಾಹ್ಯಾಕಾಶದಲ್ಲಿ ಸಿಲುಕಲು ನಾಸಾ-ಬೋಯಿಂಗ್ ನಿರ್ಲಕ್ಷ್ಯವೇ ಕಾರಣ?
ಗಗನಯಾತ್ರಿ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ 286 ದಿನಗಳ ಕಾಲ ಬಾಹ್ಯಾಕಾಶದಲ್ಲಿ ಸಿಲುಕಿಕೊಂಡ ಘಟನೆ ಬಗ್ಗೆ ನಾಸಾ ಹೊಸ ಮುಖ್ಯಸ್ಥ ಜೇರೆಡ್ ಐಸಾಕ್‌ಮನ್ ಮಹತ್ವದ ಸಂಗತಿ ಬಿಚ್ಚಿಟ್ಟಿದ್ದಾರೆ.
ಕೇವಲ 8 ದಿನಗಳ ಕಾಲ ಅಧ್ಯಯನಕ್ಕೆಂದು ಬಾಹ್ಯಾಕಾಶ ಯಾನ ಕೈಗೊಂಡಿದ್ದ ಗಗನಯಾತ್ರಿ ಸುನಿತಾ ವಿಲಿಯಮ್ಸ್ 9.5 ತಿಂಗಳುಗಳು ಬಾಹ್ಯಾಕಾಶ ಕೇಂದ್ರದಲ್ಲೇ ಸಿಲುಕಿದ ಘಟನೆಗೆ ಸಂಬಂಧಿಸಿದಂತೆ ಆಘಾತಕಾರಿ ಸಂಗತಿಯೊಂದು ಹೊರಬಿದ್ದಿದೆ. ಬೋಯಿಂಗ್ ಸ್ಟಾರ್‌ಲೈನರ್ ನೌಕೆಯ ತಾಂತ್ರಿಕ ದೋಷದಿಂದಾಗಿ ಗಗನಯಾತ್ರಿಗಳಾದ ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ತಿಂಗಳುಗಟ್ಟಲೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಸಿಲುಕಿಕೊಂಡ ಘಟನೆಗೆ ನಾಸಾ ಮತ್ತು ಬೋಯಿಂಗ್ ಕಂಪನಿಯ ಆಡಾಳಿತಾತ್ಮಕ ವೈಫಲ್ಯವೇ ಕಾರಣ ಎಂದು ನಾಸಾದ ಹೊಸ ಮುಖ್ಯಸ್ಥ ಜೇರೆಡ್ ಐಸಾಕ್‌ಮನ್ ನೇರವಾಗಿ ದೂರಿದ್ದಾರೆ. ಈ ಬಗ್ಗೆ ಇಂಡಿಯಾ ಟುಡೇ ವರದಿ ಮಾಡಿದೆ.
ಸುನಿತಾ ವಿಲಿಯಮ್ಸ್ ಎಷ್ಟು ದಿನ ಬಾಹ್ಯಾಕಾಶದಲ್ಲಿ ಕಳೆದರು?
ಸುನಿತಾ ವಿಲಿಯಮ್ಸ್ ಮತ್ತು ಬುಚ್ ವಿಲ್ಮೋರ್ ಅವರು ಬಾಹ್ಯಾಕಾಶದಲ್ಲಿ ಒಟ್ಟು 286 ದಿನಗಳನ್ನು (ಸುಮಾರು 9.5 ತಿಂಗಳು) ಕಳೆದಿದ್ದಾರೆ. ಜೂನ್ 5, 2024 ರಂದು ಕೇವಲ 8 ದಿನಗಳ ಪರೀಕ್ಷಾರ್ಥ ಪ್ರಯಾಣಕ್ಕಾಗಿ ತೆರಳಿದ್ದ ಈ ಗಗನಯಾತ್ರಿಗಳು, ಸ್ಟಾರ್‌ಲೈನರ್‌ನ ತಾಂತ್ರಿಕ ವೈಫಲ್ಯದಿಂದಾಗಿ ಅಲ್ಲಿಯೇ ಉಳಿಯಬೇಕಾಯಿತು. ಅಂತಿಮವಾಗಿ ಕಳೆದ ಮಾರ್ಚ್‌ನಲ್ಲಿ ಸ್ಪೇಸ್‌ಎಕ್ಸ್ ನೌಕೆಯ ಮೂಲಕ ಅವರು ಭೂಮಿಗೆ ಮರಳಿದ್ದರು.
‘ಟೈಪ್ ಎ’ ಅಪಘಾತ ಎಂದು ಘೋಷಣೆ
ಈ ಘಟನೆಯ ಗಂಭೀರತೆಯನ್ನು ಹೆಚ್ಚಿಸಿರುವ ಐಸಾಕ್‌ಮನ್, ಇದನ್ನು “Type A mishap” (ಗಂಭೀರ ಸ್ವರೂಪದ ಅಪಘಾತ) ಎಂದು ಘೋಷಿಸಿದ್ದಾರೆ. ಇದು ಗಗನಯಾತ್ರಿಗಳ ಪ್ರಾಣಕ್ಕೆ ಅಪಾಯ ತರಬಹುದಾದ ಘಟನೆಯಾಗಿತ್ತು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಈ ಹಿಂದೆ ಸಂಭವಿಸಿದ್ದ ಚಾಲೆಂಜರ್ ಮತ್ತು ಕೊಲಂಬಿಯಾ ದುರಂತಗಳಂತೆಯೇ ಇಲ್ಲಿಯೂ ಆಡಳಿತಾತ್ಮಕ ತಪ್ಪುಗಳು ನಡೆದಿವೆ ಎಂದು ಅವರು ಕಿಡಿಕಾರಿದ್ದಾರೆ.
ಬೋಯಿಂಗ್ ವಿರುದ್ಧ ನಾಸಾ ಅಧಿಕಾರಿಗಳ ಆಕ್ರೋಶ
"ನಾವು ಅಂದು ಒಂದು ಭೀಕರ ದಿನವನ್ನು ಎದುರಿಸುವುದರಿಂದ ಸ್ವಲ್ಪದರಲ್ಲೇ ಪಾರಾದೆವು. ನಾವು ನಮ್ಮ ತಪ್ಪನ್ನು ಒಪ್ಪಿಕೊಳ್ಳಲೇಬೇಕು. ಗಗನಯಾತ್ರಿಗಳಾದ ವಿಲ್ಮೋರ್ ಮತ್ತು ವಿಲಿಯಮ್ಸ್ ವಿಷಯದಲ್ಲಿ ನಾವು ವಿಫಲರಾಗಿದ್ದೇವೆ" ಎಂದು ನಾಸಾದ ಅಸೋಸಿಯೇಟ್ ಅಡ್ಮಿನಿಸ್ಟ್ರೇಟರ್ ಅಮಿತ್ ಕ್ಷತ್ರಿಯ ಹೇಳಿದ್ದಾರೆ. ಆ ಮೂಲಕ ಗಗನಯಾತ್ರಿಗಳ ಜೀವಕ್ಕೆ ಅಪಾಯವಿತ್ತು ಎಂಬುದನ್ನು ಅವರು ಒಪ್ಪಿಕೊಂಡಿದ್ದಾರೆ. ಬೋಯಿಂಗ್ ಕಂಪನಿಯನ್ನು ಉಳಿಸಿಕೊಳ್ಳುವ ಒತ್ತಡಕ್ಕೆ ಮಣಿದ ನಾಸಾ ವ್ಯವಸ್ಥಾಪಕರು, ಗಗನಯಾತ್ರಿಗಳನ್ನು ಬೇಗನೆ ವಾಪಸ್ ಕರೆತರುವಲ್ಲಿ ವಿಫಲರಾದರು ಎಂದು ಐಸಾಕ್‌ಮನ್ ಟೀಕಿಸಿದ್ದಾರೆ.
ಸ್ಟಾರ್‌ಲೈನರ್‌ನ ಥ್ರಸ್ಟರ್‌ಗಳ ವೈಫಲ್ಯ ಮತ್ತು ಹೈಡ್ರೋಜನ್ ಇಂಧನ ಸೋರಿಕೆ ಸಮಸ್ಯೆಯಿಂದಾಗಿ ಮಿಷನ್ ಹಳಿ ತಪ್ಪಿತು. ತಾಂತ್ರಿಕ ಸವಾಲುಗಳನ್ನು ಸರಿಪಡಿಸಲು ನಾವು ಗಂಭೀರ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದೇವೆ ಮತ್ತು ಗಗನಯಾತ್ರಿಗಳ ಸುರಕ್ಷತೆಗೆ ಹೆಚ್ಚಿನ ಒತ್ತು ನೀಡುತ್ತೇವೆ ಎಂದು ಬೋಯಿಂಗ್ ತಿಳಿಸಿದೆ.
ಸ್ಪೇಸ್‌ಎಕ್ಸ್ ಪಾರುಪತ್ಯ
ಸದ್ಯಕ್ಕೆ ಅಮೆರಿಕದಲ್ಲಿ ಗಗನಯಾತ್ರಿಗಳನ್ನು ಕರೆದೊಯ್ಯಲು ಸ್ಪೇಸ್‌ಎಕ್ಸ್ ಮಾತ್ರ ಏಕೈಕ ಸುರಕ್ಷಿತ ಆಯ್ಕೆಯಾಗಿ ಉಳಿದುಕೊಂಡಿದೆ.

