26/11 ದಾಳಿಯ ಸಂಚುಕೋರ ತಹಾವೂರ್ ರಾಣಾ ಪ್ರಕರಣಕ್ಕೆ ವಿಶೇಷ ಸರ್ಕಾರಿ ವಕೀಲರಾಗಿ ನರೇಂದರ್ ನೇಮಕ
x

26/11 ದಾಳಿಯ ಸಂಚುಕೋರ ತಹಾವೂರ್ ರಾಣಾ ಪ್ರಕರಣಕ್ಕೆ ವಿಶೇಷ ಸರ್ಕಾರಿ ವಕೀಲರಾಗಿ ನರೇಂದರ್ ನೇಮಕ

ಕೇಂದ್ರ ಗೃಹ ಸಚಿವಾಲಯವು (MHA) ಗುರುವಾರ ರಾತ್ರಿ ಹೊರಡಿಸಿರುವ ಅಧಿಸೂಚನೆಯಲ್ಲಿ, ನರೇಂದರ್ ಮನ್ ನೇಮಕ ಕುರಿತು ಮಾಹಿತಿ ನೀಡಲಾಗಿದೆ. ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಪ್ರಕರಣ RC-04/2009/NIA/DLIಯಲ್ಲಿ ವಿಶೇಷ ಸರ್ಕಾರಿ ವಕೀಲರಾಗಿ ನೇಮಿಸಲಾಗಿದೆ.


ಭಾರತದ ಸತತ ಪ್ರಯತ್ನದ ಬಳಿಕ ಅಮೆರಿಕದಿಂದ ಗಡೀಪಾರಾಗಿರುವ 26/11 ಮುಂಬೈ ದಾಳಿಯ(26/11 Mumbai terror attack) ಸಂಚುಕೋರರಲ್ಲಿ ಒಬ್ಬನಾದ ತಹಾವೂರ್ ಹುಸೇನ್ ರಾಣಾನನ್ನು ಹೊತ್ತ ವಿಶೇಷ ವಿಮಾನವು ಇಂದು ಮಧ್ಯಾಹ್ನ ಭಾರತ ತಲುಪಿದೆ. ಈ ಪ್ರಕರಣದ ತನಿಖೆ ಮತ್ತು ವಿಚಾರಣೆಗಾಗಿ ಕೇಂದ್ರ ಸರ್ಕಾರವು ವಕೀಲ ನರೇಂದರ್ ಮನ್ ಅವರನ್ನು ವಿಶೇಷ ಸರ್ಕಾರಿ ವಕೀಲರಾಗಿ (Special Public Prosecutor) ನೇಮಕ ಮಾಡಿದೆ. ಇದು ಭಯೋತ್ಪಾದನೆಯ ವಿರುದ್ಧ ಭಾರತದ ನ್ಯಾಯಾಂಗ ಹೋರಾಟದ ನಿಟ್ಟಿನಲ್ಲಿ ಇಟ್ಟ ಮಹತ್ವದ ಹೆಜ್ಜೆ ಎಂದು ಬಣ್ಣಿಸಲಾಗಿದೆ.

ಕೇಂದ್ರ ಗೃಹ ಸಚಿವಾಲಯವು (MHA) ಗುರುವಾರ ರಾತ್ರಿ ಹೊರಡಿಸಿರುವ ಅಧಿಸೂಚನೆಯಲ್ಲಿ, ನರೇಂದರ್ ಮನ್ ನೇಮಕ ಕುರಿತು ಮಾಹಿತಿ ನೀಡಲಾಗಿದೆ. ಅವರನ್ನು ರಾಷ್ಟ್ರೀಯ ತನಿಖಾ ಸಂಸ್ಥೆಯ (NIA) ಪ್ರಕರಣ RC-04/2009/NIA/DLIಯಲ್ಲಿ ವಿಶೇಷ ಸರ್ಕಾರಿ ವಕೀಲರಾಗಿ ನೇಮಿಸಲಾಗಿದೆ. ಇದು ತಹಾವೂರ್ ರಾಣಾ ಮತ್ತು ಡೇವಿಡ್ ಕೋಲ್ಮನ್ ಹೆಡ್ಲಿಗೆ ಸಂಬಂಧಿಸಿದ್ದು, ಇವರಿಗೆ ಸಂಬಂಧಿಸಿದ ತನಿಖೆ ಮತ್ತು ಇತರೆ ವಿಚಾರಣೆಗಳನ್ನು ದೆಹಲಿಯ NIA ವಿಶೇಷ ನ್ಯಾಯಾಲಯ ಮತ್ತು ಮೇಲ್ಮನವಿ ನ್ಯಾಯಾಲಯಗಳಲ್ಲಿ ನಡೆಸಲು ಮೂರು ವರ್ಷಗಳ ಅವಧಿಗೆ ಅವರ ನೇಮಕವಾಗಿದೆ.

ನರೇಂದರ್ ಮನ್ ಅವರು 2018ರ ಸಿಬ್ಬಂದಿ ನೇಮಕ ಆಯೋಗದ ಪ್ರಶ್ನೆಪತ್ರಿಕೆ ಸೋರಿಕೆ ಹಗರಣ ಸೇರಿದಂತೆ ಸಿಬಿಐನ ಹಲವು ಹೈಪ್ರೊಫೈಲ್ ಕೇಸುಗಳನ್ನು ನಿರ್ವಹಿಸಿದ ಅನುಭವ ಹೊಂದಿದ್ದಾರೆ.

ರಾಣಾಗೆ ಬಿಗಿ ಭದ್ರತೆ

ರಾಣಾನನ್ನು ಹೊತ್ತ ವಿಮಾನ ಮಧ್ಯಾಹ್ನ ದೆಹಲಿಯ ಪಾಲಂ ವಿಮಾನನಿಲ್ದಾಣಕ್ಕೆ ಆಗಮಿಸುವ ನಿರೀಕ್ಷೆಯಿದ್ದು, ಆಗಮನದ ಬಳಿಕ ಆತನನ್ನು ಎನ್‌ಐಎ ಅಧಿಕೃತವಾಗಿ ವಶಕ್ಕೆ ಪಡೆದುಕೊಳ್ಳಲಿದೆ. ನಂತರ ತೀವ್ರ ಭದ್ರತೆಯೊಂದಿಗೆ ತಿಹಾರ್ ಕೇಂದ್ರ ಜೈಲಿಗೆ ಕರೆದೊಯ್ಯಲಾಗುತ್ತದೆ. ಜೈಲಿನಲ್ಲಿ ಹೆಚ್ಚು ಭದ್ರತೆಯ ವಾರ್ಡ್‌ನಲ್ಲಿ ರಾಣಾನನ್ನು ಇರಿಸಲು ಸಿದ್ಧತೆಗಳನ್ನು ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಭದ್ರತೆಯನ್ನು ತೀವ್ರಗೊಳಿಸಲಾಗಿದೆ. ಮೊದಲ ಹಂತದಲ್ಲಿ NIA ತನಿಖೆಗಾಗಿ ಆತನನ್ನು ಕೆಲವು ವಾರಗಳ ಕಾಲ ವಶದಲ್ಲಿರಿಸಲು ಚಿಂತನೆ ನಡೆಸಲಾಗಿದೆ.

ಮುಂದೇನು?:

ರಾಣಾ ಭಾರತಕ್ಕೆ ತಲುಪಿದ ನಂತರ, ಆತನನ್ನು ಪಟಿಯಾಲಾ ಹೌಸ್ ನ್ಯಾಯಾಲಯದಲ್ಲಿ NIA ವಿಶೇಷ ನ್ಯಾಯಪೀಠದ ವೀಡಿಯೊ ಲಿಂಕ್ ಮೂಲಕ ಅಧಿಕಾರಿಗಳು ಹಾಜರುಪಡಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಭದ್ರತಾ ಕಾರಣಗಳಿಂದಾಗಿ ಭೌತಿಕವಾಗಿ ನ್ಯಾಯಾಲಯಕ್ಕೆ ತರಲು ಸಾಧ್ಯವಾಗದಿದ್ದರೆ, ಮಹಾವೀರ ಜಯಂತಿ ರಜೆಯ ಕಾರಣದಿಂದ ಆಯಾ ನ್ಯಾಯಾಧೀಶರ ನಿವಾಸಕ್ಕೆ ಕರೆದೊಯ್ಯುವ ಸಾಧ್ಯತೆಯಿದೆ.

64 ವರ್ಷದ ತಹಾವೂರ್ ರಾಣಾ ಪಾಕಿಸ್ತಾನ ಮೂಲದ ಕೆನಡಿಯನ್. ಲಷ್ಕರ್-ಎ-ತೈಬಾ (LeT) ಭಯೋತ್ಪಾದಕ ಡೇವಿಡ್ ಕೋಲ್ಮನ್ ಹೆಡ್ಲಿ ಜತೆಗೂಡಿ 26/11 ದಾಳಿಯ ಸಂಚಿನಲ್ಲಿ ಭಾಗವಹಿಸಿದ ಆರೋಪ ಈತನ ಮೇಲಿದೆ. ಈ ದಾಳಿಯಲ್ಲಿ 166 ಮಂದಿ ಅಸುನೀಗಿ, 239 ಮಂದಿ ಗಾಯಗೊಂಡಿದ್ದರು. ರಾಣಾನನ್ನು 2009ರಲ್ಲಿ ಅಮೆರಿಕದ ತನಿಖಾ ಸಂಸ್ಥೆ ಬಂಧಿಸಿತ್ತು. ನಂತರ ಆತನ ಗಡೀಪಾರು ಪ್ರಕ್ರಿಯೆಗಳು ಆರಂಭವಾಗಿದ್ದವು. ಆದರೆ ರಾಣಾ ತನಗೆ ಅನಾರೋಗ್ಯ ಸಮಸ್ಯೆಯಿದೆ ಹಾಗೂ ಭಾರತದಲ್ಲಿ ಚಿತ್ರಹಿಂಸೆ ನೀಡಬಹುದು ಎಂಬ ನೆಪವೊಡ್ಡಿ ಗಡೀಪಾರಿಗೆ ತಡೆ ಕೋರಿ ಅಮೆರಿಕ ಸುಪ್ರೀ ಕೋರ್ಟ್ ಮೊರೆ ಹೋಗಿದ್ದ. ಆದರೆ, ಆತನ ಮನವಿಯನ್ನು ಇತ್ತೀಚೆಗಷ್ಟೇ ಸುಪ್ರೀಂ ಕೋರ್ಟ್ ತಿರಸ್ಕರಿಸಿತ್ತು. ಹೀಗಾಗಿ ರಾಣಾನ ಗಡೀಪಾರು ಸಾಧ್ಯವಾಯಿತು.

Read More
Next Story