
ಮ್ಯಾನ್ಮಾರ್ ಭೂಕಂಪ: 2,000ಕ್ಕೂ ಮೀರಿದ ಸಾವಿನ ಸಂಖ್ಯೆ, ಸಾವಿರಾರು ಮಂದಿ ಕಣ್ಮರೆ
ಪ್ರಾಥಮಿಕ ಶಾಲಾ ಕಟ್ಟಡ ಕುಸಿದ ಪರಿಣಾಮ 50 ಮಕ್ಕಳು ಮತ್ತು 2 ಶಿಕ್ಷಕರು ಮೃತಪಟ್ಟಿದ್ದಾರೆ. ಇನ್ನು, ರಂಜಾನ್ ಪ್ರಾರ್ಥನೆಗಾಗಿ ಮಸೀದಿಯೊಂದರಲ್ಲಿ ಸೇರಿದ್ದ 700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು 'ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮಾರ್ ಮುಸ್ಲಿಂ ನೆಟ್ವರ್ಕ್' ಹೇಳಿದೆ.
ಕಳೆದ ವಾರ ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೀಕರ ಭೂಕಂಪದಲ್ಲಿ ಮೃತಪಟ್ಟವರ ಸಂಖ್ಯೆ 2,000 ದಾಟಿದ್ದು, ಅನೇಕ ಮಂದಿ ಇನ್ನೂ ನಾಪತ್ತೆಯಾಗಿದ್ದಾರೆ ಎಂದು ಸರಕಾರದ ಮಾಧ್ಯಮಗಳು ಸೋಮವಾರ ವರದಿ ಮಾಡಿವೆ. ಹಲವಾರು ಮಂದಿಯ ಮೃತದೇಹಗಳು ಪತ್ತೆಯಾಗಿರುವ ವಿವರಗಳು ಇದೀಗ ಹೊರಬಿದ್ದಿದ್ದು, ಒಂದೇ ಕಡೆ 200 ಬೌದ್ಧ ಸನ್ಯಾಸಿಗಳು ಪ್ರಾರ್ಥನಾ ಮಂದಿರದ ಗೋಡೆ ಕುಸಿದು ಮೃತಪಟ್ಟಿದ್ದಾರೆ.
ಅಲ್ಲಿನ ಮಂಡಲೆ ಪ್ರಾಂತ್ಯದಲ್ಲಿ ಇರುವ ಪ್ರಾಥಮಿಕ ಶಾಲಾ ಕಟ್ಟಡ ಕುಸಿದ ಪರಿಣಾಮ 50 ಮಕ್ಕಳು ಮತ್ತು 2 ಶಿಕ್ಷಕರು ಮೃತಪಟ್ಟಿದ್ದಾರೆ. ಇನ್ನು, ರಂಜಾನ್ ಪ್ರಾರ್ಥನೆಗಾಗಿ ಮಸೀದಿಯೊಂದರಲ್ಲಿ ಸೇರಿದ್ದ 700ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು 'ಸ್ಪ್ರಿಂಗ್ ರೆವಲ್ಯೂಷನ್ ಮ್ಯಾನ್ಮಾರ್ ಮುಸ್ಲಿಂ ನೆಟ್ವರ್ಕ್' ಹೇಳಿದೆ.
ಮಂಡಲೆ ಬಳಿ ಭೂಕಂಪದ ಕೇಂದ್ರಬಿಂದು
ಭೂಕಂಪದ ತೀವ್ರತೆ ರಿಕ್ಟರ್ ಮಾಪಕದಲ್ಲಿ 7.7 ರಷ್ಟಿತ್ತು ಹಾಗೂ ಅದರ ಕೇಂದ್ರ ಬಿಂದು ಮಂಡಲೇ ನಗರದ ಬಳಿ ಇತ್ತು. ನಗರದ ವಿಮಾನ ನಿಲ್ದಾಣ, ಮುಖ್ಯ ರಸ್ತೆ ಮತ್ತು ನೂರಾರು ಕಟ್ಟಡಗಳು ಸಂಪೂರ್ಣವಾಗಿ ಹಾನಿಗೊಳಗಾಗಿವೆ. ಕೇಂದ್ರ ಮ್ಯಾನ್ಮಾರ್ ಮಾತ್ರವಲ್ಲ, ಉತ್ತರ ಭಾಗದವರೆಗೆ ಭೂಕಂಪದ ಪ್ರಭಾವ ಬೀರಿದೆ.
ಮಂಡಲೇದಲ್ಲಿನ ಉ ಹ್ಲಾ ಥೈನ್ ಪ್ರಾರ್ಥನಾ ಮಂದಿರದ ಬಳಿ ಕೆಲಸ ಮಾಡುತ್ತಿದ್ದ ರಕ್ಷಣಾ ಸಿಬ್ಬಂದಿ ಸೇರಿದಂತೆ 150ಕ್ಕೂ ಹೆಚ್ಚು ಸನ್ಯಾಸಿಗಳು ಕಣ್ಮರೆಯಾಗಿದ್ದಾರೆ.
ರಕ್ಷಣಾ ಕಾರ್ಯಗಳಿಗೆ ಅಡೆತಡೆ
ವಿದ್ಯುತ್ ಸಂಪರ್ಕ ಕಡಿತ, ಇಂಧನ ಕೊರತೆ, ಸಂಪರ್ಕ ಸಾಧಿಸಲು ಅಗದಿರುವುದು ಸೇರಿದಂತೆ ಹಲವಾರು ಸಮಸ್ಯೆಗಳು ಪರಿಹಾರ ಕಾರ್ಯಾಚರಣೆಗೆ ಎದುರಾಗಿವೆ. ಜನರು ತಮ್ಮ ಕೈಗಳಿಂದಲೇ ಅವಶೇಷಗಳನ್ನು ತೋಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ. ತಾಪಮಾಣ 40 ಡಿಗ್ರಿ ಸೆಲ್ಸಿಯಸ್ ಮೀರಿದ ಕಾರಣ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಸೃಷ್ಟಿಯಾಗಿದೆ.
ಆರೋಗ್ಯ ತುರ್ತುಸ್ಥಿತಿ
ಭೂಕಂಪದ ಪ್ರಭಾವಕ್ಕೆ ಮೂರು ಆಸ್ಪತ್ರೆಗಳು ಸಂಪೂರ್ಣವಾಗಿ ನಾಶವಾಗಿವೆ. ಇನ್ನೂ 22 ಆಸ್ಪತ್ರೆಗಳಿಗೆ ಭಾಗಶಃ ಹಾನಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (WHO) ತಿಳಿಸಿದೆ. ಇದರಿಂದಾಗಿ ತುರ್ತು ವೈದ್ಯಕೀಯ ಪರಿಹಾರ ನೀಡಲು ಸಮಸ್ಯೆ ಉಂಟಾಗಿದೆ.
ಮ್ಯಾನ್ಮಾರ್‌ನಲ್ಲಿ ರಾಜಕೀಯ ಅಸ್ಥಿರತೆಯೂ ಕಾಡುತ್ತಿದ್ದು ಪರಿಹಾರ ಕಾರ್ಯಕ್ಕೆ ದೊಡ್ಡ ಅಡಚಣೆ ಉಂಟು ಮಾಡಿದೆ. 2021ರಲ್ಲಿ ಸೇನೆ ಆಂಗ್ ಸಾನ್ ಸೂ ಕೀ ನೇತೃತ್ವದ ಜನಪ್ರತಿನಿಧಿ ಸರ್ಕಾರದಿಂದ ಅಧಿಕಾರ ವಶಪಡಿಸಿಕೊಂಡ ಬಳಿಕ ದೇಶದಲ್ಲಿ ತೀವ್ರ ಜನಾಕ್ರೋಶ ಹಾಗೂ ಸಶಸ್ತ್ರ ಹೋರಾಟ ನಡೆಯುತ್ತಿದ.ಎ
ಭಾರತ ಸೇರಿದಂತೆ ಹಲವು ದೇಶಗಳಿಂದ ನೆರವು
ಭಾರತ, ಚೀನಾ, ರಷ್ಯಾ, ಹಾಗೂ ದಕ್ಷಿಣ ಏಷ್ಯಾದ ಹಲವಾರು ದೇಶಗಳಿಂದ ರಕ್ಷಣಾ ತಂಡಗಳು ಈಗಾಗಲೇ ಕಾರ್ಯಾಚರಣೆಗೆ ತೆರಳಿವೆ. ಭಾರತದಿಂದ ಬಂದಿರುವ ತಂಡ ಮಂಡಲೇಯಲ್ಲಿನ ಕಟ್ಟಡ ಅವಶೇಷಗಳಲ್ಲಿ ಜೆಸಿಬಿ ಮೂಲಕ ಶವಗಳಿಗಾಗಿ ಹುಡುಕಾಟ ನಡೆಸುತ್ತಿದೆ.
ಯುರೋಪಿಯನ್ ಯೂನಿಯನ್, ಬ್ರಿಟನ್, ಆಸ್ಟ್ರೇಲಿಯಾ, ನ್ಯೂಜಿಲ್ಯಾಂಡ್, ದಕ್ಷಿಣ ಕೊರಿಯಾ ಸೇರಿದಂತೆ ಹಲವಾರು ರಾಷ್ಟ್ರಗಳು ನೆರವು ಘೋಷಿಸಿವೆ. ಅಮೆರಿಕ ಕೂಡಾ ಸ್ಥಳೀಯ ಸಂಘಟನೆಗಳ ಮೂಲಕ 2 ಮಿಲಿಯನ್ ಡಾಲರ್ ನೆರವು ಪ್ರಕಟಿಸಿದೆ.
ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲೂ ಭೂಕಂಪದ ಪರಿಣಾಮ
ಭೂಕಂಪದ ಪರಿಣಾಮ ಥಾಯ್ಲೆಂಡ್‌ನ ಬ್ಯಾಂಕಾಕ್‌ನಲ್ಲೂ ಕನಿಷ್ಠ 18 ಮಂದಿ ಮೃತಪಟ್ಟಿದ್ದು, 33 ಮಂದಿ ಗಾಯಗೊಂಡಿದ್ದಾರೆ. ಚಾಟುಚಾಕ್ ಮಾರುಕಟ್ಟೆಯ ಬಳಿಯ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಕುಸಿತದಿಂದಾಗಿ ಈ ದುರ್ಘಟನೆ ಸಂಭವಿಸಿದೆ. ಇನ್ನೂ 78 ಮಂದಿ ನಾಪತ್ತೆಯಾಗಿದ್ದು, ರಕ್ಷಣಾ ಕಾರ್ಯಗಳು ನಡೆಯುತ್ತಿವೆ.