Mount Everest Scam|ಎವರೆಸ್ಟ್ ಪರ್ವತಾರೋಹಿಗಳೇ ಎಚ್ಚರ! ವಿಷಾಹಾರ ಕೊಟ್ಟು165 ಕೋಟಿ ರೂ. ಲೂಟಿ
x
ಮೌಂಟ್‌ ಎವರೆಸ್ಟ್‌ ಪರ್ವತಾರೋಹಿಗಳಿಗೆ ವಿಷಾಹಾರ ನೀಡಿ ಹಗರಣ(ಸಾಂದರ್ಭಿಕ ಚಿತ್ರ)

Mount Everest Scam|ಎವರೆಸ್ಟ್ ಪರ್ವತಾರೋಹಿಗಳೇ ಎಚ್ಚರ! 'ವಿಷಾಹಾರ' ಕೊಟ್ಟು165 ಕೋಟಿ ರೂ. ಲೂಟಿ

ಮೌಂಟ್ ಎವರೆಸ್ಟ್‌ನಲ್ಲಿ ಪ್ರವಾಸಿಗರಿಗೆ ಆಹಾರದಲ್ಲಿ ವಿಷ ಬೆರೆಸಿ ಅಸ್ವಸ್ಥಗೊಳಿಸಿ, ನಕಲಿ ಹೆಲಿಕಾಪ್ಟರ್ ರಕ್ಷಣೆ ಹೆಸರಿನಲ್ಲಿ ನಡೆದ 20 ಮಿಲಿಯನ್ ಡಾಲರ್ ಬೃಹತ್ ವಿಮೆ ವಂಚನೆ ಹಗರಣ ಬಯಲಾಗಿದೆ.


ವಿಶ್ವದ ಅತಿ ಎತ್ತರದ ಶಿಖರ ಮೌಂಟ್ ಎವರೆಸ್ಟ್ ಏರುವುದು ಪ್ರತಿಯೊಬ್ಬ ಸಾಹಸಪ್ರಿಯನ ಕನಸು. ಆದರೆ, ನಿಮ್ಮನ್ನು ಸುರಕ್ಷಿತವಾಗಿ ಗುರಿ ಮುಟ್ಟಿಸಬೇಕಾದ ಮಾರ್ಗದರ್ಶಕರೇ (ಗೈಡ್‌ಗಳೇ) ನಿಮ್ಮ ಆಹಾರದಲ್ಲಿ ವಿಷ ಬೆರೆಸುತ್ತಿದ್ದಾರೆ ಎಂದರೆ ನಂಬುತ್ತೀರಾ? ಹೌದು, ನೇಪಾಳದ ಹಿಮಾಲಯ ಶ್ರೇಣಿಗಳಲ್ಲಿ ಅತ್ಯಂತ ಭೀಕರ ಹಾಗೂ ಅಮಾನವೀಯ ವಿಮೆ ವಂಚನೆ ಹಗರಣವೊಂದು ಬಯಲಾಗಿದೆ. ಕೇವಲ ಹಣದ ಆಸೆಗಾಗಿ ಪ್ರವಾಸಿಗರನ್ನು ಅಸ್ವಸ್ಥಗೊಳಿಸಿ, ನಕಲಿ ಹೆಲಿಕಾಪ್ಟರ್ ರಕ್ಷಣಾ ಕಾರ್ಯಾಚರಣೆಯ ನಾಟಕವಾಡಿ ಬರೋಬ್ಬರಿ 20 ಮಿಲಿಯನ್ ಡಾಲರ್ ($20M) ಲೂಟಿ ಮಾಡಿರುವ ಈ ಜಾಲದ ಕರಾಳ ಮುಖ ಈಗ ಜಗತ್ತಿನ ಮುಂದೆ ಅನಾವರಣಗೊಂಡಿದೆ.

ಮೌಂಟ್ ಎವರೆಸ್ಟ್ ಏರಲು ಬರುವ ಪ್ರವಾಸಿಗರ ಆಹಾರದಲ್ಲಿ ಗುಟ್ಟಾಗಿ ಅಡುಗೆ ಸೋಡಾ ಬೆರೆಸಿ, ಅವರನ್ನು ಅಸ್ವಸ್ಥಗೊಳಿಸಿ, ನಂತರ ನಕಲಿ ಹೆಲಿಕಾಪ್ಟರ್ ರಕ್ಷಣೆ (Rescue) ಹೆಸರಿನಲ್ಲಿ ವಿಮೆ ಹಣ ವಂಚನೆ ಮಾಡಿರುವ ಬೃಹತ್ ಜಾಲವನ್ನು ನೇಪಾಳ ಪೊಲೀಸರು ಭೇದಿಸಿದ್ದಾರೆ.

ಹಗರಣದ ರೋಚಕ ವಿವರಗಳು

ವಿಷಾಹಾರದ ಮೂಲಕ ಅಸ್ವಸ್ಥತೆ: ಪ್ರವಾಸಿಗರ ಜೊತೆಗಿರುವ ಶೆರ್ಪಾಗಳು (ಮಾರ್ಗದರ್ಶಕರು) ಪ್ರವಾಸಿಗರ ಊಟಕ್ಕೆ ಗುಟ್ಟಾಗಿ ಅಡುಗೆ ಸೋಡಾ ಬೆರೆಸುತ್ತಿದ್ದರು. ಇದರಿಂದ ಪ್ರವಾಸಿಗರಿಗೆ ತೀವ್ರವಾದ ಹೊಟ್ಟೆನೋವು ಮತ್ತು ವಾಂತಿ ಕಾಣಿಸಿಕೊಳ್ಳುತ್ತಿತ್ತು. ಈ ಲಕ್ಷಣಗಳು ಎತ್ತರದ ಪ್ರದೇಶದಲ್ಲಿ ಕಾಣಿಸಿಕೊಳ್ಳುವ 'ಆಲ್ಟಿಟ್ಯೂಡ್ ಸಿಕ್ನೆಸ್' ಅಥವಾ ಗಂಭೀರ ಫುಡ್ ಪಾಯಿಸನಿಂಗ್‌ನಂತೆ ಭಾಸವಾಗುತ್ತಿತ್ತು.

ನಕಲಿ ರಕ್ಷಣಾ ಕಾರ್ಯಾಚರಣೆ ಮತ್ತು ವಂಚನೆ: ಪ್ರವಾಸಿಗರು ಅಸ್ವಸ್ಥರಾದ ತಕ್ಷಣ, ಅವರನ್ನು ಹೆಲಿಕಾಪ್ಟರ್ ಮೂಲಕ ತುರ್ತು ರಕ್ಷಣೆ ಮಾಡುವಂತೆ ಒತ್ತಾಯಿಸಲಾಗುತ್ತಿತ್ತು. ಈ ವೇಳೆ ಹೆಲಿಕಾಪ್ಟರ್ ಕಂಪನಿಗಳು, ಟ್ರೆಕ್ಕಿಂಗ್ ಏಜೆನ್ಸಿಗಳು ಮತ್ತು ಆಸ್ಪತ್ರೆಗಳು ಸೇರಿ ನಕಲಿ ವೈದ್ಯಕೀಯ ದಾಖಲೆ ಹಾಗೂ ಫ್ಲೈಟ್ ದಾಖಲೆಗಳನ್ನು ಸೃಷ್ಟಿಸುತ್ತಿದ್ದವು. ಈ ನಕಲಿ ಬಿಲ್‌ಗಳನ್ನು ಅಂತರಾಷ್ಟ್ರೀಯ ವಿಮಾ ಕಂಪನಿಗಳಿಗೆ ಕಳುಹಿಸಿ ಕೋಟ್ಯಂತರ ರೂಪಾಯಿ ಹಣ ಪಡೆಯಲಾಗುತ್ತಿತ್ತು.

ವಂಚನೆಯ ಮೊತ್ತದ ಹಂಚಿಕೆ

ಬಂದ ಹಣವನ್ನು ಶೆರ್ಪಾಗಳು, ಟ್ರೆಕ್ಕಿಂಗ್ ಏಜೆನ್ಸಿಗಳು, ಹೆಲಿಕಾಪ್ಟರ್ ಕಂಪನಿಗಳು ಮತ್ತು ಪ್ರವಾಸಿಗರಿಗೆ ನಕಲಿ ಚಿಕಿತ್ಸೆ ನೀಡಿದ ಆಸ್ಪತ್ರೆಗಳ ಅಧಿಕಾರಿಗಳು ಹಂಚಿಕೊಳ್ಳುತ್ತಿದ್ದರು. ತನಿಖೆಯ ಪ್ರಕಾರಒಂದು ಕಂಪನಿಯು ಒಟ್ಟು 1,248 ರಕ್ಷಣಾ ಕಾರ್ಯಾಚರಣೆಗಳ ಪೈಕಿ 171 ನಕಲಿ ಎಂದು ತೋರಿಸಿ 83 ಕೋಟಿ ರೂ. ($10M) ಪಡೆದುಕೊಂಡಿದೆ. ಮತ್ತೊಂದು ಕಂಪನಿ 471 ರಕ್ಷಣೆಗಳಲ್ಲಿ 75 ನಕಲಿ ದಾಖಲೆ ಸೃಷ್ಟಿಸಿ 66 ಕೋಟಿ ರೂ. ($8M) ಲೂಟಿ ಮಾಡಿದೆ. ಮೂರನೇ ಕಂಪನಿಯು 71 ನಕಲಿ ಪ್ರಕರಣಗಳ ಮೂಲಕ 8 ಕೋಟಿ ರೂ.ಗಳಿಗೂ ಹೆಚ್ಚು ಹಣ ವಂಚಿಸಿದೆ.

ಪೊಲೀಸ್ ಕ್ರಮ ಮತ್ತು ಕಾನೂನು ಹೋರಾಟ:

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನೇಪಾಳ ಪೊಲೀಸರು ಈಗಾಗಲೇ 32 ಜನರ ಮೇಲೆ ಸಂಘಟಿತ ಅಪರಾಧ ಮತ್ತು ವಂಚನೆ ಪ್ರಕರಣಗಳನ್ನು ದಾಖಲಿಸಿದ್ದಾರೆ. ಇದರಲ್ಲಿ ಆಸ್ಪತ್ರೆ ಎಕ್ಸಿಕ್ಯೂಟಿವ್‌ಗಳು ಮತ್ತು ಪ್ರಮುಖ ರೆಸ್ಕ್ಯೂ ಸಂಸ್ಥೆಗಳ ಮಾಲೀಕರು ಸೇರಿದ್ದಾರೆ. ಪ್ರಾಸಿಕ್ಯೂಟರ್‌ಗಳು ಈ ತಂಡಕ್ಕೆ ಸುಮಾರು 94 ಕೋಟಿ ರೂ. ($11.3M) ದಂಡ ವಿಧಿಸುವಂತೆ ನ್ಯಾಯಾಲಯವನ್ನು ಕೋರಿದ್ದಾರೆ.

ಪ್ರವಾಸೋದ್ಯಮಕ್ಕೆ ಪೆಟ್ಟು

ನೇಪಾಳದ ಪ್ರವಾಸೋದ್ಯಮ ಕ್ಷೇತ್ರವು 10 ಲಕ್ಷಕ್ಕೂ ಹೆಚ್ಚು ಉದ್ಯೋಗಗಳನ್ನು ಅವಲಂಬಿಸಿದೆ. ಆದರೆ, ಇಂತಹ ಪದೇ ಪದೇ ನಡೆಯುತ್ತಿರುವ ವಂಚನೆಗಳಿಂದಾಗಿ ಜಾಗತಿಕ ವಿಮಾ ಕಂಪನಿಗಳು ನೇಪಾಳಕ್ಕೆ ಬರುವ ಪ್ರವಾಸಿಗರಿಗೆ ವಿಮೆ ನೀಡಲು ಹಿಂದೇಟು ಹಾಕುತ್ತಿವೆ. 2018ರಲ್ಲೇ ಸರ್ಕಾರ ಮಧ್ಯವರ್ತಿಗಳನ್ನು ತೆಗೆದುಹಾಕುವ ನಿಯಮ ಜಾರಿಗೆ ತಂದಿದ್ದರೂ, ಶಿಕ್ಷೆಯ ಭಯವಿಲ್ಲದ ಕಾರಣ ಈ ದಂಧೆ ಮುಂದುವರಿದಿದೆ ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

Read More
Next Story