ಅಧ್ಯಕ್ಷೀಯ ಸ್ಪರ್ಧೆಯಿಂದ ಕೆಳಗಿಳಿಯಿರಿ: ಬಿಡೆನ್ ಮೇಲೆ ಒತ್ತಡ ಹೆಚ್ಚಳ
x

ಅಧ್ಯಕ್ಷೀಯ ಸ್ಪರ್ಧೆಯಿಂದ ಕೆಳಗಿಳಿಯಿರಿ: ಬಿಡೆನ್ ಮೇಲೆ ಒತ್ತಡ ಹೆಚ್ಚಳ


ನವೆಂಬರ್ 5 ರಂದು ನಡೆಯಲಿರುವ ಯುಎಸ್ ಅಧ್ಯಕ್ಷೀಯ ಚುನಾವಣೆಯಿಂದ ಅಧ್ಯಕ್ಷ ಜೋ ಬಿಡೆನ್ ಕೆಳಗಿಳಿಯಬೇಕೆಂದು ಕನಿಷ್ಠ ಐವರು ಡೆಮಾಕ್ರಟಿಕ್ ಜನಪ್ರತಿನಿಧಿಗಳು ಹೇಳಿದ್ದಾರೆ.‌

ಜೂನ್ 27 ರಂದು ಅಟ್ಲಾಂಟಾದಲ್ಲಿ ನಡೆದ ರಿಪಬ್ಲಿಕನ್ ಪ್ರತಿಸ್ಪರ್ಧಿ ಡೊನಾಲ್ಡ್ ಟ್ರಂಪ್ ಮತ್ತು ಬಿಡೆನ್ ಅವರ ನಡುವಿನ‌ ಚರ್ಚೆಯಲ್ಲಿ ಬಿಡೆನ್‌ ಅವರ ನಿರಾಶಾದಾಯಕ ನಿರ್ವಹಣೆಗೆ ಸಂಬಂಧಿಸಿದಂತೆ ಭಾನುವಾರ (ಜುಲೈ 7) ಆಯೋಜಿಸಿದ್ದ ಡೆಮಾಕ್ರಟಿಕ್ ಪಕ್ಷದ ಫೋನ್ ಕರೆ ಕಾರ್ಯಕ್ರಮದಲ್ಲಿ ಜೆರ್ರಿ ನಾಡ್ಲರ್, ಮಾರ್ಕ್ ಟಕಾನೊ, ಜೋ ಮೊರೆ‌ಲ್‌, ಟೆಡ್ ಲಿಯು ಮತ್ತು ಆಡಮ್ ಸ್ಮಿತ್ ಈ ಅಭಿಪ್ರಾಯ ವ್ಯಕ್ತಪಡಿಸಿದರು.

ತಮ್ಮ ಪ್ರದರ್ಶನವನ್ನು ಬಿಡೆನ್ ʻಕೆಟ್ಟ ರಾತ್ರಿʼ ಎಂದು ಹೇಳಿಕೊಂಡಿದ್ದಾರೆ. ಆದರೆ, ಅವರ ಅನುಮೋದನೆ ಪ್ರಮಾಣ ಕಡಿಮೆಯಾಗಿದೆ ಮತ್ತು ಸ್ವಂತ ಪಕ್ಷದ ಸಹೋದ್ಯೋಗಿಗಳು ಅವರ ಆರೋಗ್ಯ ಪರಿಸ್ಥಿತಿ ಮತ್ತು ಮುಂದಿನ ನಾಲ್ಕು ವರ್ಷಗಳ ಕಾಲ ದೇಶವನ್ನು ಆಳುವ ಸಾಮರ್ಥ್ಯವನ್ನು ಪ್ರಶ್ನಿಸಲು ಪ್ರಾರಂಭಿಸಿದ್ದಾರೆ. ಆದರೆ, ಬಿಡೆನ್ ಸ್ಪರ್ಧೆಯಲ್ಲಿ ಉಳಿದುಕೊಂಡಿ‌ದ್ದು,ಚುನಾವಣೆಯಲ್ಲಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಆಲಿಸುವ ಅಧಿವೇಶನ: ಮೈನಾರಿಟಿ ಮುಖಂಡ ಹಕೀಮ್ ಜೆಫ್ರೀಸ್ ಅವರು ಬಿಡೆನ್‌ ಅವರ ನಿರಾಶಾದಾಯಕ ಪ್ರದರ್ಶನ ಕುರಿತು ಚರ್ಚೆ ನಡೆಸಲು ಪಕ್ಷದ ಸಹೋದ್ಯೋಗಿಗಳ ವರ್ಚುವಲ್ ಸಭೆ ಕರೆದಿದ್ದರು.

ಬಿಡೆನ್ ಅವರ ಉಮೇದುವಾರಿಕೆ ಬಗ್ಗೆ ಸದಸ್ಯರಿಂದ ಹಿಮ್ಮಾಹಿತಿ ಪಡೆಯಲು ಕರೆಯಲಾಗಿದ್ದ ವರ್ಚುವಲ್ ಸಭೆಯನ್ನು ʼಆಲಿಸುವ ಅಧಿವೇಶನʼ ಎಂದು ಕರೆಯಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಬಿಡೆನ್ ಸ್ಪರ್ಧೆಯಿಂದ ಇಳಿಯಬೇಕೆಂದು ಅನೇಕ ಡೆಮೋಕ್ರಾಟ್‌ ಹಿರಿಯ ಮುಖಂಡರು ದೃಢವಾಗಿ ಭಾವಿಸಿದ್ದಾರೆ ಎಂದು ಹೇಳಿದೆ.

ಸಶಸ್ತ್ರ ಸೇವೆಗಳ ಸಮಿತಿಯ ಸದಸ್ಯ ಸ್ಮಿತ್, ಬಿಡೆನ್ ಹೋಗಲು ಇದು ಸಮಯ ಎಂದು ಹೇಳಿದರು. ಇತರ ನಾಲ್ವರು ಕಾಂಗ್ರೆಸ್ಸಿಗರು ಸಹ ಅದೇ ಅಭಿಪ್ರಾಯ ವ್ಯಕ್ತಪಡಿಸಿದರು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

ʻಬಿಡೆನ್ ಮರುಚುನಾವಣೆಯನ್ನು ಬಯಸಬಾರದು ಎಂದು ಒತ್ತಾಯಿಸಿದ ಉನ್ನತ ನಾಯಕರಲ್ಲಿ ಲಿಯು ಒಬ್ಬರು,ʼ ಎಂದು ವಾಷಿಂಗ್ಟನ್ ಪೋಸ್ಟ್ ವರದಿ ಮಾಡಿದೆ.

ʻಬಿಡೆನ್ ಅವರ ಬೆಂಬಲದಲ್ಲಿ ವಿಶಾಲವಾದ ಬಿರುಕು ಕಾಣಿಸಿಕೊಂಡಿದೆ. 10 ಮಂದಿ ಡೆಮಾಕ್ರಾಟ್‌ ನಾಯಕರು ಬಿಡೆನ್‌ ಪಕ್ಕಕ್ಕೆ ಸರಿಯಬೇಕೆಂದು ಹೇಳಿದ್ದಾರೆ,ʼ ಎಂದು ದಿ ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.

ಗೆಲುವಿನ ವಿಶ್ವಾಸ: ಆದರೆ, ಬಿಡೆನ್ ಮತ್ತು ಅವರ ತಂಡ ಸಲಹೆಯನ್ನು ಧಿಕ್ಕರಿಸಿದೆ; ಅವರು ರೇಸ್‌ನಲ್ಲಿದ್ದಾರೆ ಎಂದು ಪ್ರತಿಪಾದಿಸಿದೆ. ನವೆಂಬರ್‌ನಲ್ಲಿ ಟ್ರಂಪ್ ಅವರನ್ನು ಸೋಲಿಸುತ್ತೇನೆ ಎಂದು ಬಿಡೆನ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read More
Next Story