Terrible plane crash in America: 12 people on their way to skydiving die!
x

ಅಪಘಾತಕ್ಕೀಡಾದ 'ಪೆಸಿಫಿಕ್ ಏರೋಸ್ಪೇಸ್ 750XL'  ವಿಮಾನ

ಅಮೆರಿಕದಲ್ಲಿ ಭೀಕರ ವಿಮಾನ ಅಪಘಾತ: ಸ್ಕೈಡೈವಿಂಗ್‌ಗೆ ತೆರಳುತ್ತಿದ್ದ 12 ಮಂದಿ ದುರ್ಮರಣ!

ಕಾನ್ಸಾಸ್ ನಗರದಿಂದ ದಕ್ಷಿಣಕ್ಕೆ ಸುಮಾರು 65 ಮೈಲು ದೂರದಲ್ಲಿರುವ ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದ್ದು, ಭಾನುವಾರ ಬೆಳಿಗ್ಗೆ 11.30 ರ ಸುಮಾರಿಗೆ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡಿದೆ.


Click the Play button to hear this message in audio format

ಸ್ಕೈಡೈವಿಂಗ್ ಸಾಹಸಕ್ಕೆಂದು ಉತ್ಸಾಹದಿಂದ ವಿಮಾನವೇರಿದ್ದ ಪ್ರಯಾಣಿಕರಿಗೆ ವಿಧಿಯೇ ಸಂಚಕಾರ ತಂದೊಡ್ಡಿದೆ. ಅಮೆರಿಕದ ಮಿಸೌರಿ ರಾಜ್ಯದಲ್ಲಿ ಭಾನುವಾರ ಮಧ್ಯಾಹ್ನ ನಡೆದ ಭೀಕರ ವಿಮಾನ ಪತನದಲ್ಲಿ, ವಿಮಾನದಲ್ಲಿದ್ದ ಪೈಲಟ್ ಸೇರಿದಂತೆ ಎಲ್ಲಾ 12 ಜನರು ಸಜೀವ ದಹನವಾಗಿರುವ ಘಟನೆ ಸಂಭವಿಸಿದೆ ಎಂದು ಪ್ರತ್ಯಕ್ಷದರ್ಶಿಗಳು ಹಾಗೂ ಅಧಿಕಾರಿಗಳು ಖಚಿತಪಡಿಸಿದ್ದಾರೆ.

ರನ್‌ವೇಯಿಂದ ಟೇಕ್ ಆಫ್ ಆದ ಕೆಲವೇ ಕ್ಷಣಗಳಲ್ಲಿ ದುರಂತ!

ಕಾನ್ಸಾಸ್ ನಗರದಿಂದ ದಕ್ಷಿಣಕ್ಕೆ ಸುಮಾರು 65 ಮೈಲು ದೂರದಲ್ಲಿರುವ ಬಟ್ಲರ್ ಸ್ಮಾರಕ ವಿಮಾನ ನಿಲ್ದಾಣದ ಬಳಿ ಈ ಘಟನೆ ನಡೆದಿದೆ. ಭಾನುವಾರ ಬೆಳಿಗ್ಗೆ 11.30 ರ ಸುಮಾರಿಗೆ ವಿಮಾನವು ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಪತನಗೊಂಡು ಬೆಂಕಿಯ ಕೆನ್ನಾಲಿಗೆಗೆ ತುತ್ತಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳ ಮತ್ತು ತುರ್ತು ನಿರ್ವಹಣಾ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಘಟನಾ ಸ್ಥಳದ ಭೀಕರತೆಯನ್ನು ವಿವರಿಸಿದ ಮಿಸೌರಿ ಹೆದ್ದಾರಿ ಗಸ್ತು ಪಡೆಯ ಸಾರ್ಜೆಂಟ್ ಜಸ್ಟಿನ್ ಎವಿಂಗ್, "ಇದೊಂದು ಅತ್ಯಂತ ಕ್ರೂರ ಹಾಗೂ ಭೀಕರ ಅಪಘಾತವಾಗಿದೆ. ವಿಮಾನ ನಿಲ್ದಾಣದ ಪಕ್ಕದ ಮೈದಾನದಲ್ಲೇ ವಿಮಾನ ಪತನಗೊಂಡಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಸುತ್ತಮುತ್ತಲಿನ ರಸ್ತೆ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ" ಎಂದು ತಿಳಿಸಿದ್ದಾರೆ.

'ಪೆಸಿಫಿಕ್ ಏರೋಸ್ಪೇಸ್ 750XL ( ಸಾಂದರ್ಭಿಕ ಚಿತ್ರ)

ತನಿಖೆಗೆ ಮುಂದಾದ ಎನ್‌ಟಿಎಸ್‌ಬಿ

ಅಪಘಾತಕ್ಕೀಡಾದ ವಿಮಾನವು 'ಪೆಸಿಫಿಕ್ ಏರೋಸ್ಪೇಸ್ 750XL' ಮಾದರಿಯ ಏಕ ಎಂಜಿನ್ ಟರ್ಬೊಪ್ರೊಪ್ ವಿಮಾನವಾಗಿದೆ. ಇದು ಸ್ಕೈಡೈವಿಂಗ್ ಸಾಹಸಗಳಿಗೆ ಮತ್ತು ಸಣ್ಣ ರನ್‌ವೇಗಳಲ್ಲಿ ಸುಲಭವಾಗಿ ಟೇಕ್ ಆಫ್ ಹಾಗೂ ಲ್ಯಾಂಡಿಂಗ್ ಮಾಡಲು ಜಗತ್ತಿನಾದ್ಯಂತ ಹೆಸರುವಾಸಿಯಾಗಿದೆ. 2010 ರಲ್ಲಿ ತಯಾರಾಗಿದ್ದ ಈ ವಿಮಾನವು ಗರಿಷ್ಠ 17 ಜನರನ್ನು ಹೊತ್ತೊಯ್ಯುವ ಸಾಮರ್ಥ್ಯ ಹೊಂದಿತ್ತು. ಈ ಭೀಕರ ದುರಂತಕ್ಕೆ ತಾಂತ್ರಿಕ ದೋಷ ಕಾರಣವೇ ಅಥವಾ ಬೇರೆನಾದರೂ ಸಮಸ್ಯೆಯಿತ್ತೇ ಎಂಬ ಬಗ್ಗೆ ರಾಷ್ಟ್ರೀಯ ಸಾರಿಗೆ ಸುರಕ್ಷತಾ ಮಂಡಳಿ ತನಿಖೆ ಆರಂಭಿಸಿದೆ.

ಮೃತರ ಗುರುತು ಪತ್ತೆ ಕಾರ್ಯ ಬಾಕಿ

ಕೇವಲ 4,300 ಜನಸಂಖ್ಯೆ ಹೊಂದಿರುವ ಬಟ್ಲರ್ ಎಂಬ ಪುಟ್ಟ ಪಟ್ಟಣದಲ್ಲಿ ಈ ಘಟನೆ ನಡೆದಿರುವುದು ಸ್ಥಳೀಯರಲ್ಲಿ ತೀವ್ರ ಆಘಾತ ಮೂಡಿಸಿದೆ. ಮೃತಪಟ್ಟವರ ವಯಸ್ಸು, ಹೆಸರು ಅಥವಾ ಅವರು ಯಾವ ಊರಿನವರು ಎಂಬ ನಿಖರ ಮಾಹಿತಿ ತಕ್ಷಣಕ್ಕೆ ಲಭ್ಯವಾಗಿಲ್ಲ.

ಈ ಭಾಗದಲ್ಲಿ ಸಾಮಾನ್ಯವಾಗಿ ಮಾರ್ಚ್ ಅಥವಾ ಏಪ್ರಿಲ್‌ನಿಂದ ಆರಂಭಗೊಂಡು ಅಕ್ಟೋಬರ್-ನವೆಂಬರ್‌ವರೆಗೆ ಸ್ಕೈಡೈವಿಂಗ್ ಚಟುವಟಿಕೆಗಳು ಸಕ್ರಿಯವಾಗಿ ನಡೆಯುತ್ತವೆ. ಸದ್ಯ ಈ ವಿಮಾನದ ಕಾರ್ಯಾಚರಣೆ ನಡೆಸುತ್ತಿದ್ದ 'ಸ್ಕೈಡೈವ್ ಕಾನ್ಸಾಸ್ ಸಿಟಿ' ಸಂಸ್ಥೆಯು ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದೆ. ಘಟನೆಯ ಕುರಿತು ಸ್ಥಳೀಯ ಪೊಲೀಸ್ ಇಲಾಖೆ ಮತ್ತು ಬೇಟ್ಸ್ ಕೌಂಟಿ ಶೆರಿಫ್ ಕಚೇರಿ ಅಧಿಕಾರಿಗಳು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

Read More
Next Story