ಮಧ್ಯಪ್ರಾಚ್ಯ ಯುದ್ಧದ ಕರಾಳ ಛಾಯೆ: ರಾಜ್ಯದ ಮೊಟ್ಟೆ, ಕಪ್ಪುಶಿಲೆಗಳ ಉದ್ಯಮಕ್ಕೆ ಹೊಡೆತ
x
ಚಾಮರಾಜನಗರದ ಕಪ್ಪುಶಿಲೆ (Black Granite)

ಮಧ್ಯಪ್ರಾಚ್ಯ ಯುದ್ಧದ ಕರಾಳ ಛಾಯೆ: ರಾಜ್ಯದ ಮೊಟ್ಟೆ, ಕಪ್ಪುಶಿಲೆಗಳ ಉದ್ಯಮಕ್ಕೆ ಹೊಡೆತ

ಇಸ್ರೇಲ್-ಇರಾನ್ ಯುದ್ಧದ ಪರಿಣಾಮವಾಗಿ ಕರ್ನಾಟಕದ ರಫ್ತು ವಲಯ ಅಕ್ಷರಶಃ ನೆಲಕ್ಕಚ್ಚಿದ್ದು, ಚಾಮರಾಜನಗರದ ವಿಶ್ವವಿಖ್ಯಾತ ಕಪ್ಪುಶಿಲೆ ಉದ್ಯಮ ಹಾಗೂ ರಾಜ್ಯದ ಕುಕ್ಕುಟೋದ್ಯಮಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಸಂಭವಿಸಿದೆ.


Click the Play button to hear this message in audio format

ಪಶ್ಚಿಮ ಏಷ್ಯಾದ ರಣರಂಗದಲ್ಲಿ ಇಸ್ರೇಲ್, ಇರಾನ್ ಮತ್ತು ಅಮೆರಿಕ ನಡುವೆ ನಡೆಯುತ್ತಿರುವ ಭೀಕರ ಯುದ್ಧವು ಕೇವಲ ಗಡಿಯಾಚೆಗಿನ ಕ್ಷಿಪಣಿ ದಾಳಿಗೆ ಸೀಮಿತವಾಗಿಲ್ಲ. ಇದರ ನೇರ ಪರಿಣಾಮ ಭಾರತದ ಆರ್ಥಿಕತೆಯ ಬೆನ್ನೆಲುಬಾದ ಕರ್ನಾಟಕದ ಕೃಷಿ, ಕುಕ್ಕುಟೋದ್ಯಮ ಮತ್ತು ಗಣಿ ಉದ್ಯಮದ ಮೇಲೂ ಭೀಕರವಾಗಿ ತಟ್ಟಿದೆ. ಕಚ್ಚಾತೈಲ ಮತ್ತು ಅಡುಗೆ ಅನಿಲದ ಬೆಲೆ ಏರಿಕೆಯ ಭೀತಿಯ ನಡುವೆಯೇ, ಯುದ್ಧದ ಪರಿಣಾಮದಿಂದಾಗಿ ರಾಜ್ಯದ ರಫ್ತು ವಲಯ ಅಕ್ಷರಶಃ ನೆಲಕಚ್ಚಿದೆ.

ಗ್ರಾನೈಟ್‌ ಉದ್ಯಮಕ್ಕೆ ಭಾರಿ ಹೊಡೆತ

ರಾಜ್ಯದ ಗಣಿ ಉದ್ಯಮದಲ್ಲಿ ಚಾಮರಾಜನಗರದ ಕಪ್ಪುಶಿಲೆಗೆ (Black Granite) ಜಾಗತಿಕ ಮಟ್ಟದಲ್ಲಿ ಅತ್ಯಂತ ಹೆಚ್ಚಿನ ಬೇಡಿಕೆ ಮತ್ತು ಶ್ರೇಷ್ಠತೆಯಿದೆ. ಇಲ್ಲಿನ ಕಲ್ಲುಗಳು ಅಮೆರಿಕ ಮತ್ತು ಯುರೋಪ್ ಜೊತೆಗೆ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಭಾರಿ ಪ್ರಮಾಣದಲ್ಲಿ ರಫ್ತಾಗುತ್ತಿದ್ದವು. ಆದರೆ ಯುದ್ಧದ ಕಾರಣದಿಂದ ಹಡಗು ಮತ್ತು ವಿಮಾನ ಸಂಚಾರ ಸ್ಥಗಿತಗೊಂಡಿರುವುದರಿಂದ ರಫ್ತು ಪ್ರಕ್ರಿಯೆ ಸಂಪೂರ್ಣ ನಿಂತುಹೋಗಿದೆ.

ಸರ್ಕಾರದ ಅಂಕಿಅಂಶಗಳ ಪ್ರಕಾರ, ಚಾಮರಾಜನಗರ ಜಿಲ್ಲೆಯ 455 ಎಕರೆ ಪ್ರದೇಶದಲ್ಲಿ ಗಣಿಗಾರಿಕೆ ನಡೆಯುತ್ತಿದ್ದು, ಕಳೆದ ನಾಲ್ಕು ವರ್ಷಗಳಲ್ಲಿ 121 ಕೋಟಿ ರೂ.ಗಳಿಗೂ ಅಧಿಕ ರಾಜಧನ ಸಂಗ್ರಹವಾಗಿತ್ತು. ಸದ್ಯದ ಪರಿಸ್ಥಿತಿಯಿಂದಾಗಿ ಈ ರಾಜಧನದಲ್ಲಿ ಶೇ. 15ರಷ್ಟು ಕುಸಿತ ಉಂಟಾಗುವ ಆತಂಕ ಎದುರಾಗಿದ್ದು, ಕ್ವಾರಿಗಳಲ್ಲಿ ಕೆಲಸ ಮಾಡುವ ಸಾವಿರಾರು ಕಾರ್ಮಿಕರ ಬದುಕು ಅನಿಶ್ಚಿತತೆಯಲ್ಲಿದೆ. ಇದಕ್ಕಿಂತ ಮೊದಲು ರಷ್ಯಾ-ಉಕ್ರೇನ್ ಯುದ್ಧದ ಸಂದರ್ಭದಲ್ಲೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿತ್ತು.

ಎಷ್ಟು ರಾಜಧನ ಸಂಗ್ರಹ?

ಗಣಿಗಾರಿಕೆಯಿಂದ ಚಾಮರಾಜನಗರ ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ 26.12 ಕೋಟಿ ರೂ., 2023-24ನೇ ಸಾಲಿನಲ್ಲಿ 33.75 ಕೋಟಿ ರೂ., 2024-25ನೇ ಸಾಲಿನಲ್ಲಿ 33.97 ಕೋಟಿ ರೂ., ಹಾಗೂ 2025-26ನೇ ಸಾಲಿನಲ್ಲಿ ಜನವರಿ ಅಂತ್ಯಕ್ಕೆ 29.82 ಕೋಟಿ ರೂ. ಸಂಗ್ರಹವಾಗಿದೆ. ಇದುವರೆಗೆ ಒಟ್ಟು 52,886 ಮೆಟ್ರಿಕ್ ಟನ್ ಕಪ್ಪುಶಿಲೆ ರಫ್ತಾಗಿದೆ. ಸದ್ಯ ಯುದ್ಧದ ಪರಿಣಾಮವಾಗಿ ಸರ್ಕಾರಕ್ಕೆ ಶೇ. 10ರಿಂದ 15ರಷ್ಟು ರಾಜಧನ ನಷ್ಟವಾಗಲಿದೆ.

ಈ ಬಗ್ಗೆ ಚಾಮರಾಜನಗರದ ಗಣಿ ಮಾಲೀಕರ ಸಂಘದ ಅಧ್ಯಕ್ಷ ಜಿ.ಎಂ. ಹೆಗಡೆ 'ದ ಫೆಡರಲ್‌ ಕರ್ನಾಟಕ'ದೊಂದಿಗೆ ಮಾತನಾಡಿ, "ಕೋವಿಡ್ ಮತ್ತು ರಷ್ಯಾ-ಉಕ್ರೇನ್ ಯುದ್ಧದ ಬಳಿಕ ಚೇತರಿಸಿಕೊಳ್ಳುತ್ತಿದ್ದ ಉದ್ಯಮಕ್ಕೆ ಇದು ಭರಿಸಲಾಗದ ಹೊಡೆತ ನೀಡಿದೆ," ಎಂದು ವಿಷಾದಿಸಿದರು.

ಕುಕ್ಕುಟೋದ್ಯಮಕ್ಕೂ ಹೊಡೆತ

ಯುದ್ಧ ಆರಂಭವಾದ ಕೇವಲ ಮೂರು ದಿನಗಳಲ್ಲಿ ರಾಜ್ಯದ ಕುಕ್ಕುಟೋದ್ಯಮ ಮತ್ತು ಹೈನೋದ್ಯಮದ ಸ್ಥಿತಿ ಹದಗೆಟ್ಟಿದೆ. ದಕ್ಷಿಣ ಭಾರತದಿಂದ ನಿತ್ಯವೂ ಮಧ್ಯಪ್ರಾಚ್ಯಕ್ಕೆ ರಫ್ತಾಗುತ್ತಿದ್ದ ಸುಮಾರು 80 ಲಕ್ಷ ಮೊಟ್ಟೆಗಳ ಪೈಕಿ ಕರ್ನಾಟಕದ ಬಳ್ಳಾರಿ, ಮೈಸೂರು, ಮಂಡ್ಯ ಮತ್ತು ದಾವಣಗೆರೆಯಿಂದಲೇ ಸುಮಾರು 20 ಲಕ್ಷ ಮೊಟ್ಟೆಗಳು ಪೂರೈಕೆಯಾಗುತ್ತಿದ್ದವು. ಈಗ ದುಬೈ ವಿಮಾನ ನಿಲ್ದಾಣದ ಹಾನಿ ಮತ್ತು ಹಡಗು ಸಂಪರ್ಕ ಕಡಿತದಿಂದಾಗಿ ಈ ರಫ್ತು ಸ್ಥಗಿತಗೊಂಡಿದೆ.

ತಮಿಳುನಾಡಿನ ನಾಮಕ್ಕಲ್‌ನಲ್ಲಿ ಟೆಸ್ಟಿಂಗ್ ಹಾಗೂ ಪ್ಯಾಕಿಂಗ್ ಮಾಡಿ, ನಂತರ ಕೊಚ್ಚಿನ್‌ನಿಂದ ನಿತ್ಯ ಹಡಗಿನ ಮೂಲಕ ಮೈನಸ್ 4 ಡಿಗ್ರಿ ಸೆಲ್ಸಿಯಸ್‌ನಲ್ಲಿ ಮೊಟ್ಟೆಯನ್ನು ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ಸಾಗಿಸಲಾಗುತ್ತಿತ್ತು. ಯುದ್ಧದಿಂದಾಗಿ ಫೆ. 27ರಂದು ಕೊನೆಯದಾಗಿ ಮೊಟ್ಟೆಯನ್ನು ರಫ್ತು ಮಾಡಲಾಗಿದೆ. ಜೊತೆಗೆ, ರಾಜ್ಯದಲ್ಲೇ ಮಾರಾಟ ಮಾಡಲು ದೊಡ್ಡ ಮಾರುಕಟ್ಟೆ ವ್ಯವಸ್ಥೆ ಇಲ್ಲ. ಯುದ್ಧದ ಪರಿಣಾಮದಿಂದಾಗಿ ಸಗಟು ಮಾರುಕಟ್ಟೆಯಲ್ಲಿ 100 ಮೊಟ್ಟೆಗಳಿಗೆ 530 ರೂ. ಇದ್ದ ಬೆಲೆ, ಸೋಮವಾರವಷ್ಟೇ ಮೈಸೂರು ಮತ್ತು ಬೆಂಗಳೂರು ಮಾರುಕಟ್ಟೆಗಳಲ್ಲಿ 510 ರೂ.ಗೆ ಇಳಿದಿದೆ. ಇದರಿಂದ ರೈತರು ಚಿಂತಾಕ್ರಾಂತರಾಗಿದ್ದಾರೆ.

ಈ ಬಗ್ಗೆ ರಾಷ್ಟ್ರೀಯ ಮೊಟ್ಟೆ ಸಮನ್ವಯ ಸಮಿತಿ (NECC) ವಲಯಾಧ್ಯಕ್ಷ ಸತೀಶ್ ಬಾಬು 'ದ ಫೆಡರಲ್‌ ಕರ್ನಾಟಕ'ದೊಂದಿಗೆ ಮಾತನಾಡಿ, "ಪರಿಸ್ಥಿತಿ ಹೀಗೆಯೇ ಮುಂದುವರಿದರೆ ರಾಜ್ಯದಲ್ಲಿ ಕನಿಷ್ಠ 200 ಕೋಟಿ ರೂ.ಗಳಷ್ಟು ನಷ್ಟ ಸಂಭವಿಸಲಿದೆ. ಸಗಟು ಮಾರುಕಟ್ಟೆಯಲ್ಲಿ ಮೊಟ್ಟೆಗಳ ಬೆಲೆ ಈಗಾಗಲೇ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ," ಎಂದು ಆತಂಕ ವ್ಯಕ್ತಪಡಿಸಿದರು.

ಹಣ್ಣು, ಹೂವು ಮತ್ತು ಸಾವಯವ ಉತ್ಪನ್ನಗಳಿಗೂ ಸಂಕಷ್ಟ

ಮಧ್ಯಪ್ರಾಚ್ಯ ರಾಷ್ಟ್ರಗಳೇ ನಮ್ಮ ರಾಜ್ಯದ ಹಣ್ಣು, ಹೂವು, ತರಕಾರಿ ಮತ್ತು ಹಾಲಿನ ಉತ್ಪನ್ನಗಳಿಗೆ ಪ್ರಮುಖ ಮಾರುಕಟ್ಟೆಯಾಗಿವೆ. ಬೇಗನೆ ಕೆಡುವಂತಹ ಪದಾರ್ಥಗಳಾದ ತರಕಾರಿ ಮತ್ತು ಹಣ್ಣುಗಳನ್ನು ರಫ್ತು ಮಾಡಲು ಸಾಧ್ಯವಾಗದೆ ಅವು ಗೋದಾಮುಗಳಲ್ಲಿಯೇ ಕೊಳೆಯುವ ಪರಿಸ್ಥಿತಿ ಎದುರಾಗಿದೆ. ಹೈನೋದ್ಯಮದ ಉತ್ಪನ್ನಗಳು ಮತ್ತು ಸಾವಯವ ಉತ್ಪನ್ನಗಳ ಮೇಲೂ ಇದರ ಪ್ರಭಾವ ಬೀರಿದೆ. "ಸಾವಿರಾರು ಬಾಟಲಿ ಸಾವಯವ ತುಪ್ಪ ದುಬೈನಲ್ಲಿಯೇ ಸಿಲುಕಿಕೊಂಡಿದ್ದು, ಮುಂದಿನ ಸಂಚಾರದ ಮಾರ್ಗವಿಲ್ಲದೆ ದಿಕ್ಕು ಕಾಣದಂತಾಗಿದೆ," ಎನ್ನುತ್ತಾರೆ ಆರ್ಗ್ಯಾನಿಕ್ ಮಂಡ್ಯ ಸಂಸ್ಥೆಯ ಸಂಸ್ಥಾಪಕ ಮತ್ತು ಸಿಇಒ ಎಸ್.ಸಿ. ಮಧು ಚಂದನ್.

ಸ್ಥಳೀಯ ಮಾರುಕಟ್ಟೆಯ ಮೇಲೂ ಹೊಡೆತ

ಒಂದೆಡೆ ಅಂತರಾಷ್ಟ್ರೀಯ ಮಾರುಕಟ್ಟೆ ಬಂದ್ ಆಗಿದ್ದರೆ, ಮತ್ತೊಂದೆಡೆ ಸ್ಥಳೀಯವಾಗಿ ರಂಜಾನ್ ಮತ್ತು ಈಸ್ಟರ್ ಹಬ್ಬಗಳಿಂದಾಗಿ ಬೇಡಿಕೆ ಕುಸಿದಿದೆ. ಜೊತೆಗೆ ಬೇಸಿಗೆ ರಜೆಯ ಕಾರಣದಿಂದ ಶಾಲಾ ಮಕ್ಕಳ ಬಿಸಿಯೂಟ ಯೋಜನೆಗೂ ವಿರಾಮ ಬೀಳುತ್ತಿರುವುದರಿಂದ ಮೊಟ್ಟೆ ಮತ್ತು ಹಾಲಿನ ಬಳಕೆಯೂ ಕಡಿಮೆಯಾಗಲಿದೆ. ಈ ಎಲ್ಲಾ ಬೆಳವಣಿಗೆಗಳು ರಾಜ್ಯದ ಕೃಷಿ ಆಧಾರಿತ ಉದ್ದಿಮೆಗಳನ್ನು ತೀವ್ರ ಸಂಕಷ್ಟಕ್ಕೆ ತಳ್ಳಿದ್ದು, ಆದಷ್ಟು ಬೇಗ ಯುದ್ಧ ಮುಗಿದು ಪರಿಸ್ಥಿತಿ ಸುಧಾರಿಸಲಿ ಎಂಬುದು ರಾಜ್ಯದ ಉದ್ಯಮಿಗಳು ಮತ್ತು ರೈತರ ಏಕೈಕ ಪ್ರಾರ್ಥನೆಯಾಗಿದೆ.

Read More
Next Story