
ನೆಮೆಸಿಯೊ ರುಬೆನ್ ಒಸೆಗುರಾ ಸೆರ್ವಾಂಟೆಸ್‌ನನ್ನು ಭಾನುವಾರ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಹತ್ಯೆಗೈಯಲಾಗಿದೆ.
ಮೆಕ್ಸಿಕೋದ ಡ್ರಗ್ ಲಾರ್ಡ್ 'ಎಲ್ ಮೆಂಚೊ' ಹತ್ಯೆ; ಭುಗಿಲೆದ್ದ ಹಿಂಸಾಚಾರ
ಡೊನಾಲ್ಡ್ ಟ್ರಂಪ್ ಆಡಳಿತವು ಈ ಕಾರ್ಟೆಲ್ ಅನ್ನು 'ವಿದೇಶಿ ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿತ್ತು ಹಾಗೂ ಆತನ ತಲೆಗೆ ಸುಮಾರು 125 ಕೋಟಿ ರೂ. ಬಹುಮಾನ ಪ್ರಕಟಿಸಿತ್ತು.
ಮೆಕ್ಸಿಕೋದ ಅತ್ಯಂತ ಪ್ರಬಲ ಹಾಗೂ ಕುಖ್ಯಾತ ಡ್ರಗ್ ಕಾರ್ಟೆಲ್ ನಾಯಕ 'ಎಲ್ ಮೆಂಚೊ' ಎಂದೇ ಕರೆಯಲ್ಪಡುವ ನೆಮೆಸಿಯೊ ರುಬೆನ್ ಒಸೆಗುರಾ ಸೆರ್ವಾಂಟೆಸ್‌ನನ್ನು ಭಾನುವಾರ ನಡೆದ ಸೇನಾ ಕಾರ್ಯಾಚರಣೆಯಲ್ಲಿ ಹತ್ಯೆಗೈಯಲಾಗಿದೆ.
ಜಲಿಸ್ಕೊದ ಟಪಲ್ಪಾದಲ್ಲಿ ಆತನನ್ನು ಬಂಧಿಸಲು ನಡೆಸಿದ ಕಾರ್ಯಾಚರಣೆ ವೇಳೆ ಆತ ತೀವ್ರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ವಿಮಾನದ ಮೂಲಕ ಮೆಕ್ಸಿಕೋ ಸಿಟಿಗೆ ಕರೆದೊಯ್ಯುವಾಗ ಮಾರ್ಗಮಧ್ಯೆ ಮೃತಪಟ್ಟಿದ್ದಾನೆ ಎಂದು ರಕ್ಷಣಾ ಇಲಾಖೆ ಖಚಿತಪಡಿಸಿದೆ. ಮಾದಕವಸ್ತು ಕಳ್ಳಸಾಗಣೆ ಜಾಲವನ್ನು ಭೇದಿಸುವಲ್ಲಿ ಮೆಕ್ಸಿಕೋ ಸರ್ಕಾರ ಸಾಧಿಸಿದ ಅತಿದೊಡ್ಡ ಯಶಸ್ಸು ಇದಾಗಿದೆ.
ಕಾರ್ಯಾಚರಣೆ ವೇಳೆ ಭಾರಿ ಗುಂಡಿನ ಕಾಳಗ
ಗ್ವಾಡಲಜಾರಾದಿಂದ ನೈಋತ್ಯಕ್ಕೆ ಸುಮಾರು ಎರಡು ಗಂಟೆಗಳ ಪ್ರಯಾಣದ ದೂರದಲ್ಲಿರುವ ಟಪಲ್ಪಾದಲ್ಲಿ 'ಜಲಿಸ್ಕೊ ನ್ಯೂ ಜನರೇಷನ್ ಕಾರ್ಟೆಲ್' (ಸಿಜೆಎನ್‌ಜಿ) ನಾಯಕ ಅಡಗಿದ್ದ ಸ್ಥಳದ ಮೇಲೆ ಸೇನೆ ದಾಳಿ ನಡೆಸಿತ್ತು. ಅಮೆರಿಕಕ್ಕೆ ಅಪಾರ ಪ್ರಮಾಣದ ಫೆಂಟಾನಿಲ್ ಮತ್ತು ಇತರೆ ಮಾದಕವಸ್ತುಗಳನ್ನು ಸಾಗಿಸುವಲ್ಲಿ ಈ ಕಾರ್ಟೆಲ್ ಕುಖ್ಯಾತಿ ಪಡೆದಿತ್ತು. ಕಾರ್ಯಾಚರಣೆ ವೇಳೆ ಸೇನಾಪಡೆಗಳ ಮೇಲೆ ತೀವ್ರ ಗುಂಡಿನ ದಾಳಿ ನಡೆದಿದ್ದು, ಪ್ರತಿದಾಳಿಯಲ್ಲಿ ಸ್ಥಳದಲ್ಲೇ ನಾಲ್ವರನ್ನು ಹತ್ಯೆ ಮಾಡಲಾಗಿದೆ.
ಒಸೆಗುರಾ ಸೆರ್ವಾಂಟೆಸ್ ಸೇರಿದಂತೆ ಮೂವರು ಗಾಯಗೊಂಡು ನಂತರ ಮೃತಪಟ್ಟಿದ್ದಾರೆ. ಇಬ್ಬರನ್ನು ಬಂಧಿಸಲಾಗಿದ್ದು, ಶಸ್ತ್ರಸಜ್ಜಿತ ವಾಹನಗಳು, ರಾಕೆಟ್ ಲಾಂಚರ್‌ಗಳು ಮತ್ತು ಇತರೆ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ಗುಂಡಿನ ಚಕಮಕಿಯಲ್ಲಿ ಮೂವರು ಯೋಧರು ಗಾಯಗೊಂಡಿದ್ದು, ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತಿದೆ. ಅಮೆರಿಕದ ಗುಪ್ತಚರ ಮಾಹಿತಿಯ ನೆರವಿನೊಂದಿಗೆ ಮೆಕ್ಸಿಕನ್ ವಿಶೇಷ ಪಡೆಗಳು ಈ ಕಾರ್ಯಾಚರಣೆ ನಡೆಸಿವೆ ಎಂದು ಮೆಕ್ಸಿಕೋದಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಸ್ಪಷ್ಟಪಡಿಸಿದೆ.
ಭುಗಿಲೆದ್ದ ಹಿಂಸಾಚಾರ
ಪ್ರಬಲ ಡ್ರಗ್ ಲಾರ್ಡ್‌ನ ಹತ್ಯೆಯ ಬೆನ್ನಲ್ಲೇ ಜಲಿಸ್ಕೊ ಮತ್ತು ಇತರೆ ರಾಜ್ಯಗಳಲ್ಲಿ ಭಾರಿ ಹಿಂಸಾಚಾರ ಭುಗಿಲೆದ್ದಿದೆ. ರಸ್ತೆಗಳನ್ನು ತಡೆದು ವಾಹನಗಳಿಗೆ ಬೆಂಕಿ ಹಚ್ಚಲಾಗಿದ್ದು, ಸೇನಾ ಕಾರ್ಯಾಚರಣೆಗಳನ್ನು ವಿಫಲಗೊಳಿಸಲು ಕಾರ್ಟೆಲ್‌ಗಳು ಈ ತಂತ್ರವನ್ನು ಬಳಸುತ್ತಿವೆ. ಮುನ್ನೆಚ್ಚರಿಕಾ ಕ್ರಮವಾಗಿ ಜಲಿಸ್ಕೊದಲ್ಲಿ ಸೋಮವಾರ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.
ಪ್ರವಾಸಿ ನಗರವಾದ ಪೋರ್ಟೊ ವಲ್ಲರ್ಟಾದಲ್ಲಿ ದಟ್ಟ ಹೊಗೆ ಆವರಿಸಿರುವ ಮತ್ತು ವಿಮಾನ ನಿಲ್ದಾಣದಲ್ಲಿ ಜನರು ಭೀತಿಯಿಂದ ಓಡಾಡುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಭದ್ರತಾ ದೃಷ್ಟಿಯಿಂದ ಏರ್ ಕೆನಡಾ ಸಂಸ್ಥೆಯು ಪೋರ್ಟೊ ವಲ್ಲರ್ಟಾಗೆ ತನ್ನ ವಿಮಾನ ಸಂಚಾರವನ್ನು ಸ್ಥಗಿತಗೊಳಿಸಿದ್ದು, ವಿಮಾನ ನಿಲ್ದಾಣದತ್ತ ತೆರಳದಂತೆ ಪ್ರಯಾಣಿಕರಿಗೆ ಸೂಚಿಸಿದೆ. ಈ ಬೇಸಿಗೆಯಲ್ಲಿ ಫುಟ್‌ಬಾಲ್ ವಿಶ್ವಕಪ್ ಪಂದ್ಯಗಳಿಗೆ ಆತಿಥ್ಯ ವಹಿಸಲಿರುವ ಮೆಕ್ಸಿಕೋದ ಎರಡನೇ ಅತಿದೊಡ್ಡ ನಗರ ಗ್ವಾಡಲಜಾರಾದಲ್ಲೂ ರಸ್ತೆಗಳನ್ನು ಬಂದ್ ಮಾಡಿ ವಾಹನಗಳಿಗೆ ಬೆಂಕಿ ಹಚ್ಚಲಾಗಿದೆ.
ಕಟ್ಟೆಚ್ಚರ ವಹಿಸಲು ಅಮೆರಿಕ, ಕೆನಡಾ ಸೂಚನೆ
ಭದ್ರತಾ ಕಾರ್ಯಾಚರಣೆಗಳು ಮುಂದುವರಿದಿರುವ ಹಿನ್ನೆಲೆಯಲ್ಲಿ ಜಲಿಸ್ಕೊ, ತಮಾಲಿಪಾಸ್, ಮೈಕೋಕಾನ್, ಗುರೆರೊ ಮತ್ತು ನ್ಯೂವೊ ಲಿಯೊನ್ ರಾಜ್ಯಗಳಲ್ಲಿರುವ ಅಮೆರಿಕದ ನಾಗರಿಕರು ಸುರಕ್ಷಿತ ಸ್ಥಳಗಳಲ್ಲಿರುವಂತೆ ಅಮೆರಿಕದ ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದೆ. ಅದೇ ರೀತಿ ಕೆನಡಾ ರಾಯಭಾರ ಕಚೇರಿಯೂ ತನ್ನ ನಾಗರಿಕರಿಗೆ ಸುರಕ್ಷಿತವಾಗಿರುವಂತೆ ಸೂಚಿಸಿದೆ.
ಜಲಿಸ್ಕೊ ಗವರ್ನರ್ ಪಾಬ್ಲೊ ಲೆಮಸ್ ಅವರು ಸಾರ್ವಜನಿಕ ಸಾರಿಗೆಯನ್ನು ಸ್ಥಗಿತಗೊಳಿಸಿದ್ದು, ಜನರಿಗೆ ಮನೆಯಲ್ಲೇ ಉಳಿಯುವಂತೆ ಕಟ್ಟುನಿಟ್ಟಿನ ಮನವಿ ಮಾಡಿದ್ದಾರೆ. ಫೆಬ್ರವರಿಯಲ್ಲಿ ಡೊನಾಲ್ಡ್ ಟ್ರಂಪ್ ಆಡಳಿತವು ಈ ಕಾರ್ಟೆಲ್ ಅನ್ನು 'ವಿದೇಶಿ ಭಯೋತ್ಪಾದಕ ಸಂಘಟನೆ' ಎಂದು ಘೋಷಿಸಿತ್ತು ಹಾಗೂ ಎಲ್ ಮೆಂಚೊ ಬಂಧನಕ್ಕೆ ನೆರವಾಗುವ ಸುಳಿವು ನೀಡಿದವರಿಗೆ ಅಮೆರಿಕ 15 ಮಿಲಿಯನ್ ಡಾಲರ್ (ಸುಮಾರು 125 ಕೋಟಿ ರೂ.) ಬಹುಮಾನವನ್ನು ಪ್ರಕಟಿಸಿತ್ತು. 2009ರಲ್ಲಿ ಹುಟ್ಟಿಕೊಂಡಿದ್ದ ಸಿಜೆಎನ್‌ಜಿ, ಮೆಕ್ಸಿಕೋದ ಅತ್ಯಂತ ಪ್ರಬಲ ಹಾಗೂ ವೇಗವಾಗಿ ಬೆಳೆಯುತ್ತಿದ್ದ ಕ್ರಿಮಿನಲ್ ಸಂಘಟನೆಯಾಗಿತ್ತು.
ಮೆಕ್ಸಿಕೋ ಅಧ್ಯಕ್ಷರ ಪ್ರತಿಕ್ರಿಯೆ ಏನು?
ಹಿಂದಿನ ಸರ್ಕಾರಗಳು ಡ್ರಗ್ ಲಾರ್ಡ್‌ಗಳನ್ನು ಹತ್ಯೆ ಮಾಡುವ ಮೂಲಕ ಕಾರ್ಟೆಲ್‌ಗಳು ಒಡೆದು ಹಿಂಸಾಚಾರಕ್ಕೆ ಕಾರಣವಾಗುತ್ತಿದ್ದ 'ಕಿಂಗ್‌ಪಿನ್' ತಂತ್ರವನ್ನು ಮೆಕ್ಸಿಕೋ ಅಧ್ಯಕ್ಷೆ ಕ್ಲೌಡಿಯಾ ಶೈನ್ಬಾಮ್ ಈ ಹಿಂದೆ ಟೀಕಿಸುತ್ತಿದ್ದರು. ಆದರೆ, ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ಮಾದಕವಸ್ತು ಕಳ್ಳಸಾಗಣೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಭಾರಿ ಒತ್ತಡ ಅವರ ಮೇಲಿತ್ತು. ಇದೀಗ ಕಾರ್ಯಾಚರಣೆಯ ಯಶಸ್ಸಿನ ಬಳಿಕ ಅವರು ಭದ್ರತಾ ಪಡೆಗಳನ್ನು ಶ್ಲಾಘಿಸಿದ್ದು, ಸಾರ್ವಜನಿಕರು ಶಾಂತಿ ಕಾಪಾಡುವಂತೆ ಎಕ್ಸ್ (X) ಖಾತೆಯಲ್ಲಿ ಮನವಿ ಮಾಡಿದ್ದಾರೆ. ಏತನ್ಮಧ್ಯೆ, ಈ ಕಾರ್ಯಾಚರಣೆ ಹಾಗೂ ಹಿಂಸಾಚಾರದ ವೇಳೆ ಟಪಲ್ಪಾದಲ್ಲಿ ನ್ಯಾಷನಲ್ ಗಾರ್ಡ್‌ನ ಓರ್ವ ಯೋಧ, ಪೋರ್ಟೊ ವಲ್ಲರ್ಟಾ ಜೈಲಿನಲ್ಲಿ ನಡೆದ ಗಲಭೆಯಲ್ಲಿ ಓರ್ವ ಜೈಲು ಸಿಬ್ಬಂದಿ ಹಾಗೂ ಗ್ವಾಡಲಜಾರಾದಲ್ಲಿ ರಾಜ್ಯ ಪ್ರಾಸಿಕ್ಯೂಟರ್ ಕಚೇರಿಯ ಓರ್ವ ಏಜೆಂಟ್ ಮೃತಪಟ್ಟಿದ್ದಾರೆ ಎಂದು ಜಲಿಸ್ಕೊ ರಾಜ್ಯದ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

