
ಸಾಮಾಜಿಕ ಜಾಲತಾಣಗಳ ವ್ಯಸನ: ಮೆಟಾ, ಯೂಟ್ಯೂಬ್‌ಗೆ ಕೋಟ್ಯಂತರ ರೂಪಾಯಿ ದಂಡ
ಅಮೆರಿಕದ ಕ್ಯಾಲಿಫೋರ್ನಿಯಾ ನ್ಯಾಯಾಲಯವು ಸಾಮಾಜಿಕ ಜಾಲತಾಣಗಳ ಇತಿಹಾಸದಲ್ಲೇ ಮಹತ್ವದ ತೀರ್ಪೊಂದನ್ನು ನೀಡಿದೆ. ಯುವ ಸಮುದಾಯವನ್ನು ತಮ್ಮ ವೇದಿಕೆಗಳಿಗೆ ಅಂಟಿಕೊಳ್ಳುವಂತೆ ಮಾಡುವ ಉದ್ದೇಶದಿಂದಲೇ ಆ್ಯಪ್‌ಗಳನ್ನು ವಿನ್ಯಾಸಗೊಳಿಸಿದ ಆರೋಪದಡಿ ಮೆಟಾ ಹಾಗೂ ಯೂಟ್ಯೂಬ್ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ದಂಡ ವಿಧಿಸಲಾಗಿದೆ.
ತಂತ್ರಜ್ಞಾನ ದೈತ್ಯ ಕಂಪನಿಗಳು ಮಕ್ಕಳ ಮಾನಸಿಕ ಆರೋಗ್ಯದ ಬಗ್ಗೆ ಕಿಂಚಿತ್ತೂ ಕಾಳಜಿ ವಹಿಸದೆ, ಕೇವಲ ತಮ್ಮ ಲಾಭಕ್ಕಾಗಿ ಅವರನ್ನು ವ್ಯಸನಿಗಳನ್ನಾಗಿ ಮಾಡುತ್ತಿವೆ ಎಂಬ ಗಂಭೀರ ಆರೋಪವನ್ನು ಜ್ಯೂರಿ ಎತ್ತಿಹಿಡಿದಿದೆ. ಈ ಐತಿಹಾಸಿಕ ತೀರ್ಪು ಮುಂದಿನ ದಿನಗಳಲ್ಲಿ ಸಾವಿರಾರು ಅಂತಹುದೇ ಪ್ರಕರಣಗಳ ವಿಚಾರಣೆ ಮೇಲೆ ನೇರ ಪ್ರಭಾವ ಬೀರಲಿದೆ.
40 ಗಂಟೆಗಳ ಸುದೀರ್ಘ ವಿಚಾರಣೆ
ಕ್ಯಾಲೆ ಎಂದು ಕರೆಯಲ್ಪಡುವ 20 ವರ್ಷದ ಯುವತಿ (ಕೆಜಿಎಂ) ದಾಖಲಿಸಿದ್ದ ಈ ಪ್ರಕರಣದ ವಿಚಾರಣೆಯನ್ನು ಜ್ಯೂರಿ ಸದಸ್ಯರು ಸತತ 40 ಗಂಟೆಗಳ ಕಾಲ ನಡೆಸಿದರು. ಅಂತಿಮವಾಗಿ ಯುವತಿಗೆ ಸುಮಾರು 30 ಲಕ್ಷ ಅಮೆರಿಕನ್ ಡಾಲರ್ ಪರಿಹಾರ ನೀಡುವಂತೆ ಆದೇಶಿಸಲಾಗಿದೆ. ಇದಲ್ಲದೆ, ಉದ್ದೇಶಪೂರ್ವಕವಾಗಿ ಮಕ್ಕಳಿಗೆ ಹಾನಿ ಮಾಡಿದ್ದಕ್ಕಾಗಿ ಹೆಚ್ಚುವರಿಯಾಗಿ ದಂಡ ವಿಧಿಸಲು ಕೂಡ ಜ್ಯೂರಿ ಶಿಫಾರಸು ಮಾಡಿದೆ. ಈ ದಂಡದ ಮೊತ್ತದಲ್ಲಿ ಇನ್‌ಸ್ಟಾಗ್ರಾಮ್ ಮತ್ತು ಫೇಸ್‌ಬುಕ್‌ನ ಮಾತೃಸಂಸ್ಥೆಯಾದ ಮೆಟಾ ಶೇಕಡಾ 70 ರಷ್ಟು ಜವಾಬ್ದಾರಿ ಹೊರಬೇಕಿದ್ದು, ಗೂಗಲ್ ಒಡೆತನದ ಯೂಟ್ಯೂಬ್ ಶೇಕಡಾ 30 ರಷ್ಟು ಹೊಣೆಗಾರಿಕೆ ವಹಿಸಿಕೊಂಡಿದೆ.
ಬಾಲ್ಯದಿಂದಲೇ ಶುರುವಾದ ವ್ಯಸನ
ತಾನು ಕೇವಲ ಆರು ವರ್ಷದವಳಿದ್ದಾಗಲೇ ಯೂಟ್ಯೂಬ್ ಹಾಗೂ ಒಂಬತ್ತನೇ ವಯಸ್ಸಿಗೆ ಇನ್‌ಸ್ಟಾಗ್ರಾಮ್ ಬಳಸಲು ಶುರುಮಾಡಿದ್ದಾಗಿ ಸಂತ್ರಸ್ತೆ ನ್ಯಾಯಾಲಯದ ಮುಂದೆ ಹೇಳಿಕೊಂಡಿದ್ದಾಳೆ. ಬಾಲ್ಯದ ಬಹುಪಾಲು ಸಮಯವನ್ನು ಆಕೆ ಕೇವಲ ಜಾಲತಾಣಗಳಲ್ಲೇ ಕಳೆಯುತ್ತಿದ್ದಳು. ಈ ಮಿತಿಮೀರಿದ ಬಳಕೆಯೇ ಆಕೆಯ ಮಾನಸಿಕ ಆರೋಗ್ಯ ಹದಗೆಡಲು ಪ್ರಮುಖ ಕಾರಣವಾಯಿತು ಎಂದು ವಕೀಲರು ವಾದ ಮಂಡಿಸಿದರು. ಈ ಪ್ರಕರಣದಲ್ಲಿ ಮೊದಲು ಟಿಕ್‌ಟಾಕ್ ಮತ್ತು ಸ್ನ್ಯಾಪ್‌ಚಾಟ್ ಕಂಪನಿಗಳು ಕೂಡ ಪ್ರತಿವಾದಿಗಳಾಗಿದ್ದವು. ಆದರೆ ವಿಚಾರಣೆ ಆರಂಭವಾಗುವ ಮೊದಲೇ ಆ ಕಂಪನಿಗಳು ರಾಜಿ ಸಂಧಾನದ ಮೂಲಕ ಪ್ರಕರಣದಿಂದ ಹೊರಬಂದಿದ್ದವು.
ಇನ್ಫಿನಿಟ್ ಸ್ಕ್ರಾಲ್ ವಿನ್ಯಾಸವೇ ಪ್ರಮುಖ ಅಸ್ತ್ರ
ತಂತ್ರಜ್ಞಾನ ಕಂಪನಿಗಳು ಬಳಕೆದಾರರನ್ನು ಹಿಡಿದಿಟ್ಟುಕೊಳ್ಳಲು ಬಳಸುವ ಕುತಂತ್ರಗಳನ್ನು ವಕೀಲರು ನ್ಯಾಯಾಲಯದಲ್ಲಿ ಎಳೆಎಳೆಯಾಗಿ ಬಿಚ್ಚಿಟ್ಟರು. ಒಮ್ಮೆ ನೋಡಲು ಶುರುಮಾಡಿದರೆ ಎಂದಿಗೂ ಮುಗಿಯದ ಇನ್ಫಿನಿಟ್ ಸ್ಕ್ರಾಲ್, ವಿಡಿಯೋಗಳ ಆಟೋ-ಪ್ಲೇ ಮತ್ತು ನಿರಂತರವಾಗಿ ಬರುವ ನೋಟಿಫಿಕೇಶನ್‌ಗಳು ಮಕ್ಕಳನ್ನು ಜಾಲತಾಣಗಳಿಗೆ ಅಂಟಿಕೊಳ್ಳುವಂತೆ ಮಾಡುತ್ತವೆ ಎಂದು ವಾದಿಸಿದರು. ಅಮೆರಿಕದ ಕಾನೂನಿನ ಪ್ರಕಾರ ಜಾಲತಾಣಗಳಲ್ಲಿ ಪ್ರಕಟವಾಗುವ ಕಂಟೆಂಟ್‌ಗೆ ಆಯಾ ಕಂಪನಿಗಳು ಜವಾಬ್ದಾರರಲ್ಲ. ಹೀಗಾಗಿ ವಕೀಲರು ಕಂಟೆಂಟ್ ಬದಲಿಗೆ, ಆ್ಯಪ್‌ಗಳ ವಿನ್ಯಾಸ ಮತ್ತು ಅಲ್ಗಾರಿದಮ್‌ಗಳನ್ನೇ ಪ್ರಮುಖ ಗುರಿಯಾಗಿಸಿಕೊಂಡು ಜಯ ಸಾಧಿಸಿದ್ದಾರೆ.
ಆರೋಪಗಳನ್ನು ತಳ್ಳಿಹಾಕಿದ ದಿಗ್ಗಜ ಕಂಪನಿಗಳು
ನ್ಯಾಯಾಲಯದ ಈ ತೀರ್ಪನ್ನು ಮೆಟಾ ಮತ್ತು ಯೂಟ್ಯೂಬ್ ಎರಡೂ ಕಂಪನಿಗಳು ಬಲವಾಗಿ ವಿರೋಧಿಸಿವೆ. ಯುವತಿಯ ಮಾನಸಿಕ ಸಮಸ್ಯೆಗೆ ಕೌಟುಂಬಿಕ ಕಲಹಗಳು ಕಾರಣವೇ ಹೊರತು ಸಾಮಾಜಿಕ ಜಾಲತಾಣಗಳಲ್ಲ ಎಂದು ಮೆಟಾ ವಾದಿಸಿದೆ. ಇತ್ತ ಯೂಟ್ಯೂಬ್, ತಮ್ಮದು ಕೇವಲ ವಿಡಿಯೋ ಸ್ಟ್ರೀಮಿಂಗ್ ವೇದಿಕೆಯಾಗಿದ್ದು, ಅದನ್ನು ಸಾಮಾಜಿಕ ಜಾಲತಾಣಗಳ ಸಾಲಿಗೆ ಸೇರಿಸಬಾರದು ಎಂದು ಸಮರ್ಥಿಸಿಕೊಂಡಿದೆ. ಎರಡೂ ಕಂಪನಿಗಳು ಮೇಲ್ಮನವಿ ಸಲ್ಲಿಸುವ ಸಾಧ್ಯತೆಗಳಿವೆ. ಆದರೆ, ತಜ್ಞರ ಪ್ರಕಾರ ಈ ತೀರ್ಪು ತಂಬಾಕು ಕಂಪನಿಗಳ ವಿರುದ್ಧದ ಹಳೆಯ ಐತಿಹಾಸಿಕ ಪ್ರಕರಣಗಳನ್ನು ನೆನಪಿಸುತ್ತಿದೆ. ಒಮ್ಮೆ ಇಂತಹ ತೀರ್ಪು ಬಂದರೆ, ಅದು ಜಗತ್ತಿನಾದ್ಯಂತ ಹೊಸ ಕಾನೂನು ಹೋರಾಟಗಳಿಗೆ ಮುನ್ನುಡಿ ಬರೆಯುವ ಸಾಧ್ಯತೆಯಿದೆ.
ನಮ್ಮನ್ನೇ ಬಳಸಿಕೊಳ್ಳುತ್ತಿರುವ ಜಾಲತಾಣಗಳು
ಸಾಮಾನ್ಯವಾಗಿ ನಾವು ಫೋನ್‌ನಲ್ಲಿ ಸಮಯ ಮಿತಿಯನ್ನು ನಿಗದಿಪಡಿಸಿಕೊಂಡರೂ, ಅದು ಕೆಲಸ ಮಾಡುವುದಿಲ್ಲ. ಆಲ್ಕೋಹಾಲ್ ವ್ಯಸನಿಗಳಂತೆ ನಮ್ಮ ಬೆರಳುಗಳು ಸ್ಕ್ರಾಲ್ ಮಾಡಲು ತುಡಿಯುತ್ತವೆ. ಇದೀಗ ಎಕ್ಸ್ (ಟ್ವಿಟರ್) ಕೂಡ ಇದೇ ಮಾದರಿಯ ವಿಡಿಯೋ ಫಾರ್ಮ್ಯಾಟ್ ಪರಿಚಯಿಸಿದೆ. ಹಿಂದೆಲ್ಲಾ ಬಿಡುವಿನ ವೇಳೆಯಲ್ಲಿ ಪತ್ರಿಕೆಗಳನ್ನು ಓದುತ್ತಿದ್ದ ಜನರಿಂದು ರೀಲ್ಸ್ ಪ್ರಪಂಚದಲ್ಲಿ ಕಳೆದುಹೋಗಿದ್ದಾರೆ. ಇತಿಹಾಸಕಾರ ಯುವಲ್ ನೋವಾ ಹರಾರಿ ಅವರು ಗೋಧಿಯ ಬಗ್ಗೆ ಹೇಳುವ ಮಾತು ಇಲ್ಲಿ ಅಕ್ಷರಶಃ ನಿಜವಾಗುತ್ತದೆ. ನಾವು ಸಾಮಾಜಿಕ ಜಾಲತಾಣಗಳನ್ನು ಬಳಸುತ್ತಿದ್ದೇವೆ ಎಂದು ಭ್ರಮಿಸಿದ್ದೇವೆ, ಆದರೆ ವಾಸ್ತವದಲ್ಲಿ ಆ ಜಾಲತಾಣಗಳೇ ನಮ್ಮನ್ನು ಬಳಸಿಕೊಳ್ಳುತ್ತಿವೆ.

