Davos Summit | Efforts to attract investment from various companies including Coca-Cola to the state
x

ಸಚಿವ ಎಂ.ಬಿ. ಪಾಟೀಲ್‌ ವಿವಿಧ ಕಂಪನಿಗಳ ಮುಖ್ಯಸ್ಥರ ಜೊತೆ ಚರ್ಚಿಸಿದರು. 

ದಾವೋಸ್‌ ಶೃಂಗಸಭೆ| ರಾಜ್ಯಕ್ಕೆ ಕೋಕಾ ಕೋಲಾ ಸೇರಿದಂತೆ ವಿವಿಧ ಕಂಪನಿಗಳ ಬಂಡವಾಳ ಸೆಳೆಯಲು ಯತ್ನ

ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಲಿರುವ ಬಂಡವಾಳದಲ್ಲಿ ಗಮನಾರ್ಹ ಮೊತ್ತವು ರಾಜ್ಯಕ್ಕೆ ಹರಿದು ಬರಲು ಅಗತ್ಯವಾದ ಎಲ್ಲ ಸೌಲಭ್ಯ ಹಾಗೂ ಬೆಂಬಲ ನೀಡಲು ಸರ್ಕಾರ ಉತ್ಸುಕವಾಗಿರುವುದಾಗಿ ಸಚಿವ ಎಂ.ಬಿ. ಪಾಟೀಲ್‌ ಭರವಸೆ ನೀಡಿದರು.


Click the Play button to hear this message in audio format

ದೇಶದ ಆಹಾರ ಸಂಸ್ಕರಣಾ ವಲಯದಲ್ಲಿ ಕೋಕಾ ಕೋಲಾ ಹೂಡಿಕೆ ಮಾಡಲಿರುವ 25,760 ಕೋಟಿ ಬಂಡವಾಳದಲ್ಲಿ ಬಹುಪಾಲು ಮೊತ್ತವನ್ನು ರಾಜ್ಯಕ್ಕೆ ಆಕರ್ಷಿಸಲು ರಾಜ್ಯ ಸರ್ಕಾರ ಕಂಪನಿಯ ಮನವೊಲಿಸಲು ಸರ್ವ ಪ್ರಯತ್ನ ನಡೆಸಿದೆ.

ದಾವೋಸ್‌ನಲ್ಲಿ ನಡೆಯುತ್ತಿರುವ ವಿಶ್ವ ಆರ್ಥಿಕ ಸಮಾವೇಶದ ಮೊದಲ ದಿನ ಕೋಕ ಕೋಲಾ ಕಂಪನಿಯ ಜಾಗತಿಕ ನೀತಿ ಹಾಗೂ ಸುಸ್ಥಿರತೆಯ ಹಿರಿಯ ಉಪಾಧ್ಯಕ್ಷ ಮೈಕಲ್‌ ಗೋಲ್ಟ್ಜಮನ್‌ ಅವರ ಜೊತೆಗಿನ ಸಭೆಯಲ್ಲಿ ಸಚಿವ ಎಂ.ಬಿ. ಪಾಟೀಲ ಅವರು ಭಾಗವಹಿಸಿ ಚರ್ಚಿಸಿದ್ದು, ಕಂಪನಿಯು ಭಾರತದಲ್ಲಿ ಹೂಡಿಕೆ ಮಾಡಲಿರುವ ಬಂಡವಾಳದಲ್ಲಿ ಗಮನಾರ್ಹ ಮೊತ್ತವು ರಾಜ್ಯಕ್ಕೆ ಹರಿದು ಬರಲು ಅಗತ್ಯವಾದ ಎಲ್ಲ ಸೌಲಭ್ಯ ಹಾಗೂ ಬೆಂಬಲ ನೀಡಲು ಸರ್ಕಾರ ಉತ್ಸುಕವಾಗಿರುವುದಾಗಿ ಎಂದು ಭರವಸೆ ನೀಡಿದರು.

ವಿಜಯಪುರಕ್ಕೆ ಆದ್ಯತೆ

ಕಂಪನಿಯ ಪಾನೀಯ ತಯಾರಿಕೆ ಮತ್ತು ಆಹಾರ ಸಂಸ್ಕರಣಾ ಘಟಕಗಳ ಸ್ಥಾಪನೆಗೆ ವಿಜಯಪುರ ಜಿಲ್ಲೆಯು ಸೂಕ್ತ ಸ್ಥಳವಾಗಿದ್ದು, ಈ ಪ್ರದೇಶದಲ್ಲಿ ಪಾನೀಯ ತಯಾರಿಸುವ ಕೈಗಾರಿಕೆಗಳ ಬಳಕೆಗೆ ಅಗತ್ಯವಾಗಿರುವ ನೀರು ಅಪಾರ ಪ್ರಮಾಣದಲ್ಲಿ ಸುಸ್ಥಿರ ರೀತಿಯಲ್ಲಿ ಲಭ್ಯವಿದೆ. ಬಂಡವಾಳ ಹೂಡಿಕೆ ಮಾಡುವಾಗ ಜಿಲ್ಲೆಗೆ ಆದ್ಯತೆ ನೀಡಲು ಒತ್ತಾಯಿಸಲಾಗಿದೆ ಎಂದರು.

ವಿಮಾನ ನಿಲ್ದಾಣದಲ್ಲಿ 85 ಕೋಟಿ ರೂ. ಹೂಡಿಕೆ

ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗ್ರೌಂಡ್‌ ಹ್ಯಾಂಡ್ಲಿಂಗ್‌ ಉದ್ದೇಶದ ಟೆಂಡರ್‌ ದೊರೆತರೆ ಮೆಂಜಿಸ್‌ ಏವಿಯೇಷನ್‌ 85 ಕೋಟಿ ರೂ. ಹೂಡಿಕೆ ಮಾಡಲಿರುವುದನ್ನು ರಾಜ್ಯದ ನಿಯೋಗದ ಗಮನಕ್ಕೆ ತಂದಿದೆ. ತನ್ನ ಜಾಗತಿಕ ಕಾರ್ಯಾಚರಣೆಗಳಿಗೆ ಪೂರಕವಾಗಿ ರಾಜ್ಯದಲ್ಲಿ ಶ್ರೇಷ್ಠತಾ ಕೇಂದ್ರ ಹಾಗೂ ಜಾಗತಿಕ ಸಾಮರ್ಥ್ಯ ಕೇಂದ್ರಗಳನ್ನು ಸ್ಥಾಪಿಸುವ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ನಿಯೋಗಕ್ಕೆ ತಿಳಿಸಿದೆ.

ಎಥೆನಾಲ್ ಸ್ಥಾವರ ನಿರ್ಮಾಣದ ಚರ್ಚೆ

ʼಕೃಷಿ ರಾಸಾಯನಿಕ ಮತ್ತು ಬೆಳೆ ಸಂರಕ್ಷಣಾ ಕಂಪನಿ ಯುಪಿಎಲ್‌ ಲಿಮಿಟೆಡ್‌, ಕೃಷಿ ಪರಿಹಾರ ಮತ್ತು ನೀರಾವರಿ ತಂತ್ರಜ್ಞಾನಗಳಲ್ಲಿ ಕರ್ನಾಟಕದಲ್ಲಿ ತನ್ನ ವಹಿವಾಟು ವಿಸ್ತರಿಸಲು ಆಸಕ್ತಿ ವ್ಯಕ್ತಪಡಿಸಿದೆ. ರಫ್ತು ಮಾರುಕಟ್ಟೆಗಳಿಗೆ ಮೌಲ್ಯವರ್ಧಿತ ಮೆಕ್ಕೆಜೋಳ ಆಧಾರಿತ ಉತ್ಪನ್ನಗಳನ್ನು ತಯಾರಿಸುವ ಸಾಧ್ಯತೆಗಳನ್ನು ಕಂಪನಿಯು ಪ್ರಸ್ತಾಪಿಸಿದೆ. ಎಥೆನಾಲ್ ರಫ್ತು ಸಾಧ್ಯತೆ ಸೇರಿದಂತೆ ಎಥೆನಾಲ್ ಸ್ಥಾವರ ನಿರ್ಮಾಣದ ಬಗ್ಗೆ ಚರ್ಚಿಸಲಾಗಿದೆ.

ʼಪ್ರವರ್ಧಮಾನಕ್ಕೆ ಬರುತ್ತಿರುವ ತಂತ್ರಜ್ಞಾನ ಕ್ಷೇತ್ರಗಳಲ್ಲಿನ ವಿಶ್ವ ಆರ್ಥಿಕ ವೇದಿಕೆಯ ಕಾರ್ಯಕ್ರಮಗಳ ಪ್ರಾಯೋಗಿಕ ಪರೀಕ್ಷೆಗೆ ಕರ್ನಾಟಕವು ಸೂಕ್ತ ತಾಣವಾಗಿರುವುದನ್ನು ʼಡಬ್ಲ್ಯುಇಎಫ್‌ʼ ನಿಯೋಗದ ಗಮನಕ್ಕೆ ತರಲಾಗಿದೆ. ರಾಜ್ಯದಲ್ಲಿನ ಟಾಟಾ ಸನ್ಸ್‌ನ ಭವಿಷ್ಯದ ಯೋಜನೆಗಳ ಬಗ್ಗೆ ಮಾಹಿತಿ ವಿನಿಮಯ ಮಾಡಿಕೊಳ್ಳಲಾಗಿದೆ. ಎಬಿ ಇನ್‌ಬೆವ್‌ ರಾಜ್ಯದಲ್ಲಿ ತನ್ನ ಕಾರ್ಯಾಚರಣೆಗಳನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆ ಸ್ಪಷ್ಟ ಇಂಗಿತ ವ್ಯಕ್ತಪಡಿಸಿದೆ. ರಾಜ್ಯದಲ್ಲಿ ತನ್ನ ವಹಿವಾಟಿನ ಬಗ್ಗೆ ರಾಜ್ಯ ಸರ್ಕಾರದ ಜೊತೆ ಯೋಜನಾ ಪ್ರಸ್ತಾವ ಹಂಚಿಕೊಳ್ಳುವುದಾಗಿ ನ್ಯಾಚುರಲ್ ಫೈಬರ್ ವೆಲ್ಡಿಂಗ್ನ ಉನ್ನತಾಧಿಕಾರಿಗಳ ತಂಡವು ರಾಜ್ಯದ ನಿಯೋಗಕ್ಕೆ ಭರವಸೆ ನೀಡಿದೆʼ ಎಂದು ಅವರು ತಿಳಿಸಿದರು.

Read More
Next Story