LPG Crisis : ಪಿಡಿಎಸ್ ಮೂಲಕ ಸೀಮೆಎಣ್ಣೆ ವಿತರಣೆಗೆ ಕೇಂದ್ರದ ತಾತ್ಕಾಲಿಕ ಅನುಮತಿ
x

LPG Crisis : ಪಿಡಿಎಸ್ ಮೂಲಕ ಸೀಮೆಎಣ್ಣೆ ವಿತರಣೆಗೆ ಕೇಂದ್ರದ ತಾತ್ಕಾಲಿಕ ಅನುಮತಿ

ಪಶ್ಚಿಮ ಏಷ್ಯಾ ಯುದ್ಧದ ಹಿನ್ನೆಲೆಯಲ್ಲಿ ಅಡುಗೆ ಅನಿಲ (LPG) ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಪರಿಸ್ಥಿತಿ ನಿಭಾಯಿಸಲು ಕರ್ನಾಟಕ ಸೇರಿ 21 ರಾಜ್ಯಗಳಲ್ಲಿ ಸೀಮೆಎಣ್ಣೆ ವಿತರಣೆಗೆ ಕೇಂದ್ರ ಸರ್ಕಾರ ತಾತ್ಕಾಲಿಕ ಅನುಮತಿ ನೀಡಿದೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ಕಳೆದ ಒಂದು ತಿಂಗಳಿನಿಂದ ಉಲ್ಬಣಿಸಿರುವ ಯುದ್ಧದ ನೇರ ಪರಿಣಾಮವಾಗಿ ದೇಶದಲ್ಲಿ ಅಡುಗೆ ಅನಿಲ (ಎಲ್‌ಪಿಜಿ) ಪೂರೈಕೆಯಲ್ಲಿ ತೀವ್ರ ಬಿಕ್ಕಟ್ಟು ಸೃಷ್ಟಿಯಾಗಿದೆ.

ಈ ಅನಿರೀಕ್ಷಿತ ಪರಿಸ್ಥಿತಿಯನ್ನು ನಿಭಾಯಿಸುವ ಹಾಗೂ ಸಾರ್ವಜನಿಕರ ಮೇಲಿನ ಒತ್ತಡವನ್ನು ತಗ್ಗಿಸುವ ಉದ್ದೇಶದಿಂದ ಕೇಂದ್ರ ಸರ್ಕಾರವು ಮಹತ್ವದ ನಿರ್ಧಾರ ಕೈಗೊಂಡಿದೆ. ಎಲ್‌ಪಿಜಿ ಅಭಾವವಿರುವ ಹಿನ್ನೆಲೆಯಲ್ಲಿ, ಪರ್ಯಾಯವಾಗಿ ಸಾರ್ವಜನಿಕ ವಿತರಣಾ ವ್ಯವಸ್ಥೆಯ (ಪಿಡಿಎಸ್) ಮೂಲಕ ಸೀಮೆಎಣ್ಣೆಯನ್ನು ತಾತ್ಕಾಲಿಕವಾಗಿ ವಿತರಿಸಲು ಸರ್ಕಾರ ಅಧಿಕೃತ ಅನುಮತಿ ನೀಡಿದೆ. ಈ ಮೂಲಕ ದೇಶದಾದ್ಯಂತ ಜನಸಾಮಾನ್ಯರ ದೈನಂದಿನ ಅಡುಗೆ ಹಾಗೂ ದೀಪದ ಬಳಕೆಗೆ ಯಾವುದೇ ಅಡೆತಡೆಯಾಗದಂತೆ ಎಚ್ಚರಿಕೆ ವಹಿಸಲಾಗಿದೆ.

ಸೀಮೆಎಣ್ಣೆ ಮುಕ್ತ' ಪ್ರದೇಶಗಳಲ್ಲೂ ವಿತರಣೆಗೆ ಅವಕಾಶ

ವಿಶೇಷವೆಂದರೆ, ಈ ಹಿಂದೆ ಸಂಪೂರ್ಣವಾಗಿ 'ಸೀಮೆಎಣ್ಣೆ ಮುಕ್ತ' ಎಂದು ಅಧಿಕೃತವಾಗಿ ವರ್ಗೀಕರಿಸಲಾಗಿದ್ದ ಪ್ರದೇಶಗಳಲ್ಲೂ ಇದೀಗ ಪರಿಸ್ಥಿತಿಯ ಗಂಭೀರತೆಯನ್ನು ಅರಿತು ಮರು ವಿತರಣೆಗೆ ಸರ್ಕಾರ ಹಸಿರು ನಿಶಾನೆ ತೋರಿದೆ. ಕೇಂದ್ರ ಪೆಟ್ರೋಲಿಯಂ ಸಚಿವಾಲಯವು ಬಿಡುಗಡೆ ಮಾಡಿರುವ ನೂತನ ಅಧಿಸೂಚನೆಯ ಪ್ರಕಾರ, ದೇಶದ 21 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಈ ನಿಯಮ ಅನ್ವಯವಾಗಲಿದೆ. ವಿತರಣಾ ವ್ಯವಸ್ಥೆಯನ್ನು ಸುಗಮಗೊಳಿಸಲು ಪ್ರತಿ ಜಿಲ್ಲೆಗೆ ಎರಡು ಸಾರ್ವಜನಿಕ ವಲಯದ ತೈಲ ಮಾರಾಟ ಕಂಪನಿಗಳನ್ನು ನಿಯೋಜಿಸಲಾಗಿದೆ. ಈ ಕಂಪನಿಗಳು ಕಡ್ಡಾಯವಾಗಿ ಎಲ್ಲ ಸುರಕ್ಷತಾ ನಿಯಮಾವಳಿಗಳನ್ನು ಪಾಲಿಸುವ ಮೂಲಕ ಗರಿಷ್ಠ 5,000 ಲೀಟರ್ ಸೀಮೆಎಣ್ಣೆಯನ್ನು ಸಂಗ್ರಹಿಸಿಟ್ಟುಕೊಳ್ಳಲು ಹಾಗೂ ವಿತರಿಸಲು ಅವಕಾಶ ಕಲ್ಪಿಸಲಾಗಿದೆ.

ಅನುಮತಿ ಪಡೆದ ರಾಜ್ಯಗಳು; ಕೇಂದ್ರಾಡಳಿತ ಪ್ರದೇಶಗಳು

ಎಲ್‌ಪಿಜಿ ಮೇಲಿನ ಅವಲಂಬನೆಯನ್ನು ತಾತ್ಕಾಲಿಕವಾಗಿ ಕಡಿಮೆ ಮಾಡಲು ರೂಪಿಸಿರುವ ಈ ಪರ್ಯಾಯ ವ್ಯವಸ್ಥೆಯು ದಕ್ಷಿಣ ಭಾರತದ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕೇರಳ ರಾಜ್ಯಗಳಲ್ಲಿ ಜಾರಿಗೆ ಬರಲಿದೆ. ಇದರೊಂದಿಗೆ ನವದೆಹಲಿ, ಮಹಾರಾಷ್ಟ್ರ, ಗುಜರಾತ್, ಮಧ್ಯಪ್ರದೇಶ, ಉತ್ತರ ಪ್ರದೇಶ, ರಾಜಸ್ಥಾನ, ಹರಿಯಾಣ, ಪಂಜಾಬ್, ಹಿಮಾಚಲ ಪ್ರದೇಶ, ಉತ್ತರಾಖಂಡ, ಗೋವಾ, ಸಿಕ್ಕಿಂ ಹಾಗೂ ನಾಗಾಲ್ಯಾಂಡ್ ರಾಜ್ಯಗಳಿಗೂ ಸೀಮೆಎಣ್ಣೆ ವಿತರಣೆಗೆ ಅನುಮತಿ ನೀಡಲಾಗಿದೆ. ಜತೆಗೆ, ಕೇಂದ್ರಾಡಳಿತ ಪ್ರದೇಶಗಳಾದ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಚಂಡೀಗಢ, ಪುದುಚೇರಿ, ದಮನ್ ಮತ್ತು ದಿಯು, ದಾದ್ರಾ ಮತ್ತು ನಗರಹವೇಲಿ ಹಾಗೂ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಿಗೂ ಈ ಸೌಲಭ್ಯವನ್ನು ವಿಸ್ತರಿಸಲಾಗಿದ್ದು, ಜನಸಾಮಾನ್ಯರಿಗೆ ತಾತ್ಕಾಲಿಕ ರಿಲೀಫ್ ಒದಗಿಸುವ ಪ್ರಯತ್ನ ಮಾಡಲಾಗಿದೆ.

Read More
Next Story