
'ನಾವು ದೊಡ್ಡ ಅಪರಾಧಿಗಳು' ಎಂದು ನಾಲಿಗೆ ಹರಿಬಿಟ್ಟಿದ್ದ ಲಲಿತ್ ಮೋದಿಯಿಂದ ಕ್ಷಮೆಯಾಚನೆ
ಲಂಡನ್‌ನಲ್ಲಿ ವಿಜಯ್ ಮಲ್ಯ ಜನ್ಮದಿನದ ವೇಳೆ ತಾವಿಬ್ಬರೂ ಭಾರತದ ದೊಡ್ಡ ತಲೆಮರೆಸಿಕೊಂಡ ಅಪರಾಧಿಗಳು ಎಂದು ಲೇವಡಿ ಮಾಡಿದ್ದ ಲಲಿತ್ ಮೋದಿ, ಈಗ ಭಾರತ ಸರ್ಕಾರದ ಕ್ಷಮೆಯಾಚಿಸಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) ಮಾಜಿ ಅಧ್ಯಕ್ಷ ಲಲಿತ್ ಮೋದಿ, ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ವಿಜಯ್ ಮಲ್ಯ ಅವರ ಜನ್ಮದಿನದ ಪಾರ್ಟಿಯಲ್ಲಿ ತಾವು ನೀಡಿದ್ದ ವಿವಾದಾತ್ಮಕ ಹೇಳಿಕೆಗಾಗಿ ಭಾರತ ಸರ್ಕಾರದ ಕ್ಷಮೆಯಾಚಿಸಿದ್ದಾರೆ. ಪಾರ್ಟಿಯ ವೇಳೆ ಲಲಿತ್ ಮೋದಿ ತಮಾಷೆಯಾಗಿ, ತಾವಿಬ್ಬರೂ "ಭಾರತದ ಇಬ್ಬರು ದೊಡ್ಡ ತಲೆಮರೆಸಿಕೊಂಡ ಅಪರಾಧಿಗಳು" (Fugitives) ಎಂದು ಕರೆದುಕೊಂಡಿದ್ದರು.
ವಿವಾದಕ್ಕೆ ಕಾರಣವಾದ ವಿಡಿಯೋ
ಮಾಜಿ ಮದ್ಯದ ದೊರೆ ವಿಜಯ್ ಮಲ್ಯ ಅವರ 70ನೇ ಜನ್ಮದಿನದ ಅಂಗವಾಗಿ ಲಂಡನ್‌ನ ಬೆಲ್‌ಗ್ರೇವ್ ಸ್ಕ್ವೇರ್‌ನಲ್ಲಿರುವ ತಮ್ಮ ನಿವಾಸದಲ್ಲಿ ಲಲಿತ್ ಮೋದಿ ಭರ್ಜರಿ ಪಾರ್ಟಿ ಆಯೋಜಿಸಿದ್ದರು. ಈ ಸಂದರ್ಭದಲ್ಲಿ ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋ ಹಂಚಿಕೊಂಡಿದ್ದ ಮೋದಿ, "ಇಂಟರ್ನೆಟ್‌ನಲ್ಲಿ ಸಂಚಲನ ಮೂಡಿಸಲು ನಾನು ಮತ್ತೆ ಏನನ್ನಾದರೂ ಮಾಡುತ್ತೇನೆ. ಜನ್ಮದಿನದ ಶುಭಾಶಯಗಳು ಗೆಳೆಯ ವಿಜಯ್ ಮಲ್ಯ" ಎಂದು ಬರೆದುಕೊಂಡು, ತಾವಿಬ್ಬರೂ ದೊಡ್ಡ ಅಪರಾಧಿಗಳು ಎಂಬಂತೆ ಬಿಂಬಿಸಿಕೊಂಡಿದ್ದರು.
ಭಾರತ ಸರ್ಕಾರದ ಕೆಂಗಣ್ಣು
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಭಾರತೀಯರು ಸಾಮಾಜಿಕ ಜಾಲತಾಣಗಳಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದರು. ಇವರಿಬ್ಬರೂ ಭಾರತೀಯ ಕಾನೂನು ವ್ಯವಸ್ಥೆಯನ್ನು ಲೇವಡಿ ಮಾಡುತ್ತಿದ್ದಾರೆ ಎಂದು ಆರೋಪಿಸಲಾಗಿತ್ತು. ಕೇಂದ್ರ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಈ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. "ಇಬ್ಬರನ್ನೂ ಭಾರತಕ್ಕೆ ಕರೆತಂದು ಕಾನೂನು ಕ್ರಮ ಎದುರಿಸುವಂತೆ ಮಾಡಲು ಕಾನೂನು ಪ್ರಕ್ರಿಯೆಗಳು ಜಾರಿಯಲ್ಲಿವೆ" ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ಸ್ಪಷ್ಟಪಡಿಸಿದ್ದರು.
ಕ್ಷಮೆಯಾಚಿಸಿದ ಲಲಿತ್ ಮೋದಿ
ಸರ್ಕಾರದ ತೀಕ್ಷ್ಣ ಪ್ರತಿಕ್ರಿಯೆಯ ಬೆನ್ನಲ್ಲೇ ಎಚ್ಚೆತ್ತುಕೊಂಡ ಲಲಿತ್ ಮೋದಿ ತಮ್ಮ ಎಕ್ಸ್ (ಟ್ವಿಟರ್) ಖಾತೆಯಲ್ಲಿ ಕ್ಷಮೆಯಾಚಿಸಿದ್ದಾರೆ. "ನನ್ನ ಹೇಳಿಕೆಯಿಂದ ಯಾರಾದರೂ ನೋವಾಗಿದ್ದರೆ, ವಿಶೇಷವಾಗಿ ನಾನು ಅತ್ಯಂತ ಗೌರವಿಸುವ ಭಾರತ ಸರ್ಕಾರಕ್ಕೆ ನೋವಾಗಿದ್ದರೆ ಕ್ಷಮೆಯಾಚಿಸುತ್ತೇನೆ. ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ, ಯಾರನ್ನೂ ಅವಮಾನಿಸುವ ಉದ್ದೇಶ ನನಗಿರಲಿಲ್ಲ" ಎಂದು ಅವರು ಬರೆದುಕೊಂಡಿದ್ದಾರೆ.

