
ಸಂಸದ ಕೋಟಾ ಶ್ರೀನಿವಾಸ ಪೂಜಾರಿ
ಆರ್‌ಎಸ್‌ಎಸ್ ಟೀಕಿಸುವ ಮುನ್ನ ಯೋಚಿಸಲಿ: ಪ್ರಿಯಾಂಕ್ ಖರ್ಗೆಗೆ ಕೋಟ ಶ್ರೀನಿವಾಸ ಪೂಜಾರಿ ತಾಕೀತು
ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಅನೇಕ ದಶಕಗಳಿಂದ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ಟೀಕೆ ಮಾಡುವವರು ಹುಟ್ಟುವ ಮುನ್ನವೇ ಸಂಘವು ಅಸ್ತಿತ್ವದಲ್ಲಿದೆ ಎಂದು ತಿಳಿಸಿದರು.
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಸಂಸದರಾದ ಕೋಟಾ ಶ್ರೀನಿವಾಸ ಪೂಜಾರಿ ಅವರು ' ದ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ರಾಜ್ಯ ರಾಜಕಾರಣದ ಹಲವು ಪ್ರಚಲಿತ ವಿದ್ಯಮಾನಗಳ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ. ಕರಾವಳಿ ಭಾಗದಲ್ಲಿ ಕೋಮು ಸೌಹಾರ್ದತೆಯ ಸವಾಲುಗಳು, ಪ್ರವಾಸೋದ್ಯಮದ ಅಭಿವೃದ್ಧಿ ಹಾಗೂ ಬಿಜೆಪಿಯ ಆಂತರಿಕ ಶಿಸ್ತಿನ ಬಗ್ಗೆ ಅವರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ.
ವರಿಷ್ಠರ ನಿರ್ಧಾರಕ್ಕೆ ಕಾಯುತ್ತಿವೆ ವರದಿಗಳು
ಇತ್ತೀಚೆಗೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಬಿಜೆಪಿಯ ಆರು ಅಥವಾ ಏಳು ಶಾಸಕರು ಅಡ್ಡ ಮತದಾನ ಮಾಡಿರುವ ಕುರಿತ ಪ್ರಶ್ನೆಗೆ ಉತ್ತರಿಸಿದ ಕೋಟಾ ಶ್ರೀನಿವಾಸ ಪೂಜಾರಿ, "ಅಡ್ಡ ಮತದಾನ ನಡೆದಿರುವುದು ಅಂಕಿ-ಅಂಶಗಳಿಂದ ದೃಢಪಟ್ಟಿದೆ. ಈ ಬಗ್ಗೆ ರಾಜ್ಯ ಘಟಕದ ಅಧ್ಯಕ್ಷರಾದ ಬಿ.ವೈ. ವಿಜಯೇಂದ್ರ ಹಾಗೂ ಹಿರಿಯ ಮುಖಂಡ ಸಿ.ಟಿ. ರವಿ ಅವರ ನೇತೃತ್ವದ ಸಮಿತಿಯು ಪ್ರಾಥಮಿಕ ವರದಿಯನ್ನು ಸಿದ್ಧಪಡಿಸಿದೆ. ಪಕ್ಷದ ಶಿಸ್ತನ್ನು ಉಲ್ಲಂಘಿಸಿರುವವರ ವಿರುದ್ಧ ಕೇಂದ್ರ ವರಿಷ್ಠರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ," ಎಂದು ತಿಳಿಸಿದರು.
ಕರಾವಳಿ ಪ್ರವಾಸೋದ್ಯಮಕ್ಕೆ ಹೊಸ ರೂಪ
ಕರಾವಳಿ ಜಿಲ್ಲೆಗಳ ಅಭಿವೃದ್ಧಿ ಕುರಿತು ಮಾತನಾಡಿದ ಅವರು, "ಉಳ್ಳಾಲದಿಂದ ಕಾರವಾರದವರೆಗಿನ 320 ಕಿಲೋಮೀಟರ್ ಉದ್ದದ ಕರಾವಳಿ ಪ್ರದೇಶವು ಪ್ರವಾಸೋದ್ಯಮಕ್ಕೆ ಅತ್ಯಂತ ಪೂರಕವಾಗಿದೆ. ಸರ್ಕಾರಿ ಭೂಮಿಯನ್ನು ಬಳಸಿಕೊಂಡು ಪ್ರವಾಸೋದ್ಯಮ ಇಲಾಖೆಯ ಮೂಲಕ ಈ ಭಾಗವನ್ನು ಅಭಿವೃದ್ಧಿಪಡಿಸಿದರೆ ಸಾಮಾನ್ಯ ಜನರಿಗೆ ಹೆಚ್ಚಿನ ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರವು ಕೇವಲ ಖಾಸಗಿ ರೆಸಾರ್ಟ್‌ಗಳಿಗೆ ಆದ್ಯತೆ ನೀಡದೆ, ಸಾರ್ವಜನಿಕರ ಹಿತದೃಷ್ಟಿಯಿಂದ ಯೋಜನೆಗಳನ್ನು ರೂಪಿಸಬೇಕು," ಎಂದು ಆಗ್ರಹಿಸಿದರು.
ಕೋಮು ಸಂಘರ್ಷ ಮತ್ತು ಅಣೆಪಟ್ಟಿ
ಕರಾವಳಿ ಜಿಲ್ಲೆಗಳಿಗೆ ಅಂಟಿರುವ 'ಕೋಮು ಸಂಘರ್ಷದ ಜಿಲ್ಲೆ' ಎಂಬ ಅಣೆಪಟ್ಟಿಯ ಬಗ್ಗೆ ಮಾತನಾಡುತ್ತಾ, "ಇದು ರಾಜಕೀಯ ಪ್ರೇರಿತ ಟೀಕೆಯಾಗಿದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ಕರಾವಳಿ ಜಿಲ್ಲೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಭಯೋತ್ಪಾದನಾ ಚಟುವಟಿಕೆಗಳು ಅಥವಾ ಹತ್ಯೆಗಳು ನಡೆದಾಗ ಸಹಜವಾಗಿಯೇ ಸಮಾಜದಲ್ಲಿ ಆಕ್ರೋಶ ವ್ಯಕ್ತವಾಗುತ್ತದೆ. ಇಂತಹ ಘಟನೆಗಳನ್ನು ನಿಯಂತ್ರಿಸಲು ದಕ್ಷ ಅಧಿಕಾರಿಗಳ ನೇಮಕ ಅತ್ಯಗತ್ಯ. ಕೋಮು ಸೌಹಾರ್ದತೆ ಹಾಳಾಗಲು ಕಾರಣವಾಗುವ ಶಕ್ತಿಗಳನ್ನು ಶಾಶ್ವತವಾಗಿ ಮಟ್ಟಹಾಕಬೇಕು," ಎಂದರು.
ಪ್ರಿಯಾಂಕ್ ಖರ್ಗೆ ಪತ್ರಕ್ಕೆ ತಿರುಗೇಟು
ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ನೋಂದಣಿ ವಿಚಾರವಾಗಿ ಸಚಿವ ಪ್ರಿಯಾಂಕ್ ಖರ್ಗೆ ಬರೆದ ಪತ್ರದ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಸಂಘವು ಅನೇಕ ದಶಕಗಳಿಂದ ಸಮಾಜ ಕಟ್ಟುವ ಕೆಲಸ ಮಾಡುತ್ತಿದೆ. ಟೀಕೆ ಮಾಡುವವರು ಹುಟ್ಟುವ ಮುನ್ನವೇ ಸಂಘವು ಅಸ್ತಿತ್ವದಲ್ಲಿದೆ. ಸಚಿವರು ಸಮಾಜದಲ್ಲಿ ಸಂಘರ್ಷ ಉಂಟುಮಾಡುವಂತಹ ಹೇಳಿಕೆಗಳನ್ನು ನೀಡುವ ಬದಲು ತಾಳ್ಮೆಯಿಂದ ವರ್ತಿಸಬೇಕು. ಮುಖ್ಯಮಂತ್ರಿಗಳು ತಮ್ಮ ಸಂಪುಟ ಸಹೋದ್ಯೋಗಿಗಳಿಗೆ ಇಂತಹ ವಿಷಯಗಳಲ್ಲಿ ತಿಳುವಳಿಕೆ ನೀಡಬೇಕು," ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಸಂಪುಟ ವಿಸ್ತರಣೆ
ಕೇಂದ್ರ ಸಚಿವ ಸಂಪುಟ ಪುನಾರಚನೆಯಲ್ಲಿ ರಾಜ್ಯದ ಹಿಂದುಳಿದ ವರ್ಗ ಹಾಗೂ ಪರಿಶಿಷ್ಟ ಜಾತಿಯವರಿಗೆ ಹೆಚ್ಚಿನ ಪ್ರಾತಿನಿಧ್ಯ ಸಿಗುವ ಕುರಿತ ಚರ್ಚೆಗಳಿಗೆ ಪ್ರತಿಕ್ರಿಯಿಸಿದ ಅವರು, "ಯಾರಿಗೆ ಯಾವ ಜವಾಬ್ದಾರಿ ನೀಡಬೇಕು ಎಂಬುದು ಕೇಂದ್ರ ನಾಯಕತ್ವಕ್ಕೆ ಬಿಟ್ಟ ವಿಚಾರ. ನಮ್ಮ ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಪಕ್ಷವು ಉತ್ತಮ ನಿರ್ಧಾರ ಕೈಗೊಳ್ಳಲಿದೆ ಎಂಬ ವಿಶ್ವಾಸ ನನಗಿದೆ," ಎಂದು ಮಾರ್ಮಿಕವಾಗಿ ಉತ್ತರಿಸಿದರು.

