
ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆಯಾಗಿದ್ದ ಕರ್ನಾಟಕದ ವಿದ್ಯಾರ್ಥಿ ಶವವಾಗಿ ಪತ್ತೆ
ಕ್ಯಾಂಪಸ್‌ನಿಂದ ಒಂದು ಕಿಲೋಮೀಟರ್ ದೂರದಲ್ಲಿ ಸಾಕೇತ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಅಂತೆಯೇ ಲೇಕ್ ಅಂಝಾ ಮತ್ತು ಬರ್ಕ್ಲಿ ಹಿಲ್ಸ್ ಪ್ರದೇಶಗಳಲ್ಲಿ ಶೋಧ ನಡೆಸಿದಾಗ ಮೃತದೇಹ ಪತ್ತೆಯಾಘಿದೆ.
ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕಳೆದ ಆರು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರ್ನಾಟಕ ಮೂಲದ 22 ವರ್ಷದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಅವರ ಮೃತದೇಹ ಶನಿವಾರ ಪತ್ತೆಯಾಗಿದೆ.
ಫೆಬ್ರವರಿ 9ರಂದು ನಾಪತ್ತೆಯಾಗಿದ್ದ ಸಾಕೇತ್, ಪ್ರತಿಷ್ಠಿತ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ (ಯುಸಿ ಬರ್ಕ್ಲಿ) ಕೆಮಿಕಲ್ ಮತ್ತು ಬಯೋಮಾಲಿಕ್ಯುಲರ್ ಎಂಜಿನಿಯರಿಂಗ್‌ನಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದರು.
ಸ್ಯಾನ್ ಫ್ರಾನ್ಸಿಸ್ಕೋದಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ದುರ್ಘಟನೆಯನ್ನು ಖಚಿತಪಡಿಸಿದೆ. "ಪೊಲೀಸರು ಸಾಕೇತ್ ಅವರ ಮೃತದೇಹವನ್ನು ಪತ್ತೆಹಚ್ಚಿದ್ದಾರೆ. ಮೃತದೇಹವನ್ನು ಆದಷ್ಟು ಬೇಗ ಭಾರತಕ್ಕೆ ಕಳುಹಿಸಲು ಅಗತ್ಯವಿರುವ ಎಲ್ಲಾ ನೆರವು ನೀಡಲಾಗುವುದು," ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಲ್ಲದೆ, ಈ ಕಠಿಣ ಸಮಯದಲ್ಲಿ ಮೃತರ ಕುಟುಂಬ ಮತ್ತು ಆಪ್ತರಿಗೆ ರಾಯಭಾರ ಕಚೇರಿ ಸಂತಾಪ ಸೂಚಿಸಿದೆ.
ಶೋಧ ಕಾರ್ಯ ನಡೆದಿದ್ದು ಹೇಗೆ?
ಕ್ಯಾಂಪಸ್‌ನಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿ ಸಾಕೇತ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ಹೀಗಾಗಿ ಲೇಕ್ ಅಂಝಾ ಮತ್ತು ಬರ್ಕ್ಲಿ ಹಿಲ್ಸ್ ಪ್ರದೇಶಗಳಲ್ಲಿ ವ್ಯಾಪಕ ಶೋಧ ನಡೆಸಲಾಗಿತ್ತು. ಇದಕ್ಕೂ ಮುನ್ನ, ಟಿಲ್ಡನ್ ರೀಜನಲ್ ಪಾರ್ಕ್ ಬಳಿಯ ನಿವಾಸವೊಂದರ ಹತ್ತಿರ ಅವರ ಪಾಸ್‌ಪೋರ್ಟ್ ಮತ್ತು ಲ್ಯಾಪ್‌ಟಾಪ್ ಇದ್ದ ಬ್ಯಾಗ್ (ಬ್ಯಾಕ್‌ಪ್ಯಾಕ್) ಪತ್ತೆಯಾಗಿತ್ತು. ಸಾಮಾಜಿಕ ಜಾಲತಾಣ ರೆಡ್ಡಿಟ್ (Reddit) ಮೂಲಕವೂ ಸಮುದಾಯದ ಸದಸ್ಯರು ಅವರನ್ನು ಹುಡುಕಲು ಸಂಘಟಿತ ಪ್ರಯತ್ನ ನಡೆಸಿದ್ದರು.
ಬೆಂಗಳೂರಿನಲ್ಲಿ ಶಾಲಾ ಶಿಕ್ಷಣ
ಐಐಟಿ ಮದ್ರಾಸ್‌ನ ಹಳೆಯ ವಿದ್ಯಾರ್ಥಿಯಾಗಿದ್ದ ಸಾಕೇತ್, ತಮ್ಮ ಶಾಲಾ ಶಿಕ್ಷಣವನ್ನು ಬೆಂಗಳೂರಿನ ಶ್ರೀ ವಾಣಿ ಎಜುಕೇಶನ್ ಸೆಂಟರ್‌ನಲ್ಲಿ ಪೂರೈಸಿದ್ದರು. ಲಿಂಕ್ಡ್‌ಇನ್ ಪ್ರೊಫೈಲ್ ಪ್ರಕಾರ, ಹೈಪರ್‌ಲೂಪ್‌ಗಾಗಿ ಮೈಕ್ರೋಚಾನಲ್ ಕೂಲಿಂಗ್ ಸಿಸ್ಟಮ್‌ಗೆ ಸಂಬಂಧಿಸಿದ ಪೇಟೆಂಟ್ ಹೊಂದಿದ್ದ ಆರು ಸಂಶೋಧಕರಲ್ಲಿ ಇವರೂ ಒಬ್ಬರಾಗಿದ್ದರು. ಅವರನ್ನು ಚುರುಕು ಬುದ್ಧಿಯ, ವಿನಮ್ರ ಮತ್ತು ಪ್ರತಿಭಾವಂತ ವ್ಯಕ್ತಿ ಎಂದು ಗುರುತಿಸಲಾಗಿತ್ತು.
ವಿದೇಶದಲ್ಲಿರುವ ಭಾರತೀಯ ವಿದ್ಯಾರ್ಥಿಗಳ ಸುರಕ್ಷತೆಯ ಬಗ್ಗೆ ಲೋಕಸಭೆಯಲ್ಲಿ ಇತ್ತೀಚೆಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ್ದ ವಿದೇಶಾಂಗ ಸಚಿವಾಲಯ, ವಿದ್ಯಾರ್ಥಿಗಳ ರಕ್ಷಣೆಗಾಗಿ ನಿರಂತರ ಸಂಪರ್ಕ ಮತ್ತು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುತ್ತಿರುವುದಾಗಿ ತಿಳಿಸಿತ್ತು.

