
Iran Israel War| ದುಬೈನಲ್ಲಿ ಸಿಲುಕಿದ ಶಾಸಕರು, ಹಿರಿಯ ಅಧಿಕಾರಿಗಳು
ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಯುದ್ಧದ ಭೀತಿಯಿಂದ ಸ್ತಬ್ಧಗೊಂಡಿದೆ. ಈ ಬೆಳವಣಿಗೆಯಿಂದಾಗಿ ರಾಜ್ಯ ಚುನಾವಣಾ ಆಯೋಗ ಆಯುಕ್ತ ಸೇರಿ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ದುಬೈನಲ್ಲಿ ಸಿಲುಕಿದ್ದಾರೆ.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಮತ್ತು ಇರಾನ್ ನಡುವೆ ಉಲ್ಬಣಗೊಂಡಿರುವ ಭೀಕರ ಯುದ್ಧವು ಜಾಗತಿಕ ಮಟ್ಟದಲ್ಲಿ ತಲ್ಲಣ ಸೃಷ್ಟಿಸಿದೆ. ದುಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ಯುದ್ಧದ ಭೀತಿಯಿಂದ ಸ್ತಬ್ಧಗೊಂಡಿದೆ. ಕರ್ನಾಟಕ ರಾಜ್ಯ ಚುನಾವಣಾ ಆಯೋಗದ ಆಯುಕ್ತ ಜಿ.ಎಸ್.ಸಂಗ್ರೇಶಿ ಸೇರಿದಂತೆ ರಾಜಕಾರಣಿಗಳು, ಹಿರಿಯ ಅಧಿಕಾರಿಗಳು ಸೇರಿ ನೂರಾರು ಕನ್ನಡಿಗರು ದುಬೈನಲ್ಲಿ ಸಿಲುಕಿಕೊಂಡಿದ್ದು, ತಾಯ್ನಾಡಿಗೆ ಮರಳಲು ಪ್ರಯತ್ನಿಸುತ್ತಿದ್ದಾರೆ.
ಖಾಸಗಿ ಕಾರ್ಯಕ್ರಮ ಪ್ರಯುಕ್ತ ಜಿ.ಎಸ್.ಸಂಗ್ರೇಶಿ ಮತ್ತು ಅವರ ಕುಟುಂಬ ದುಬೈಗೆ ತೆರಳಿತ್ತು. ಅದೇ ರೀತಿ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಅನುಷ್ಠಾನದ ಉಪಾಧ್ಯಕ್ಷೆ ಪುಷ್ಪ ಅಮರನಾಥ್ ಹಾಗೂ ಅವರ ಕುಟುಂಬ, ಕಾಂಗ್ರೆಸ್ ಶಾಸಕರಾದ ನಾ.ರಾ.ಭರತ್ ರೆಡ್ಡಿ, ಎಸ್.ಆರ್. ಶ್ರೀನಿವಾಸ್ ಹಾಗೂ ಜೆಡಿಎಸ್ ಎಂಎಲ್ಸಿ ಎಸ್.ಎಲ್. ಭೋಜೇಗೌಡ ಸೇರಿ ಹಲವರು ಇದೀಗ ದುಬೈನಲ್ಲಿ ಸಿಲುಕಿದ್ದಾರೆ.
ʼದ ಫೆಡರಲ್ ಕರ್ನಾಟಕʼದ ಜತೆ ಮಾತನಾಡಿದ ರಾಜ್ಯ ಚುನಾವಣಾ ಆಯೋಗ ಆಯುಕ್ತ ಜಿ.ಎಸ್.ಸಂಗ್ರೇಶಿ, ನಾವು ಭಾನುವಾರ ಬೆಂಗಳೂರಿಗೆ ಮರಳಬೇಕಿತ್ತು. ಆದರೆ, ಯುದ್ಧದ ಕಾರಣದಿಂದ ವಿಮಾನ ಸೇವೆ ರದ್ದಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತೋರುತ್ತಿದ್ದರೂ ವಿಮಾನ ಸಂಚಾರ ಯಾವಾಗ ಆರಂಭವಾಗುತ್ತದೆ ಎಂಬ ಮಾಹಿತಿ ಇಲ್ಲ. ಸೋಮವಾರ ಅಥವಾ ಮಂಗಳವಾರ ವಿಮಾನ ವ್ಯವಸ್ಥೆಯಾಗಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಮ್ಮೊಂದಿಗೆ ಮಾತನಾಡಿದ್ದು, ವಿಮಾನ ವ್ಯವಸ್ಥೆಯ ಅಶ್ವಾಸನೆ ನೀಡಿದ್ದಾರೆ. ದುಬೈನಲ್ಲಿ ಯಾವುದೇ ಸಮಸ್ಯೆ ಇಲ್ಲ. ಎಲ್ಲರೂ ಆರಾಮಾಗಿದ್ದೇವೆ. ವಿಮಾನ ವ್ಯವಸ್ಥೆಯಾದ ಬಳಿಕ ಹೊರಡುತ್ತೇವೆ ಎಂದು ಹೇಳಿದರು.
ಎಸ್.ಎಲ್. ಭೋಜೇಗೌಡ ತಮ್ಮ ಕುಟುಂಬದೊಂದಿಗೆ ದಕ್ಷಿಣ ಆಫ್ರಿಕಾದ ಜೋಹಾನ್ಸ್‌ಬರ್ಗ್‌ನಿಂದ ದುಬೈ ಮಾರ್ಗವಾಗಿ ಭಾರತಕ್ಕೆ ಮರಳುತ್ತಿದ್ದರು. ಆದರೆ, ದುಬೈ ವಿಮಾನ ನಿಲ್ದಾಣ ತಲುಪಿದ ತಕ್ಷಣ, ಇರಾನ್ ನಡೆಸಿದ ವಾಯುದಾಳಿ ಮತ್ತು ಕ್ಷಿಪಣಿ ದಾಳಿ ಹಿನ್ನೆಲೆಯಲ್ಲಿ ಎಲ್ಲಾ ವಿಮಾನಗಳ ಹಾರಾಟ ರದ್ದುಗೊಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ವಿಮಾನ ನಿಲ್ದಾಣದಲ್ಲಿ ಸಾವಿರಾರು ಪ್ರಯಾಣಿಕರು ಅನಿಶ್ಚಿತತೆಯಲ್ಲಿ ಕಾಲ ಕಳೆಯುವಂತಾಗಿದೆ ಎಂದರು.
ದುಬೈ ವಿಮಾನ ನಿಲ್ದಾಣದ ಸಮೀಪ ಕ್ಷಿಪಣಿಗಳ ದಾಳಿ ನಡೆಯುತ್ತಿರುವ ಬಗ್ಗೆ ವರದಿಗಳಿವೆ. ನಾಗರಿಕ ವಿಮಾನಗಳು ಆಕಸ್ಮಿಕವಾಗಿ ಕ್ಷಿಪಣಿ ದಾಳಿಗೆ ತುತ್ತಾಗಬಹುದು ಎಂಬ ಭೀತಿಯಿಂದಾಗಿ ವಿಮಾನಗಳನ್ನು ರದ್ದು ಮಾಡಲಾಗಿದೆ. ಕೇವಲ ಗಣ್ಯರಷ್ಟೇ ಅಲ್ಲದೆ, ಕೆಲಸದ ನಿಮಿತ್ತ ದುಬೈಗೆ ತೆರಳಿದ್ದ ನೂರಾರು ಕನ್ನಡಿಗರು ಮತ್ತು ರಜೆ ಕಳೆಯಲು ಹೋದ ಪ್ರವಾಸಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

