
ಎಲ್ಲ ದೇಶಗಳಿಗಿಂತ ಕರ್ನಾಟಕವೇ ಸ್ವರ್ಗ; ಬಹ್ರೇನ್‌ನಲ್ಲಿ ಸಿಲುಕಿದ ಕನ್ನಡಿಗನ ಮನದಾಳ
ಬಹ್ರೇನ್‌ನಲ್ಲಿ ಕಳೆದ 12 ವರ್ಷಗಳಿಂದ ವಾಸವಾಗಿರುವ ಮಂಗಳೂರು ಮೂಲದ ಸಫ್ವಾನ್ ಅವರು ಯುದ್ಧಪೀಡಿತ ಬಹ್ರೇನ್‌ನಿಂದಲೇ ಮಾತನಾಡಿದ್ದು, ಇರಾನ್-ಇಸ್ರೇಲ್ ಯುದ್ಧದ ಭಯಾನಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ.
ಜಗತ್ತಿನ ಹಲವು ರಾಷ್ಟ್ರಗಳಲ್ಲಿ ಯುದ್ಧದ ಭೀತಿ ಆವರಿಸಿದೆ. ರಷ್ಯಾ-ಉಕ್ರೇನ್, ಆಫ್ಘಾನಿಸ್ತಾನ-ಪಾಕಿಸ್ತಾನದ ಬಳಿಕ ಇದೀಗ ಇರಾನ್- ಇಸ್ರೇಲ್ ನಡುವಿನ ಕದನ ಮಧ್ಯಪ್ರಾಚ್ಯದ ರಾಷ್ಟ್ರಗಳಲ್ಲಿ ತಲ್ಲಣ ಸೃಷ್ಟಿಸಿದೆ. ಇಸ್ರೇಲ್-ಅಮೆರಿಕ ಜಂಟಿಯಾಗಿ ನಡೆಸಿದ ವಾಯುದಾಳಿಯಲ್ಲಿ ಇರಾನ್ ಪರಮೋಚ್ಛ ನಾಯಕ ಅಯಾತೊಲ್ಲಾ ಅಲಿ ಖಮೇನಿಯನ್ನು ಹತ್ಯೆ ಮಾಡಿದ ಘಟನೆ ಮಧ್ಯಪ್ರಾಚ್ಯದಲ್ಲಿ ಯುದ್ಧ ಕಾರ್ಮೋಡ ಕವಿಯುವಂತೆ ಮಾಡಿದೆ.
ಈಗಾಗಲೇ ಇಸ್ರೇಲ್-ಅಮೆರಿಕದ ದಾಳಿಗೆ ಪ್ರತೀಕಾರವಾಗಿ ಇರಾನ್ ಸೇನಾಪಡೆ ಗಲ್ಫ್ ದೇಶಗಳಲ್ಲಿರುವ ಅಮೆರಿಕದ ಸೇನಾ ನೆಲೆಗಳ ಮೇಲೆ ಕ್ಷಿಪಣಿ ದಾಳಿ ಮುಂದುವರಿಸಿದೆ. ತಮ್ಮ ಪರಮೋಚ್ಛ ನಾಯಕನ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಶಪಥ ಮಾಡಿದೆ. ಈ ನಡುವೆ, ಪ್ರವಾಸ ಹಾಗೂ ಉದ್ಯೋಗದ ನಿಮಿತ್ತ ಇರಾನ್, ಸೌದಿ ಅರೆಬಿಯಾ, ದುಬೈ, ಬಹ್ರೇನ್ ಸೇರಿದಂತೆ ಹಲವು ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಸ್ಥಿತಿ ಹೇಳತೀರದಾಗಿದೆ.
ಬಹ್ರೇನ್‌ನಲ್ಲಿ ಸಿಲುಕಿದ ಕನ್ನಡಿಗರು
ಇರಾನ್-ಇಸ್ರೇಲ್ ಸಂಘರ್ಷದಿಂದ ಭಯಭೀತರಾಗಿರುವ ಕನ್ನಡಿಗರಿಗೆ ವಿದೇಶ ಪ್ರಯಾಣವೇ ಭಯ ಹುಟ್ಟಿಸುವಂತಾಗಿದೆ. ಭಾರತಕ್ಕಿಂತ ನೆಮ್ಮದಿಯಿಂದಿರುವ ದೇಶ ಬೇರೊಂದಿಲ್ಲ, ಅದರಲ್ಲೂ ಕರ್ನಾಟಕವೇ ಸ್ವರ್ಗ ಎಂದು ಬಹ್ರೇನ್‌ನಲ್ಲಿ ನೆಲೆಸಿರುವ ಕನ್ನಡಿಗರು ʼದ ಫೆಡರಲ್ ಕರ್ನಾಟಕʼದ ತಮ್ಮ ಮನದಾಳ ಹಂಚಿಕೊಂಡಿದ್ದಾರೆ.
ಬಹ್ರೇನ್‌ನಲ್ಲಿ ಕಳೆದ 12 ವರ್ಷಗಳಿಂದ ವಾಸವಾಗಿರುವ ಮಂಗಳೂರು ಮೂಲದ ಸಫ್ವಾನ್ ಅವರು ಯುದ್ಧಪೀಡಿತ ಬಹ್ರೇನ್‌ನಿಂದಲೇ ಮಾತನಾಡಿದ್ದು, ಇರಾನ್-ಇಸ್ರೇಲ್ ಯುದ್ಧದ ಭಯಾನಕ ಪರಿಸ್ಥಿತಿಯನ್ನು ತೆರೆದಿಟ್ಟಿದ್ದಾರೆ. ಬಹ್ರೇನ್ ನಲ್ಲಿ ನಿರ್ಮಾಣವಾಗಿರುವ ಆತಂಕದ ವಾತಾವರಣವನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ.
"ಬಹ್ರೇನ್‌ನ ಪ್ರಮುಖ ನಗರ ಮನಾಮದಲ್ಲಿ ನಾನು ವಾಸವಾಗಿದ್ದೇನೆ. ಹೆಂಡತಿ, ಮಗು ಮಂಗಳೂರಿಗೆ ಕೆಲ ದಿನಗಳ ಹಿಂದೆ ತೆರಳಿದ್ದಾರೆ. ಇರಾನ್-ಇಸ್ರೇಲ್ ಸಂಘರ್ಷದಿಂದ ಬಹ್ರೇನ್‌ನಲ್ಲಿ ಎಲ್ಲಿ ನೋಡಿದರೂ ಕ್ಷಿಪಣಿಗಳ ಸ್ಫೋಟದ ಸದ್ದು ಕೇಳುತ್ತಿದೆ. ನೆಮ್ಮದಿಯಿಂದ ನಿದ್ದೆ ಮಾಡುವುದಕ್ಕೂ ಆಗುತ್ತಿಲ್ಲ. ಯಾವ ಕ್ಷಣದಲ್ಲಿ ಯಾವ ಕ್ಷಿಪಣಿ ಬಂದು ಬೀಳುತ್ತದೋ ಎಂಬ ದುಗುಡ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ. ಮನಾಮದಲ್ಲಿ ಜನ ರಸ್ತೆಗಳಿಗೆ ಇಳಿಯುತ್ತಿಲ್ಲ. ಅಂಗಡಿಗಳು ಮುಚ್ಚಿವೆ." ಎಂದು ಖುದ್ದು ಅಲ್ಲಿನ ಚಿತ್ರಣ ತೋರಿಸಿದರು.
ಬಹ್ರೇನ್‌ನ ಪನಾಮ ನಗರದಲ್ಲಿ ಆತಂಕದ ವಾತಾವರಣ
ಕ್ಷಣ ಕ್ಷಣಕ್ಕೂ ಎಚ್ಚರಿಕೆಯ ಸೂಚನೆ
"ಮನಾಮ ಆಡಳಿತವು ಕ್ಷಣ ಕ್ಷಣಕ್ಕೂ ಎಚ್ಚರಿಕೆಯ ಸಂದೇಶ ನೀಡುತ್ತಿದೆ. ಸೈರನ್‌ಗಳನ್ನು ಮೊಳಗಿಸುತ್ತಿದೆ. ಯಾರೂ ಕೂಡ ಹೊರಗೆ ಬಾರದಂತೆ ಸೂಚಿಸಿರುವ ಹಿನ್ನೆಲೆಯಲ್ಲಿ ನಾವು ಮನೆಯಲ್ಲೇ ಮೊಕ್ಕಾಂ ಹೂಡಿದ್ದೇವೆ." ಎಂದು ಸಫ್ವಾನ್ ವಿವರಿಸಿದರು.
"ನಾವಿರುವ ಜಾಗದ ಒಂದು ಕಿಲೋ ಮೀಟರ್ ದೂರದಲ್ಲಿಯೇ ಅಮೆರಿಕಾದ ಸೇನಾ ನೆಲೆಯಿದೆ. ಜತೆಗೆ ಈ ದೇಶದಲ್ಲಿ ತೈಲ ಶೇಖರಣೆಯೂ ಹೆಚ್ಚಾಗಿದೆ, ಇಲ್ಲಿ ಏನಾದರೂ ದಾಳಿಯಾದರೆ ಸಾಕಷ್ಟು ಅನಾಹುತ ಸಂಭವಿಸಲಿದೆ. ನಾವು ಯಾವಾಗ ಭಾರತಕ್ಕೆ ಅದರಲ್ಲೂ ಕರ್ನಾಟಕಕ್ಕೆ ವಾಪಸಾಗುತ್ತೇವೋ ಎಂದು ಕ್ಷಣ ಕ್ಷಣಕ್ಕೂ ಪರಿತಪಿಸುತ್ತಿದ್ದೇವೆ. ಇಲ್ಲಿನ ಪರಿಸ್ಥಿತಿ ನೋಡಿದರೆ ನಾವು ಯಾವ ದೇಶದಲ್ಲಿದ್ದರೂ ಕರ್ನಾಟಕವೇ ಸ್ವರ್ಗ ಎಂಬುದು ಮನವರಿಕೆಯಾಗುತ್ತಿದೆ ಎಂದು ಹೇಳಿದರು.
"ಊರಿನಲ್ಲಿರುವ ಚಿಕ್ಕ ಮಗಳು ಯಾವಾಗ ಬರುತ್ತೀಯಾ ಎಂದು ಕೇಳುತ್ತಾರೆ, ನನಗೆ ಏನು ಉತ್ತರ ಕೊಡಬೇಕು ಎಂದು ಗೊತ್ತಾಗುತ್ತಿಲ್ಲ. ಎಲ್ಲಾ ಸರಿಹೋದ ಮೇಲೆ ಮೊದಲು ಕರ್ನಾಟಕಕ್ಕೆ ಬಂದು, ನಂತರ ಮುಂದೆ ಏನು ಮಾಡಬೇಕು ಎಂದು ಯೋಚನೆ ಮಾಡುತ್ತೇವೆ. ನಮ್ಮ ಭಾರತ ಹಾಗೂ ಕರ್ನಾಟಕವು ಇನ್ನೊಬ್ಬರಿಗೆ ಸಹಾಯ ಮಾಡುವ ವಿಶಾಲ ಮನೋಭಾವ ಇದೆ, ಆದರೆ ಬೇರೆ ದೇಶಗಳಲ್ಲಿ ಆ ರೀತಿ ಇಲ್ಲ." ಎಂದರು.
"ಈಗಿನ ಯುದ್ಧದ ಸನ್ನಿವೇಶ ನೋಡಿದರೆ ಗಲ್ಫ್ ದೇಶಗಳಲ್ಲಿ ಹೆಚ್ಚು ದುಡ್ಡು ಸಂಪಾದನೆ ಮಾಡುವ ಆಸೆ ಬಿಟ್ಟು ಸ್ವರ್ಗದಂತಿರುವ ಕರ್ನಾಟಕದಲ್ಲೇ ವಾಸ ಮಾಡೋಣ ಅನ್ನಿಸುತ್ತಿದೆ. ಮನೆಯ ಒಳಗಡೆ, ಹೊರಗಡೆ ಏನಾದರೂ ಶಬ್ದ ಬಂದರೆ ಆತಂಕ ಎದುರಾಗುತ್ತದೆ. ಕ್ಷಿಪಣಿ ಬಂದು ಬೀಳುವ ಭಯ ಕಾಡುತ್ತಿದೆ ಎಂದು ಸಫ್ವಾನ್ ಹೇಳಿದರು.
ಬಹ್ರೇನ್‌ನಲ್ಲಿರುವ ಕನ್ನಡಿ ಸಫ್ವಾನ್ ʼದ ಫೆಡರಲ್ ಕರ್ನಾಟಕʼಕ್ಕೆ ನೀಡಿದ ಸಂದರ್ಶನದ ವಿಡಿಯೊ ಇಲ್ಲಿದೆ.
ತ್ವರಿತವಾಗಿ ಸ್ಥಳಾಂತರಕ್ಕೆ ಮನವಿ
ಬಹ್ರೇನ್‌ನಲ್ಲಿ ನಾವು ಭಯದಲ್ಲೇ ಬದುಕುತ್ತಿದ್ದೇವೆ. ಪರಿಸ್ಥಿತಿ ಕೈ ಮೀರುವ ಒಳಗಾಗಿ ನಮ್ಮನ್ನು ಸ್ಥಳಾಂತರ ಮಾಡಬೇಕು ಎಂದು ಸಫ್ವಾನ್ ಅವರು ಪ್ರಧಾನಿ ಮೋದಿ ಹಾಗೂ ಕರ್ನಾಟಕ ಸರ್ಕಾರಕ್ಕೆ ಮನವಿ ಮಾಡಿದರು.
ಬಹ್ರೇನ್ ನಗರದಲ್ಲಿ ಹೆಚ್ಚು ಜನಸಂಖ್ಯೆ ಇಲ್ಲ, ಆದರೆ ತೈಲ ಶೇಖರಣೆ ಜಾಗಗಳು ಹೆಚ್ಚಾಗಿವೆ. ಒಂದು ವೇಳೆ ಕ್ಷಿಪಣಿ ದಾಳಿಯಾಗಿ ತೈಲ ಸ್ಫೋಟಗೊಂಡರೆ ಹೆಚ್ಚು ಅನಾಹುತ ಆಗಲಿದೆ. ಈಗಾಗಲೇ ನಾವು ಭಾರತದ ರಾಯಭಾರಿ ಕಚೇರಿಗೆ ನಮ್ಮ ವಿಳಾಸ ಮತ್ತು ಮಾಹಿತಿ ನೀಡಿದ್ದೇವೆ, ಏನೂ ಆಗಲ್ಲ ಎಂಬ ನಂಬಿಕೆ ಇದೆ. ಇಲ್ಲಿನ ಆಡಳಿತ ನಾಗರಿಕರ ರಕ್ಷಣೆಗೆ ಹೆಚ್ಚು ಆದ್ಯತೆ ನೀಡುತ್ತದೆ ಎಂದು ಹೇಳಿದರು.

