
Sunita Williams : ಕಲ್ಪನಾ ಚಾವ್ಲಾ ಬಳಿಕ ಸುನೀತಾ ವಿಲಿಯಮ್ಸ್; ಭಾರತದ ಖ್ಯಾತಿ ಗಗನಕ್ಕೇರಿಸಿದ ಗಗನ ಯಾತ್ರಿಗಳು
ಗುಜರಾತ್ ಮೂಲದ ಸುನಿತಾ ಅವರು ಸುದೀರ್ಘ ಕಾಲ ಬಾಹ್ಯಾಕಾಶ ಸಂಶೋಧನೆ ಹಾಗೂ ನಡಿಗೆಯನ್ನು ಪೂರ್ಣಗೊಳಿಸಿದ ಖ್ಯಾತಿ ಹೊಂದಿದ್ದಾರೆ. ಈ ಸಮಯದಲ್ಲಿ ಭಾರತದ ಇನ್ನೊಬ್ಬರು ಗಗನಯಾತ್ರಿ ದಿವಂಗತ ಕಲ್ಪನಾ ಚಾವ್ಲಾ ಅವರನ್ನು ಸ್ಮರಿಸಲೇಬೇಕು.
ನಾಸಾದ ಖಗೋಳ ಸಂಶೋಧಕಿ ಸುನಿತಾ ವಿಲಿಯಮ್ಸ್ ಹಾಗೂ ಅಮೆರಿಕದ ಗಗನಯಾತ್ರಿ ಬುಚ್ ವಿಲ್ಮೋರ್ ಅವರನ್ನು ಒಳಗೊಂಡು ಸ್ಪೇಸ್ ಎಕ್ಸ್ನ ಡ್ರ್ಯಾಗನ್ ಕ್ಯಾಪ್ಸೂಲ್ ಬುಧವಾರ ಮುಂಜಾನೆ ಭೂಮಿಯಲ್ಲಿ ಇಳಿದಿದೆ.
ಸುಮಾರು 9 ತಿಂಗಳ ಕಾಲ ಬಾಹ್ಯಾಕಾಶ ನಿಲ್ದಾಣದಲ್ಲಿದ್ದು ಹಲವಾರು ಸಂಶೋಧನೆಗಳನ್ನು ನಡೆಸಿರುವ ಅವರು ಮಾನವ ಕುಲಕ್ಕೆ ಅಪಾರ ಕೊಡುಗೆಗಳನ್ನು ನೀಡಿದ್ದಾರೆ. ಈ ಯಾನದಲ್ಲಿ ಅತಿ ಹೆಚ್ಚು ಗಮನ ಸೆಳೆದಿರುವುದು ಭಾರತೀಯ ಮೂಲದ ಸುನಿತಾ ವಿಲಿಯಮ್ಸ್. ಮಹಿಳೆಯಾಗಿ ಮೂರು ಬಾರಿ ಬಾಹ್ಯಾಕಾಶ ಯಾನ ನಡೆಸಿರುವ ಜತೆಗೆ ಅ ಅವಧಿಯಲ್ಲಿ ಅವರು ಹಲವಾರು ಮೈಲುಗಲ್ಲುಗಳನ್ನು ಸ್ಥಾಪಿಸಿದ್ದಾರೆ.
ಸುನಿತಾ ವಿಲಿಯಮ್ಸ್ ಅವರ ಆಗಮನ ಭಾರತೀಯರ ಪಾಲಿಗೆ ಹೆಮ್ಮೆಯ ಸಂಗತಿ. ಗುಜರಾತ್ ಮೂಲದ ಅವರು ಸುದೀರ್ಘ ಕಾಲ ಬಾಹ್ಯಾಕಾಶ ಸಂಶೋಧನೆ ಹಾಗೂ ನಡಿಗೆಯನ್ನು ಪೂರ್ಣಗೊಳಿಸಿದ ಖ್ಯಾತಿ ಪಡೆದುಕೊಂಡಿದ್ದಾರೆ.
ಅವರ ಈ ಉತ್ಕೃಷ್ಟ ಸಾಧನೆಯ ಸಮಯದಲ್ಲಿ ಭಾರತ ಮೂಲದ ಇನ್ನೊಬ್ಬರು ಗಗನಯಾತ್ರಿ ದಿವಂಗತ ಕಲ್ಪನಾ ಚಾವ್ಲಾ ಅವರನ್ನು ಸ್ಮರಿಸಲೇಬೇಕು. ನಾಸಾದ ಸಂಶೋಧಕಿಯೇ ಆಗಿದ್ದ ಅವರು ಈ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿ ತಮ್ಮ ಹೆಸರನ್ನು ಚಿರಸ್ಥಾಯಿಯಾಗಿಸಿಕೊಂಡಿದ್ದರು.
ಬಾಹ್ಯಾಕಾಶ ಸಂಶೋಧನೆಯಲ್ಲಿ ಭಾರತೀಯ ಮೂಲದ ಈ ಇಬ್ಬರು ಮಹಿಳೆಯರು ತಮ್ಮ ಅಮೋಘ ಸಾಧನೆಗಳಿಂದ ಪ್ರಪಂಚವನ್ನೇ ಅಚ್ಚರಿಗೊಳಿಸಿದ್ದಾರೆ. ಆದರೆ, ಕಲ್ಪನಾ ಅವರು ಈಗ ಇಲ್ಲ ಎಂಬುದೇ ಬೇಸರದ ವಿಷಯ.
ಕಲ್ಪನಾ ಚಾವ್ಲಾ
ಕಲ್ಪನಾ ಚಾವ್ಲಾ (1962–2003) ಬಾಹ್ಯಾಕಾಶಕ್ಕೆ ಹಾರಿದ ಮೊದಲ ಭಾರತೀಯ ಮೂಲದ ಮಹಿಳೆ ಮತ್ತು ಅಮೆರಿಕದ ಪೌರತ್ವ ಪಡೆದ ಮೊದಲ ಭಾರತೀಯ ಮಹಿಳೆ. ಹರಿಯಾಣದ ಕರ್ನಾಲ್ ಜಿಲ್ಲೆಯಲ್ಲಿ ಜನಿಸಿದ್ದ ಕಲ್ಪನಾ ಅವರು ಪಂಜಾಬ್ ಎಂಜಿನಿಯರಿಂಗ್ ಕಾಲೇಜಿನಿಂದ ಏರೋಸ್ಪೇಸ್ ಎಂಜಿನಿಯರಿಂಗ್‌ನಲ್ಲಿ ಪದವಿ ಪಡೆದವರು. ನಂತರ ಅಮೆರಿಕದ ಕೊಲೊರಾಡೊ ವಿಶ್ವವಿದ್ಯಾಲಯದಿಂದ ಮಾಸ್ಟರ್ಸ್ ಮತ್ತು ಪಿಎಚ್ಡಿ ಪದವಿಗಳನ್ನು ಗಳಿಸಿದ್ದರು.
1997ರಲ್ಲಿ, ಕಲ್ಪನಾ ಚಾವ್ಲಾ ಅವರು ನಾಸಾ(NASA)ದ STS-87 ಮಿಷನ್‌ನಲ್ಲಿ ಬಾಹ್ಯಾಕಾಶಕ್ಕೆ ತೆರಳಿದ್ದರು. ಅಲ್ಲಿ 372 ಗಂಟೆಗಳನ್ನು ಕಳೆದು ಮತ್ತು 10.4 ದಶಲಕ್ಷ ಮೈಲುಗಳನ್ನು ಪ್ರಯಾಣಿಸಿ ಭೂಮಿಗೆ ಮರಳಿದ್ದರು. ಅವರ ಎರಡನೇ ಬಾಹ್ಯಾಕಾಶ ಯಾನವು 2003ರಲ್ಲಿ ನಡೆದಿತ್ತು. STS-107 ಮಿಷನ್ ಮೂಲಕ ಮತ್ತೊಂದು ಯಾನ ಕೈಗೊಂಡಿದ್ದರು. ದುರದೃಷ್ಟವಶಾತ್, ಅವರು ಬರುತ್ತಿದ್ದ ಕೊಲಂಬಿಯಾ ಬಾಹ್ಯಾಕಾಶ ನೌಕೆ ಅಪಘಾತಕ್ಕೆ ಒಳಗಾಗಿ ಕಲ್ಪನಾ ಸೇರಿದಂತೆ ಏಳು ಖಗೋಳವಿಜ್ಞಾನಿಗಳು ಮೃತಪಟ್ಟಿದ್ದರು.
ಸುನಿತಾ ವಿಲಿಯಮ್ಸ್
ಸುನಿತಾ ವಿಲಿಯಮ್ಸ್ ಅವರು ಗುಜರಾತ್ ಮೂಲದ ಭಾರತೀಯ-ಅಮೆರಿಕನ್ ಖಗೋಳವಿಜ್ಞಾನಿ. 1965ರಲ್ಲಿ ಅಮೆರಿಕದ ಒಹಿಯೋ ರಾಜ್ಯದಲ್ಲಿ ಅವರು ಜನಿಸಿದವರು. ಅವರ ತಂದೆ ಡಾ. ದೀಪಕ ಪಾಂಡ್ಯಾ ಗುಜರಾತ್‌ನಿಂದ ಅಮೆರಿಕಕ್ಕೆ ವಲಸೆ ಹೋಗಿದ್ದರು. ಸುನಿತಾ ಅವರು ಯುನೈಟೆಡ್ ಸ್ಟೇಟ್ಸ್ ನೇವಲ್ ಅಕಾಡೆಮಿಯಿಂದ ಪದವಿ ಪಡೆದು ನಾಸಾ ಸೇರಿದ್ದರು.
2006ರಲ್ಲಿ ಸುನಿತಾ ವಿಲಿಯಮ್ಸ್ ಮೊದಲ ಬಾರಿಗೆ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಹಾರಿದ್ದರು. 195 ದಿನಗಳನ್ನು ಬಾಹ್ಯಾಕಾಶದಲ್ಲಿ ಸಂಶೋಧನೆ ಮಾಡಿದ್ದರು. ಈ ವೇಳೆಯೇ ಅವರು ಬಾಹ್ಯಾಕಾಶದಲ್ಲಿ ದೀರ್ಘಕಾಲ ಕಳೆದ ಮಹಿಳೆಯೆಂಬ ದಾಖಲೆ ಸೃಷ್ಟಿಸಿದ್ದರು. ಅವರು 2012ರಲ್ಲಿ ಮತ್ತೊಮ್ಮೆ ಅಂತರಿಕ್ಷಕ್ಕೆ ಹಾರಿದ್ದರು. ಈ ವೇಳೆ ಬಾಹ್ಯಾಕಾಶದಲ್ಲಿ 50 ಗಂಟೆಗಳಿಗೂ ಹೆಚ್ಚು ಸಮಯವನ್ನು ನಡಿಗೆಯಲ್ಲೇ ಕಳೆದಿದ್ದರು. ಇದೀಗ 9 ತಿಂಗಳ ಕಾಲ ಸಂಶೋಧನೆ ನಡೆಸಿ ವಾಪಸಾಗುತ್ತಿದ್ದಾರೆ.
ಬಾಹ್ಯಾಕಾಶ ವಿಜ್ಞಾನಕ್ಕೆ ಕೊಡುಗೆಗಳು
ಈ ಇಬ್ಬರು ಖಗೋಳಯಾತ್ರಿಗಳು ಬಾಹ್ಯಾಕಾಶ ಸಂಶೋಧನೆಗೆ ಭಾರೀ ಕೊಡುಗೆ ನೀಡಿದ್ದಾರೆ. ಕಲ್ಪನಾ ಚಾವ್ಲಾ ತಮ್ಮ ಮಿಷನ್‌ಗಳಲ್ಲಿ ಮೈಕ್ರೋಗ್ರಾವಿಟಿ ಮತ್ತು ರೋಬೋಟಿಕ್ಸ್ ಕುರಿತು ಸಂಶೋಧನೆ ನಡೆಸಿ, ನಾಸಾದ ವೈಜ್ಞಾನಿಕ ಉನ್ನತಿಯಲ್ಲಿ ಸಹಾಯ ಮಾಡಿದ್ದಾರೆ. ಸುನಿತಾ ವಿಲಿಯಮ್ಸ್ ನಾಸಾದ ಹೊಸ ಬಾಹ್ಯಾಕಾಶ ತಂತ್ರಜ್ಞಾನಗಳನ್ನು ಪರೀಕ್ಷಿಸಲು, ಜೀವಶಾಸ್ತ್ರ ಸಂಬಂಧಿತ ಪ್ರಯೋಗಗಳನ್ನು ನಡೆಸಲು, ಮತ್ತು ಬಾಹ್ಯಾಕಾಶ ನಡೆಸಿದ್ದಾರೆ (spacewalks).
ವಿಶ್ವಕ್ಕೆ ಪ್ರೇರಣೆ
ಕಲ್ಪನಾ ಚಾವ್ಲಾ ಈಗಲೂ ಪರಿಶ್ರಮ ಮತ್ತು ತ್ಯಾಗದ ಪ್ರತಿರೂಪವಾಗಿದ್ದಾರೆ. ಅವರ ಹುಟ್ಟುಹಾಕಿದ ಪರಂಪರೆ ಭಾರತದಲ್ಲಿ ಎಂಜಿನಿಯರುಗಳು ಮತ್ತು ಭವಿಷ್ಯದ ಖಗೋಳಯಾತ್ರಿಗಳಿಗೆ ಪ್ರೇರಣೆಯಾಗಿದೆ. ಹಲವಾರು ವಿದ್ಯಾ ಸಂಸ್ಥೆಗಳು, ವಿದ್ಯಾರ್ಥಿವೇತನಗಳು ಮತ್ತು ಬಾಹ್ಯಾಕಾಶ ಕಾರ್ಯಕ್ರಮಗಳು ಕಲ್ಪನಾ ಹೆಸರಿನಲ್ಲಿ ಸ್ಥಾಪನೆಗೊಂಡಿವೆ.
ಸುನಿತಾ ವಿಲಿಯಮ್ಸ್ ಇನ್ನೂ ಸಕ್ರಿಯ ಖಗೋಳಯಾತ್ರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ, ಭವಿಷ್ಯದ ಪೀಳಿಗೆಯವರಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ. ಅವರು ಅಮೆರಿಕಾದ ಬಾಹ್ಯಾಕಾಶ ಕಾರ್ಯಕ್ರಮದಲ್ಲಿ ಭಾರತೀಯ ಮೂಲದ ಮಹಿಳೆಯಾಗಿ ಸಾಧನೆ ಮಾಡಿರುವುದು, ವಿಶೇಷವಾಗಿ ಹೆಣ್ಣುಮಕ್ಕಳಿಗೆ ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್ ಮತ್ತು ಗಣಿತ (STEM) ಕ್ಷೇತ್ರಗಳಲ್ಲಿನ ಕಲಿಕೆಯ ಆಸಕ್ತಿ ಹೆಚ್ಚಿಸಿದೆ.
ಭಾರತೀಯ ಮೂಲದ ಸ್ಮರಣೆ
ಕಲ್ಪನಾ ಚಾವ್ಲಾ ಮತ್ತು ಸುನಿತಾ ವಿಲಿಯಮ್ಸ್ ಇಬ್ಬರೂ ತಮ್ಮ ಭಾರತೀಯ ಮೂಲವನ್ನು ಅತ್ಯಂತ ಹೆಮ್ಮೆಯಿಂದ ಸ್ಮರಿಸಿಕೊಳ್ಳುತ್ತಾರೆ. ಕಲ್ಪನಾ ಅವರು ತಮ್ಮ ಬಾಹ್ಯಾಕಾಶ ಯಾನದಲ್ಲಿ ಭಾರತೀಯ ಆಹಾರವನ್ನೇ ಹೆಚ್ಚು ಬಳಸುತ್ತಿದ್ದರು. ಸುನಿತಾ ವಿಲಿಯಮ್ಸ್ ಅವರು ತಮ್ಮ ಗುಜರಾತಿ ಮೂಲವನ್ನು ಹೆಮ್ಮೆಯಿಂದ ಸ್ಮರಿಸಿಕೊಂಡಿದ್ದರು. ಬಾಹ್ಯಾಕಾಶಕ್ಕೆ ಹೋಗುವಾಗ ಸಮೋಸ ತೆಗೆದುಕೊಂಡು ಹೋಗಿದ್ದರು. ಭಗವದ್ಗೀತೆ, ಉಪನಿಷತ್ ಪ್ರತಿಯನ್ನು ಕೂಡ ಕೊಂಡೊಯ್ದಿದ್ದರು. ದೀಪಾವಳಿ ಸಮಯದಲ್ಲಿ ಅಲ್ಲಿಂದಲೇ ಶುಭಾಶಯ ಕೂಡ ಕೋರಿದ್ದರು.