ನೇಪಾಳ: ಪ್ರಧಾನಿಯಾಗಿ ಕೆ.ಪಿ. ಶರ್ಮಾ ಓಲಿ ಪ್ರಮಾಣವಚನ
ನೇಪಾಳದ ಅತಿ ದೊಡ್ಡ ಕಮ್ಯುನಿಷ್ಟ್ ಪಕ್ಷದ ನಾಯಕ ಖಡ್ಗ ಪ್ರಸಾದ್ ಶರ್ಮಾ ಓಲಿ ಅವರು ಪ್ರಧಾನಿಯಾಗಿ ನಾಲ್ಕನೇ ಬಾರಿಗೆ ಸೋಮವಾರ (ಜುಲೈ 15) ಪ್ರಮಾಣ ವಚನ ಸ್ವೀಕರಿಸಿದರು.
ರಾಷ್ಟ್ರಪತಿ ಭವನದ ಮುಖ್ಯ ಕಟ್ಟಡವಾದ ಶೀತಲ್ ನಿವಾಸದಲ್ಲಿ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರಿಂದ ಓಲಿ ಪ್ರಮಾಣವಚನ ಸ್ವೀಕರಿಸಿದರು.
ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ನೇಪಾಳದ ಹೊಸ ಪ್ರಧಾನಿಯನ್ನು ಎಕ್ಸ್ ನಲ್ಲಿ ಅಭಿನಂದಿಸಿದ್ದಾರೆ. ʻಜನರ ಪ್ರಗತಿ ಮತ್ತು ಸಮೃದ್ಧಿಗೆ ಎರಡು ದೇಶಗಳ ನಡುವಿನ ಸ್ನೇಹವನ್ನು ಬಲಪಡಿಸಲು ಮತ್ತು ಪರಸ್ಪರ ಲಾಭದಾಯಕ ಸಹಕಾರವನ್ನು ಮತ್ತಷ್ಟು ವಿಸ್ತರಿಸಲು ಅವರೊಂದಿಗೆ ನಿಕಟವಾಗಿ ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ,ʼ ಎಂದು ಪ್ರಧಾನಿ ಹೇಳಿದ್ದಾರೆ.
ನೇಪಾಳದ ಅಧ್ಯಕ್ಷ ರಾಮಚಂದ್ರ ಪೌಡೆಲ್ ಅವರು ದೇಶದಲ್ಲಿ ರಾಜಕೀಯ ಸ್ಥಿರತೆಯನ್ನು ತರಲು ಭಾನುವಾರ (ಜುಲೈ 14) ಪ್ರಧಾನಿಯಾಗಿ ಓಲಿ ಅವರನ್ನು ನೇಮಿಸಿದರು.
ಶುಕ್ರವಾರ ಜನಪ್ರತಿನಿಧಿಗಳ ಸದನದಲ್ಲಿ ವಿಶ್ವಾಸಮತ ಕಳೆದುಕೊಂಡ ಪುಷ್ಪ ಕಮಲ್ ದಹಾಲ್ 'ಪ್ರಚಂಡ' ಅವರ ಉತ್ತರಾಧಿಕಾರಿಯಾಗಿ ಓಲಿ (72), ನೇಪಾಳಿ ಕಾಂಗ್ರೆಸ್ ಬೆಂಬಲದೊಂದಿಗೆ ಪ್ರಧಾನಿಯಾದರು. ಸಂವಿಧಾನದ ಪ್ರಕಾರ, ನೇಮಕಗೊಂಡ 30 ದಿನಗಳೊಳಗೆ ಓಲಿ ಅವರು ಸಂಸತ್ತಿನಲ್ಲಿ ವಿಶ್ವಾಸಮತವನ್ನು ಗಳಿಸಬೇಕಿದೆ. 275 ಜನಪ್ರತಿನಿಧಿಗಳಿರುವ ಸದನದಲ್ಲಿ ಓಲಿ ಅವರಿಗೆ ಕನಿಷ್ಠ 138 ಮತಗಳ ಅಗತ್ಯವಿದೆ.