
'ಮಿಸ್ ಯೂನಿವರ್ಸ್ 2026': ಪೋರ್ಟೊ ರಿಕೊದ ಜೆನ್ನಿಫರ್ ಬರೆಟೊಗೆ ಕಿರೀಟ
ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದ ಮೊದಲ ವಿವಾಹಿತೆ ಹಾಗೂ ತಾಯಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಜೆನ್ನಿಫರ್ ಸೌಂದರ್ಯ ಸ್ಪರ್ಧೆಯ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ.
ವಿಶ್ವದ ಪ್ರತಿಷ್ಠಿತ ಅಂತಾರಾಷ್ಟ್ರೀಯ ಸೌಂದರ್ಯ ಸ್ಪರ್ಧೆಯಾದ 'ಮಿಸ್ ಯೂನಿವರ್ಸ್'ನ 75ನೇ ಆವೃತ್ತಿಯು ಪೋರ್ಟೊ ರಿಕೊದ ಸ್ಯಾನ್ ಜುವಾನ್‌ನಲ್ಲಿ ಸಂಪನ್ನಗೊಂಡಿದೆ. ಈ ಸ್ಪರ್ಧೆಯಲ್ಲಿ ಪೋರ್ಟೊ ರಿಕೊವನ್ನು ಪ್ರತಿನಿಧಿಸಿದ್ದ ಜೆನ್ನಿಫರ್ ಬರೆಟೊ ಅವರು 'ಮಿಸ್ ಯೂನಿವರ್ಸ್ 2026' ಕಿರೀಟವನ್ನು ಮುಡಿಗೇರಿಸಿಕೊಂಡು ಸಾಧನೆ ಮಾಡಿದ್ದಾರೆ. ಮಿಸ್ ಯೂನಿವರ್ಸ್ ಕಿರೀಟವನ್ನು ಗೆದ್ದ ಮೊದಲ ವಿವಾಹಿತ ಮಹಿಳೆ ಹಾಗೂ ತಾಯಿ ಎಂಬ ಹೆಗ್ಗಳಿಕೆಗೆ ಪಾತ್ರರಾಗುವ ಮೂಲಕ ಜೆನ್ನಿಫರ್ ಬರೆಟೊ ಅವರು ಸೌಂದರ್ಯ ಸ್ಪರ್ಧೆಯ ಇತಿಹಾಸದಲ್ಲೇ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದ್ದಾರೆ. ಅಲ್ಲದೆ, ಅವರ ಈ ಗೆಲುವಿನೊಂದಿಗೆ ಪೋರ್ಟೊ ರಿಕೊ ದೇಶಕ್ಕೆ 6ನೇ ಬಾರಿಗೆ ಮಿಸ್ ಯೂನಿವರ್ಸ್ ಪ್ರಶಸ್ತಿ ಒಲಿದು ಬಂದಂತಾಗಿದೆ.
ಸ್ಯಾನ್ ಜುವಾನ್‌ನಲ್ಲಿ ನಡೆದ 75ನೇ ಮಿಸ್ ಯೂನಿವರ್ಸ್ ಸ್ಪರ್ಧೆಯಲ್ಲಿ ಪ್ರಪಂಚದಾದ್ಯಂತದ ಒಟ್ಟು 115 ಸ್ಪರ್ಧಿಗಳು ಕಿರೀಟಕ್ಕಾಗಿ ಪೈಪೋಟಿ ನಡೆಸಿದ್ದರು. ತೀವ್ರ ಪೈಪೋಟಿಯ ನಡುವೆ ಪೋರ್ಟೊ ರಿಕೊದ ಜೆನ್ನಿಫರ್ ಬರೆಟೊ ಅಂತಿಮವಾಗಿ ವಿಜೇತರಾಗಿ ಹೊರಹೊಮ್ಮಿದರು. ಸ್ಪರ್ಧೆಯ ಅಗ್ರ 5 ಸ್ಥಾನಗಳನ್ನು ಪಡೆದ ಸ್ಪರ್ಧಿಗಳಾಗಿದ್ದಾರೆ. ವಿಜೇತೆ (ಮಿಸ್ ಯೂನಿವರ್ಸ್ 2026) - ಜೆನ್ನಿಫರ್ ಬರೆಟೊ (ಪೋರ್ಟೊ ರಿಕೊ), ಮೊದಲ ರನ್ನರ್-ಅಪ್ - ಮೆಲಿಸ್ಸಾ ನುನೆಜ್ (ಡೊಮಿನಿಕನ್ ರಿಪಬ್ಲಿಕ್), ಎರಡನೇ ರನ್ನರ್-ಅಪ್ - ಕ್ಲಾರಾ ವೆಗಾಸ್ ಗೋಟ್ಜ್ (ವೆನೆಜುವೆಲಾ), ಮೂರನೇ ರನ್ನರ್-ಅಪ್ - ಬೀ ಮಿಲನ್-ವಿಂಡೋರ್ಸ್ಕಿ (ಫಿಲಿಪೈನ್ಸ್), ನಾಲ್ಕನೇ ರನ್ನರ್-ಅಪ್ - ಜಾರ್ಜಿಯಾ ವಾಡಿಂಗ್ಟನ್ (ನ್ಯೂಜಿಲೆಂಡ್) ಆಗಿದ್ದಾರೆ.
ಜೆನ್ನಿಫರ್ ಬರೆಟೊ ಯಾರು? ಆರಂಭಿಕ ಜೀವನ ಮತ್ತು ಉನ್ನತ ಶಿಕ್ಷಣ
1998ರ ಡಿಸೆಂಬರ್ 17ರಂದು ಪೋರ್ಟೊ ರಿಕೊದ ಮಯಾಗುಯೆಜ್‌ನಲ್ಲಿ ಜನಿಸಿದ ಜೆನ್ನಿಫರ್ ಅಬ್ರೆಯು ಮೊರಾ (ಬರೆಟ್ಟೊ) ಅವರು ಓರ್ವ ಮಾಡೆಲ್, ಸೌಂದರ್ಯ ಸ್ಪರ್ಧೆಯ ವಿಜೇತೆ ಮತ್ತು ಸಮಾಜ ಸೇವಕಿಯಾಗಿ ಗುರುತಿಸಿಕೊಂಡಿದ್ದಾರೆ. ಅವರು ಇಸಾಬೆಲಾದಲ್ಲಿ ಬೆಳೆದಿದ್ದು, ನೆರೆಯ ಊರುಗಳಾದ ಸ್ಯಾನ್ ಸೆಬಾಸ್ಟಿಯನ್ ಹಾಗೂ ಅಗುಡಿಲ್ಲಾಗಳಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರೈಸಿದರು. ಶಾಲಾ ದಿನಗಳಲ್ಲಿ ವಾಲಿಬಾಲ್ ಕ್ರೀಡೆಯಲ್ಲಿ ಅವರು ಹೆಚ್ಚು ಸಕ್ರಿಯರಾಗಿದ್ದರು. ಜೆನ್ನಿಫರ್ ಅವರ ಸಾಧನೆ ಕೇವಲ ಸೌಂದರ್ಯ ಪ್ರದರ್ಶನದ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ, ಶೈಕ್ಷಣಿಕವಾಗಿಯೂ ಅವರು ಉನ್ನತ ಪದವಿಗಳನ್ನು ಪಡೆದಿದ್ದಾರೆ. ಅವರು ಸಂಶೋಧನಾ ಮನೋವಿಜ್ಞಾನದಲ್ಲಿ ಪದವಿ ಹಾಗೂ ಮನೋವಿಜ್ಞಾನ ಮತ್ತು ಕ್ಲಿನಿಕಲ್ ಸಾಮಾಜಿಕ ಕಾರ್ಯದಲ್ಲಿ ಸ್ನಾತಕೋತ್ತರ ಪದವಿಗಳನ್ನು ಹೊಂದಿದ್ದಾರೆ.
ರಕ್ಷಣಾ ಇಲಾಖೆಯಲ್ಲಿ ವೃತ್ತಿ ಮತ್ತು ಸಮಾಜ ಸೇವಾ ಪಯಣ
ಉನ್ನತ ಶಿಕ್ಷಣದ ಬಳಿಕ ಜೆನ್ನಿಫರ್ ಬರೆಟೊ ಅವರು ಸಾರ್ವಜನಿಕ ಸೇವೆ ಮತ್ತು ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ತಮ್ಮ ವೃತ್ತಿಜೀವನವನ್ನು ರೂಪಿಸಿಕೊಂಡರು. 2021ರಲ್ಲಿ ಟೆಕ್ಸಾಸ್‌ನ ಫೋರ್ಟ್ ಹುಡ್‌ನಲ್ಲಿರುವ ಯುನೈಟೆಡ್ ಸ್ಟೇಟ್ಸ್ ರಕ್ಷಣಾ ಇಲಾಖೆಯೊಂದಿಗೆ ಕೆಲಸ ಮಾಡುವ ಮೂಲಕ ಅವರು ವೃತ್ತಿಜೀವನವನ್ನು ಆರಂಭಿಸಿದರು.
'ಫ್ಯಾಮಿಲಿ ಅಡ್ವೊಕಸಿ ಪ್ರೋಗ್ರಾಂ' ಮೂಲಕ ಕೌಟುಂಬಿಕ ಹಿಂಸಾಚಾರ ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ಎದುರಿಸುತ್ತಿರುವ ಮಿಲಿಟರಿ ಕುಟುಂಬಗಳಿಗೆ ಬೆಂಬಲ ನೀಡಿದರು. ಬಿಕ್ಕಟ್ಟಿನ ಸಂದರ್ಭಗಳಲ್ಲಿ ನೆರವು ಒದಗಿಸುವುದರ ಜೊತೆಗೆ, ದೌರ್ಜನ್ಯ ತಡೆಗಟ್ಟುವಿಕೆ ಮತ್ತು ಮಧ್ಯಸ್ಥಿಕೆಯ ಕುರಿತು ಮಿಲಿಟರಿ ನಾಯಕರಿಗೆ ತರಬೇತಿ ನೀಡುವ ಜವಾಬ್ದಾರಿಯನ್ನೂ ನಿಭಾಯಿಸಿದರು. ನಂತರದ ದಿನಗಳಲ್ಲಿ ಸಮಸ್ಯೆಗಳ ತಡೆಗಟ್ಟುವಿಕೆ ತಜ್ಞರಾಗಿ ಸೇವೆ ಸಲ್ಲಿಸಿದ ಅವರು, ಸಮುದಾಯದ ಅಗತ್ಯಗಳ ಮೌಲ್ಯಮಾಪನಗಳನ್ನು ಮುನ್ನಡೆಸಿದರು. ತೊಂದರೆ ಉಂಟುಮಾಡಬಹುದಾದ ನಡವಳಿಕೆಗಳನ್ನು ಸರಿಪಡಿಸಲು ಹಾಗೂ ಮಿಲಿಟರಿ ಸಮುದಾಯಗಳಲ್ಲಿ ಯೋಗಕ್ಷೇಮವನ್ನು ಸುಧಾರಿಸಲು ವಿಶೇಷ ತಡೆಗಟ್ಟುವಿಕೆ ಯೋಜನೆಗಳನ್ನು ಅಭಿವೃದ್ಧಿಪಡಿಸಿದರು. ಕಾರ್ಲ್ ಆರ್. ಡರ್ನಾಲ್ ಆರ್ಮಿ ಮೆಡಿಕಲ್ ಸೆಂಟರ್‌ನಲ್ಲಿ ಸ್ವಯಂಸೇವಕಿಯಾಗಿ ಕೆಲಸ ಮಾಡಿರುವುದಲ್ಲದೆ, ಪೋರ್ಟೊ ರಿಕೊದಲ್ಲಿರುವ ಪೀಡಿಯಾಟ್ರಿಕ್ ಡಯಾಬಿಟಿಸ್ ಅಸೋಸಿಯೇಷನ್‌ನೊಂದಿಗೆ ಸಹಕರಿಸಿ ಸೇವೆ ಸಲ್ಲಿಸಿದ್ದಾರೆ.
ವೈಯಕ್ತಿಕ ಜೀವನ ಮತ್ತು ಸೌಂದರ್ಯ ಸ್ಪರ್ಧೆಯ ವಿಶಿಷ್ಟ ಪಯಣ
ಜೆನ್ನಿಫರ್ ಬರೆಟೊ ಅವರ ವೈಯಕ್ತಿಕ ಜೀವನವು ಅವರ ಈ ಜಾಗತಿಕ ಗೆಲುವನ್ನು ಇನ್ನಷ್ಟು ವಿಶೇಷವಾಗಿಸಿದೆ. ಅವರು ಪೋರ್ಟೊ ರಿಕೊದ ಇಸಾಬೆಲಾದವರಾದ, ಯುನೈಟೆಡ್ ಸ್ಟೇಟ್ಸ್ ಸೇನೆಯ ಸಾರ್ಜೆಂಟ್ ಯಾನ್ ಕಾರ್ಲೋಸ್ ಬರೆಟೊ ಕ್ಯಾಲ್ಡೆರಾನ್ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ 2019ರಲ್ಲಿ ಜನಿಸಿದ 'ಪೆನೆಲೋಪ್' ಎಂಬ ಮಗಳಿದ್ದಾಳೆ. ವಿವಾಹಿತ ಮಹಿಳೆಯಾಗಿ ಮತ್ತು ಓರ್ವ ತಾಯಿಯಾಗಿ ಮಿಸ್ ಯೂನಿವರ್ಸ್ ಕಿರೀಟ ಧರಿಸಿದ ಮೊದಲಿಗರಾಗಿ ಅವರು ಇತಿಹಾಸ ಸೃಷ್ಟಿಸಿದ್ದಾರೆ. ಆಸಕ್ತಿದಾಯಕ ಸಂಗತಿಯೆಂದರೆ, 2025ರವರೆಗೆ ಜೆನ್ನಿಫರ್ ಅವರಿಗೆ ಮಾಡೆಲಿಂಗ್ ಅಥವಾ ಸೌಂದರ್ಯ ಸ್ಪರ್ಧೆಗಳಲ್ಲಿ ಯಾವುದೇ ಪೂರ್ವ ಅನುಭವವಿರಲಿಲ್ಲ. 2025ರಲ್ಲಿ ಸೌಂದರ್ಯ ಸ್ಪರ್ಧೆಗಳ ಜಗತ್ತಿಗೆ ಕಾಲಿಟ್ಟ ಅವರು, 'ಮಿಸ್ ಯೂನಿವರ್ಸ್ ಪೋರ್ಟೊ ರಿಕೊ' ಸ್ಪರ್ಧೆಗಾಗಿ ಸಿದ್ಧತೆ ನಡೆಸಿದರು ಮತ್ತು 2026ರ ರಾಷ್ಟ್ರೀಯ ಸ್ಪರ್ಧೆಯಲ್ಲಿ ಸ್ಯಾನ್ ಸೆಬಾಸ್ಟಿಯನ್ ಅನ್ನು ಪ್ರತಿನಿಧಿಸಿ ಗೆದ್ದು, ಅಂತಾರಾಷ್ಟ್ರೀಯ ವೇದಿಕೆಗೆ ಅರ್ಹತೆ ಪಡೆದರು. ಮಿಲಿಟರಿ ಕುಟುಂಬಗಳ ಸೇವೆಯಿಂದ ಹಿಡಿದು ಜಾಗತಿಕ ಮಟ್ಟದ ಸೌಂದರ್ಯ ಸ್ಪರ್ಧೆಯ ವಿಜೇತರಾಗುವವರೆಗಿನ ಅವರ ಈ ವಿಭಿನ್ನ ಪಯಣಕ್ಕೆ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಮೆಚ್ಚುಗೆ ಮತ್ತು ಅಭಿನಂದನೆಗಳ ಮಹಾಪೂರವೇ ಹರಿದು ಬರುತ್ತಿದೆ.
ಭಾರತದ ಪ್ರತಿನಿಧಿ ಕಜಿಯಾ ಲಿಜ್ ಮೆಜೊ ಅವರ ಪ್ರದರ್ಶನ
ಒಂದೆಡೆ ಪೋರ್ಟೊ ರಿಕೊ ಐತಿಹಾಸಿಕ ಗೆಲುವನ್ನು ಸಂಭ್ರಮಿಸುತ್ತಿದ್ದರೆ, ಮತ್ತೊಂದೆಡೆ ಮಿಸ್ ಯೂನಿವರ್ಸ್ ಕಿರೀಟವನ್ನು ಗೆಲ್ಲುವ ಭಾರತದ ನಿರೀಕ್ಷೆಗೆ ಆರಂಭಿಕ ಹಂತದಲ್ಲೇ ಹಿನ್ನಡೆಯಾಯಿತು. ಭಾರತವನ್ನು ಪ್ರತಿನಿಧಿಸಿದ್ದ ಕೇರಳದ ಕಜಿಯಾ ಲಿಜ್ ಮೆಜೊ ಅವರು 'ಟಾಪ್ 12'ರ ಪಟ್ಟಿಯಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು ಹಾಗೂ 'ಈವ್ನಿಂಗ್ ಗೌನ್' ಸುತ್ತಿಗೂ ಮುನ್ನವೇ ಸ್ಪರ್ಧೆಯಿಂದ ಹೊರಬಿದ್ದರು. 2007ರಲ್ಲಿ ಅಬುಧಾಬಿಯಲ್ಲಿ ಜನಿಸಿದ 19 ವರ್ಷದ ಕಜಿಯಾ ಅವರು ಮೂಲತಃ ಕೇರಳದ ಮಾವೆಲಿಕ್ಕದವರು. ಪ್ರಸ್ತುತ ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್‌ನಲ್ಲಿ ಕಾನೂನು ವಿದ್ಯಾರ್ಥಿನಿಯಾಗಿರುವ ಕಜಿಯಾ, ಮಾಡೆಲ್, ಶಾಸ್ತ್ರೀಯ ನೃತ್ಯಗಾರ್ತಿ ಹಾಗೂ ಉತ್ತಮ ವಾಗ್ಮಿಯಾಗಿಯೂ (ಪಬ್ಲಿಕ್ ಸ್ಪೀಕರ್) ಗುರುತಿಸಿಕೊಂಡಿದ್ದಾರೆ. ಆಗಸ್ಟ್ 23ರಂದು ರಾಜಸ್ಥಾನದ ಜೈಪುರದಲ್ಲಿ ನಡೆದ 'ಮಿಸ್ ಯೂನಿವರ್ಸ್ ಇಂಡಿಯಾ 2026' ಸ್ಪರ್ಧೆಯಲ್ಲಿ ಅವರು ಕಿರೀಟವನ್ನು ಮುಡಿಗೇರಿಸಿಕೊಂಡಿದ್ದರು. ಈ ಮೂಲಕ ಕೇರಳದಿಂದ ಈ ರಾಷ್ಟ್ರೀಯ ಪ್ರಶಸ್ತಿಯನ್ನು ಗೆದ್ದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದಕ್ಕೂ ಮುನ್ನ ಅವರು 'ಮಿಸ್ ಟೀನ್ ದಿವಾ 2024' ಪ್ರಶಸ್ತಿಯನ್ನು ಗೆದ್ದಿದ್ದರಲ್ಲದೆ, 'ಮಿಸ್ ಟೀನ್ ಇಂಟರ್‌ನ್ಯಾಶನಲ್ 2025' ಸ್ಪರ್ಧೆಯಲ್ಲಿ ಪ್ರಥಮ ರನ್ನರ್-ಅಪ್ ಸ್ಥಾನವನ್ನು ಗಳಿಸಿದ್ದರು.
