
ಜಾಫರ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಬಾಂಬ್ ನಿಷ್ಕ್ರಿಯದಳದ ಅಧಿಕಾರಿಗಳು ಪರಿಶೀಲನೆ ನಡೆಸಿದರು.
ಜಾಫರ್ ಎಕ್ಸ್‌ಪ್ರೆಸ್ ರೈಲು ಸ್ಫೋಟಿಸುವ ಸಂಚು ವಿಫಲ; ಹಳಿ ಮೇಲೆ ಇಟ್ಟಿದ್ದ ಬಾಂಬ್ ನಿಷ್ಕ್ರಿಯ
ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳ, ಕೂಡಲೇ ಸ್ಥಳವನ್ನು ಸುತ್ತುವರಿದು ಬಾಂಬ್ ಅನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ಪಾಕಿಸ್ತಾನದ ಬಲೂಚಿಸ್ತಾನ್ ಪ್ರಾಂತ್ಯದಲ್ಲಿ ಸಂಚರಿಸುವ ‘ಜಾಫರ್ ಎಕ್ಸ್‌ಪ್ರೆಸ್’ ಪ್ರಯಾಣಿಕರ ರೈಲನ್ನು ಗುರಿಯಾಗಿಸಿಕೊಂಡು ಉಗ್ರರು ನಡೆಸಲು ಉದ್ದೇಶಿಸಿದ್ದ ವಿಧ್ವಂಸಕ ಕೃತ್ಯವನ್ನು ಭದ್ರತಾ ಪಡೆಗಳು ವಿಫಲಗೊಳಿಸಿವೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಪೆಶಾವರಕ್ಕೆ ತೆರಳುತ್ತಿದ್ದ ಈ ರೈಲನ್ನು ಸ್ಫೋಟಿಸಲು ನಾಸಿರಾಬಾದ್ ಪ್ರದೇಶದ ರೈಲು ಹಳಿಯ ಮೇಲೆ ಶನಿವಾರ ಉಗ್ರರು ಸುಧಾರಿತ ಸ್ಫೋಟಕ ಸಾಧನವನ್ನು (ಐಇಡಿ) ಅಳವಡಿಸಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದ ಭದ್ರತಾ ಸಿಬ್ಬಂದಿ ಮತ್ತು ಬಾಂಬ್ ನಿಷ್ಕ್ರಿಯ ದಳ, ಕೂಡಲೇ ಸ್ಥಳವನ್ನು ಸುತ್ತುವರಿದು ಬಾಂಬ್ ಅನ್ನು ಸುರಕ್ಷಿತವಾಗಿ ನಿಷ್ಕ್ರಿಯಗೊಳಿಸುವ ಮೂಲಕ ಭಾರಿ ಅನಾಹುತವನ್ನು ತಪ್ಪಿಸಿದ್ದಾರೆ.
ರೈಲು ಸಂಚಾರ ಸ್ಥಗಿತ
ಸುರಕ್ಷತೆಯ ದೃಷ್ಟಿಯಿಂದ ಮುಂಜಾಗ್ರತಾ ಕ್ರಮವಾಗಿ ಪೆಶಾವರದಿಂದ ಕ್ವೆಟ್ಟಾಗೆ ತೆರಳುತ್ತಿದ್ದ ಜಾಫರ್ ಎಕ್ಸ್‌ಪ್ರೆಸ್ ಮತ್ತು ಮತ್ತೊಂದು ರೈಲನ್ನು ಜಾಕೋಬಾಬಾದ್ ನಿಲ್ದಾಣದಲ್ಲಿಯೇ ತಡೆಹಿಡಿಯಲಾಗಿದೆ. ಹಳಿಗಳ ಪರಿಶೀಲನೆ ಮತ್ತು ಪರಿಸ್ಥಿತಿಯನ್ನು ಅವಲೋಕಿಸಿದ ನಂತರವಷ್ಟೇ ರೈಲು ಸಂಚಾರ ಪುನರಾರಂಭಿಸಲಾಗುವುದು ಎಂದು ರೈಲ್ವೆ ಅಧಿಕಾರಿಗಳು ತಿಳಿಸಿದ್ದಾರೆ.
ನಿರಂತರ ದಾಳಿಗೆ ತುತ್ತಾಗುತ್ತಿರುವ ರೈಲು
ಜಾಫರ್ ಎಕ್ಸ್‌ಪ್ರೆಸ್ ರೈಲು ನಿರಂತರವಾಗಿ ಉಗ್ರರ ದಾಳಿಗೆ ಗುರಿಯಾಗುತ್ತಲೇ ಇದೆ. ಒಂದು ತಿಂಗಳ ಹಿಂದೆಯಷ್ಟೇ ಇದೇ ಪ್ರದೇಶದಲ್ಲಿ ನಡೆದ ಸ್ಫೋಟದಿಂದ ರೈಲು ಕೂದಲೆಳೆ ಅಂತರದಲ್ಲಿ ಪಾರಾಗಿತ್ತು. ಇದಕ್ಕೂ ಮುನ್ನ ಕಳೆದ ಮಾರ್ಚ್ 11ರಂದು ನಿಷೇಧಿತ ‘ಬಲೂಚಿಸ್ತಾನ್ ಲಿಬರೇಶನ್ ಆರ್ಮಿ’ (ಬಿಎಲ್‌ಎ) ಉಗ್ರರು ಇದೇ ರೈಲನ್ನು ಹೈಜಾಕ್ ಮಾಡಿದ್ದರು. ಅಂದು ನಡೆದ ಭೀಕರ ಘಟನೆಯಲ್ಲಿ 26 ಪ್ರಯಾಣಿಕರು ಮೃತಪಟ್ಟಿದ್ದರು ಹಾಗೂ 33 ಉಗ್ರರನ್ನು ಹತ್ಯೆಗೈಯ್ಯಲಾಗಿತ್ತು. ಅಲ್ಲದೆ, ಕಳೆದ ಅಕ್ಟೋಬರ್‌ನಲ್ಲಿ ಸಿಂಧ್ ಪ್ರಾಂತ್ಯದಲ್ಲಿ ನಡೆದ ಸ್ಫೋಟದಲ್ಲಿ ಇದೇ ರೈಲಿನ ಐದು ಬೋಗಿಗಳು ಹಳಿ ತಪ್ಪಿದ್ದವು.

