ಕಮಲಾ ಹ್ಯಾರಿಸ್ ಡೆಮಾಕ್ರಟಿಕ್ ಅಧ್ಯಕ್ಷೀಯ ಅಭ್ಯರ್ಥಿ
ವಾಷಿಂಗ್ಟನ್: ಡೆಮಾಕ್ರಟಿಕ್ ಪ್ರತಿನಿಧಿಗಳಿಂದ ಸಾಕಷ್ಟು ಮತಗಳನ್ನು ಗಳಿಸಿದ ನಂತರ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಡೆಮಾಕ್ರಟಿಕ್ ಪಕ್ಷದ 2024ರ ಅಧ್ಯಕ್ಷೀಯ ಅಭ್ಯರ್ಥಿ ಎಂದು ಘೋಷಿಸಲಾಯಿತು.
ಹ್ಯಾರಿಸ್(59) ಅವರು ನವೆಂಬರ್ 5 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯಲ್ಲಿ ರಿಪಬ್ಲಿಕನ್ ಪಕ್ಷದ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (78) ಅವರನ್ನು ಎದುರಿಸಲಿದ್ದಾರೆ.
ಅಧ್ಯಕ್ಷ ಜೋ ಬಿಡೆನ್ ಶ್ವೇತಭವನದ ಸ್ಪರ್ಧೆಯಿಂದ ಹಿಂದೆ ಸರಿದ ನಂತರ ಕಳೆದ ತಿಂಗಳ ಕೊನೆಯಲ್ಲಿ ಅಧ್ಯಕ್ಷೀಯ ಅಭ್ಯರ್ಥಿಯಾಗಿ ಕಮಲಾ ಹ್ಯಾರಿಸ್ ಅವರನ್ನು ಪರಿಗಣಿಸಬೇಕಾಗಿ ಬಂದಿತು. ಅಮೆರಿಕದ ಕೊನೆಯ ಗಾಜಿನ ಚಾವಣಿಯನ್ನು ಮುರಿದಿರುವ ಕಮಲಾ ಹ್ಯಾರಿಸ್, ಈ ಸ್ಥಾನಕ್ಕೆ ಅಭ್ಯರ್ಥಿಯಾಗಿರುವ ಮೊದಲ ಬಣ್ಣದ ಮಹಿಳೆ ಮತ್ತು ಡೆಮಾಕ್ರಟಿಕ್ ಪಕ್ಷದ ಮೊದಲ ಭಾರತೀಯ ಅಮೆರಿಕನ್.
ಕಮಲಾ ಅವರ ತಾಯಿ ಶ್ಯಾಮಲಾ ಗೋಪಾಲನ್, ಭಾರತೀಯರು ಮತ್ತು ಅವರ ತಂದೆ, ಡೊನಾಲ್ಡ್ ಜಾಸ್ಪರ್ ಹ್ಯಾರಿಸ್, ಜಮೈಕಾದವರು; ಇಬ್ಬರೂ ಅಮೆರಿಕಕ್ಕೆ ವಲಸೆ ಬಂದವರು.
ಆಗಸ್ಟ್ 22 ರಂದು ಚಿಕಾಗೋದಲ್ಲಿ ನಡೆಯಲಿರುವ ಡೆಮಾಕ್ರಟಿಕ್ ರಾಷ್ಟ್ರೀಯ ಸಮಾವೇಶದಲ್ಲಿ ಅವರು ವಿಧ್ಯುಕ್ತವಾಗಿ ಸ್ವೀಕರಿಸಲಿದ್ದು, ಮುಂದಿನ ಕೆಲವು ದಿನಗಳಲ್ಲಿ ಅವರು ಉಪಾಧ್ಯಕ್ಷ ಅಭ್ಯರ್ಥಿಯನ್ನು ಘೋಷಿಸುವ ಸಾಧ್ಯತೆಯಿದೆ.
ʻಪ್ರಜಾಪ್ರಭುತ್ವದ ಸೌಂದರ್ಯವೆಂದರೆ ಅಧಿಕಾರವು ಜನರ ಬಳಿ ಇರುತ್ತದೆ. ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ. ನಾವೆಲ್ಲರೂ ಒಟ್ಟಿಗೆ ಮಾತನಾಡಲಿದ್ದೇವೆ,ʼ ಎಂದು ಅವರು ಹೇಳಿದರು.