
ಭಾರತೀಯರ ಆಕ್ಷೇಪಕ್ಕೆ ಮಣಿದ ಇಸ್ರೇಲ್: ಜಮ್ಮು-ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ತೋರಿಸಿದ ನಕ್ಷೆಗೆ ಕ್ಷಮೆಯಾಚನೆ
ಭಾರತವು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ನ ಎಲ್ಲಾ ಭಾಗಗಳು, ಪಾಕಿಸ್ತಾನ ಮತ್ತು ಚೀನಾದಿಂದ ಅಕ್ರಮವಾಗಿ ಆಕ್ರಮಿತವಾದ ಪ್ರದೇಶಗಳನ್ನು ಒಳಗೊಂಡಂತೆ, ತನ್ನ ಅವಿಭಾಜ್ಯ ಮತ್ತು ಅನನ್ಯ ಭಾಗಗಳೆಂದು ಸ್ಪಷ್ಟವಾಗಿ ಘೋಷಿಸಿದೆ.
ಇರಾನ್ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ಆರಂಭಿಸಿದ ಇಸ್ರೇಲ್ ಸೇನೆಯು ಶುಕ್ರವಾರ ರಾತ್ರಿ ಮಾಡಿದ ಟ್ವೀಟ್ ಒಂದು ಭಾರತೀಯರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿತ್ತು.
ಇಸ್ರೇಲ್ ರಕ್ಷಣಾ ಪಡೆ (IDF) ತನ್ನ ಸಾಮಾಜಿಕ ಜಾಲತಾಣದ ಪೋಸ್ಟ್ನಲ್ಲಿ ಹಂಚಿಕೊಂಡಿದ್ದ ನಕ್ಷೆಯಲ್ಲಿ ಜಮ್ಮು ಮತ್ತು ಕಾಶ್ಮೀರವನ್ನು ಪಾಕಿಸ್ತಾನದ ಭಾಗವೆಂದು ತೋರಿಸಲಾಗಿತ್ತು. ಇದನ್ನು ಕಂಡ ಭಾರತೀಯ ನೆಟ್ಟಿಗರು ಕೆಂಡಾಮಂಡಲರಾಗಿ ಇಸ್ರೇಲ್ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದರು. ಅಂತಿಮವಾಗಿ, ಇಸ್ರೇಲ್ ಸೇನಾಪಡೆ ಭಾರತೀಯರ ಕ್ಷಮೆ ಯಾಚಿಸಿದೆ.
ಶುಕ್ರವಾರ ರಾತ್ರಿ, ಇಸ್ರೇಲ್ ಸೇನೆಯು ಎಕ್ಸ್ (ಹಿಂದಿನ ಟ್ವಿಟರ್) ನಲ್ಲಿ ಇರಾನ್ ಅನ್ನು "ಜಾಗತಿಕ ಬೆದರಿಕೆ" ಎಂದು ಬಿಂಬಿಸುವ ಸಂದೇಶವೊಂದನ್ನು ಹಂಚಿಕೊಂಡಿತ್ತು. ಆದರೆ, ಇಸ್ರೇಲ್ ಪೋಸ್ಟ್ ಮಾಡಿದ ನಕ್ಷೆಯು ಭಾರತದ ಗಡಿಗಳನ್ನು ತಪ್ಪಾಗಿ ಚಿತ್ರಿಸಿತ್ತು. ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಬೇರ್ಪಡಿಸಿ ಪಾಕಿಸ್ತಾನದ ಭಾಗವೆಂದು ಅದರಲ್ಲಿ ತೋರಿಸಲಾಗಿತ್ತು. ಇದನ್ನು ಗಮನಿಸಿದ ಭಾರತೀಯ ಬಳಕೆದಾರರು ತಕ್ಷಣವೇ ಆಕ್ಷೇಪ ವ್ಯಕ್ತಪಡಿಸಿ, ತಪ್ಪನ್ನು ಸರಿಪಡಿಸುವಂತೆ ಪಟ್ಟು ಹಿಡಿದರು.
ಈ ಆಕ್ಷೇಪಗಳಿಗೆ ಮಣಿದ ಇಸ್ರೇಲ್ ಸೇನಾಪಡೆ, "ಈ ಪೋಸ್ಟ್ ಒಟ್ಟಾರೆ ಪ್ರದೇಶದ ಒಂದು ಚಿತ್ರಣವಾಗಿದೆ. ಈ ನಕ್ಷೆಯು ಗಡಿಗಳನ್ನು ನಿಖರವಾಗಿ ಚಿತ್ರಿಸಲು ವಿಫಲವಾಗಿದೆ. ಇದರಿಂದ ಉಂಟಾದ ಯಾವುದೇ ಅಪಮಾನ ಮತ್ತು ನೋವಿಗೆ ನಾವು ಕ್ಷಮೆಯಾಚಿಸುತ್ತೇವೆ," ಎಂದು ಸ್ಪಷ್ಟಪಡಿಸಿತು.
ಈ ನಕ್ಷೆಯನ್ನು ಇರಾನ್ನ ಕ್ಷಿಪಣಿಗಳ ವ್ಯಾಪ್ತಿಯನ್ನು ತೋರಿಸುವ ಉದ್ದೇಶದಿಂದ ರಚಿಸಲಾಗಿತ್ತು. ಸೌದಿ ಅರೇಬಿಯಾ, ಲಿಬಿಯಾ, ಇಥಿಯೋಪಿಯಾ, ಭಾರತ, ಚೀನಾ, ಕಜಕಿಸ್ತಾನ್, ರೊಮೇನಿಯಾ, ಬಲ್ಗೇರಿಯಾ, ರಷ್ಯಾ, ಟರ್ಕಿ ಮತ್ತು ಇತರ ದೇಶಗಳನ್ನು ಒಳಗೊಂಡಂತೆ ವ್ಯಾಪಕ ಪ್ರದೇಶವನ್ನು ಇದರಲ್ಲಿ ಗುರುತಿಸಲಾಗಿತ್ತು. ಆದರೆ, ಜಮ್ಮು ಮತ್ತು ಕಾಶ್ಮೀರವನ್ನು ಭಾರತದಿಂದ ಪ್ರತ್ಯೇಕಿಸಿ ಪಾಕಿಸ್ತಾನದ ಭಾಗವೆಂದು ತೋರಿಸಿದ್ದು ಭಾರತದ ದೃಷ್ಟಿಕೋನದಲ್ಲಿ ತೀರಾ ಸೂಕ್ಷ್ಮ ವಿಷಯವಾಗಿದೆ.
ಭಾರತವು ಜಮ್ಮು ಮತ್ತು ಕಾಶ್ಮೀರ ಹಾಗೂ ಲಡಾಖ್ನ ಎಲ್ಲಾ ಭಾಗಗಳು, ಪಾಕಿಸ್ತಾನ ಮತ್ತು ಚೀನಾದಿಂದ ಅಕ್ರಮವಾಗಿ ಆಕ್ರಮಿತವಾದ ಪ್ರದೇಶಗಳನ್ನು ಒಳಗೊಂಡಂತೆ, ತನ್ನ ಅವಿಭಾಜ್ಯ ಮತ್ತು ಅನನ್ಯ ಭಾಗಗಳೆಂದು ಸ್ಪಷ್ಟವಾಗಿ ಘೋಷಿಸಿದೆ.
ಪ್ರಸ್ತುತ, ಇಸ್ರೇಲ್ ಸೇನೆ ಮಾಡಿದ ಈ ಎಡವಟ್ಟಿಗೆ ಸಂಬಂಧಿಸಿ ಭಾರತ ಸರ್ಕಾರವು ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಆದಾಗ್ಯೂ, ಈ ಘಟನೆಯು ಭಾರತ-ಇಸ್ರೇಲ್ ನಡುವಿನ ಗಟ್ಟಿ ರಾಜತಾಂತ್ರಿಕ ಮತ್ತು ರಕ್ಷಣಾ ಸಂಬಂಧಗಳ ಹಿನ್ನೆಲೆಯಲ್ಲಿ ಗಮನ ಸೆಳೆದಿದೆ. ಇಸ್ರೇಲ್ ಭಾರತದ ಪ್ರಮುಖ ಶಸ್ತ್ರಾಸ್ತ್ರ ಪೂರೈಕೆದಾರರಾಗಿದ್ದು, ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಎರಡೂ ದೇಶಗಳು ಪರಸ್ಪರ ಸಹಕರಿಸುತ್ತಿವೆ.