ಟೆಹ್ರಾನ್ ಇಂಧನ ಘಟಕದ ಮೇಲೆ ಇಸ್ರೇಲ್ ದಾಳಿ: ದುಬೈನಲ್ಲಿ ಬಿದ್ದ ಇರಾನ್ ಕ್ಷಿಪಣಿ ಅವಶೇಷ
x

ಟೆಹ್ರಾನ್ ಇಂಧನ ಘಟಕದ ಮೇಲೆ ಇಸ್ರೇಲ್ ದಾಳಿ: ದುಬೈನಲ್ಲಿ ಬಿದ್ದ ಇರಾನ್ ಕ್ಷಿಪಣಿ ಅವಶೇಷ

ಟೆಹ್ರಾನ್‌ನ ಇಂಧನ ಶೇಖರಣಾ ಘಟಕಗಳ ಮೇಲೆ ವಾಯುದಾಳಿ ನಡೆಸಿರುವುದನ್ನು ಇಸ್ರೇಲ್ ಸೇನೆ ಖಚಿತಪಡಿಸಿದೆ. ಈ ಯುದ್ಧದಲ್ಲಿ ಇದೇ ಮೊದಲ ಬಾರಿಗೆ ನಾಗರಿಕ ಕೈಗಾರಿಕಾ ಘಟಕವನ್ನು ಗುರಿಯಾಗಿಸಲಾಗಿದೆ.


Click the Play button to hear this message in audio format

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡಿದ್ದು, ಗಲ್ಫ್ ರಾಷ್ಟ್ರಗಳತ್ತ ಇರಾನ್ ಕ್ಷಿಪಣಿ ಮತ್ತು ಡ್ರೋನ್‌ಗಳನ್ನು ಉಡಾವಣೆ ಮಾಡಿದೆ. ಮತ್ತೊಂದೆಡೆ ಇರಾನ್ ನಾಯಕರ ನಡುವೆ ಆಂತರಿಕ ಭಿನ್ನಾಭಿಪ್ರಾಯಗಳು ಸ್ಫೋಟಗೊಂಡಿವೆ.

ಇರಾನ್ ಮತ್ತು ಇಸ್ರೇಲ್ ನಡುವಿನ ಯುದ್ಧ ಶನಿವಾರ ತಡರಾತ್ರಿ ಮತ್ತಷ್ಟು ಭೀಕರ ಸ್ವರೂಪ ಪಡೆದುಕೊಂಡಿದೆ. ಇರಾನ್ ರಾಜಧಾನಿ ಟೆಹ್ರಾನ್‌ನಲ್ಲಿರುವ ಬೃಹತ್ ತೈಲ ಶೇಖರಣಾ ಘಟಕದ ಮೇಲೆ ಇಸ್ರೇಲ್ ದಾಳಿ ನಡೆಸಿದ್ದು, ಬೆಂಕಿಯ ಜ್ವಾಲೆಗಳು ಮುಗಿಲೆತ್ತರಕ್ಕೆ ಚಿಮ್ಮಿವೆ. ಈ ವಾರದ ಹಿಂದಷ್ಟೇ ಆರಂಭವಾದ ಸಂಘರ್ಷದ ಮುಂದಿನ ಹಂತದಲ್ಲಿ 'ಹಲವು ಅಚ್ಚರಿ'ಗಳಿರಲಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಎಚ್ಚರಿಕೆ ನೀಡಿದ್ದರು.

ಟೆಹ್ರಾನ್‌ನ ಇಂಧನ ಶೇಖರಣಾ ಘಟಕಗಳ ಮೇಲೆ ವಾಯುದಾಳಿ ನಡೆಸಿರುವುದನ್ನು ಇಸ್ರೇಲ್ ಸೇನೆ ಖಚಿತಪಡಿಸಿದೆ. ಈ ಯುದ್ಧದಲ್ಲಿ ಇದೇ ಮೊದಲ ಬಾರಿಗೆ ನಾಗರಿಕ ಕೈಗಾರಿಕಾ ಘಟಕವನ್ನು ಗುರಿಯಾಗಿಸಲಾಗಿದೆ. ಇರಾನ್ ರಾಜಧಾನಿ ಮತ್ತು ಉತ್ತರದ ನೆರೆಯ ಪ್ರಾಂತ್ಯಗಳಿಗೆ ಇಂಧನ ಪೂರೈಸುವ ಈ ಪ್ರಮುಖ ಘಟಕದ ಮೇಲಿನ ದಾಳಿಗೆ ಅಮೆರಿಕ ಮತ್ತು ಝಿಯೋನಿಸ್ಟ್ ಆಡಳಿತವೇ (ಇಸ್ರೇಲ್) ನೇರ ಕಾರಣ ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ಆರೋಪಿಸಿವೆ. ದಾಳಿಯ ತೀವ್ರತೆಗೆ ಟೆಹ್ರಾನ್‌ನ ರಾತ್ರಿಯ ಆಗಸದಲ್ಲಿ ಬೆಂಕಿಯ ಕೆನ್ನಾಲಿಗೆ ಆವರಿಸಿದ್ದ ದೃಶ್ಯಗಳು ಕಂಡುಬಂದಿವೆ.

ದುಬೈ ಮರೀನಾ ಮೇಲೆ ಬಿದ್ದ ಕ್ಷಿಪಣಿ ಅವಶೇಷ

ಮತ್ತೊಂದೆಡೆ, ಆಗಸದಲ್ಲೇ ಹೊಡೆದುರುಳಿಸಲಾದ ಇರಾನ್‌ನ ಕ್ಷಿಪಣಿಯೊಂದರ ಅವಶೇಷಗಳು ಶನಿವಾರ ದುಬೈ ಮರೀನಾದಲ್ಲಿರುವ ಟವರ್‌ವೊಂದರ ಮೇಲೆ ಬಿದ್ದಿದ್ದು, ದಟ್ಟ ಹೊಗೆ ಆವರಿಸಿತ್ತು. ವಾಯು ರಕ್ಷಣಾ ವ್ಯವಸ್ಥೆಯು ಕ್ಷಿಪಣಿಯನ್ನು ಯಶಸ್ವಿಯಾಗಿ ತಡೆದು ನಾಶಪಡಿಸಿದೆ, ಆದರೆ ಕೆಳಗೆ ಬಿದ್ದ ಅದರ ಅವಶೇಷಗಳಿಂದ ಮರೀನಾದಲ್ಲಿರುವ ಕಟ್ಟಡದ ಹೊರಾಂಗಣಕ್ಕೆ ಸಣ್ಣಪುಟ್ಟ ಹಾನಿಯಾಗಿದೆ ಎಂದು ದುಬೈ ಸರ್ಕಾರ ಘಟನೆಯನ್ನು ಖಚಿತಪಡಿಸಿದೆ.

ಇರಾನ್ ನಾಯಕರ ನಡುವೆಯೇ ಒಡಕು

ಇದಕ್ಕೂ ಮುನ್ನ, ನೆರೆಯ ರಾಷ್ಟ್ರಗಳ ಮೇಲಿನ ದಾಳಿಗಾಗಿ ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಕ್ಷಮೆಯಾಚಿಸಿದ್ದಾರೆ. ಆದರೂ, ಗಲ್ಫ್ ಅರಬ್ ರಾಷ್ಟ್ರಗಳತ್ತ ಇರಾನ್‌ನ ಕ್ಷಿಪಣಿಗಳು ಮತ್ತು ಡ್ರೋನ್‌ಗಳು ನುಗ್ಗುತ್ತಲೇ ಇವೆ. ಟೆಹ್ರಾನ್‌ನ ಯುದ್ಧತಂತ್ರ ಬದಲಾಗುವುದಿಲ್ಲ ಎಂದು ಕತ್ತರ್‌ಪಂಥೀಯರು ಪ್ರತಿಪಾದಿಸಿದ್ದಾರೆ. ಯುದ್ಧದ ಆರಂಭಿಕ ವಾಯುದಾಳಿಯಲ್ಲಿ ಇರಾನ್‌ನ ಸುಪ್ರೀಂ ಲೀಡರ್ ಅಯತೊಲ್ಲಾ ಅಲಿ ಖಮೇನಿ ಹತ್ಯೆಯಾದ ಬಳಿಕ ದೇಶವನ್ನು ಮುನ್ನಡೆಸುತ್ತಿರುವ ನಾಯಕತ್ವ ಮಂಡಳಿಯ ಸದಸ್ಯರ ನಡುವೆಯೇ ತೀವ್ರ ಒಡಕು ಮೂಡಿದೆ. ಯುದ್ಧವನ್ನು ಶಮನಗೊಳಿಸಲು ಬಯಸುವ ರಾಜಕಾರಣಿಗಳು ಹಾಗೂ ಅಮೆರಿಕ ಮತ್ತು ಇಸ್ರೇಲ್ ವಿರುದ್ಧ ಹೋರಾಡಲು ಪಣತೊಟ್ಟಿರುವ ಕಾಯ್ದುಕೊಂಡಿರುವ ಕಟ್ಟರ್‌ಪಂಥೀಯರ ನಡುವಿನ ಈ ಸಂಘರ್ಷವು ಭವಿಷ್ಯದ ರಾಜತಾಂತ್ರಿಕ ಪರಿಹಾರದ ಪ್ರಯತ್ನಗಳನ್ನು ಮತ್ತಷ್ಟು ಜಟಿಲಗೊಳಿಸಿದೆ.

Read More
Next Story