ಇಸ್ರೇಲ್ ಇರಾನಿನ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಲಿ: ಟ್ರಂಪ್
x

ಇಸ್ರೇಲ್ ಇರಾನಿನ ಪರಮಾಣು ಕೇಂದ್ರಗಳ ಮೇಲೆ ದಾಳಿ ನಡೆಸಲಿ: ಟ್ರಂಪ್


ಇರಾನಿನ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ ಮಾಡಬೇಕು ಎಂದು ರಿಪಬ್ಲಿಕನ್ ಅಧ್ಯಕ್ಷೀಯ ಅಭ್ಯರ್ಥಿ ಮತ್ತು ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದರು. ಉತ್ತರ ಕೆರೊಲಿನಾದ ಪ್ರಮುಖ ಸೇನಾ ನೆಲೆಯ ಬಳಿಯ ಫೇಟ್ಟೆವಿಲ್‌ ನಲ್ಲಿ ನಡೆದ ಸಭೆಯಲ್ಲಿ ಮಾತನಾಡುತ್ತಿದ್ದರು.

ಇರಾನಿನ ಪರಮಾಣು ಕೇಂದ್ರಗಳ ಮೇಲೆ ಇಸ್ರೇಲ್ ದಾಳಿ ಮಾಡುವ ಸಾಧ್ಯತೆ ಬಗ್ಗೆ ಕೇಳಿದಾಗ, ಅಧ್ಯಕ್ಷ ಜೋ ಬೈಡೆನ್ ಅವರ ಪ್ರತಿಕ್ರಿಯೆಯನ್ನು ಉಲ್ಲೇಖಿಸಿದರು. ʻಇರಾನ್‌ ಪರಮಾಣು ಸ್ಥಾವರ-ಶಸ್ತ್ರಗಳ ಮೇಲೆ ದಾಳಿ ನಡೆಸುವವರೆಗೆ, ನಾವು ದಾಳಿ ನಡೆಸುವುದಿಲ್ಲ,ʼ ಎಂಬ ಬೈಡೆನ್‌ ಹೇಳಿಕೆಗೆ ಪ್ರತಿಕ್ರಿಯಿಸಿ,ʼ ಇದು ನಾನು ಕೇಳಿದ ಅತ್ಯಂತ ಹುಚ್ಚುತನದ ಉತ್ತರ,ʼ ಎಂದು ಟ್ರಂಪ್ ಹೇಳಿದರು.

ಬೈಡೆನ್ ತಪ್ಪು ಮಾಡಿದ್ದಾರೆ: ʻಬೈಡೆನ್ ತಪ್ಪು ಮಾಡಿದ್ದಾರೆ. ಪರಮಾಣು ಶಸ್ತ್ರಾಸ್ತ್ರಗಳು ದೊಡ್ಡ ಅಪಾಯವಾಗಿರುವುದರಿಂದ, ಅವನ್ನು ಗುರಿಯಾಗಿಸಬೇಕು,ʼ ಎಂದು ಹೇಳಿದರು.

ʻಶೀಘ್ರದಲ್ಲೇ ಇರಾನ್‌ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲಿದೆ. ಆನಂತರ ನೀವು ಸಮಸ್ಯೆ ಎದುರಿಸುತ್ತೀರಿ. ಇಸ್ರೇಲ್ ಯಾವ ರೀತಿ ಪ್ರತಿಕ್ರಿಯಿಸುತ್ತದೆ ಎಂಬುದು ಶೀಘ್ರವೇ ಗೊತ್ತಾಗಲಿದೆ,ʼ ಎಂದು ಟ್ರಂಪ್ ಹೇಳಿದರು. ʻಇಸ್ರೇಲಿಗೆ ಪ್ರತಿಕ್ರಿಯಿಸುವ ಹಕ್ಕಿದೆ ಎಂದು ಎಲ್ಲ ಜಿ7 ಸದಸ್ಯರು ಒಪ್ಪುತ್ತಾರೆ. ಆದರೆ, ಪ್ರಮಾಣಕ್ಕೆ ಅನುಗುಣವಾಗಿ ಪ್ರತಿಕ್ರಿಯಿಸಬೇಕು,ʼ ಎಂದು ಬೈಡೆನ್‌ ಹೇಳಿದ್ದರು.

ಬೈಡೆನ್, ಹ್ಯಾರಿಸ್ ಅವರ ಟೀಕೆ: ಬೈಡೆನ್ ಮತ್ತು ಅಧ್ಯಕ್ಷೀಯ ಸ್ಪರ್ಧೆಯ ಪ್ರತಿಸ್ಪರ್ಧಿ ಕಮಲಾ ಹ್ಯಾರಿಸ್ ಅವರನ್ನು ಟೀಕಿಸಿದರು. ತಾವು ಕಮಾಂಡರ್ ಇನ್ ಚೀಫ್ ಆಗಿದ್ದರೆ ದಾಳಿ ನಡೆಯುತ್ತಿರಲಿಲ್ಲ. ಒಂದುವೇಳೆ ನವೆಂಬರ್‌ನಲ್ಲಿ ಹ್ಯಾರಿಸ್ ಗೆದ್ದರೆ, ಜಗ‌ತ್ತಿಗೆ ಬೆಂಕಿ ಬೀಳುತ್ತದೆ ,ʼಎಂದು ಹೇಳಿದರು.

ʻನಾನು 3ನೇ ವಿಶ್ವ ಸಮರದ ಬಗ್ಗೆ ಬಹಳ ಕಾಲದಿಂದ ಮಾತನಾಡುತ್ತಿದ್ದೇನೆ. ನಾನು ಈ ಬಗ್ಗೆ ಭವಿಷ್ಯ ಹೇಳಲು ಬಯಸುವುದಿಲ್ಲ. ಏಕೆಂದರೆ ಅದು ನಿಜವಾಗುವ ಸಾಧ್ಯತೆ ಇರುತ್ತದೆ. ಆದರೆ, ಅವರು ಜಾಗತಿಕ ದುರಂತಕ್ಕೆ ಬಹಳ ಹತ್ತಿರದಲ್ಲಿದ್ದಾರೆ,ʼ ಎಂದು ಹೇಳಿದರು.

Read More
Next Story