
Iran-Israel conflict: ಇಸ್ರೇಲ್-ಇರಾನ್ ಯುದ್ಧದ ಪರಿಣಾಮ: 80 ವಿಮಾನಗಳ ಸಂಚಾರ ರದ್ದು
ಬೆಂಗಳೂರಿನಿಂದ ನಿರ್ಗಮನ ಮತ್ತು ಆಗಮನವಾಗಬೇಕಿದ್ದ ಒಟ್ಟು 80 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಈ ಕ್ರಮ ಕೈಗೊಳ್ಳಲಾಗಿದೆ.
ಮಧ್ಯಪ್ರಾಚ್ಯದಲ್ಲಿ ಇಸ್ರೇಲ್ ಹಾಗೂ ಇರಾನ್ ನಡುವೆ ಉಲ್ಬಣಗೊಳ್ಳುತ್ತಿರುವ ಯುದ್ಧದ ಕಿಚ್ಚು ಈಗ ಜಾಗತಿಕ ನಾಗರಿಕ ವಿಮಾನಯಾನ ಕ್ಷೇತ್ರದ ಮೇಲೆ ಭಾರಿ ಪರಿಣಾಮ ಬೀರಿದೆ. ಈ ಯುದ್ಧದ ಭೀತಿಯಿಂದಾಗಿ ಅಂತಾರಾಷ್ಟ್ರೀಯ ವಾಯುಪ್ರದೇಶದಲ್ಲಿ ಉಂಟಾಗಿರುವ ನಿರ್ಬಂಧಗಳು ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೂ ನೇರ ಪ್ರಭಾವ ಬೀರಿದ್ದು, ನೂರಾರು ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಅಂತಾರಾಷ್ಟ್ರೀಯ ವಾಯುಪ್ರದೇಶದ ಸುರಕ್ಷತೆಯ ದೃಷ್ಟಿಯಿಂದ ಬೆಂಗಳೂರಿನಿಂದ ಕಳೆದ ಮೂರು ದಿನಗಳಿಂದ ನಿರ್ಗಮನ ಮತ್ತು ಆಗಮನವಾಗಬೇಕಿದ್ದ ಒಟ್ಟು 80 ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇದರಲ್ಲಿ 39 ಆಗಮನ ಮತ್ತು 41 ನಿರ್ಗಮನ ವಿಮಾನಗಳು ಸೇರಿವೆ. ಸೋಮವಾರ 9 ನಿರ್ಗಮನ ರೈಲು ಮತ್ತು 15 ಆಗಮನ ವಿಮಾನಗಳು ರದ್ದುಗೊಂಡಿವೆ ಎಂದು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಯುದ್ಧ ಪೀಡಿತ ಪ್ರದೇಶದಲ್ಲಿ ವಿಮಾನ ಹಾರಾಟ ನಡೆಸುವುದು ಅಪಾಯಕಾರಿ ಎಂಬ ಕಾರಣಕ್ಕೆ ವಿಮಾನಯಾನ ಸಂಸ್ಥೆಗಳು ಈ ನಿರ್ಧಾರವನ್ನು ತೆಗೆದುಕೊಂಡಿವೆ. ಈ ನಿರ್ಬಂಧಗಳು ಮುಂದುವರಿಯುವ ಸಾಧ್ಯತೆಯಿದೆ. ಅಂತಾರಾಷ್ಟ್ರೀಯ ವಿಮಾನಯಾನ ಸಂಸ್ಥೆಗಳು ತಮ್ಮ ಹಾರಾಟದ ವೇಳಾಪಟ್ಟಿಯನ್ನು ಮರುಹೊಂದಿಸಲ್ಲಿ ತೊಡಗಿವೆ.
ಬೆಂಗಳೂರಿನಿಂದ ಪಶ್ಚಿಮ ಏಷ್ಯಾ ರಾಷ್ಟ್ರಗಳಿಗೆ ಸಂಪರ್ಕ ಕಲ್ಪಿಸುವ ವಿಮಾನಗಳು ಅತಿ ಹೆಚ್ಚು ಸಂಪರ್ಕ ಕಡಿತಗೊಂಡಿವೆ. ಅಬುಧಾಬಿ ಮತ್ತು ದುಬೈ (ಯುಎಇ), ರಿಯಾದ್, ಜಿದ್ದಾ ಮತ್ತು ದಮ್ಮಾಮ್ (ಸೌದಿ ಅರೇಬಿಯಾ), ದೋಹಾ (ಕತಾರ್) ನಗರಗಳು ಬೆಂಗಳೂರಿನೊಂದಿಗೆ ಅತಿ ಹೆಚ್ಚು ವ್ಯಾಪಾರ, ಉದ್ಯೋಗ ಮತ್ತು ಪ್ರವಾಸೋದ್ಯಮದ ಸಂಬಂಧ ಹೊಂದಿವೆ. ಸಾವಿರಾರು ಕನ್ನಡಿಗರು ಈ ರಾಷ್ಟ್ರಗಳಲ್ಲಿ ಉದ್ಯೋಗ ಮಾಡುತ್ತಿದ್ದು, ಈ ವಿಮಾನ ರದ್ದು ಮಾಡಿರುವುದರಿಂದ ಅವರ ಸಂಚಾರಕ್ಕೆ ಅಡ್ಡಿಯಾಗಿದೆ.
ಇರಾನ್ ಮತ್ತು ಇಸ್ರೇಲ್ ನಡುವೆ ನಡೆಯುತ್ತಿರುವ ಕ್ಷಿಪಣಿ ದಾಳಿಗಳು ಮತ್ತು ಡ್ರೋನ್‌ಗಳ ಹಾವಳಿಯಿಂದಾಗಿ ಮಧ್ಯಪ್ರಾಚ್ಯದಲ್ಲಿ ಯುದ್ಧದ ಪರಿಸ್ಥಿತಿ ಇದೆ. ನಾಗರಿಕ ವಿಮಾನಗಳು ಈ ಮಾರ್ಗವಾಗಿ ಹಾರಾಟ ನಡೆಸಿದರೆ ಕ್ಷಿಪಣಿಗಳಿಗೆ ಗುರಿಯಾಗುವ ಅಥವಾ ತಾಂತ್ರಿಕ ತೊಂದರೆಗೆ ಸಿಲುಕುವ ಭೀತಿಯಿದೆ. ಹೀಗಾಗಿ, ಪ್ರಯಾಣಿಕರ ಸುರಕ್ಷತೆಯನ್ನು ಗಮನದಲ್ಲಿಟ್ಟುಕೊಂಡು ಅಂತಾರಾಷ್ಟ್ರೀಯ ವಿಮಾನಯಾನ ನಿಯಂತ್ರಣ ಸಂಸ್ಥೆಗಳು ಈ ಮಾರ್ಗಗಳನ್ನು ಬಳಸದಂತೆ ಎಚ್ಚರಿಕೆ ನೀಡಿವೆ.
ಟಿಕೆಟ್ ದರ ಏರಿಕೆ
ನೇರ ಮಾರ್ಗಗಳು ರದ್ದಾಗಿರುವುದರಿಂದ, ವಿಮಾನಗಳು ಈಗ ಆಫ್ರಿಕಾ ಅಥವಾ ಇತರ ಪರ್ಯಾಯ ಮಾರ್ಗಗಳ ಮೂಲಕ ಸಂಚರಿಸಬೇಕಾಗಿದೆ. ಇದರಿಂದ ಹಾರಾಟದ ಸಮಯ 2 ರಿಂದ 5 ಗಂಟೆಗಳವರೆಗೆ ಹೆಚ್ಚಾಗುತ್ತಿದೆ ಮತ್ತು ಇಂಧನ ವೆಚ್ಚವೂ ಅಧಿಕವಾಗುತ್ತಿದೆ. ಇದು ವಿಮಾನ ಟಿಕೆಟ್ ದರದಲ್ಲಿ ಗಣನೀಯ ಏರಿಕೆಗೆ ಕಾರಣವಾಗಿದೆ. ತುರ್ತು ಕೆಲಸಗಳಿಗಾಗಿ ಅಥವಾ ರಜೆ ಮುಗಿಸಿ ಕೆಲಸಕ್ಕೆ ಮರಳಬೇಕಿದ್ದ ಪ್ರಯಾಣಿಕರು ವಿಮಾನ ನಿಲ್ದಾಣಗಳಲ್ಲಿ ಕಾಯುವಂತಾಗಿದೆ. ಅನೇಕ ವಿಮಾನಯಾನ ಸಂಸ್ಥೆಗಳು ಹಣ ಮರುಪಾವತಿ ನೀಡುತ್ತಿದ್ದರೂ, ಪರ್ಯಾಯ ವಿಮಾನಗಳ ಲಭ್ಯತೆ ಕಡಿಮೆಯಿದೆ ಎಂದು ಹೇಳಲಾಗಿದೆ.

