LIVE Iran Air strike|ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ; ಭಾರತೀಯರ ಪರದಾಟ
x

ಶನಿವಾರದಂದು ಇಸ್ರೇಲ್ ಮತ್ತು ಅಮೆರಿಕದ ಪಡೆಗಳು ಜಂಟಿಯಾಗಿ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಭಾರಿ ವೈಮಾನಿಕ ದಾಳಿ ನಡೆಸಿವೆ.

Iran Air strike|ಇರಾನ್ ಮೇಲೆ ಇಸ್ರೇಲ್-ಅಮೆರಿಕ ಜಂಟಿ ದಾಳಿ; ಭಾರತೀಯರ ಪರದಾಟ

ಟೆಹ್ರಾನ್ ಮೇಲೆ ದಾಳಿ ನಡೆದ ಸಮಯದಲ್ಲಿ ಇಸ್ರೇಲ್‌ನ ಟೆಲ್ ಅವಿವ್ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹೋಗುವ ಏರ್ ಇಂಡಿಯಾ ವಿಮಾನಕ್ಕಾಗಿ ಕಾಯುತ್ತಿದ್ದ ಭಾರತೀಯ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ.


Click the Play button to hear this message in audio format

ಮಧ್ಯಪ್ರಾಚ್ಯದಲ್ಲಿ ಯುದ್ದೋನ್ಮಾದ ವಾತಾವರಣ ಮತ್ತೆ ಸೃಷ್ಟಿಯಾಗಿದ್ದು, ಶನಿವಾರದಂದು ಇಸ್ರೇಲ್ ಮತ್ತು ಅಮೆರಿಕದ ಪಡೆಗಳು ಜಂಟಿಯಾಗಿ ಇರಾನ್ ರಾಜಧಾನಿ ಟೆಹ್ರಾನ್ ಮೇಲೆ ಭಾರಿ ವೈಮಾನಿಕ ದಾಳಿ ನಡೆಸಿವೆ. ನಗರದ ಹೃದಯ ಭಾಗದಲ್ಲಿರುವ ಇರಾನ್‌ನ ಸರ್ವೋಚ್ಛ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಕಚೇರಿಗಳ ಸಮೀಪದಲ್ಲೇ ಮೊದಲ ಸ್ಫೋಟ ಸಂಭವಿಸಿದೆ.

ಈ ಹಗಲು ಹೊತ್ತಿನ ಕಾರ್ಯಾಚರಣೆಯಿಂದಾಗಿ ಟೆಹ್ರಾನ್ ನಗರದ ಕೇಂದ್ರ ಭಾಗದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಇರಾನ್ ತನ್ನ ವಾಯುಮಾರ್ಗವನ್ನು ಸಂಪೂರ್ಣವಾಗಿ ಬಂದ್ ಮಾಡಿದೆ. ಇಸ್ರೇಲ್ ಈ ಕಾರ್ಯಾಚರಣೆಗೆ 'ಮಗೇನ್ ಯೆಹೂದಾ' ಎಂದು ಹೆಸರಿಟ್ಟಿದ್ದು, ಬೆದರಿಕೆಗಳನ್ನು ಹತ್ತಿಕ್ಕಲು ಈ ಕ್ರಮ ಅನಿವಾರ್ಯವಾಗಿತ್ತು ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಸ್ಪಷ್ಟಪಡಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಸೋಷಿಯಲ್ ಮೀಡಿಯಾದಲ್ಲಿ'ಟ್ರುತ್ ಸೋಷಿಯಲ್'ನಲ್ಲಿ ಎಂಟು ನಿಮಿಷಗಳ ಸುದೀರ್ಘ ವಿಡಿಯೋ ಬಿಡುಗಡೆ ಮಾಡುವ ಮೂಲಕ ಈ ದಾಳಿಯಲ್ಲಿ ಅಮೆರಿಕದ ಪಾಲ್ಗೊಳ್ಳುವಿಕೆಯನ್ನು ಖಚಿತಗೊಳಿಸಿದ್ದಾರೆ. ಅಮೆರಿಕದ ಅತ್ಯಂತ ದೊಡ್ಡ ವಿಮಾನವಾಹಕ ನೌಕೆ 'ಯುಎಸ್ಎಸ್ ಜೆರಾಲ್ಡ್ ಆರ್. ಫೋರ್ಡ್' ಸೇರಿದಂತೆ ಯುಎಸ್ಎಸ್ ಅಬ್ರಹಾಂ ಲಿಂಕನ್ ಮತ್ತು 50ಕ್ಕೂ ಹೆಚ್ಚು ಅತ್ಯಾಧುನಿಕ ಯುದ್ಧ ವಿಮಾನಗಳು ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿವೆ ಎಂದು ವರದಿಯಾಗಿದೆ. ಟೆಹ್ರಾನ್ ಮಾತ್ರವಲ್ಲದೆ ಇಸ್ಫಹಾನ್, ಕೋಮ್ ಮತ್ತು ಕರಾಜ್‌ ನಗರಗಳಲ್ಲಿಯೂ ಸ್ಫೋಟದ ಸದ್ದು ಕೇಳಿಬಂದಿದ್ದು, ಇರಾನ್‌ನಲ್ಲಿ ಮೊಬೈಲ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.

ಟ್ರಂಪ್‌ ವಿಡಿಯೋ

ದಾಳಿಯ ಬೆನ್ನಲ್ಲೇ ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಇಸ್ರೇಲ್‌ನ ಗುಪ್ತಚರ ಸಂಸ್ಥೆ ಮೊಸಾದ್ ಇರಾನ್ ಜನರನ್ನು ಉದ್ದೇಶಿಸಿ ಸಂದೇಶ ರವಾನಿಸಿದ್ದು, "ನೀವು ಏಕಾಂಗಿಯಲ್ಲ, ನಾವು ನಿಮ್ಮೊಂದಿಗಿದ್ದೇವೆ" ಎಂದು ಹೇಳುವ ಮೂಲಕ ಅಲ್ಲಿನ ಆಡಳಿತದ ವಿರುದ್ಧ ಹೋರಾಡುತ್ತಿರುವ ಜನರಿಗೆ ಬೆಂಬಲ ಸೂಚಿಸಿದೆ. ಇತ್ತ ಇಸ್ರೇಲ್‌ನಲ್ಲಿ ಮುಂಜಾಗ್ರತಾ ಕ್ರಮವಾಗಿ ನಾಗರಿಕ ವಿಮಾನಯಾನ ಸೇವೆಗಳನ್ನು ರದ್ದುಗೊಳಿಸಲಾಗಿದ್ದು, ದೇಶಾದ್ಯಂತ ಸೈರನ್ ಮೊಳಗಿಸಲಾಗುತ್ತಿದೆ.

ಖಮೇನಿ ಎಲ್ಲಿದ್ದಾರೆ?

86 ವರ್ಷದ ಅಯತೊಲ್ಲಾ ಅಲಿ ಖಮೇನಿ ಅವರು ದಾಳಿಯ ಸಮಯದಲ್ಲಿ ಕಚೇರಿಯಲ್ಲಿದ್ದರೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕಳೆದ ಕೆಲವು ದಿನಗಳಿಂದ ಅವರು ಸಾರ್ವಜನಿಕವಾಗಿ ಕಾಣಿಸಿಕೊಂಡಿಲ್ಲವಾದರೂ, ದಾಳಿಯ ಬೆನ್ನಲ್ಲೇ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಇರಾನ್‌ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದಂತೆ ಅಮೆರಿಕದೊಂದಿಗೆ ಉಂಟಾಗಿದ್ದ ಉದ್ವಿಗ್ನತೆಯೇ ಈ ದಾಳಿಗೆ ಮುಖ್ಯ ಕಾರಣ ಎನ್ನಲಾಗುತ್ತಿದೆ.

ಇಸ್ರೇಲ್ ರಕ್ಷಣಾ ಸಚಿವರು ಹೇಳಿದ್ದೇನು?

ಈ ದಾಳಿಯನ್ನು ʻಮುನ್ನೆಚ್ಚರಿಕಾ ಕ್ರಮʼ ಎಂದು ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಹೇಳಿದ್ದಾರೆ. ಇಸ್ರೇಲ್ ಮೇಲೆ ಎದುರಾಗಬಹುದಾದ ಬೆದರಿಕೆಗಳನ್ನು ಹತ್ತಿಕ್ಕಲು ಮತ್ತು ಅಪಾಯಗಳನ್ನು ನಿವಾರಿಸಲು ಈ ನಿರ್ಧಾರ ಅನಿವಾರ್ಯವಾಗಿತ್ತು ಎಂದು ಅವರು ತಿಳಿಸಿದ್ದಾರೆ. ದಾಳಿಯ ಬೆನ್ನಲ್ಲೇ ಇಸ್ರೇಲ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಲಾಗಿದ್ದು, ಜನರನ್ನು ಸುರಕ್ಷಿತ ಸ್ಥಳಗಳಲ್ಲಿ ಇರುವಂತೆ ಸೂಚಿಸಲಾಗಿದೆ.

ಭಾರತಕ್ಕೆ ಹೊರಟಿದ್ದ ಪ್ರಯಾಣಿಕರ ಪರದಾಟ

ಟೆಹ್ರಾನ್ ಮೇಲೆ ದಾಳಿ ನಡೆದ ಸಮಯದಲ್ಲಿ ಇಸ್ರೇಲ್‌ನ ಟೆಲ್ ಅವಿವ್ ವಿಮಾನ ನಿಲ್ದಾಣದಲ್ಲಿ ದೆಹಲಿಗೆ ಹೋಗುವ ಏರ್ ಇಂಡಿಯಾ (AI 140) ವಿಮಾನಕ್ಕಾಗಿ ಕಾಯುತ್ತಿದ್ದ ಭಾರತೀಯ ಪ್ರಯಾಣಿಕರು ತೀವ್ರ ಆತಂಕಕ್ಕೆ ಒಳಗಾಗಿದ್ದಾರೆ. ಏಕಾಏಕಿ ಸೈರನ್ ಮೊಳಗಿದ್ದರಿಂದ ಪ್ರಯಾಣಿಕರು ವಿಮಾನ ನಿಲ್ದಾಣದ ಬಾಂಬ್ ಶೆಲ್ಟರ್‌ಗಳತ್ತ ಓಡಬೇಕಾದ ಪರಿಸ್ಥಿತಿ ನಿರ್ಮಾಣವಾಯಿತು. ಇತ್ತ ಇರಾನ್ ಕೂಡ ತನ್ನ ವಾಯುಮಾರ್ಗವನ್ನು ಸಂಪೂರ್ಣವಾಗಿ ಮುಚ್ಚಿದ್ದು, ಹಲವು ಅಂತರಾಷ್ಟ್ರೀಯ ವಿಮಾನಗಳ ಸಂಚಾರದಲ್ಲಿ ವ್ಯತ್ಯಯ ಉಂಟಾಗಿದೆ.

ಇರಾನ್‌ನ ಪ್ರತೀಕಾರದ ಎಚ್ಚರಿಕೆ

ತನ್ನ ನೆಲದ ಮೇಲಿನ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವುದಾಗಿ ಇರಾನ್ ಈ ಹಿಂದೆಯೇ ಎಚ್ಚರಿಸಿತ್ತು. ಈ ಪ್ರದೇಶದಲ್ಲಿರುವ ಅಮೆರಿಕದ ಮಿಲಿಟರಿ ನೆಲೆಗಳು ಮತ್ತು ಸೈನಿಕರು ನಮ್ಮ ಗುರಿಯಾಗಲಿದ್ದಾರೆ ಎಂದು ಇರಾನ್ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ಟೆಹ್ರಾನ್ ಸೇರಿದಂತೆ ಇರಾನ್‌ನ ಇಸ್ಫಹಾನ್ ಮತ್ತು ಕರಾಜ್ ನಗರಗಳಲ್ಲೂ ಸ್ಫೋಟದ ಶಬ್ದಗಳು ಕೇಳಿಬರುತ್ತಿದ್ದು, ಯುದ್ಧದ ಭೀತಿ ದಟ್ಟವಾಗಿದೆ.

ಭಾರತೀಯರಿಗೆ ಸಹಾಯವಾಣಿ

ಭಾರತೀಯ ರಾಯಭಾರ ಕಚೇರಿಯು ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರಿಗೆ ತುರ್ತು ಎಚ್ಚರಿಕೆ ನೀಡಿದೆ. ಅನಗತ್ಯ ಪ್ರಯಾಣವನ್ನು ತಪ್ಪಿಸುವಂತೆ ಮತ್ತು ಸುರಕ್ಷಿತ ಆಶ್ರಯ ತಾಣಗಳ ಬಗ್ಗೆ ಜಾಗೃತರಾಗಿರುವಂತೆ ಸೂಚಿಸಿದೆ. ಯಾವುದೇ ತುರ್ತು ಪರಿಸ್ಥಿತಿಯಲ್ಲಿ ಸಹಾಯಕ್ಕಾಗಿ 24 ಗಂಟೆಗಳ ಸಹಾಯವಾಣಿ ಸಂಖ್ಯೆ +972-54-7520711 ಅನ್ನು ಸಂಪರ್ಕಿಸಲು ತಿಳಿಸಲಾಗಿದೆ.

Live Updates

  • 28 Feb 2026 3:02 PM IST

    ಗಲ್ಫ್ ರಾಷ್ಟ್ರಗಳಲ್ಲಿ ಸರಣಿ ಸ್ಫೋಟ: ಅಮೆರಿಕ ಸೇನಾ ನೆಲೆಗಳೇ ಗುರಿ?

    ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮಿತಿಮೀರಿದ್ದು, ಅಮೆರಿಕದ ಪ್ರಮುಖ ಮಿಲಿಟರಿ ನೆಲೆಗಳನ್ನು ಹೊಂದಿರುವ ಬಹ್ರೇನ್, ಯುಎಇ ಮತ್ತು ಕತಾರ್‌ನಲ್ಲಿ ಶನಿವಾರ ಸರಣಿ ಸ್ಫೋಟಗಳು ಸಂಭವಿಸಿವೆ ಎಂದು ವರದಿಯಾಗಿದೆ. ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ಜಂಟಿ ದಾಳಿ ನಡೆಸಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದ್ದು, ಇರಾನ್ ಈ ಪ್ರತಿಹಂತಕ ದಾಳಿ ನಡೆಸಿದೆ ಎಂದು ಶಂಕಿಸಲಾಗಿದೆ.

    ಬಹ್ರೇನ್‌ನಲ್ಲಿ ಹೈ ಅಲರ್ಟ್

    ಬಹ್ರೇನ್ ರಾಜಧಾನಿ ಮನಾಮದಲ್ಲಿರುವ ಅಮೆರಿಕದ ನೌಕಾಪಡೆಯ 5ನೇ ಫ್ಲೀಟ್ ಕೇಂದ್ರ ಕಚೇರಿಯನ್ನು ಗುರಿಯಾಗಿಸಿ ಕ್ಷಿಪಣಿ ದಾಳಿ ನಡೆದಿದೆ ಎಂದು ವರದಿಗಳು ತಿಳಿಸಿವೆ. ಘಟನೆಯ ಹಿನ್ನೆಲೆಯಲ್ಲಿ ಬಹ್ರೇನ್ ಆಂತರಿಕ ಸಚಿವಾಲಯವು ತುರ್ತು ಪ್ರಕಟಣೆ ಹೊರಡಿಸಿದ್ದು, ನಾಗರಿಕರು ಕೂಡಲೇ ಹತ್ತಿರದ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಿದೆ. ಮನಾಮದ ಜುಫೈರ್ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಜನರಲ್ಲಿ ಆತಂಕ ಮನೆಮಾಡಿದೆ.

    ಅಬುಧಾಬಿ ಮತ್ತು ಕತಾರ್‌ನಲ್ಲೂ ಸ್ಫೋಟದ ಸದ್ದು

    ಯುಎಇ ರಾಜಧಾನಿ ಅಬುಧಾಬಿಯ ಅಲ್ ದಫ್ರಾ ವಾಯುನೆಲೆ ಮತ್ತು ಕತಾರ್‌ನ ಬೃಹತ್ ಅಲ್ ಉದೈದ್ ವಾಯುನೆಲೆಗಳ ಬಳಿಯೂ ಸ್ಫೋಟಗಳು ಸಂಭವಿಸಿವೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ. ಕತಾರ್‌ನ ರಕ್ಷಣಾ ಸಚಿವಾಲಯವು ತನ್ನ ಪೇಟ್ರಿಯಾಟ್ ಕ್ಷಿಪಣಿ ನಿರೋಧಕ ವ್ಯವಸ್ಥೆಯ ಮೂಲಕ ಕನಿಷ್ಠ ಒಂದು ಕ್ಷಿಪಣಿಯನ್ನು ಹೊಡೆದುರುಳಿಸಿರುವುದಾಗಿ ದೃಢಪಡಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಯುಎಇ, ಕತಾರ್ ಮತ್ತು ಕುವೈತ್ ತಮ್ಮ ವಾಯುಮಂಡಲವನ್ನು ತಾತ್ಕಾಲಿಕವಾಗಿ ಬಂದ್ ಮಾಡಿವೆ.

  • 28 Feb 2026 2:11 PM IST

    ಇರಾನ್ ಅಸ್ತಿತ್ವದ ಭೀತಿ ತೊಡೆದುಹಾಕಲು ಇಸ್ರೇಲ್-ಅಮೆರಿಕ ಜಂಟಿ ಕಾರ್ಯಾಚರಣೆ: ಬೆಂಜಮಿನ್ ನೆತನ್ಯಾಹು ಘೋಷಣೆ

    ಇರಾನ್‌ನ ಭಯೋತ್ಪಾದಕ ಆಡಳಿತದಿಂದ ಎದುರಾಗಿರುವ ಅಸ್ತಿತ್ವದ ಭೀತಿಯನ್ನು ಹೋಗಲಾಡಿಸಲು ಇಸ್ರೇಲ್ ಮತ್ತು ಅಮೆರಿಕ ಜಂಟಿ ಮಿಲಿಟರಿ ಕಾರ್ಯಾಚರಣೆಯನ್ನು ಆರಂಭಿಸಿವೆ ಎಂದು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶನಿವಾರ ಅಧಿಕೃತವಾಗಿ ಘೋಷಿಸಿದ್ದಾರೆ. ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಅವರು, ಈ ಕಾರ್ಯಾಚರಣೆಯು ಇರಾನ್ ಜನರು ತಮ್ಮ ಭವಿಷ್ಯವನ್ನು ತಾವೇ ರೂಪಿಸಿಕೊಳ್ಳಲು ಪೂರಕವಾದ ವಾತಾವರಣವನ್ನು ನಿರ್ಮಿಸಲಿದೆ ಎಂದು ತಿಳಿಸಿದ್ದಾರೆ. ಇರಾನ್ ಯಾವುದೇ ಕಾರಣಕ್ಕೂ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದಲು ಬಿಡುವುದಿಲ್ಲ ಎಂದು ನೆತನ್ಯಾಹು ಇದೇ ಸಂದರ್ಭದಲ್ಲಿ ಎಚ್ಚರಿಕೆ ನೀಡಿದ್ದಾರೆ. ರಾಯಿಟರ್ಸ್ ಸುದ್ಧಿ ಸಂಸ್ಥೆಯ ವರದಿಯ ಪ್ರಕಾರ, ಇರಾನ್‌ನ ಪರಮಾಣು ಮೂಲಸೌಕರ್ಯ ಮತ್ತು ಮಿಲಿಟರಿ ನೆಲೆಗಳನ್ನು ಗುರಿಯಾಗಿಸಿಕೊಂಡು ಈ ದಾಳಿಗಳನ್ನು ನಡೆಸಲಾಗುತ್ತಿದೆ. ಇರಾನ್‌ನಿಂದ ಎದುರಾಗಬಹುದಾದ ಸಂಭಾವ್ಯ ಪರಮಾಣು ಬೆದರಿಕೆಯನ್ನು ಸಂಪೂರ್ಣವಾಗಿ ಹತ್ತಿಕ್ಕುವುದು ಈ ಕಾರ್ಯಾಚರಣೆಯ ಮುಖ್ಯ ಉದ್ದೇಶವಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. 'ರೋರ್ ಆಫ್ ದಿ ಲಯನ್' ಎಂದು ಹೆಸರಿಸಲಾದ ಈ ಕಾರ್ಯಾಚರಣೆಯು ಇರಾನ್‌ನ ರಾಜಧಾನಿ ಟೆಹ್ರಾನ್ ಸೇರಿದಂತೆ ಹಲವು ಪ್ರಮುಖ ನಗರಗಳ ಮೇಲೆ ಕೇಂದ್ರೀಕೃತವಾಗಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಬೆಂಬಲದೊಂದಿಗೆ ಈ ಬೃಹತ್ ಕಾರ್ಯಾಚರಣೆ ನಡೆಯುತ್ತಿದ್ದು, ಮಧ್ಯಪ್ರಾಚ್ಯದಲ್ಲಿ ಶಾಂತಿ ಮತ್ತು ಭದ್ರತೆಯನ್ನು ಕಾಪಾಡಲು ಈ ಕ್ರಮ ಅನಿವಾರ್ಯವಾಗಿದೆ ಎಂದು ನೆತನ್ಯಾಹು ಪ್ರತಿಪಾದಿಸಿದ್ದಾರೆ. 

  • 28 Feb 2026 2:00 PM IST

    'ಅಂತಿಮ ವಿಜಯ ಹತ್ತಿರದಲ್ಲಿದೆ' ಎಂದ ಮಾಜಿ ರಾಜಕುಮಾರ ರೆಜಾ ಪಹ್ಲವಿ

    ಇರಾನ್‌ನ ಕೊನೆಯ ರಾಜ (ಷಾ) ಮೊಹಮ್ಮದ್ ರೆಜಾ ಪಹ್ಲವಿ ಅವರ ಪುತ್ರ ರೆಜಾ ಪಹ್ಲವಿ, ಇರಾನ್‌ನಲ್ಲಿ ಪ್ರಸ್ತುತ ನಡೆಯುತ್ತಿರುವ ಸಂಘರ್ಷಗಳ ನಡುವೆ ಮಹತ್ವದ ಹೇಳಿಕೆ ನೀಡಿದ್ದಾರೆ. ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲಿನ ಇಸ್ಲಾಮಿಕ್ ಆಡಳಿತದ ಕೇಂದ್ರಗಳ ಮೇಲೆ ದಾಳಿ ನಡೆಸಿದ ಬೆನ್ನಲ್ಲೇ, ನಾವು ಅಂತಿಮ ವಿಜಯದ ಅತ್ಯಂತ ಸಮೀಪದಲ್ಲಿದ್ದೇವೆ ಎಂದು ಅವರು ಘೋಷಿಸಿದ್ದಾರೆ.

  • 28 Feb 2026 1:56 PM IST

    ದಾಳಿಗೊಳಗಾದ ಪ್ರಮುಖ ಪ್ರದೇಶಗಳು

    ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿ ಮತ್ತೊಮ್ಮೆ ತಾರಕಕ್ಕೇರಿದೆ. ಶನಿವಾರ ಮುಂಜಾನೆ ಇರಾನ್‌ನ ಪ್ರಮುಖ ನಗರಗಳ ಮೇಲೆ ಇಸ್ರೇಲ್ ರಕ್ಷಣಾ ಪಡೆಗಳು ಮತ್ತು ಅಮೆರಿಕ ವಾಯುಪಡೆ ಜಂಟಿಯಾಗಿ ಭೀಕರ ವೈಮಾನಿಕ ದಾಳಿ ನಡೆಸಿವೆ. ಇರಾನ್‌ನ ರಾಜಧಾನಿ ಟೆಹ್ರಾನ್ ಸೇರಿದಂತೆ ದೇಶದ ಪ್ರಮುಖ ಆಯಕಟ್ಟಿನ ಪ್ರದೇಶಗಳಲ್ಲಿ ಏಕಕಾಲಕ್ಕೆ ಸ್ಫೋಟದ ಶಬ್ದಗಳು ಕೇಳಿಬಂದಿದ್ದು, ಇಡೀ ಪ್ರದೇಶವು ಅಕ್ಷರಶಃ ಬೆಚ್ಚಿಬಿದ್ದಿದೆ. ದಾಳಿಗೊಳಗಾದ ಪ್ರಮುಖ ಪ್ರದೇಶಗಳು ಮಾಹಿತಿಗಳ ಪ್ರಕಾರ, ಇರಾನ್‌ನ ನೈಋತ್ಯ ಭಾಗದ ಡೆಜ್‌ಫುಲ್ (Dezful), ಪಶ್ಚಿಮ ಭಾಗದ ಕರ್ಮಾನ್ಶಾ (Kermanshah), ಟೆಹ್ರಾನ್‌ನ ದಕ್ಷಿಣಕ್ಕಿರುವ ಪವಿತ್ರ ನಗರಿ ಖೋಮ್ (Qom) ಹಾಗೂ ಮಧ್ಯ ಇರಾನ್‌ನ ಕೈಗಾರಿಕಾ ಕೇಂದ್ರವಾಗಿರುವ ಇಸ್ಫಹಾನ್ (Isfahan) ನಗರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿಗಳು ನಡೆದಿವೆ. ಈ ನಗರಗಳಲ್ಲಿನ ಕ್ಷಿಪಣಿ ತಯಾರಿಕಾ ಕೇಂದ್ರಗಳು ಮತ್ತು ಸೇನಾ ತಾಣಗಳನ್ನೇ ಗುರಿಯಾಗಿಸಿಕೊಂಡು ದಾಳಿ ನಡೆಸಲಾಗಿದೆ ಎಂದು ತಿಳಿದುಬಂದಿದೆ.

  • 28 Feb 2026 1:49 PM IST

    ಇಸ್ರೇಲ್ ತಲುಪಿದ 50ಕ್ಕೂ ಹೆಚ್ಚು ಅಮೆರಿಕನ್ ಯುದ್ಧ ವಿಮಾನಗಳು

    ಮಧ್ಯಪ್ರಾಚ್ಯದಲ್ಲಿ ಯುದ್ಧದ ಭೀತಿ ಎದುರಾಗಿರುವ ಬೆನ್ನಲ್ಲೇ, ಅಮೆರಿಕವು ಕಳೆದ ವಾರ 50ಕ್ಕೂ ಹೆಚ್ಚು ಅತ್ಯಾಧುನಿಕ ಯುದ್ಧ ವಿಮಾನಗಳನ್ನು ಈ ಪ್ರದೇಶಕ್ಕೆ ರವಾನಿಸಿದೆ. ಅಂತರಾಷ್ಟ್ರೀಯ ವಿಮಾನಯಾನ ಟ್ರ್ಯಾಕಿಂಗ್ ದತ್ತಾಂಶಗಳು ಮತ್ತು ಮಿಲಿಟರಿ ವೀಕ್ಷಕರು ಈ ಬೃಹತ್ ಸೇನಾ ಜಮಾವಣೆಯನ್ನು ದೃಢಪಡಿಸಿದ್ದು, ಅಮೆರಿಕದ ಈ ನಡೆ ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಹಿನ್ನೆಲೆಯಲ್ಲಿ ಅತ್ಯಂತ ಮಹತ್ವದ್ದಾಗಿ ಕಂಡುಬರುತ್ತಿದೆ.

    ವರದಿಗಳ ಪ್ರಕಾರ, ಅಮೆರಿಕದ ಅತ್ಯಂತ ಶಕ್ತಿಶಾಲಿ ಎಫ್-22 (F-22 Raptor), ಎಫ್-35 (F-35 Lightning II) ಮತ್ತು ಎಫ್-16 (F-16 Fighting Falcon) ಯುದ್ಧ ವಿಮಾನಗಳು ಈಗಾಗಲೇ ಮಧ್ಯಪ್ರಾಚ್ಯದ ವಿವಿಧ ನೆಲೆಗಳನ್ನು ತಲುಪಿವೆ. ವಿಶೇಷವಾಗಿ ಇಸ್ರೇಲ್‌ನ ಬೆನ್ ಗುರಿಯನ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮತ್ತು ಓವ್ಡಾ ವಾಯುನೆಲೆಗಳಲ್ಲಿ ಅಮೆರಿಕದ ಎಫ್-22 ವಿಮಾನಗಳು ಇಳಿದಿರುವುದು ಪತ್ತೆಯಾಗಿದೆ. ಓವ್ಡಾ ವಾಯುನೆಲೆಯಲ್ಲಿ ಸುಮಾರು 11 ರಿಂದ 12 ಎಫ್-22 ವಿಮಾನಗಳು ಇಳಿದಿರುವುದನ್ನು ಸ್ಯಾಟಲೈಟ್ ಚಿತ್ರಗಳು ಕೂಡ ಖಚಿತಪಡಿಸಿವೆ.ಇದಲ್ಲದೆ, ಯುದ್ಧ ವಿಮಾನಗಳಿಗೆ ಇಂಧನ ಮರುಪೂರಣ ಮಾಡುವ ಸುಮಾರು 14 ಕೆಸಿ-46 (KC-46) ಟ್ಯಾಂಕರ್ ವಿಮಾನಗಳು ಕೂಡ ಬೆನ್ ಗುರಿಯನ್ ನಿಲ್ದಾಣದಲ್ಲಿ ಬೀಡುಬಿಟ್ಟಿವೆ.




  • 28 Feb 2026 1:46 PM IST

    ಇರಾನ್ ಮೇಲೆ ಅಮೆರಿಕ ಸೇನಾ ದಾಳಿ: ಟ್ರೂತ್ ಸೋಶಿಯಲ್ ವಿಡಿಯೋ ಮೂಲಕ ಖಚಿತಪಡಿಸಿದ ಅಧ್ಯಕ್ಷ ಡೊನಾಲ್ಡ್ ಟ್ರಂಪ್

    ಇರಾನ್ ದೇಶದ ಮೇಲಿನ ವಾಯುದಾಳಿಯಲ್ಲಿ ಅಮೆರಿಕದ ಪಾತ್ರ ಇರುವುದನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಈ ಕುರಿತು ತಮ್ಮ 'ಟ್ರೂತ್ ಸೋಶಿಯಲ್' ಸಾಮಾಜಿಕ ಜಾಲತಾಣದಲ್ಲಿ ಎಂಟು ನಿಮಿಷಗಳ ಸುದೀರ್ಘ ವಿಡಿಯೋ ಸಂದೇಶವನ್ನು ಹಂಚಿಕೊಂಡಿರುವ ಅವರು, ಇರಾನ್‌ನಲ್ಲಿ ಅಮೆರಿಕದ ಸೈನ್ಯವು "ಬೃಹತ್ ಮತ್ತು ನಿರಂತರ ಕಾರ್ಯಾಚರಣೆಯನ್ನು" ಪ್ರಾರಂಭಿಸಿದೆ ಎಂದು ಘೋಷಿಸಿದ್ದಾರೆ.


  • 28 Feb 2026 1:44 PM IST

    ಇರಾನ್‌ನ ಪ್ರಮುಖ ನಗರಗಳಲ್ಲಿ ಸರಣಿ ಸ್ಫೋಟ: ಭೀತಿಯಲ್ಲಿ ಜನತೆ

    ಇರಾನ್‌ನ ರಾಜಧಾನಿ ಟೆಹ್ರಾನ್ ಸೇರಿದಂತೆ ದೇಶದ ಹಲವು ಪ್ರಮುಖ ನಗರಗಳಲ್ಲಿ ಇಂದು ಮುಂಜಾನೆ ಸರಣಿ ಸ್ಫೋಟಗಳು ಸಂಭವಿಸಿವೆ ಎಂದು ಇರಾನ್ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್ ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಅವರು ಇರಾನ್ ವಿರುದ್ಧ "ಮುನ್ನೆಚ್ಚರಿಕೆ ದಾಳಿ" ಆರಂಭಿಸಿರುವುದನ್ನು ಖಚಿತಪಡಿಸಿದ ಬೆನ್ನಲ್ಲೇ ಈ ಘಟನೆಗಳು ನಡೆದಿವೆ. ಈ ದಾಳಿಗೆ ಅಮೆರಿಕ ಕೂಡ ಸಾಥ್ ನೀಡಿದ್ದು, ಈ ಕಾರ್ಯಾಚರಣೆಯನ್ನು "ಮೇಜರ್ ಕಾಂಬ್ಯಾಟ್ ಆಪರೇಷನ್" ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬಣ್ಣಿಸಿದ್ದಾರೆ.

Read More
Next Story