
Iran-Israel War|ಇಸ್ರೇಲ್ ದಾಳಿಗೆ ಇರಾನ್‌ನ ಮತ್ತೊಬ್ಬ ಪ್ರಭಾವಿ ನಾಯಕ ಅಲಿ ಲಾರಿಜಾನಿ ಬಲಿ
ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಇರಾನ್ ಪ್ರಭಾವಿ ನಾಯಕ ಅಲಿ ಲಾರಿಜಾನಿ ಮೃತಪಟ್ಟಿರುವುದಾಗಿ ವರದಿಯಾಗಿದೆ. ಆ ಮೂಲಕ ಖಮೇನಿ ನಂತರ ಮತ್ತೊಬ್ಬ ಪ್ರಮುಖ ನಾಯಕನನ್ನು ಕಳೆದುಕೊಂಡಿದೆ.
ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧವು ಇರಾನ್ ನಾಯಕತ್ವವನ್ನು ಸಂಪೂರ್ಣವಾಗಿ ಹೈರಾಣಾಗಿಸಿದೆ. ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಸಾವಿನ ಬೆನ್ನಲ್ಲೇ, ಇರಾನ್‌ನ ಭದ್ರತಾ ಕಾರ್ಯತಂತ್ರದ ರೂವಾರಿ ಮತ್ತು ಪ್ರಮುಖ ರಾಜತಾಂತ್ರಿಕ ಮುಖವಾಗಿದ್ದ ಅಲಿ ಲಾರಿಜಾನಿ (67) ಇಸ್ರೇಲ್ ವೈಮಾನಿಕ ದಾಳಿಯಲ್ಲಿ ಹತರಾಗಿದ್ದಾರೆ.
ನಾಯಕರಿಲ್ಲದ ಇರಾನ್: ನಾಯಕತ್ವ ಶೂನ್ಯದ ಭೀತಿ
ಯುದ್ಧ ಆರಂಭವಾದ ಮೊದಲ ದಿನವೇ (ಫೆಬ್ರವರಿ 28) ಇರಾನ್ ತನ್ನ ಪರಮೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರನ್ನು ಕಳೆದುಕೊಂಡಿತ್ತು. ಅವರ ಉತ್ತರಾಧಿಕಾರಿ ಎನ್ನಲಾದ ಮೊಜ್ತಾಬಾ ಖಮೇನಿ ಕೂಡ ಗಂಭೀರವಾಗಿ ಗಾಯಗೊಂಡು ಕೋಮಾದಲ್ಲಿದ್ದಾರೆ ಎನ್ನಲಾಗಿದೆ. ಸೋಮವಾರ ರಾತ್ರಿ ಮತ್ತೊಬ್ಬ ಪ್ರಮುಖ ಕಮಾಂಡರ್ ಘೋಲಮ್ರೆಜಾ ಸೊಲೈಮಾನಿ ಸಾವನ್ನಪ್ಪಿದ್ದರು. ಈಗ ಲಾರಿಜಾನಿ ಅವರ ಹತ್ಯೆಯು ಇರಾನ್ ನಾಯಕತ್ವವನ್ನು ಸಂಪೂರ್ಣವಾಗಿ ಧ್ವಂಸಗೊಳಿಸಿದೆ.
ಯಾರು ಈ ಅಲಿ ಲಾರಿಜಾನಿ?
ಅಲಿ ಲಾರಿಜಾನಿ ಇರಾನ್ ರಾಜಕೀಯದಲ್ಲಿ ಅತ್ಯಂತ ಪ್ರಭಾವಿ ವ್ಯಕ್ತಿಯಾಗಿದ್ದರು. ಇವರ ಕುಟುಂಬವನ್ನು ವಿಶ್ವಮಟ್ಟದಲ್ಲಿ 'ಇರಾನ್‌ನ ಕೆನಡಿಗಳು' ಎಂದು ಕರೆಯಲಾಗುತ್ತಿತ್ತು. ಇವರ ತಂದೆ ಧಾರ್ಮಿಕ ವಿದ್ವಾಂಸರಾಗಿದ್ದರು ಮತ್ತು ಸಹೋದರರು ಇರಾನ್‌ನ ಪ್ರಮುಖ ಹುದ್ದೆಗಳಲ್ಲಿದ್ದಾರೆ. 1980ರ ದಶಕದಲ್ಲಿ ರೆವಲ್ಯೂಷನರಿ ಗಾರ್ಡ್ಸ್ (IRGC) ಮೂಲಕ ವೃತ್ತಿ ಆರಂಭಿಸಿದ ಇವರು, ಸಂಸ್ಕೃತಿ ಸಚಿವರಾಗಿ ಮತ್ತು ಸತತ 12 ವರ್ಷಗಳ ಕಾಲ (2008-2020) ಇರಾನ್ ಸಂಸತ್ತಿನ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ್ದರು. ಅಮೆರಿಕದೊಂದಿಗೆ ನಡೆದ ಇರಾನ್ ಪರಮಾಣು ಒಪ್ಪಂದದ ಮಾತುಕತೆಗಳಲ್ಲಿ ಇವರು ಪ್ರಮುಖ ಪಾತ್ರ ವಹಿಸಿದ್ದರು.
ಸಾವಿಗೂ ಮುನ್ನ ಎಚ್ಚರಿಕೆ ನೀಡಿದ್ದ ಲಾರಿಜಾನಿ
ತಮ್ಮ ಸಾವಿಗೂ ಒಂದು ದಿನ ಮೊದಲು ಲಾರಿಜಾನಿ ಅವರು ಅಮೆರಿಕ ಮತ್ತು ಇಸ್ರೇಲ್‌ಗೆ ಮರೆಯಲಾಗದ ಪಾಠ ಕಲಿಸುವುದಾಗಿ ಎಚ್ಚರಿಸಿದ್ದರು. ಅಲ್ಲದೆ, ಮುಸ್ಲಿಂ ರಾಷ್ಟ್ರಗಳು ಇರಾನ್‌ಗೆ ಬೆಂಬಲ ನೀಡುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಮಾರ್ಚ್ 13 ರಂದು ಇವರು ಟೆಹ್ರಾನ್‌ನಲ್ಲಿ ಕೊನೆಯದಾಗಿ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದರು. ಲಾರಿಜಾನಿ ಅವರ ಪತ್ತೆಗಾಗಿ ಅಮೆರಿಕ ಇತ್ತೀಚೆಗಷ್ಟೇ 10 ಮಿಲಿಯನ್ ಡಾಲರ್ (ಸುಮಾರು 92 ಕೋಟಿ ರೂ.) ಬಹುಮಾನ ಘೋಷಿಸಿತ್ತು.
ಇರಾನ್ ಸ್ಥಿತಿ ಗಂಭೀರ
ಪ್ರಸ್ತುತ ಇರಾನ್‌ನಲ್ಲಿ ಯಾವುದೇ ಅಧಿಕೃತ ನಾಯಕರಿಲ್ಲದ ಕಾರಣ, ದೇಶವು ಹಂಗಾಮಿ ಆಡಳಿತ ಮಂಡಳಿಯ ಅಡಿಯಲ್ಲಿ ನಡೆಯುತ್ತಿದೆ. ಲಾರಿಜಾನಿ ಹತ್ಯೆಯು ಈ ಮಂಡಳಿಯ ಶಕ್ತಿಯನ್ನು ಕುಂದಿಸಿದ್ದು, ಇರಾನ್ ಈಗ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿದೆ.

