ಇರಾನಿನ ಆಕ್ಸಿಸ್‌ ಆಫ್‌ ಇವಿಲ್‌ನಿಂದ ನಾಶದ ಪ್ರಯತ್ನ: ನೆತನ್ಯಾಹು
x

ಇರಾನಿನ ಆಕ್ಸಿಸ್‌ ಆಫ್‌ ಇವಿಲ್‌ನಿಂದ ನಾಶದ ಪ್ರಯತ್ನ: ನೆತನ್ಯಾಹು

9/11 ದಾಳಿ ನಂತರ 2002 ರಲ್ಲಿ ಆಗಿನ ಯುಎಸ್ ಅಧ್ಯಕ್ಷ ಜಾರ್ಜ್ ಡಬ್ಲ್ಯು. ಬುಷ್ ಅವರು 'ಆಕ್ಸಿಸ್ ಆಫ್ ಇವಿಲ್' ಎಂಬ ಪದವನ್ನು ಮೊದಲು ಬಳಸಿದರು.ಇರಾನಿನ 'ಆಕ್ಸಿಸ್ ಆಫ್ ರೆಸಿಸ್ಟೆನ್ಸ್' ನ ಸಾಮಾನ್ಯ ಶತ್ರು - ಇಸ್ರೇಲ್ ಮತ್ತು ಅಮೆರಿಕ.


ಲೆಬನಾನಿನಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಂಟು ಇಸ್ರೇಲಿ ಸೈನಿಕರು ಬುಧವಾರ ಸಾವನ್ನಪ್ಪಿದ್ದಾರೆ. ಇಸ್ರೇಲ್‌ ಹಿಜ್ಬುಲ್ಲಾ ಮೇಲೆ ಗಡಿಯನ್ನು ದಾಟಿ ದಾಳಿ ಮಾಡಿದ ಬಳಿಕ ಸಂಭವಿಸಿದ ಮೊದಲ ಸಾವುನೋವು ಇದಾಗಿದೆ.

ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು, ‌ʻನಮ್ಮನ್ನು ನಾಶಮಾಡಲು ಇರಾನ್‌ನ ಆಕ್ಸಿಸ್ ಆಫ್ ಇವಿಲ್ ಯತ್ನಿಸುತ್ತಿದೆ. ನಾವು ಒಟ್ಟಿಗೆ ನಿಲ್ಲುತ್ತೇವೆ ಮತ್ತು ದೇವರ ಸಹಾಯದಿಂದ ಗೆಲ್ಲುತ್ತೇವೆ. ಅಪಹರಣಕ್ಕೊಳಗಾದವರು ವಾಪಸಾಗಲಿದ್ದಾರೆ, ಉತ್ತರದ ನಮ್ಮ ನಿವಾಸಿಗಳು ಹಿಂದಿರುಗಲಿದ್ದಾರೆ; ನಾವು ಇಸ್ರೇಲಿನ ಶಾಶ್ವತತೆಯನ್ನು ಖಾತರಿಪಡಿಸುತ್ತೇವೆ,ʼ ಎಂದು ಹೇಳಿದ್ದಾರೆ.

ಇಸ್ರೇಲಿ ಪ್ರಧಾನಿ ಉಲ್ಲೇಖಿಸಿರುವ ಈ ʻಆಕ್ಸಿಸ್ ಆಫ್ ಇವಿಲ್ʼ ಎಂದರೇನು?

'ಆಕ್ಸಿಸ್ ಆಫ್ ಇವಿಲ್' ಮೂಲ: ಸೆಪ್ಟೆಂಬರ್ 11, 2001 ರಂದು ಅಮೆರಿಕ ವಿರುದ್ಧ ಅಲ್ ಖೈದಾ ಸಂಬಂಧಿತ ದಾಳಿ ನಡೆದ ಐದು ತಿಂಗಳ ನಂತರ, 2002 ರಲ್ಲಿ ಜಾರ್ಜ್ ಡಬ್ಲ್ಯೂ. ಬುಷ್ ಅವರು ʻಆಕ್ಸಿಸ್ ಆಫ್ ಇವಿಲ್ʼ ಪದ ಮೊದಲು ಬಳಸಿದರು. ಬುಷ್ ಉಲ್ಲೇಖಿಸಿದ ದೇಶಗಳು- ಇರಾಕ್, ಇರಾನ್ ಮತ್ತು ಉತ್ತರ ಕೊರಿಯಾ.

ಕೆಲವು ವಿಶ್ಲೇಷಕರ ಪ್ರಕಾರ, ಈ ಮೂರು ರಾಷ್ಟ್ರಗಳು ತುಲನಾತ್ಮಕವಾಗಿ ಚಿಕ್ಕವು ಮತ್ತು ʻವಿಫಲʼ ರಾಜ್ಯಗಳು. ಇರಾಕ್ ಮೇಲೆ ಅಮೆರಿಕ ದಾಳಿ ಮಾಡಿದ ಬಳಿಕ ಅದು ಈ ಗುಂಪಿನ ಭಾಗವಾಗಿಲ್ಲ.

ಪ್ರಸ್ತುತ ಅಕ್ಷದಲ್ಲಿ ಯಾವ ದೇಶಗಳಿವೆ?: ಪ್ರಸ್ತುತ ಅಕ್ಷದಲ್ಲಿ ದೊಡ್ಡ ಆರ್ಥಿಕತೆ ಮತ್ತು ಸೇನೆಯನ್ನು ಹೊಂದಿರುವ ದೇಶಗಳಿವೆ. ಅವುಗಳ ಸಾಮಾನ್ಯ ಶತ್ರು - ಯುಎಸ್ ನೇತೃತ್ವದ ಪಾಶ್ಚಿಮಾತ್ಯ ರಾಷ್ಟ್ರಗಳು. ನೆತನ್ಯಾಹು ಪ್ರಸ್ತಾಪಿಸಿದ ದೇಶಗಳೆಂದರೆ, ಇರಾನ್, ಚೀನಾ, ರಷ್ಯಾ ಮತ್ತು ಉತ್ತರ ಕೊರಿಯಾ.

ಇಸ್ರೇಲ್ ವಿರುದ್ಧ ಇರಾನ್ ಸುಮಾರು 200 ಬ್ಯಾಲಿಸ್ಟಿಕ್ ಕ್ಷಿಪಣಿಗಳನ್ನು ‌ಮಂಗಳವಾರ (ಅಕ್ಟೋಬರ್ 1) ಉಡಾಯಿಸಿದೆ. ಇದಕ್ಕೆ ರಷ್ಯಾ ಮತ್ತು ಚೀನಾ ಬೆಂಬಲ ಕಾರಣ ಎನ್ನುವುದು ಇಸ್ರೇಲ್‌ ಭಾವನೆ. ಇತ್ತೀಚೆಗೆ ಚೀನಾ, ರಷ್ಯಾ ಮತ್ತು ಇರಾನ್ ನಡುವಿನ ಮೈತ್ರಿಯು ಆರ್ಥಿಕ ಸಹಕಾರದಿಂದ ವೃದ್ಧಿಸಿದೆ.

ಚೀನಾವು ಇರಾನಿನೊಂದಿಗೆ 25 ವರ್ಷಗಳ ಒಪ್ಪಂದ ಮಾಡಿಕೊಂಡಿದ್ದು, ಅದರ ಮೌಲ್ಯ 300 ಶತಕೋಟಿ ಡಾಲರ್. ರಷ್ಯಾದೊಂದಿಗೆ ಚೀನಾದ ಪಾಲುದಾರಿಕೆ‌ ಹೆಚ್ಚುತ್ತಿದೆ ಮತ್ತು ಉಕ್ರೇನ್‌ನೊಂದಿಗಿನ ಯುದ್ಧದಲ್ಲಿ ರಷ್ಯಾವನ್ನು ಬೆಂಬಲಿಸುತ್ತಿದೆ.

ಇರಾನಿನ 'ಆಕ್ಸಿಸ್ ಆಫ್ ರೆಸಿಸ್ಟೆನ್ಸ್': 1979 ರ ಇಸ್ಲಾಮಿಕ್ ಕ್ರಾಂತಿ ನಂತರ, ಇರಾನ್ ಈ ಪ್ರದೇಶದಲ್ಲಿ 'ಪ್ರತಿರೋಧದ ಅಕ್ಷ' ವನ್ನು ಅಭಿವೃದ್ಧಿ ಪಡಿಸಿದೆ. ಇದರಲ್ಲಿ ಇರಾನ್ ಪೋಷಿಸಿದ ಉಗ್ರಗಾಮಿ ಗುಂಪುಗಳಿವೆ; ಲೆಬನಾನ್‌ನಲ್ಲಿ ಹಿಜ್ಬುಲ್ಲಾ, ಗಾಜಾದಲ್ಲಿ ಹಮಾಸ್, ಯೆಮೆನ್‌ನಲ್ಲಿ ಹೌತಿಗಳು ಮತ್ತು ಇರಾಕ್‌ನಲ್ಲಿರುವ ಶಿಯಾ ಮುಸ್ಲಿಂ ಗುಂಪುಗಳು.

ಸಿರಿಯ ಸರ್ಕಾರವು ಬಹುಶಃ ಇರಾನಿನ ಪ್ರತಿರೋಧದ ಅಕ್ಷದ ಭಾಗವಾಗಿರುವ ಏಕೈಕ ದೇಶ. ಹಲವಾರು ಇರಾನ್ ಬೆಂಬಲಿತ ಸೇನಾಪಡೆಗಳಿಗೆ ಸಿರಿಯ ಆತಿಥ್ಯ ನೀಡುತ್ತದೆ.

1970 ರ ದಶಕದಲ್ಲಿ ಲೆಬನಾನಿನಲ್ಲಿ ಅಂತರ್ಯುದ್ಧದ ಕಾಲದಲ್ಲಿ ಹಿಜ್ಬುಲ್ಲಾ ಅಥವಾ ಅರೇಬಿಕ್ ಭಾಷೆಯಲ್ಲಿ ʻದೇವರ ಪಕ್ಷʼ ಹೊರ ಹೊಮ್ಮಿತು. ಹಸನ್ ನಸ್ರಲ್ಲಾ ಗುಂಪಿನ ನೇತೃತ್ವ ವಹಿಸಿಕೊಂಡು, ಇರಾನಿನ ರೆವಲ್ಯೂಷನರಿ ಗಾರ್ಡ್‌ಗಳ ಬೆಂಬಲದಿಂದ ಹೋರಾಟದ ಯಂತ್ರವಾಗಿ ಬದಲಿಸಿದ. 1987 ರಲ್ಲಿ ಮೊದಲ ಪ್ಯಾಲೇಸ್ಟಿನಿಯನ್ ದಂಗೆ(ಇಂಟಿಫಾಡಾ) ನಂತರ ಹಮಾಸ್ ಅಸ್ತಿತ್ವಕ್ಕೆ ಬಂದು, ಪಿಎಲ್‌ಒ ದಿಂದ ಗಾಜಾದ ನಿಯಂತ್ರಣ ತೆಗೆದುಕೊಂಡಿತು. ಯೆಮೆನ್‌ನಲ್ಲಿರುವ ಹೌತಿ ಬಂಡುಕೋರರು ಇರಾನಿನಿಂದ ತರಬೇತಿ ಮತ್ತು ಶಸ್ತ್ರಾಸ್ತ್ರ ಪಡೆದಿದ್ದಾರೆ. 2014 ರಲ್ಲಿ ರಾಜಧಾನಿಯನ್ನು ವಶಪಡಿಸಿಕೊಂಡರು.

ಇರಾನಿನ 'ಆಕ್ಸಿಸ್ ಆಫ್ ರೆಸಿಸ್ಟೆನ್ಸ್' ನ ಸಾಮಾನ್ಯ ಶತ್ರು - ಇಸ್ರೇಲ್ ಮತ್ತು ಅಮೆರಿಕ.

Read More
Next Story