ಹೆಲಿಕಾಪ್ಟರ್ ಅಪಘಾತಕ್ಕೆ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಬಲಿ
x

ಹೆಲಿಕಾಪ್ಟರ್ ಅಪಘಾತಕ್ಕೆ ಇರಾನ್‌ ಅಧ್ಯಕ್ಷ ಇಬ್ರಾಹಿಂ ರೈಸಿ ಬಲಿ

ಇಬ್ರಾಹಿಂ ರೈಸಿ ಅವರೊಟ್ಟಿಗೆ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ಗವರ್ನರ್, ಅಧಿಕಾರಿಗಳು ಮತ್ತು ಅಂಗರಕ್ಷಕರು ಕೂಡ ಇದ್ದರು. ಅಪಘಾತದ ಸ್ಥಳವನ್ನು ತಲುಪಿದ ನಂತರ ರಕ್ಷಣಾ ತಂಡದವರು, ʼಯಾರೂ ಜೀವಂತವಿರುವ ಚಿಹ್ನೆ ಕಂಡುಬಂದಿಲ್ಲʼ ಎಂದು ಹೇಳಿದ್ದಾರೆ. ಸಯದ್‌ ಇಬ್ರಾಹಿಂ ರೈಸಿ ಅವರ ಸಾವಿನ ಬಗ್ಗೆ ಭಾರತದ ಪ್ರಧಾನಿ ನರೇಂದ್ರ ಮೋದಿ ಆಘಾತ ವ್ಯಕ್ತಪಡಿಸಿದ್ದಾರೆ.


ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ, ವಿದೇಶಾಂಗ ಸಚಿವ ಹೊಸೈನ್ ಅಮಿರಾಬ್ದೊಲ್ಲಾಹಿಯಾನ್ ಮತ್ತು ಅವರ ಜೊತೆಯಲ್ಲಿದ್ದ ಇತರ ಅಧಿಕಾರಿಗಳು ಹೆಲಿಕಾಪ್ಟರ್‌ ಅಪಘಾತದಲ್ಲಿ ಸಾವಿಗೀಡಾಗಿದ್ದಾರೆ.

ಅವರನ್ನು ಹೊತ್ತ ಹೆಲಿಕಾಪ್ಟರ್‌ ವಾಯವ್ಯ ಇರಾನ್‌ನ ಪರ್ವತ ಪ್ರದೇಶದಲ್ಲಿ ಭೂಸ್ಪರ್ಶ ಮಾಡಿದ ಒಂದು ದಿನದ ನಂತರ ಎಲ್ಲರೂ ಮೃತಪಟ್ಟಿದ್ದಾರೆ ಎಂದು ಸೋಮವಾರ ಅಧಿಕೃತವಾಗಿ ಘೋಷಿಸಲಾಗಿದೆ..

ಇಬ್ರಾಹಿಂ ರೈಸಿ ಅವರೊಟ್ಟಿಗೆ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದ ಗವರ್ನರ್, ಅಧಿಕಾರಿಗಳು ಮತ್ತು ಅಂಗರಕ್ಷಕರು ಕೂಡ ಇದ್ದರು. ಅಪಘಾತದ ಸ್ಥಳವನ್ನು ತಲುಪಿದ ನಂತರ ರಕ್ಷಣಾ ತಂಡದವರು, ʼಯಾರೂ ಜೀವಂತವಿರುವ ಚಿಹ್ನೆ ಕಂಡುಬಂದಿಲ್ಲʼ ಎಂದು ಹೇಳಿದ್ದಾರೆ ಎಂದು ಮಾಧ್ಯಮಗಳು ತಿಳಿಸಿವೆ.

ಸೋಮವಾರ ಬೆಳಗ್ಗೆ ರಕ್ಷಣಾ ತಂಡದವರು ಹೆಲಿಕಾಪ್ಟರ್ ಅನ್ನು ಸುಮಾರು 2 ಕಿಲೋಮೀಟರ್ ದೂರದಿಂದ ನೋಡಿದರು ಎಂದು ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿ ಮುಖ್ಯಸ್ಥ ಪಿರ್ ಹೊಸೈನ್ ಕೊಲಿವಾಂಡ್ ಮಾಧ್ಯಮಗಳಿಗೆ ತಿಳಿಸಿದರು. ಆ ಸ್ಥಳದಲ್ಲಿ ಹೆಲಿಕಾಪ್ಟರ್‌ 12 ಗಂಟೆ ಕಾಲ ನಾಪತ್ತೆಯಾಗಿತ್ತು.

ಮುಂದಿನ ರಾಷ್ಟ್ರಪತಿ ಯಾರು?: ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಅನುಯಾಯಿಯಾಗಿದ್ದ ರೈಸಿ ಅವರನ್ನು ಖಮೇನಿ ಅವರ ಸಂಭಾವ್ಯ ಉತ್ತರಾಧಿಕಾರಿ ಎಂದು ಪರಿಗಣಿಸಲಾಗಿತ್ತು. ಇರಾನ್ ಸಂವಿಧಾನದ 131 ನೇ ವಿಧಿ ಪ್ರಕಾರ, ಒಂದುವೇಳೆ ಅಧ್ಯಕ್ಷರು ಅಧಿಕಾರದಲ್ಲಿ ಇರುವಾಗ ಮರಣ ಹೊಂದಿದರೆ, ಸರ್ವೋಚ್ಚ ನಾಯಕ ಸಮ್ಮತಿಸಿದಲ್ಲಿ ಉಪಾಧ್ಯಕ್ಷರು ಸ್ಥಾನ ವಹಿಸಿಕೊಳ್ಳುತ್ತಾರೆ. ರೈಸಿ ಅವರ ಮರಣದಿಂದ ಮೊದಲ ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಅಧ್ಯಕ್ಷರಾಗುವ ಸಾಧ್ಯತೆ ಇದೆ. ಅಪಘಾತದಿಂದ ʻದೇಶದ ಆಡಳಿತ ವ್ಯವಸ್ಥೆಗೆ ಯಾವುದೇ ಅಡ್ಡಿ ಆಗುವುದಿಲ್ಲʼ ಎಂದು ಖಮೇನಿ ಇರಾನಿಯನ್ನರಿಗೆ ಭರವಸೆ ನೀಡಿದ್ದರು.

ಇಸ್ರೇಲ್‌ ಮೇಲೆ ದಾಳಿ: ರೈಸಿ ಮತ್ತು ಸುಪ್ರೀಂ ನಾಯಕ ಖಮೇನಿ ಅಡಿಯಲ್ಲಿ ಇರಾನ್ ಕಳೆದ ತಿಂಗಳು ಇಸ್ರೇಲ್ ಮೇಲೆ ಡ್ರೋನ್ ಮತ್ತು ಕ್ಷಿಪಣಿ ದಾಳಿಯನ್ನು ಪ್ರಾರಂಭಿಸಿತು.ಈ ಜೋಡಿ ಯುರೇನಿಯಂ ಅನ್ನು ಶಸ್ತ್ರಾಸ್ತ್ರ ದರ್ಜೆ ಮಟ್ಟಕ್ಕೆ ಉತ್ಕೃಷ್ಟಗೊಳಿಸಿದೆ. ಆರ್ಥಿಕ ಅಸ್ಥಿರತೆ ಮತ್ತು ಮಹಿಳಾ ಹಕ್ಕುಗಳ ದಮನದಿಂದ ಆಡಳಿತವು ಹಲವು ವರ್ಷಗಳಿಂದ ಸಾಮೂಹಿಕ ಪ್ರತಿಭಟನೆ ಎದುರಿಸುತ್ತಿದೆ. ಇಸ್ರೇಲ್-ಹಮಾಸ್ ಯುದ್ಧದಿಂದ ಮಧ್ಯಪ್ರಾಚ್ಯ ಉರಿಯುತ್ತಿರುವುದರಿಂದ, ದೇಶದ ಭವಿಷ್ಯ ಆತಂಕದಲ್ಲಿದೆ.

ಅಧ್ಯಕ್ಷ ರೈಸಿ ಅವರು ಇರಾನ್‌ನ ಪೂರ್ವ ಅಜರ್‌ಬೈಜಾನ್ ಪ್ರಾಂತ್ಯದಲ್ಲಿ ಪ್ರಯಾಣಿಸುತ್ತಿದ್ದರು. ರಾಜಧಾನಿ ಟೆಹ್ರಾನ್‌ನಿಂದ ವಾಯವ್ಯಕ್ಕೆ ಸುಮಾರು 600 ಕಿಲೋಮೀಟರ್ ದೂರದಲ್ಲಿರುವ ಅಜರ್‌ಬೈಜಾನ್ ರಾಷ್ಟ್ರದ ಗಡಿಯಲ್ಲಿರುವ ಜೋಲ್ಫಾ ಬಳಿ ಹೆಲಿಕಾಪ್ಟರ್‌ ಗಟ್ಟಿ ನೆಲದ ಮೇಲೆ ಇಳಿದಿದೆ ಎಂದು ಸ್ಟೇಟ್ ಟಿವಿ ಹೇಳಿದೆ. ಆನಂತರ ಪೂರ್ವದ ಉಜಿ ಗ್ರಾಮದ ಬಳಿ ಘಟನೆ ಸಂಭವಿಸಿತು ಎಂದು ಹೇಳಿದೆ.ಆದರೆ, ವಿವರ ಅಸ್ಪಷ್ಟವಾಗಿದೆ.

ಹೆಲಿಕಾಪ್ಟರ್ ಅವಶೇಷ ಪತ್ತೆ: ಸೋಮವಾರ (ಮೇ 20) ಮುಂಜಾನೆ ಟರ್ಕಿಯ ಅಧಿಕಾರಿಗಳು ಅರಣ್ಯದಲ್ಲಿ ʻಹೆಲಿಕಾಪ್ಟರ್‌ನ ಅವಶೇಷಗಳು ಉರಿಯುತ್ತಿರುವʼ ದೃಶ್ಯದ ಡ್ರೋನ್ ತುಣುಕನ್ನು ತೋರಿಸಿದರು. ಘಟನೆಯು ಅಜೆರ್ಬೈಜಾನ್-ಇರಾನಿಯನ್ ಗಡಿಯಿಂದ ಸುಮಾರು 20 ಕಿಲೋಮೀಟರ್ ದಕ್ಷಿಣದಲ್ಲಿ ನಡೆದಿತ್ತು.

ಐಆರ್‌ಎನ್‌ಎ ಸೋಮವಾರ ಬಿಡುಗಡೆ ಮಾಡಿದ ದೃಶ್ಯಾವಳಿಗಳು, ಹಸಿರು ಪರ್ವತ ಶ್ರೇಣಿಯ ಕಡಿದಾದ ಕಣಿವೆಯಲ್ಲಿ ಅಪಘಾತ ನಡೆದಿದೆ ಎಂದು ಹೇಳಿದ್ಏದವು. ಸ್ಥಳೀಯ ಅಜೇರಿ ಭಾಷೆಯಲ್ಲಿ ಮಾತನಾಡುವ ಸೈನಿಕರು,ʻಅದು ಅಲ್ಲಿ ಇದೆ. ನಾವು ಅದನ್ನು ಕಂಡುಹಿಡಿದಿದ್ದೇವೆ,ʼ ಎಂದು ಹೇಳಿದ್ದರು. ಸ್ವಲ್ಪ ಸಮಯದ ನಂತರ ಸ್ಟೇಟ್ ಟಿವಿ, ʻ ಹೆಲಿಕಾಪ್ಟರ್‌ ಪತನಗೊಂಡ ಸ್ಥಳದಲ್ಲಿ ಜೀವದ ಯಾವುದೇ ಲಕ್ಷಣಗಳಿಲ್ಲ,ʼ ಎಂದು ಪ್ರಕಟಿಸಿತು. ಆದರೆ, ತಸ್ನಿಮ್ ಸುದ್ದಿ ಸಂಸ್ಥೆ ಸಂರಕ್ಷಣಾ ಪಡೆ ಸ್ಥಳದ ಮೇಲೆ ಹಾರಲು ಸಣ್ಣ ಡ್ರೋನ್ ಬಳಸುತ್ತಿರುವುದನ್ನು ತೋರಿಸಿತು.

ಅಲಿ ಖಮೇನಿ ಕೂಡ ಸಾರ್ವಜನಿಕರನ್ನು ಪ್ರಾರ್ಥಿಸುವಂತೆ ಒತ್ತಾಯಿಸಿದರು. ʻಸರ್ವಶಕ್ತ ದೇವರು ಅಧ್ಯಕ್ಷರು ಮತ್ತು ಅವರ ಸಹೋದ್ಯೋಗಿಗಳನ್ನು ಪೂರ್ಣ ಆರೋಗ್ಯದಿಂದ ಹಿಂದಿರುಗಿಸುತ್ತಾನೆ ಎಂದು ನಾವು ಭಾವಿಸುತ್ತೇವೆ,ʼ ಎಂದು ಖಮೇನಿ ಹೇಳಿದರು.ಸ್ಟೇಟ್ ರಾಜ್ಯ ಟಿವಿಯು ಸಾವಿರಾರು ಜನರು ಪ್ರಾರ್ಥಿಸುತ್ತಿರುವ ದೃಶ್ಯಗಳನ್ನು ಪ್ರಸಾರ ಮಾಡಿತು. ಶಿಯಾ ಇಸ್ಲಾಂನ ಪವಿತ್ರ ಸ್ಥಳಗಳಲ್ಲಿ ಒಂದಾದ ಮಶಾದ್ ನಗರದ ಇಮಾಮ್ ರೆಜಾ ದೇಗುಲ, ಕೋಮ್ ಮತ್ತು ದೇಶಾದ್ಯಂತದ ಇತರ ಸ್ಥಳಗಳಲ್ಲಿ ಜನರು ಪ್ರಾರ್ಥಿಸುವುದನ್ನು ಸ್ಟೇಟ್‌ ಟಿವಿ ನಿರಂತರವಾಗಿ ಪ್ರಸಾರ ಮಾಡಿತು.

ʻಅವರಿಗೆ ಏನಾದರೂ ಆದರೆ, ನಾವು ಎದೆಗುಂದುತ್ತೇವೆʼ ಎಂದು ಮೆಹದಿ ಸೆಯೆದಿ ಹೇಳಿದರು. ʻಪ್ರಾರ್ಥನೆ ಕೆಲಸ ಮಾಡಲಿ ಮತ್ತು ಅವರು ಸುರಕ್ಷಿತವಾಗಿ ಮರಳಲಿ,ʼ ಎಂದು ಅವರು ಹೇಳಿದರು.

ಉತ್ತರಾಧಿಕಾರ: ಇರಾನ್ ಸಂವಿಧಾನದಡಿಯಲ್ಲಿ ಅಧ್ಯಕ್ಷರು ಮರಣ ಹೊಂದಿದರೆ, ಇರಾನ್‌ನ ಮೊದಲ ಉಪಾಧ್ಯಕ್ಷರು ಅಧಿಕಾರ ವಹಿಸಿಕೊಳ್ಳುತ್ತಾರೆ ಮತ್ತು 50 ದಿನಗಳಲ್ಲಿ ಹೊಸ ಅಧ್ಯಕ್ಷೀಯ ಚುನಾವಣೆ ನಡೆಯಲಿದೆ. ರೈಸಿ ಅವರ ಅನುಪಸ್ಥಿತಿಯಲ್ಲಿ ಮೊದಲ ಉಪಾಧ್ಯಕ್ಷ ಮೊಹಮ್ಮದ್ ಮೊಖ್ಬರ್ ಈಗಾಗಲೇ ಅಧಿಕಾರಿಗಳು ಮತ್ತು ವಿದೇಶಿ ಸರ್ಕಾರಗಳಿಂದ ಕರೆ ಸ್ವೀಕರಿಸಲು ಪ್ರಾರಂಭಿಸಿದ್ದಾರೆ ಎಂದು "ಸ್ಟೇಟ್‌ ಮೀಡಿಯಾʼ ವರದಿ ಮಾಡಿದೆ.

ಪ್ರಧಾನಿ ಶೋಕ: ಇರಾನ್‌ ಅಧ್ಯಕ್ಷ ಡಾ. ಸಯದ್‌ ಇಬ್ರಾಹಿಂ ರೈಸಿ ಅವರ ಸಾವು ವಿಷಾದಕರ ಮತ್ತು ಆಘಾತವಾಗಿದೆ. ಭಾರತ ಮತ್ತು ಇರಾನ್‌ ಸಂಬಂಧ ದೃಡಗೊಳ್ಳುವಲ್ಲಿ ಅವರ ಕಾಣಿಕೆಯನ್ನು ಸದಾ ನೆನಪಿನಲ್ಲಿ ಇರಲಿದೆ. ಅವರ ಕುಟುಂಬ ಹಾಗೂ ಇರಾನಿನ ಜನತೆಗೆ ನನ್ನ ಹೃದಯಪೂರ್ವಕ ಸಂತಾಪಗಳು ಸಲ್ಲುತ್ತವೆ. ಇಂಥ ಸಮಯದಲ್ಲಿ ಭಾರತ ಇರಾನ್‌ ಒಟ್ಟಿಗೆ ನಿಲ್ಲಲಿದೆʼ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಎಕ್ಸ್‌ ನಲ್ಲಿ ಬರೆದಿದ್ದಾರೆ.

Read More
Next Story