Iran War Updates|ಅಮೆರಿಕದ F-15E ಯುದ್ಧ ವಿಮಾನಗಳು ಪತನ- ಮಿತ್ರರಾಷ್ಟ್ರ ಕುವೈಟ್‌ನಿಂದ ಮಿಸ್‌ ಫೈರ್‌
x
ಅಮೆರಿಕದ F-15E ಯುದ್ಧ ವಿಮಾನಗಳು ಪತನ

Iran War Updates|ಅಮೆರಿಕದ F-15E ಯುದ್ಧ ವಿಮಾನಗಳು ಪತನ- ಮಿತ್ರರಾಷ್ಟ್ರ ಕುವೈಟ್‌ನಿಂದ ಮಿಸ್‌ ಫೈರ್‌

Iran-Israel War| ಇರಾನ್ ಯುದ್ಧದ ನಡುವೆ ಅಮೆರಿಕದ ಮೂರು F-15E ಸ್ಟ್ರೈಕ್ ಈಗಲ್ ವಿಮಾನಗಳು ಕುವೈತ್‌ನಲ್ಲಿ ಪತನಗೊಂಡಿವೆ. ಇದು ಇರಾನ್ ದಾಳಿಯಲ್ಲ, ಮಾಹಿತಿ ಹೊರಬಿದ್ದಿದೆ.


Click the Play button to hear this message in audio format

ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಅಮೆರಿಕ-ಇಸ್ರೇಲ್ ಪಡೆಗಳ ನಡುವೆ ಭೀಕರ ಯುದ್ಧ ನಡೆಯುತ್ತಿರುವ ಬೆನ್ನಲ್ಲೇ, ಅಮೆರಿಕದ ವಾಯುಪಡೆಗೆ (USAF) ಆಘಾತಕಾರಿ ಸುದ್ದಿಯೊಂದು ಎದುರಾಗಿದೆ. ಸೋಮವಾರದಂದು ಕುವೈತ್‌ನಲ್ಲಿ ಅಮೆರಿಕದ ಮೂರು F-15E ಸ್ಟ್ರೈಕ್ ಈಗಲ್ (F-15E Strike Eagles) ಯುದ್ಧ ವಿಮಾನಗಳು ಪತನಗೊಂಡಿದ್ದು, ಇವುಗಳನ್ನು ಶತ್ರು ರಾಷ್ಟ್ರ ಇರಾನ್ ಹೊಡೆದುರುಳಿಸಿಲ್ಲ, ಬದಲಿಗೆ ಮಿತ್ರರಾಷ್ಟ್ರ ಕುವೈತ್‌ನ ಪಡೆಯೇ ಧ್ವಂಸಗೊಳಿಸಿದೆ ಎಂಬ ಅಂಶ ವರದಿಯಾಗಿದೆ.

ನಡೆದಿದ್ದೇನು?

ವಾಲ್ ಸ್ಟ್ರೀಟ್ ಜರ್ನಲ್ (WSJ) ವರದಿಯ ಪ್ರಕಾರ, ಸೋಮವಾರ ಬೆಳಗಿನ ಜಾವ ಇರಾನ್‌ನ ಹಲವಾರು ಡ್ರೋನ್‌ಗಳು ಕುವೈತ್ ವಾಯುಪ್ರದೇಶವನ್ನು ಪ್ರವೇಶಿಸಿದ್ದವು. ಈ ವೇಳೆ ಕುವೈತ್‌ನ F/A-18 ಜೆಟ್ ಫೈಟರ್‌ಗಳು ಶತ್ರುಗಳ ಡ್ರೋನ್ ಮತ್ತು ಕ್ಷಿಪಣಿಗಳನ್ನು ತಡೆಯಲು ಕಾರ್ಯಾಚರಣೆ ನಡೆಸುತ್ತಿದ್ದವು. ಈ ತೀವ್ರ ಗೊಂದಲದ ಪರಿಸ್ಥಿತಿಯಲ್ಲಿ, ಕುವೈತ್ ಪೈಲಟ್‌ಗಳು ಅಮೆರಿಕದ F-15E ವಿಮಾನಗಳನ್ನೇ ಇರಾನ್‌ನ ಶತ್ರು ವಿಮಾನಗಳೆಂದು ತಪ್ಪಾಗಿ ಭಾವಿಸಿ 'ಫ್ರೆಂಡ್ಲಿ ಫೈರ್' ನಡೆಸಿದ್ದಾರೆ.

'ಬ್ಲೂ-ಆನ್-ಬ್ಲೂ' ಅವಘಡ

ಮಿಲಿಟರಿ ಭಾಷೆಯಲ್ಲಿ ಈ ಘಟನೆಯನ್ನು 'ಬ್ಲೂ-ಆನ್-ಬ್ಲೂ' (ಸಹವರ್ತಿ ಪಡೆಯಿಂದಲೇ ಸಂಭವಿಸುವ ದಾಳಿ) ಎಂದು ಕರೆಯಲಾಗುತ್ತದೆ. ಅಮೆರಿಕದ ಸೆಂಟ್ರಲ್ ಕಮಾಂಡ್ (CENTCOM) ಈ ವಿಮಾನಗಳ ಪತನವನ್ನು ದೃಢಪಡಿಸಿದೆ. ವಿಮಾನಗಳು ಪತನಗೊಳ್ಳುವ ಮುನ್ನವೇ ಅವುಗಳಲ್ಲಿದ್ದ ಸಿಬ್ಬಂದಿಗಳು ಪ್ಯಾರಾಚೂಟ್ ಮೂಲಕ ಸುರಕ್ಷಿತವಾಗಿ ಜಿಗಿದಿದ್ದಾರೆ. ಇವರನ್ನು ಅಮೆರಿಕದ ರಕ್ಷಣಾ ತಂಡಗಳು ಈಗಾಗಲೇ ವಶಕ್ಕೆ ಪಡೆದಿವೆ.

ಇರಾನ್‌ನ ಸುಳ್ಳು ಪ್ರತಿಪಾದನೆ

ಇರಾನ್ ಈ ವಿಮಾನಗಳನ್ನು ತಾನೇ ಹೊಡೆದುರುಳಿಸಿರುವುದಾಗಿ ಜಾಗತಿಕ ಮಟ್ಟದಲ್ಲಿ ಪ್ರಚಾರ ಮಾಡಿತ್ತು. ಆದರೆ ಪೆಂಟಗನ್ ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ಇದು ತಾಂತ್ರಿಕ ತಪ್ಪಿನಿಂದ ನಡೆದ ಘಟನೆ ಎಂದು ತಿಳಿದುಬಂದಿದೆ. ಮಾರ್ಚ್ 1 ರಂದು ಕುವೈತ್‌ನ ಶುವೈಬಾ ಬಂದರಿನಲ್ಲಿ ಇರಾನ್ ನಡೆಸಿದ ಡ್ರೋನ್ ದಾಳಿಯಲ್ಲಿ ಆರು ಅಮೆರಿಕದ ಸೈನಿಕರು ವೀರಮರಣ ಅಪ್ಪಿದ್ದರು. ಈ ಘಟನೆಯಿಂದಾಗಿ ಕುವೈತ್ ವಾಯು ರಕ್ಷಣಾ ಪಡೆಗಳು ತೀವ್ರ ಆತಂಕ ಮತ್ತು ಎಚ್ಚರಿಕೆಯಲ್ಲಿದ್ದವು.

ರಕ್ಷಣಾ ತಜ್ಞರ ಪ್ರಶ್ನೆ: ತಂತ್ರಜ್ಞಾನ ಎಲ್ಲಿ ಸೋತಿತು?

ಅಮೆರಿಕದ ಯುದ್ಧ ವಿಮಾನಗಳಲ್ಲಿ IFF (Identification Friend or Foe) ಎಂಬ ಅತ್ಯಾಧುನಿಕ ತಂತ್ರಜ್ಞಾನ ಇರುತ್ತದೆ. ಇದು ಮಿತ್ರ ರಾಷ್ಟ್ರಗಳ ರಾಡಾರ್‌ಗಳಿಗೆ ವಿಮಾನವು 'ನಮ್ಮದೇ' ಎಂಬ ಸಂಕೇತವನ್ನು ರವಾನಿಸುತ್ತದೆ. ಇಷ್ಟಿದ್ದರೂ F-15E ನಂತಹ ಬೃಹತ್ ವಿಮಾನಗಳನ್ನು ಇರಾನ್ ವಿಮಾನಗಳೆಂದು ಹೇಗೆ ತಪ್ಪಾಗಿ ಗುರುತಿಸಲಾಯಿತು ಎಂಬುದು ರಕ್ಷಣಾ ತಜ್ಞರನ್ನು ಕಾಡುತ್ತಿರುವ ಪ್ರಶ್ನೆಯಾಗಿದೆ. ವಿಮಾನಗಳಲ್ಲಿ IFF ವ್ಯವಸ್ಥೆ ಆಫ್ ಆಗಿತ್ತೇ ಅಥವಾ ಕುವೈತ್ ಪಡೆಗಳ ರಾಡಾರ್‌ನಲ್ಲಿ ತಾಂತ್ರಿಕ ದೋಷವಿತ್ತೇ ಎಂಬ ಬಗ್ಗೆ ತನಿಖೆ ನಡೆಯುತ್ತಿದೆ.

ಯುದ್ಧದ ತೀವ್ರತೆ ಹೆಚ್ಚಳ

ಫೆಬ್ರವರಿ 28 ರಿಂದ ಆರಂಭವಾದ 'ಆಪರೇಷನ್ ಎಪಿಕ್ ಫ್ಯೂರಿ' ಅಡಿಯಲ್ಲಿ ಅಮೆರಿಕ ಮತ್ತು ಇಸ್ರೇಲ್ ಪಡೆಗಳು ಇರಾನ್ ಮೇಲೆ ನಿರಂತರ ದಾಳಿ ನಡೆಸುತ್ತಿವೆ. ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ನಂತರ ಇರಾನ್ ಕೂಡ ತಿರುಗಿಬಿದ್ದಿದ್ದು, ಗಲ್ಫ್‌ ರಾಷ್ಟ್ರಗಳ ಮೇಲೆ ಸರಣಿ ಡ್ರೋನ್ ಮತ್ತು ಕ್ಷಿಪಣಿ ದಾಳಿಗಳನ್ನು ನಡೆಸುತ್ತಿದೆ.

Read More
Next Story