
ಇಸ್ಲಾಮಾಬಾದ್ ಮಾತುಕತೆ ವಿಫಲ| ಯಾವುದೇ ಒಪ್ಪಂದಕ್ಕೆ ಬಾರದ ಅಮೆರಿಕ-ಇರಾನ್
ರಾಜತಾಂತ್ರಿಕ ಪ್ರಕ್ರಿಯೆಯ ಯಶಸ್ಸು ಎದುರಾಳಿ ದೇಶದ ಗಂಭೀರತೆ ಮತ್ತು ಉತ್ತಮ ನಂಬಿಕೆ ಮೇಲೆ ನಿಂತಿತ್ತು. ಆದರೆ, ಅವರ ಅತಿಯಾದ ಬೇಡಿಕೆಗಳು ಮತ್ತು ಕಾನೂನುಬಾಹಿರ ವಿನಂತಿಗಳಿಂದಾಗಿ ಒಪ್ಪಂದ ಸಾಧ್ಯವಾಗಿಲ್ಲ ಎಂದು ಇರಾನ್ ಹೇಳಿದೆ.
ಇರಾನ್- ಅಮೆರಿಕ ನಡುವಿನ ಸಂಘರ್ಷ ಅಂತ್ಯಗೊಳಿಸಲು ಪಾಕಿಸ್ತಾನದ ಇಸ್ಲಮಾಬಾದ್ ನಲ್ಲಿ ಆಯೋಜಿಸಿದ್ದ ಮಾತುಕತೆ ವಿಫಲವಾಗಿದೆ. ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಸಂಬಂಧಿಸಿದಂತೆ ಯಾವುದೇ ಒಪ್ಪಂದಕ್ಕೆ ಬರದ ಕಾರಣ ಮಾತುಕತೆ ಫಲಪ್ರದವಾಗಿಲ್ಲ.
ಸುಮಾರು 21 ಗಂಟೆಗಳ ಸುದೀರ್ಘ ಚರ್ಚೆ ನಡೆದರೂ ನಿರ್ಣಾಯಕ ಒಪ್ಪಂದ ಸಾಧ್ಯವಾಗದ ಹಿನ್ನೆಲೆ ಅಮೆರಿಕದ ಉಪಾಧ್ಯಕ್ಷ ಜೆ.ಡಿ.ವ್ಯಾನ್ಸ್ ಭಾನುವಾರ ಬೆಳಿಗ್ಗೆ ಸ್ವದೇಶಕ್ಕೆ ಹಿಂತಿರುಗಿದ್ದಾರೆ.
ಮಾತುಕತೆ ಕುರಿತು ಮಾಹಿತಿ ನೀಡಿದ ಜೆ.ಡಿ. ವ್ಯಾನ್ಸ್, ಸತತ ಪ್ರಯತ್ನದ ಹೊರತಾಗಿಯೂ ಎರಡೂ ಕಡೆ ಭಿನ್ನಾಭಿಪ್ರಾಯ ಬಗೆಹರಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಹಲವಾರು ಗಂಭೀರ ವಿಷಯಗಳ ಕುರಿತು ಚರ್ಚೆಗಳನ್ನು ನಡೆಸಿದ್ದೇವೆ. ಆದರೂ, ಯಾವುದೇ ಒಪ್ಪಂದಕ್ಕೆ ಬರಲು ಸಾಧ್ಯವಾಗಲಿಲ್ಲ ಎಂದು ಹೇಳಿದ್ದಾರೆ.
ಇರಾನ್ ಜೊತೆಗಿನ ಮಾತುಕತೆಯಲ್ಲಿ ನಮ್ಮ ಮಿತಿಗಳು, ಯಾವ ವಿಷಯಗಳಲ್ಲಿ ನಾವು ಹೊಂದಾಣಿಕೆಗೆ ಸಿದ್ಧ ಮತ್ತು ಯಾವುದರಲ್ಲಿ ರಾಜಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಿದ್ದೇವೆ. ಇರಾನ್ ನಿಯೋಗವು ನಮ್ಮ ಷರತ್ತುಗಳನ್ನು ಒಪ್ಪಿಕೊಂಡಿಲ್ಲ. ಹಾಗಾಗಿ ಮಾತುಕತೆ ಪಲಪ್ರಧವಾಗಿಲ್ಲ ಎಂದು ಜೆ.ಡಿ. ವ್ಯಾನ್ಸ್ ಮಾಹಿತಿ ನೀಡಿದ್ದಾರೆ.
ಮಾತುಕತೆ ವಿಫಲವಾಗಲು ಪರಮಾಣು ವಿಷಯವು ಒಂದಾಗಿದೆ. 21 ಗಂಟೆಗಳು ಖಾಸಗಿಯಾಗಿ ನಡೆಸಿದ ಮಾತುಕತೆಗಳನ್ನು ಸಾರ್ವಜನಿಕವಾಗಿ ಚರ್ಚಿಸಲು ಬಯಸುವುದಿಲ್ಲ' ಎಂದು ಹೇಳಿದ್ದಾರೆ.
ಕಾನೂನುಬಾಹಿರ ಬೇಡಿಕೆಗಳಿಂದ ಮಾತುಕತೆ ವಿಫಲ
ಅಮೆರಿಕದ ಅತಿಯಾದ ಹಾಗೂ ಕಾನೂನುಬಾಹಿರ ಬೇಡಿಕೆಗಳಿಂದಾಗಿ ಯಾವುದೇ ಒಪ್ಪಂದಕ್ಕೆ ಬರಲಾಗಿಲ್ಲ ಎಂದು ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರರು ಭಾನುವಾರ ತಿಳಿಸಿದ್ದಾರೆ.
ಇರಾನ್ ವಿದೇಶಾಂಗ ಸಚಿವಾಲಯದ ವಕ್ತಾರ ಎಸ್ಮಾಯಿಲ್ ಬಕೈ ಅವರು 'ಎಕ್ಸ್' ಸಂದೇಶದಲ್ಲಿ ಈ ಬಗ್ಗೆ ಪೋಸ್ಟ್ ಮಾಡಿದ್ದು, ಎರಡೂ ಕಡೆಯವರು ಒಪ್ಪಂದಕ್ಕೆ ಬರುವಲ್ಲಿ ವಿಫಲರಾಗಿದ್ದಾರೆ. ಎರಡೂ ಕಡೆ ಸಾಕಷ್ಟು ಸಂದೇಶ ಮತ್ತು ವಿಷಯಗಳು ವಿನಿಮಯವಾಗಿವೆ ಎಂದು ದೃಢಪಡಿಸಿದ್ದಾರೆ.
"ಕಳೆದ 21 ಗಂಟೆಗಳ ಚರ್ಚೆಯಲ್ಲಿ ಹಾರ್ಮುಜ್ ಜಲಸಂಧಿ, ಪರಮಾಣು ಸಮಸ್ಯೆ, ಯುದ್ಧ ಪರಿಹಾರಗಳು, ನಿರ್ಬಂಧಗಳನ್ನು ತೆಗೆದುಹಾಕುವುದು ಮತ್ತು ಇರಾನ್ ವಿರುದ್ಧದ ಯುದ್ಧಕ್ಕೆ ಸಂಪೂರ್ಣ ಅಂತ್ಯ ಹಾಡುವುದು ಸೇರಿದಂತೆ ಪ್ರಮುಖ ವಿಷಯಗಳು ಪ್ರಸ್ತಾಪವಾಗಿವೆ ಎಂದು ಬರೆದುಕೊಂಡಿದ್ದಾರೆ.
ಈ ರಾಜತಾಂತ್ರಿಕ ಪ್ರಕ್ರಿಯೆಯ ಯಶಸ್ಸು ಎದುರಾಳಿ ದೇಶದ ಗಂಭೀರತೆ ಮತ್ತು ಉತ್ತಮ ನಂಬಿಕೆ ಮೇಲೆ ನಿಂತಿತ್ತು. ಆದರೆ, ಅವರ ಅತಿಯಾದ ಬೇಡಿಕೆಗಳು ಮತ್ತು ಕಾನೂನುಬಾಹಿರ ವಿನಂತಿಗಳಿಂದಾಗಿ ಒಪ್ಪಂದ ಸಾಧ್ಯವಾಗಿಲ್ಲ. ಮಾತುಕತೆ ಆಯೋಜಿಸಿದ್ದಕ್ಕಾಗಿ ಮತ್ತು ಈ ಪ್ರಕ್ರಿಯೆಯನ್ನು ಮುನ್ನಡೆಸಲು ಮಧ್ಯಸ್ಥಿಕೆ ವಹಿಸಿದ ಪಾಕಿಸ್ತಾನದ ಸರ್ಕಾರ ಹಾಗೂ ಜನರಿಗೆ ಕೃತಜ್ಞತೆ ಸಲ್ಲಿಸುವುದಾಗಿ ಬಕೈ ತಿಳಿಸಿದ್ದಾರೆ.

