19ನೇ ದಿನಕ್ಕೆ ಕಾಲಿಟ್ಟ ಯುದ್ಧ: ಭಾರತದ ಮೊದಲ ವೈದ್ಯಕೀಯ ನೆರವಿಗೆ ಇರಾನ್ ಕೃತಜ್ಞತೆ
x

19ನೇ ದಿನಕ್ಕೆ ಕಾಲಿಟ್ಟ ಯುದ್ಧ: ಭಾರತದ ಮೊದಲ ವೈದ್ಯಕೀಯ ನೆರವಿಗೆ ಇರಾನ್ ಕೃತಜ್ಞತೆ

ಭಾರತ ಕಳುಹಿಸಿದ ವೈದ್ಯಕೀಯ ಸಾಮಗ್ರಿಗಳು ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿಯನ್ನು ತಲುಪಿದ್ದು, ಈ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.


Click the Play button to hear this message in audio format

ಯುದ್ಧಪೀಡಿತ ಇರಾನ್‌ಗೆ ಭಾರತದಿಂದ ಮೊದಲ ವೈದ್ಯಕೀಯ ನೆರವಿನ ಸರಕು ತಲುಪಿದ್ದು, ಈ ಮಾನವೀಯ ಕಾರ್ಯಕ್ಕಾಗಿ ಇರಾನ್ ಸರ್ಕಾರ ಭಾರತಕ್ಕೆ ವಿಶೇಷ ಕೃತಜ್ಞತೆ ಸಲ್ಲಿಸಿದೆ. ಬುಧವಾರಕ್ಕೆ (ಮಾರ್ಚ್ 18) ಇರಾನ್ ಯುದ್ಧ 19ನೇ ದಿನಕ್ಕೆ ಕಾಲಿಟ್ಟಿದ್ದು, ಭಾರತದ ಜನತೆಯ ಈ ಸಹಾಯವನ್ನು ಇರಾನ್ ರಾಯಭಾರ ಕಚೇರಿ ಮುಕ್ತಕಂಠದಿಂದ ಶ್ಲಾಘಿಸಿದೆ.

ಭಾರತ ಕಳುಹಿಸಿದ ವೈದ್ಯಕೀಯ ಸಾಮಗ್ರಿಗಳು ಇರಾನ್ ರೆಡ್ ಕ್ರೆಸೆಂಟ್ ಸೊಸೈಟಿಯನ್ನು ತಲುಪಿದ್ದು, ಈ ವಿಡಿಯೋ ತುಣುಕನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ. ದೇಣಿಗೆ ನೀಡಲು ಇಚ್ಛಿಸುವವರಿಗಾಗಿ ಅಧಿಕೃತ ಬ್ಯಾಂಕ್ ಖಾತೆ ವಿವರಗಳನ್ನೂ ರಾಯಭಾರ ಕಚೇರಿ ಪ್ರಕಟಿಸಿದೆ. ಇತ್ತೀಚಿನ ವರ್ಷಗಳಲ್ಲಿ ಸಂಕಷ್ಟದಲ್ಲಿರುವ ರಾಷ್ಟ್ರಗಳಿಗೆ ಮಾನವೀಯ ನೆರವು ನೀಡುವಲ್ಲಿ ಭಾರತವು ಪ್ರಮುಖ ರಾಷ್ಟ್ರವಾಗಿ ಹೊರಹೊಮ್ಮಿರುವುದು ಇದರಿಂದ ಮತ್ತೊಮ್ಮೆ ಸಾಬೀತಾಗಿದೆ.

ಸಾವಿರಾರು ಸಾವು-ನೋವು, ಜಾಗತಿಕ ಸ್ಪಂದನೆ

ಫೆಬ್ರವರಿ 28ರಂದು ಪ್ರಾರಂಭವಾದ ಈ ಸಂಘರ್ಷದಲ್ಲಿ ಇಲ್ಲಿಯವರೆಗೆ 1,300ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು 7,000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ ಎಂದು ಜಿನೀವಾದಲ್ಲಿರುವ ವಿಶ್ವಸಂಸ್ಥೆಯ ಇರಾನ್ ರಾಯಭಾರಿ ಅಲಿ ಬಹ್ರೇನಿ ತಿಳಿಸಿದ್ದಾರೆ. ಆದರೆ, ಇರಾನ್ ಆರೋಗ್ಯ ಸಚಿವಾಲಯದ ಇತ್ತೀಚಿನ ಅಂಕಿ-ಅಂಶಗಳ ಪ್ರಕಾರ, ಸಾವಿನ ಸಂಖ್ಯೆ ಕನಿಷ್ಠ 1,444ಕ್ಕೆ ಏರಿಕೆಯಾಗಿದ್ದು, 18,551ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಇದರ ನಡುವೆ ಯುದ್ಧದಿಂದ ಉಂಟಾದ ಮಾನವೀಯ ಬಿಕ್ಕಟ್ಟನ್ನು ನಿಭಾಯಿಸಲು ಇರಾನ್, ಜೋರ್ಡಾನ್, ಲೆಬನಾನ್ ಮತ್ತು ಇರಾಕ್ ದೇಶಗಳಿಗೆ ತುರ್ತು ನೆರವು ನೀಡುವುದಾಗಿ ಚೀನಾ ವಿದೇಶಾಂಗ ಸಚಿವಾಲಯ ಪ್ರಕಟಿಸಿದೆ. ಸವಾಲುಗಳ ನಡುವೆಯೂ ಇರಾನ್‌ನ ಆರೋಗ್ಯ ವ್ಯವಸ್ಥೆ ಸುಸ್ಥಿತಿಯಲ್ಲಿದೆ ಮತ್ತು ಪ್ರಸ್ತುತ ಗಾಯಾಳುಗಳಿಗೆ ಚಿಕಿತ್ಸೆ ನೀಡುವ ಸಾಮರ್ಥ್ಯವನ್ನು ಹೊಂದಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ ಪ್ರಾದೇಶಿಕ ನಿರ್ದೇಶಕಿ ಹನಾನ್ ಬಾಲ್ಖಿ ಸ್ಪಷ್ಟಪಡಿಸಿದ್ದಾರೆ.

ಗುಜರಾತ್‌ ತಲುಪಿದ ಭಾರತದ ಹಡಗುಗಳು

ಪಶ್ಚಿಮ ಏಷ್ಯಾದಲ್ಲಿ ಯುದ್ಧದ ಭೀತಿಯ ನಡುವೆಯೂ ಭಾರತೀಯ ಧ್ವಜವಿರುವ ತೈಲ ಟ್ಯಾಂಕರ್ 'ಜಗ್ ಲಾಡ್ಕಿ' ಯುಎಇಯ ಫುಜೈರಾದಿಂದ ಗುಜರಾತ್‌ನ ಮುಂದ್ರಾ ಬಂದರನ್ನು ಸುರಕ್ಷಿತವಾಗಿ ತಲುಪಿದೆ. ಫುಜೈರಾ ಟರ್ಮಿನಲ್ ಮೇಲೆ ದಾಳಿ ನಡೆದಿದ್ದರೂ ಈ ಹಡಗು ಯಶಸ್ವಿಯಾಗಿ ಪಾರಾಗಿ ಬಂದಿದೆ. ಇದರೊಂದಿಗೆ ಸಂಘರ್ಷ ಪೀಡಿತ ವಲಯದಿಂದ ಸುರಕ್ಷಿತವಾಗಿ ಬಂದ ಹಡಗುಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಇದಕ್ಕೂ ಮುನ್ನ ಎಲ್‌ಪಿಜಿ ಹೊತ್ತೊಯ್ಯುತ್ತಿದ್ದ 'ಶಿವಾಲಿಕ್' ಸೋಮವಾರ ಮುಂದ್ರಾ ಬಂದರಿಗೆ ಮತ್ತು 'ನಂದಾದೇವಿ' ಮಂಗಳವಾರ ಮುಂಜಾನೆ ಕಾಂಡ್ಲಾ ಬಂದರಿಗೆ ತಲುಪಿದ್ದವು. ಈ ಎರಡು ಹಡಗುಗಳು ಸುಮಾರು 92,712 ಟನ್ ಎಲ್‌ಪಿಜಿ ತಂದಿದ್ದು, ಇದು ದೇಶದ ಒಂದು ದಿನದ ಅಡುಗೆ ಅನಿಲದ ಅಗತ್ಯಕ್ಕೆ ಸಮನಾಗಿದೆ.

ಹಾರ್ಮುಜ್ ಜಲಸಂಧಿಯಲ್ಲಿ ಬಾಕಿಯುಳಿದ ನಾವಿಕರು

ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಪಶ್ಚಿಮ ಏಷ್ಯಾದಲ್ಲಿ ಯುದ್ಧ ಭುಗಿಲೆದ್ದಾಗ ಹಾರ್ಮುಜ್ ಜಲಸಂಧಿಯಲ್ಲಿ ಒಟ್ಟು 28 ಭಾರತೀಯ ಧ್ವಜವಿರುವ ಹಡಗುಗಳಿದ್ದವು. ಇವುಗಳಲ್ಲಿ 24 ಹಡಗುಗಳು ಜಲಸಂಧಿಯ ಪಶ್ಚಿಮ ಭಾಗದಲ್ಲಿ ಮತ್ತು ನಾಲ್ಕು ಪೂರ್ವ ಭಾಗದಲ್ಲಿದ್ದವು. ಕಳೆದ ಒಂದು ವಾರದಲ್ಲಿ ಎರಡೂ ಕಡೆಯಿಂದ ತಲಾ ಎರಡು ಹಡಗುಗಳು ಸುರಕ್ಷಿತ ಸ್ಥಳಕ್ಕೆ ಸಾಗಿವೆ. ಪ್ರಸ್ತುತ ಪಶ್ಚಿಮ ಭಾಗದಲ್ಲಿ 22 ಹಡಗುಗಳು ಉಳಿದುಕೊಂಡಿದ್ದು, ಇವುಗಳಲ್ಲಿ 611 ನಾವಿಕರು ಇದ್ದಾರೆ ಮತ್ತು ಪೂರ್ವ ಭಾಗದಲ್ಲಿ ಕೇವಲ ಎರಡು ಹಡಗುಗಳಿವೆ. ಪಶ್ಚಿಮ ಭಾಗದಲ್ಲಿರುವ ಹಡಗುಗಳಲ್ಲಿ ಆರು ಎಲ್‌ಪಿಜಿ, ಒಂದು ಎಲ್‌ಎನ್‌ಜಿ, ನಾಲ್ಕು ಕಚ್ಚಾ ತೈಲ, ಒಂದು ರಾಸಾಯನಿಕ, ಮೂರು ಕಂಟೈನರ್ ಮತ್ತು ಎರಡು ಬಲ್ಕ್ ಕ್ಯಾರಿಯರ್‌ಗಳು ಸೇರಿವೆ. ಜೊತೆಗೆ ಒಂದು ಡ್ರೆಡ್ಜರ್, ಒಂದು ಖಾಲಿ ಹಡಗು ಹಾಗೂ ಮೂರು ಹಡಗುಗಳು ಡ್ರೈ ಡಾಕ್‌ನಲ್ಲಿ ನಿರ್ವಹಣೆಯ ಹಂತದಲ್ಲಿವೆ.

Read More
Next Story