ಅಮೆರಿಕ-ಇಸ್ರೇಲ್ ದಾಳಿ ಭೀತಿ- ಇರಾನ್ ಮಿಲಿಟರಿ ವಿಮಾನಗಳಿಗೆ ಪಾಕಿಸ್ತಾನದಲ್ಲಿ ಆಶ್ರಯ?
x

ಅಮೆರಿಕ-ಇಸ್ರೇಲ್ ದಾಳಿ ಭೀತಿ- ಇರಾನ್ ಮಿಲಿಟರಿ ವಿಮಾನಗಳಿಗೆ ಪಾಕಿಸ್ತಾನದಲ್ಲಿ ಆಶ್ರಯ?

ಇಸ್ರೇಲ್ ಮತ್ತು ಅಮೆರಿಕದ ದಾಳಿಯಿಂದ ರಕ್ಷಿಸಿಕೊಳ್ಳಲು ಇರಾನ್ ತನ್ನ ಮಿಲಿಟರಿ ವಿಮಾನಗಳನ್ನು ಪಾಕಿಸ್ತಾನದ ನೂರ್ ಖಾನ್ ವಾಯುನೆಲೆಯಲ್ಲಿ ಅಡಗಿಸಿತ್ತೇ?


ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ವೇಳೆ ಪಾಕಿಸ್ತಾನವು ಇರಾನ್‌ಗೆ ಗುಪ್ತವಾಗಿ ನೆರವು ನೀಡಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಅಮೆರಿಕ ಮತ್ತು ಇಸ್ರೇಲ್‌ನ ವೈಮಾನಿಕ ದಾಳಿಯಿಂದ ತನ್ನ ರಕ್ಷಣಾ ಆಸ್ತಿಗಳನ್ನು ಉಳಿಸಿಕೊಳ್ಳಲು ಇರಾನ್ ತನ್ನ ಮಿಲಿಟರಿ ವಿಮಾನಗಳನ್ನು ಪಾಕಿಸ್ತಾನದ ವಾಯುನೆಲೆಗಳಲ್ಲಿ ಪಾರ್ಕ್ ಮಾಡಿತ್ತು ಎಂದು ಅಮೆರಿಕದ 'ಸಿಬಿಎಸ್ ನ್ಯೂಸ್' ವರದಿ ಮಾಡಿದೆ.

ನೂರ್ ಖಾನ್ ವಾಯುನೆಲೆಯಲ್ಲಿ ಇರಾನ್ ವಿಮಾನಗಳು?

ವರದಿಯ ಪ್ರಕಾರ, ಇರಾನ್ ತನ್ನ ಪ್ರಮುಖ ಮಿಲಿಟರಿ ವಿಮಾನಗಳನ್ನು ರಾವಲ್ಪಿಂಡಿಯ ಹೊರವಲಯದಲ್ಲಿರುವ ಪಾಕಿಸ್ತಾನ ವಾಯುಪಡೆಯ 'ನೂರ್ ಖಾನ್' ನೆಲೆಗೆ ವರ್ಗಾಯಿಸಿದೆ. ಈ ಆಯಕಟ್ಟಿನ ಮಿಲಿಟರಿ ನೆಲೆಯು ಇಸ್ಲಾಮಾಬಾದ್‌ಗೆ ಸಮೀಪದಲ್ಲಿದ್ದು, ಇರಾನ್‌ನ ವಿಮಾನಗಳಿಗೆ ಸುರಕ್ಷಿತ ಆಶ್ರಯ ಒದಗಿಸಿದೆ ಎನ್ನಲಾಗಿದೆ.

ಯಾವ ವಿಮಾನಗಳು?

ಮುಖ್ಯವಾಗಿ ಇರಾನ್ ವಾಯುಪಡೆಯ RC-130 ಎಂಬ ಬೇಹುಗಾರಿಕೆ ಮತ್ತು ಮಾಹಿತಿ ಸಂಗ್ರಹಣಾ ವಿಮಾನವನ್ನು ಪಾಕಿಸ್ತಾನಕ್ಕೆ ಕಳುಹಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ. ಇರಾನ್ ತನ್ನ ಕೆಲವು ನಾಗರಿಕ ವಿಮಾನಗಳನ್ನು ನೆರೆಯ ಅಫ್ಘಾನಿಸ್ತಾನದ ಕಾಬೂಲ್ ಮತ್ತು ಹೆರಾತ್ ವಿಮಾನ ನಿಲ್ದಾಣಗಳಲ್ಲೂ ನಿಲ್ಲಿಸಿತ್ತು ಎನ್ನಲಾಗಿದೆ.

ವಾಷಿಂಗ್ಟನ್‌ನಲ್ಲಿ ಆಕ್ರೋಶ: ಪಾಕ್ ತಟಸ್ಥ ನೀತಿಗೆ ಧಕ್ಕೆ?

ಈ ವರದಿ ಹೊರಬೀಳುತ್ತಿದ್ದಂತೆಯೇ ಅಮೆರಿಕದ ಸಂಸದರು ಪಾಕಿಸ್ತಾನದ ವಿರುದ್ಧ ಕಿಡಿಕಾರಿದ್ದಾರೆ. ಅಮೆರಿಕ ಮತ್ತು ಇರಾನ್ ನಡುವೆ ಸಂಧಾನಕಾರನಾಗಿ ಕೆಲಸ ಮಾಡುತ್ತಿರುವ ಪಾಕಿಸ್ತಾನ, ವಾಸ್ತವದಲ್ಲಿ ಇರಾನ್‌ಗೆ ನೆರವು ನೀಡುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ್ದಾರೆ. ಅಮೆರಿಕದ ಹಿರಿಯ ಸೆನೆಟರ್ ಲಿಂಡ್ಸೆ ಗ್ರಾಹಮ್, "ಈ ವರದಿ ನಿಜವಾಗಿದ್ದರೆ, ಸಂಧಾನಕಾರನಾಗಿ ಪಾಕಿಸ್ತಾನದ ಪಾತ್ರವನ್ನು ನಾವು ಮರುಪರಿಶೀಲಿಸಬೇಕಾಗುತ್ತದೆ" ಎಂದು ಎಚ್ಚರಿಸಿದ್ದಾರೆ.

ಆರೋಪ ತಳ್ಳಿಹಾಕಿದ ಪಾಕಿಸ್ತಾನ ಮತ್ತು ತಾಲಿಬಾನ್

ಪಾಕಿಸ್ತಾನದ ಹಿರಿಯ ಅಧಿಕಾರಿಯೊಬ್ಬರು ಈ ಆರೋಪಗಳನ್ನು ನಿರಾಕರಿಸಿದ್ದಾರೆ. "ನೂರ್ ಖಾನ್ ವಾಯುನೆಲೆಯು ಜನನಿಬಿಡ ಪ್ರದೇಶದಲ್ಲಿದೆ. ಅಲ್ಲಿ ಅಷ್ಟೊಂದು ದೊಡ್ಡ ಪ್ರಮಾಣದ ವಿಮಾನಗಳನ್ನು ಸಾರ್ವಜನಿಕರ ಕಣ್ಣಿನಿಂದ ಮರೆಮಾಚಿ ನಿಲ್ಲಿಸಲು ಸಾಧ್ಯವಿಲ್ಲ" ಎಂದು ಅವರು ವಾದಿಸಿದ್ದಾರೆ. ಅಫ್ಘಾನಿಸ್ತಾನದ ತಾಲಿಬಾನ್ ಸರ್ಕಾರ ಕೂಡ ಇರಾನ್‌ನ ಮಿಲಿಟರಿ ವಿಮಾನಗಳು ತಮ್ಮಲ್ಲಿ ಇಲ್ಲ ಎಂದು ಸ್ಪಷ್ಟಪಡಿಸಿದೆ. ಆದರೆ, ಇರಾನ್‌ನ ನಾಗರಿಕ ವಿಮಾನವೊಂದು (ಮಹಾನ್ ಏರ್) ಕಾಬೂಲ್‌ನಲ್ಲಿ ಪಾರ್ಕ್ ಆಗಿದ್ದನ್ನು ಅಫ್ಘಾನ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ.

ಇಕ್ಕಟ್ಟಿನಲ್ಲಿ ಇಸ್ಲಾಮಾಬಾದ್

ಪಾಕಿಸ್ತಾನವು ಒಂದು ಕಡೆ ಅಮೆರಿಕದೊಂದಿಗೆ ಉತ್ತಮ ಸಂಬಂಧ ಬಯಸುತ್ತಿದೆ, ಇನ್ನೊಂದು ಕಡೆ ಇರಾನ್ ಮತ್ತು ಚೀನಾದ ಸ್ನೇಹವನ್ನೂ ಕಳೆದುಕೊಳ್ಳಲು ಸಿದ್ಧವಿಲ್ಲ. ಚೀನಾವು ಪಾಕಿಸ್ತಾನಕ್ಕೆ ಶೇ. 80ರಷ್ಟು ಶಸ್ತ್ರಾಸ್ತ್ರಗಳನ್ನು ಪೂರೈಸುತ್ತಿದ್ದು, ಇರಾನ್ ಕೂಡ ಚೀನಾದ ಆಪ್ತ ಮಿತ್ರನಾಗಿದೆ. ಇಸ್ರೇಲ್ ಕೂಡ ಪಾಕಿಸ್ತಾನದ ಈ ದ್ವಂದ್ವ ನೀತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದೆ.

ಸದ್ಯ ಇರಾನ್ ಮುಂದಿಟ್ಟಿರುವ ಸಂಧಾನದ ಪ್ರಸ್ತಾಪವನ್ನು ಅಮೆರಿಕ ತಿರಸ್ಕರಿಸಿದ್ದು, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ಮುಂದುವರಿದಿದೆ. ಈ ನಡುವೆ ಪಾಕಿಸ್ತಾನವು ಇರಾನ್‌ಗೆ ನೀಡಿದೆಯೆನ್ನಲಾದ ಈ 'ರಹಸ್ಯ ಆಶ್ರಯ' ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಚರ್ಚೆಗೆ ಗ್ರಾಸವಾಗಿದೆ.

Read More
Next Story