
ರಾಜಕುಮಾರ ರೆಜಾ ಪಹ್ಲವಿ ಕರೆಗೆ ಇರಾನ್ ತತ್ತರ; 39 ಮಂದಿ ಬಲಿ, ಇಂಟರ್ನೆಟ್ ಸ್ಥಗಿತ!
ಇರಾನ್‌ನಲ್ಲಿ ಆರ್ಥಿಕ ಸಂಕಷ್ಟದ ವಿರುದ್ಧದ ಹೋರಾಟ ಈಗ ಮಹಾ ಕ್ರಾಂತಿಯಾಗಿ ಬದಲಾಗಿದೆ. ದೇಶಭ್ರಷ್ಟ ರಾಜಕುಮಾರ ರೆಜಾ ಪಹ್ಲವಿ ಅವರ ಸಾಮೂಹಿಕ ಪ್ರತಿಭಟನೆಯ ಕರೆಗೆ ಸಾವಿರಾರು ಜನರು ಬೀದಿಗಿಳಿದಿದ್ದಾರೆ.
ಇರಾನ್ (Iran) ಸರ್ಕಾರದ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ಈಗ 12 ದಿನಕ್ಕೆ ಕಾಲಿಟ್ಟಿದ್ದು ಇಂಟರ್‌ನೆಟ್ ಸೇವೆಯನ್ನು ಬಂದ್ ಮಾಡಲಾಗಿದೆ. ಅಯತೊಲ್ಲಾ ಖೊಮೇನಿ ನೇತೃತ್ವದ ಇರಾನ್ ಸರ್ಕಾರದ ವಿರುದ್ಧ ದೇಶಭ್ರಷ್ಟ ರಾಜಕುಮಾರ ನೀಡಿದ ಸಾಮೂಹಿಕ ಪ್ರತಿಭಟನೆಯ ಕರೆಗೆ ಸ್ಪಂದಿಸಿರುವ ಸಾವಿರಾರು ಜನರು ಗುರುವಾರ ರಾತ್ರಿ ಬೀದಿಗಿಳಿದು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಪ್ರತಿಭಟನೆ ಶುರುವಾದ ಬೆನ್ನಲ್ಲೇ ಇರಾನ್ ಸರ್ಕಾರ ಇಂಟರ್ನೆಟ್ ಮತ್ತು ಟೆಲಿಫೋನ್ ಸೇವೆಗಳನ್ನು ಕಡಿತಗೊಳಿಸಿದೆ ಎಂದು ವರದಿಯಾಗಿದೆ.
ಮೊಹಮ್ಮದ್ ರೆಜಾ ಶಾ ಪಹ್ಲವಿ ಯಾರು?
1979ರ ಮೊದಲು ಇರಾನ್ ಅನ್ನು ಮೊಹಮ್ಮದ್ ರೆಜಾ ಶಾ ಪಹ್ಲವಿ ಎಂಬ ರಾಜ ಆಳುತ್ತಿದ್ದನು. ಆದರೆ ಇಸ್ಲಾಮಿಕ್ ಕ್ರಾಂತಿಯ ನಂತರ ರಾಜಪ್ರಭುತ್ವ ಅಂತ್ಯವಾಗಿ, ಅಯತೊಲ್ಲಾ ಖೊಮೇನಿ ನೇತೃತ್ವದಲ್ಲಿ ಇಸ್ಲಾಮಿಕ್ ಗಣರಾಜ್ಯ ಅಸ್ತಿತ್ವಕ್ಕೆ ಬಂದಿತು. ಆಗ ರಾಜನ ಮಗ ರೆಜಾ ಪಹ್ಲವಿ ದೇಶ ತೊರೆದು ಅಮೆರಿಕದಲ್ಲಿ ನೆಲೆಸಿದ್ದರು. ಇದೀಗ ಸುಮಾರು 45 ವರ್ಷಗಳ ನಂತರ, ಅವರು ನೀಡಿದ ಪ್ರತಿಭಟನೆಯ ಕರೆಗೆ ಇರಾನ್ ಜನತೆ ಓಗೊಟ್ಟಿರುವುದು ಪ್ರಸ್ತುತ ಸರ್ಕಾರದ ಬುಡವನ್ನೇ ಅಲುಗಾಡಿಸಿದೆ.
ಆರ್ಥಿಕ ಮುಗ್ಗಟ್ಟು ಕ್ರಾಂತಿಯಾಗಿ ಬದಲಾದದ್ದು ಹೇಗೆ?
ಈ ಪ್ರತಿಭಟನೆ ಮೊದಲು ಆರಂಭವಾದದ್ದು ಅಗತ್ಯ ವಸ್ತುಗಳ ಬೆಲೆ ಏರಿಕೆ ಮತ್ತು ಕುಸಿಯುತ್ತಿರುವ ಆರ್ಥಿಕತೆಯ ವಿರುದ್ಧ. ಆದರೆ ಯಾವಾಗ ಅಮೆರಿಕದಲ್ಲಿರುವ ಶಹಜಾದೆ ರೆಜಾ ಪಹ್ಲವಿ ಅವರು ಸಾಮಾಜಿಕ ಜಾಲತಾಣದ ಮೂಲಕ ಬೀದಿಗಿಳಿಯಿರಿ ಎಂದು ಕರೆ ನೀಡಿದರೋ, ಆರ್ಥಿಕ ಹೋರಾಟವು ರಾಜಕೀಯ ಬದಲಾವಣೆಯ ಹೋರಾಟವಾಗಿ ಬದಲಾಯಿತು. ಜನರು ನೇರವಾಗಿ ಸರ್ವಾಧಿಕಾರಿಯ ಸಾವಿಗೆ ಘೋಷಣೆ ಕೂಗುತ್ತಿರುವುದು ಸರ್ಕಾರದ ಆತಂಕಕ್ಕೆ ಕಾರಣವಾಗಿದೆ.
ಪ್ರತಿಭಟನೆ ವಿಡಿಯೊ ಇಲ್ಲಿದೆ
'ಬ್ಲಾಕ್ ಔಟ್' ತಂತ್ರ: ಇಂಟರ್ನೆಟ್ ಯಾಕೆ ಸ್ಥಗಿತ?
ಪ್ರತಿಭಟನಾಕಾರರು ಸಂಘಟಿತರಾಗಲು ಇನ್‌ಸ್ಟಾಗ್ರಾಮ್, ಟೆಲಿಗ್ರಾಮ್ ಮತ್ತು ಎಕ್ಸ್ (ಟ್ವಿಟರ್) ಅಪ್ಲಿಕೇಶನ್‌ಗಳನ್ನು ಬಳಸುತ್ತಿದ್ದಾರೆ. ಪ್ರತಿಭಟನೆಯ ವಿಡಿಯೋಗಳು ಪ್ರಪಂಚಕ್ಕೆ ತಿಳಿಯಬಾರದು ಮತ್ತು ಜನರು ಒಂದೆಡೆ ಸೇರುವುದನ್ನು ತಡೆಯಲು ಇರಾನ್ ಸರ್ಕಾರ ಇಡೀ ದೇಶದಲ್ಲಿ ಇಂಟರ್ನೆಟ್ ಮತ್ತು ಫೋನ್ ಸೇವೆಗಳನ್ನು ಕಡಿತಗೊಳಿಸಿದೆ. ಇದು ಇರಾನ್ ಸರ್ಕಾರದ ಹತಾಶೆಯನ್ನು ತೋರಿಸುತ್ತದೆ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ.
ಅಮೆರಿಕ ಮತ್ತು ಟ್ರಂಪ್ ಪಾತ್ರ
ಡೊನಾಲ್ಡ್ ಟ್ರಂಪ್ ಅವರು ಪ್ರತಿಭಟನಾಕಾರರ ಪರವಾಗಿ ನಿಂತಿರುವುದು ಈ ಹೋರಾಟಕ್ಕೆ ಹೊಸ ಆಯಾಮ ನೀಡಿದೆ. "ನೀವು ಪ್ರತಿಭಟನಾಕಾರರನ್ನು ಕೊಂದರೆ ನಾವು ಸುಮ್ಮನಿರುವುದಿಲ್ಲ" ಎಂಬ ಟ್ರಂಪ್ ಎಚ್ಚರಿಕೆಯು ಇರಾನ್ ಸರ್ಕಾರವು ಪ್ರತಿಭಟನೆಯನ್ನು ಅತಿ ಘೋರವಾಗಿ ಹತ್ತಿಕ್ಕದಂತೆ ತಡೆದಿದೆ. ಒಂದು ವೇಳೆ ಇರಾನ್ ಸರ್ಕಾರ ಹಿಂಸಾಚಾರಕ್ಕೆ ಇಳಿದರೆ, ಅದು ಅಮೆರಿಕದ ನೇರ ಹಸ್ತಕ್ಷೇಪಕ್ಕೆ ಹಾದಿ ಮಾಡಿಕೊಡಬಹುದು.
ಪ್ರಸ್ತುತ ಸ್ಥಿತಿಗತಿ ಏನು?
ಪ್ರತಿಭಟನೆಯಲ್ಲಿ ಈಗಾಗಲೇ 39 ಪ್ರತಿಭಟನಾಕಾರರು ಪ್ರಾಣ ಕಳೆದುಕೊಂಡಿದ್ದಾರೆ. ಇರಾನ್‌ನ ಪ್ರಸಿದ್ಧ ಬಜಾರ್‌ಗಳು ಮತ್ತು ಮಾರುಕಟ್ಟೆಗಳು ಮೊದಲ ಬಾರಿಗೆ ಮುಚ್ಚಲ್ಪಟ್ಟಿವೆ, ಇದು ಆರ್ಥಿಕತೆಯ ಮೇಲೆ ದೊಡ್ಡ ಪರಿಣಾಮ ಬೀರಲಿದೆ. ಈ ಪ್ರತಿಭಟನೆ ಇದುವರೆಗೆ ನಾಯಕರಿಲ್ಲದೆ ನಡೆಯುತ್ತಿತ್ತು. ಆದರೆ ಈಗ ರೆಜಾ ಪಹ್ಲವಿ ಅವರ ಪ್ರಭಾವ ಹೆಚ್ಚುತ್ತಿರುವುದು ಇರಾನ್ ಇತಿಹಾಸದಲ್ಲಿ ಒಂದು ಹೊಸ ಬದಲಾವಣೆಯ ಮುನ್ಸೂಚನೆಯಾಗಿದೆ.

