
ಇಸ್ರೇಲ್-ಅಮೆರಿಕ ದಾಳಿಯಲ್ಲಿ ಮೃತಪಟ್ಟಿದ್ದರು ಎನ್ನಲಾಗಿದ್ದ ಖಮೇನಿ ಪತ್ನಿ ಜೀವಂತ; ಇರಾನ್ ಸ್ಪಷ್ಟನೆ
ಕಳೆದ ಫೆಬ್ರವರಿ 28ರಂದು ಟೆಹರಾನ್ ಮೇಲೆ ನಡೆದಿದ್ದ ಭೀಕರ ವೈಮಾನಿಕ ದಾಳಿಯ ವೇಳೆ ಮನ್ಸೌರೆ ಅವರು ತಮ್ಮ ಪತಿ ಖಮೇನಿ ಜೊತೆಗಿದ್ದರು. ಈ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಸ್ಥಳದಲ್ಲೇ ಮೃತಪಟ್ಟಿದ್ದರು.
ಇರಾನ್‌ನ ಮಾಜಿ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಅವರ ಪತ್ನಿ ಮನ್ಸೌರೆ ಖೋಜಾಸ್ತೆ ಬಾಗರ್ಜಾಡೆ (79) ಅವರು ಜೀವಂತವಾಗಿದ್ದಾರೆ ಎಂದು ಇರಾನ್‌ನ ಸರ್ಕಾರಿ ಮಾಧ್ಯಮಗಳು ಅಧಿಕೃತವಾಗಿ ಸ್ಪಷ್ಟಪಡಿಸಿವೆ. ಇಸ್ರೇಲ್ ಮತ್ತು ಅಮೆರಿಕ ಜಂಟಿಯಾಗಿ ನಡೆಸಿದ್ದ ಭೀಕರ ವೈಮಾನಿಕ ದಾಳಿಯಲ್ಲಿ ಇವರು ಮೃತಪಟ್ಟಿದ್ದಾರೆ ಎಂದು ಈ ಹಿಂದೆ ವರದಿಯಾಗಿತ್ತು.
ಕಳೆದ ಫೆಬ್ರವರಿ 28ರಂದು ಟೆಹರಾನ್ ಮೇಲೆ ನಡೆದಿದ್ದ ಭೀಕರ ವೈಮಾನಿಕ ದಾಳಿಯ ವೇಳೆ ಮನ್ಸೌರೆ ಅವರು ತಮ್ಮ ಪತಿ ಖಮೇನಿ ಜೊತೆಗಿದ್ದರು. ಈ ದಾಳಿಯಲ್ಲಿ ಅಯತೊಲ್ಲಾ ಅಲಿ ಖಮೇನಿ ಸ್ಥಳದಲ್ಲೇ ಮೃತಪಟ್ಟಿದ್ದರು. ಗಂಭೀರವಾಗಿ ಗಾಯಗೊಂಡಿದ್ದ ಮನ್ಸೌರೆ ಅವರು ಕೋಮಾ ಸ್ಥಿತಿಗೆ ತಲುಪಿದ್ದರು. ತೀವ್ರ ನಿಗಾ ಘಟಕದಲ್ಲಿದ್ದ ಅವರು ಚಿಕಿತ್ಸೆ ಫಲಕಾರಿಯಾಗದೆ ಮಾರ್ಚ್ 2ರಂದು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಆ ವರದಿಗಳು ಸುಳ್ಳು ಹಾಗೂ ಅವರು ಇನ್ನೂ ಜೀವಂತವಾಗಿದ್ದಾರೆ ಎಂಬುದನ್ನು ಇದೀಗ ಇರಾನ್ ಮಾಧ್ಯಮಗಳು ಖಚಿತಪಡಿಸಿವೆ.
ಪ್ರತೀಕಾರದ ಎಚ್ಚರಿಕೆ ನೀಡಿದ ಹೊಸ ನಾಯಕ
ಅಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ಇರಾನ್‌ನ ನೂತನ ಸರ್ವೋಚ್ಚ ನಾಯಕನಾಗಿ ಅಧಿಕಾರ ವಹಿಸಿಕೊಂಡಿರುವ ಮೊಜ್ತಬಾ ಖಮೇನಿ, ಗುರುವಾರವಷ್ಟೇ ಈ ಸಂಘರ್ಷದ ಕುರಿತು ತಮ್ಮ ಮೊದಲ ಅಧಿಕೃತ ಪ್ರತಿಕ್ರಿಯೆ ನೀಡಿದ್ದಾರೆ. "ಹುತಾತ್ಮರ ರಕ್ತಕ್ಕೆ ತಕ್ಕ ಪ್ರತೀಕಾರ ತೀರಿಸಿಕೊಳ್ಳುತ್ತೇವೆ ಹಾಗೂ ಅಮೆರಿಕದ ಸೇನಾ ನೆಲೆಗಳ ಮೇಲೆ ದಾಳಿ ನಡೆಸುತ್ತೇವೆ" ಎಂದು ಅವರು ಗುಡುಗಿದ್ದಾರೆ.
ಹೊರ್ಮುಜ್ ಜಲಸಂಧಿ ಮುಚ್ಚುವ ಬೆದರಿಕೆ
ಶತ್ರು ರಾಷ್ಟ್ರಗಳ ಮೇಲೆ ತೀವ್ರ ಒತ್ತಡ ಹೇರುವ ತಂತ್ರವಾಗಿ, ಜಾಗತಿಕ ತೈಲ ಮಾರುಕಟ್ಟೆ ಹಾಗೂ ವ್ಯಾಪಾರದ ಪ್ರಮುಖ ಮಾರ್ಗವಾಗಿರುವ 'ಹೊರ್ಮುಜ್ ಜಲಸಂಧಿ'ಯನ್ನು (Strait of Hormuz) ಮುಚ್ಚುವ ಎಚ್ಚರಿಕೆಯನ್ನು ಮೊಜ್ತಬಾ ಖಮೇನಿ ನೀಡಿದ್ದಾರೆ. ಅಲ್ಲದೆ, ಪಶ್ಚಿಮ ಏಷ್ಯಾ ಭಾಗದಲ್ಲಿರುವ ತನ್ನೆಲ್ಲಾ ಸೇನಾ ನೆಲೆಗಳನ್ನು ಅಮೆರಿಕ ತಕ್ಷಣವೇ ಸ್ಥಗಿತಗೊಳಿಸಿ, ಹಿಂದಿರುಗಬೇಕು ಎಂದು ಅವರು ಕಟ್ಟುನಿಟ್ಟಿನ ಆಗ್ರಹ ಮಾಡಿದ್ದಾರೆ.

